ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮದ ಮಕ್ಕಳನ್ನು ಸೆಳೆಯುವ ಕನ್ನಡ ಶಾಲೆ

ಚಿತ್ರದುರ್ಗ ಜಿಲ್ಲೆಯ ನಗರಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಶಿಷ್ಟ ಸಾಧನೆ
Last Updated 11 ನವೆಂಬರ್ 2019, 19:41 IST
ಅಕ್ಷರ ಗಾತ್ರ

ಹೊಸದುರ್ಗ: ಖಾಸಗಿ ಶಿಕ್ಷಣ ಸಂಸ್ಥೆಗಳ ಅಬ್ಬರದ ಪ್ರಚಾರ, ಪೋಷಕರ ಇಂಗ್ಲಿಷ್‌ ವ್ಯಾಮೋಹದಿಂದ ಹಲವು ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಪ್ರಮಾಣ ಕುಸಿಯುತ್ತಿದೆ.

ಆದರೆ, ತಾಲ್ಲೂಕಿನ ನಗರಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಮಾರು 10 ವರ್ಷಗಳಿಂದ ದಾಖಲಾತಿ ಕುಸಿಯದಂತೆ ಶ್ರಮಿಸುತ್ತಿದೆ.1962ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ ಮುಖ್ಯಶಿಕ್ಷಕ ಸೇರಿ 4 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸುಮಾರು 150 ಮನೆ, 800 ಜನ ಇರುವ ಈ ಗ್ರಾಮದಲ್ಲಿ ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಖಾಸಗಿ ಶಾಲೆಗಳಿದ್ದರೂ ಈ ಶಾಲೆಯ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಸುಂದರ ಕೈತೋಟ, ಸ್ವಚ್ಛ ಆವರಣ, ಸುಸಜ್ಜಿತ ತರಗತಿ ಕೊಠಡಿಗಳು, ಸ್ವಚ್ಛ ಅಡುಗೆ ಕೋಣೆ, ಕಂಪ್ಯೂಟರ್‌ ಲ್ಯಾಬ್‌, ಸ್ಮಾರ್ಟ್‌ಕ್ಲಾಸ್‌, ರಂಗಮಂದಿರ ಶಾಲೆಗೆ ಮೆರುಗು.

ಕನ್ನಡ ಕಲಿಕೆಗೆ ಉತ್ತೇಜನ: ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ, ಸಂಸ್ಕೃತಿ, ಕಲೆಯ ಬಗೆಗಿನ ಜ್ಞಾನ ಹಾಗೂ ಅಭಿಮಾನವನ್ನು ಮಕ್ಕಳಲ್ಲಿ ಬೆಳೆಸಲು ಶಿಕ್ಷಕರು ಪ್ರತಿದಿನ ಕನ್ನಡ ದಿನಪತ್ರಿಕೆ ಓದಿಸುವುದು, ಸ್ವರಚಿತ ಕವನ, ಕಥೆ ಬರೆಯಿಸಿ, ಮಕ್ಕಳಿಂದಲೇ ಓದಿಸುವುದು, ರಸಪ್ರಶ್ನೆ, ಪ್ರಬಂಧ, ಆಶುಭಾಷಣ ಸ್ಪರ್ಧೆ ಏರ್ಪಡಿಸುವುದು, ಜನಪದ ಹಾಗೂ ಭಾವಗೀತೆ ನೃತ್ಯ, ನಾಟಕ ಅಭಿನಯ ಸೇರಿ ಇತರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ವಿದ್ಯಾರ್ಥಿಗಳ ಸಾಧನೆ: ಶಾಲೆಯಲ್ಲಿ ಆಟದ ಮೈದಾನ, ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದಿದ್ದರೂ ಸಹಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಹೋಬಳಿ ಹಾಗೂ ತಾಲ್ಲೂಕುಮಟ್ಟದ ಕ್ರೀಡೆ, ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಮೇಲುಗೈ ಸಾಧಿಸಿದ್ದಾರೆ. ಗಣಿತ ಪರೀಕ್ಷೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಶಾಲೆ ಹೆಚ್ಚು ಬಹುಮಾನ ಪಡೆದಿದೆ. ಪಠ್ಯ, ಪಠ್ಯೇತರ ಚಟುವಟಿಕೆ ಎರಡಕ್ಕೂ ಸಮಾನ ಆದ್ಯತೆ ಕಲ್ಪಿಸಲಾಗಿದೆ.

ಶಿಕ್ಷಕರ ಪ್ರಯತ್ನ: ಬಡ್ತಿ ಮುಖ್ಯಶಿಕ್ಷಕ ರಾಜಪ್ಪ, ಸಹಶಿಕ್ಷಕರಾದ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ಎ.ಮಂಜುನಾಥ ಶೆಟ್ಟಿ, ಗುರುಮೂರ್ತಿ, ಬಿ.ಜಿ.ಲತಾ ಗುಣಾತ್ಮಕ ಬೋಧನೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. 4 ಶಿಕ್ಷಕರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯ ನಿರ್ವಹಣೆಯ ಕಾರ್ಯ ಹಂಚಿಕೆಯನ್ನು ಸಮಾನವಾಗಿ ಮಾಡಿಕೊಂಡಿದ್ದಾರೆ.

ಪರೀಕ್ಷೆ ಹಾಗೂ ಕ್ರೀಡೆಯ ಸಮಯದಲ್ಲಿ ಪ್ರತಿದಿನ ಒಂದು ತಾಸು ಹಾಗೂ ಭಾನುವಾರವೂ ಹೆಚ್ಚುವರಿ ತರಗತಿ ತೆಗೆದುಕೊಂಡು ಮಕ್ಕಳ ಕಲಿಕೆಗೆ ಉತ್ತಮ ಸಲಹೆ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT