7

ಕಲಿಕಾ ಪರಿಕರಗಳ ಕ್ರೀಡೊ

Published:
Updated:

ಇತ್ತೀಚಿನ ದಿನಗಳಲ್ಲಿ ಚಿಣ್ಣರ ಪಾಲಿಗೆ ಮೊಬೈಲ್, ಗೇಮ್‌, ಥರಹೇವಾರಿ ಗ್ಯಾಜೆಟ್‌ಗಳು ಅಚ್ಚುಮೆಚ್ಚಿನ ಪರಿಕರಗಳಾಗಿವೆ. ಇವುಗಳ ಬಳಕೆಯಿಂದ ಮಕ್ಕಳ ಚುರುಕುತನ ಹೆಚ್ಚಬಹುದು. ಆದರೆ, ಕಲಿಕೆಯ ಮೂಲಮಂತ್ರಗಳು ಅವರ ವ್ಯಕ್ತಿತ್ವದ ಭಾಗವಾಗಲು, ಭವಿಷ್ಯದಲ್ಲಿ ಅವರ ಶೈಕ್ಷಣಿಕ ಅರ್ಹತಾ ಮಟ್ಟ ಹೆಚ್ಚಲು ಇವು ನೆರವಾಗುವುದಿಲ್ಲ.  2ರಿಂದ 6 ವರ್ಷದ ಮಕ್ಕಳ ಶಾಲಾ ಪೂರ್ವ ಅವಧಿಯ ಕಲಿಕೆಯಲ್ಲಿ ಆಟಿಕೆಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಮಕ್ಕಳು 1ನೇ ತರಗತಿಗೆ ಹೋಗುವ ಮುಂಚಿನ ಅವಧಿಯ ಕಲಿಕೆಗೆ ನೆರವಾಗುವ ಆಟಿಕೆಗಳನ್ನು ತಯಾರಿಸುವ ಬೆಂಗಳೂರಿನ ಕ್ರೀಡೊ ಉದ್ದಿಮೆಯ ವಹಿವಾಟನ್ನು ಮುಖ್ಯಸ್ಥೆ ಮೃದುಲಾ ಶ್ರೀಧರ್‌ ಅವರು  ರಾಜ್ಯದ ಇತರ ನಗರಗಳಿಗೆ ಮತ್ತು ಅಕ್ಕಪಕ್ಕದ ರಾಜ್ಯಗಳಿಗೆ ವಿಸ್ತರಿಸಲು ಉದ್ದೇಶಿಸಿದ್ದಾರೆ.

ಕಡಿಮೆ ಆದಾಯದವರ ಮಕ್ಕಳೇ ಹೆಚ್ಚಾಗಿ ಓದುವ, ವರ್ಷಕ್ಕೆ ₹ 25 ಸಾವಿರಕ್ಕಿಂತ ಕಡಿಮೆ ಶುಲ್ಕ ವಿಧಿಸುವ ಖಾಸಗಿ ಶಾಲೆಗಳನ್ನು ಕೇಂದ್ರವಾಗಿರಿಸಿಕೊಂಡು ಕ್ರೀಡೊ ಸಂಸ್ಥೆಯು ಕಲಿಕಾ ಪರಿಕರಗಳ ಬಳಕೆಯನ್ನು ಜನಪ್ರಿಯಗೊಳಿಸಲು ಸಂಸ್ಥೆಯು ತನ್ನ ಗಮನ ಕೇಂದ್ರೀಕರಿಸಿದೆ. ‘ಸಮಾಜದ ಬಹುತೇಕ ಮಕ್ಕಳು ಇಂತಹ ಶಾಲೆಗಳಲ್ಲಿಯೇ ಕಲಿಯುತ್ತಾರೆ. ಹೀಗಾಗಿ ಹೆಚ್ಚು ಮಕ್ಕಳಿಗೆ ಈ ಕಲಿಕಾ ಪರಿಕರಗಳ ಪ್ರಯೋಜನ ತಲುಪಿಸಲು ಸಾಧ್ಯವಾಗುತ್ತಿದೆ. ಕ್ರೀಡೊದ ಉತ್ಪನ್ನ ಖರೀದಿಸುವ ಶಾಲೆಗಳ ಬೋಧಕರಿಗೆ ಸಂಸ್ಥೆಯು ತರಬೇತಿಯನ್ನೂ ನೀಡುವುದು ಇದರ ಇನ್ನೊಂದು ಮೌಲ್ಯವರ್ಧಿತ ಸೇವೆಯಾಗಿದೆ’ ಎಂದು ಮೃದುಲಾ ಶ್ರೀಧರ್‌ ಹೇಳುತ್ತಾರೆ.

‘ಕ್ರೀಡೊ’ದ ಆಟಿಕೆಗಳು ಮಕ್ಕಳ ಪಾಲಿಗೆ ಸ್ವಯಂ ಕಲಿಕೆಯ ಸಾಮಗ್ರಿಗಳಾಗಿವೆ. ಮಕ್ಕಳು ತಪ್ಪುಗಳನ್ನು ಮಾಡುತ್ತಲೇ ಕಲಿಯುವ ರೀತಿಯಲ್ಲಿಯೇ ಈ ಕಲಿಕಾ ಆಟಿಕೆಗಳನ್ನು ರೂಪಿಸಲಾಗಿದೆ. ದೊಡ್ಡವರ ಮೇಲ್ವಿಚಾರಣೆ ಇಲ್ಲದೇ ಕಲಿಯುವ ಬಗೆಯಲ್ಲಿ ಈ ಆಟಿಕೆಗಳನ್ನು ತಯಾರಿಸಲಾಗಿದೆ. ಮಕ್ಕಳ ಮನಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ಸ್ವತಂತ್ರ ಅಧ್ಯಯನ ಮತ್ತು ಸಂಶೋಧನೆ ಆಧರಿಸಿ ಈ ಆಟಿಕೆಗಳನ್ನು ರೂಪಿಸಲಾಗಿದೆ. ಆರಂಭಿಕ ಹಂತದಲ್ಲಿಯೇ ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಸಾಣೆ ಹಿಡಿಯುವ ಪರಿಕರಗಳನ್ನು ಸಂಸ್ಥೆ ತಯಾರಿಸುತ್ತಿದೆ. ಕನಕ‍ಪುರ ರಸ್ತೆಯಲ್ಲಿನ ಕಾರ್ಖಾನೆಯಲ್ಲಿ ಈ ಪರಿಕರಗಳನ್ನು ತಯಾರಿಸಲಾಗುತ್ತಿದೆ.

ದೇಶದ ವಿವಿಧ ಭಾಗಗಳಲ್ಲಿನ ಒಂದು ಸಾವಿರದಷ್ಟು ಪ್ರೀ ಸ್ಕೂಲ್‌ಗಳ ಜತೆ  ಕ್ರೀಡೊ ಒಪ್ಪಂದ ಮಾಡಿಕೊಂಡಿದೆ. ಸಂಸ್ಥೆಯ ಪರಿಕರ ಮತ್ತು ಪಠ್ಯ ಖರೀದಿಸಿದ ಶಾಲೆಗಳ ಸಂಖ್ಯೆ ಬೆಂಗಳೂರಿನಲ್ಲಿ 50 ಮತ್ತು  ರಾಜ್ಯದಲ್ಲಿ 50ಕ್ಕಿಂತ ಹೆಚ್ಚಿಗೆ ಇವೆ.

ಮಕ್ಕಳ ಕಲಿಕಾ ಸಾಮರ್ಥ ಹೆಚ್ಚಿಸಲು ಈ ಆಟಿಕೆಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಕಲಿಕಾ ವಿಧಾನದಲ್ಲಿ ಆಮೂಲಾಗ್ರ ಬದಲಾವಣೆ ತರುವ ಮೂಲಕ ಅವರ  ಕಲಿಕಾ ಸಾಮರ್ಥ್ಯ ಬದಲಿಸುವುದು ‘ಕ್ರೀಡೊ’ದ ಉದ್ದೇಶವಾಗಿದೆ. ಸಾಂಪ್ರದಾಯಿಕ ಶಿಕ್ಷಣ ವಿಧಾನದಲ್ಲಿ ಬೋಧಕರು ಹೆಚ್ಚು ಶ್ರಮ ಪಡಬೇಕಾಗುತ್ತದೆ. ‘ಕ್ರೀಡೊ’ ಸಿದ್ಧಪಡಿಸಿರುವ ಕಲಿಕಾ ಪರಿಕರಗಳು ಬೋಧಕರ ಶ್ರಮ ಕಡಿಮೆ ಮಾಡಲಿವೆ. ಒಟ್ಟಾರೆ ಬೋಧನಾ ವ್ಯವಸ್ಥೆಯಲ್ಲಿ ಬದಲಾವಣೆ ಅಳವಡಿಕೆಗೆ ನೆರವಾಗಲಿವೆ. ಮರದಲ್ಲಿ ತಯಾರಿಸಿರುವ ಕಲಿಕಾ ಸಲಕರಣೆಗಳು ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡಲಿವೆ. 150ಕ್ಕೂ ಹೆಚ್ಚು ಉಪಕರಣಗಳಿರುವ ಈ ಕಲಿಕಾ ಕಿಟ್‌ ಖರೀದಿಸಲು ₹ 2.50 ವೆಚ್ಚ ಬರಲಿದೆ. ಇವುಗಳ ಜತೆಗೆ ಪಠ್ಯಪುಸ್ತಕಗಳನ್ನೂ ಸಂಸ್ಥೆ ಒದಗಿಸುತ್ತದೆ. ಕಂತುಗಳಲ್ಲಿಯೂ ಹಣ ಪಾವತಿಸಬಹುದು. ಈ ಪರಿಕರಗಳು ದೀರ್ಘಕಾಲದವರೆಗೆ ಬಾಳಿಕೆ ಬರುವಂತೆ ತಯಾರಿಸಲಾಗಿದೆ. ಈ ಪರಿಕರ ಮತ್ತು ಪಠ್ಯಪುಸ್ತಕ ಖರೀದಿಸಿದ ಶಾಲೆಗಳ ಬೋಧಕರಿಗೆ ಸಂಸ್ಥೆ ತರಬೇತಿಯನ್ನೂ ನೀಡಲಿದೆ.

ಕಲಿಕಾ ವಿಧಾನವನ್ನು ಸಮಗ್ರವಾಗಿ ಬದಲಿಸುವುದೇ ‘ಕ್ರೀಡೊ’ದ ಮುಖ್ಯ ಉದ್ದೇಶವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 300 ಕ್ಕೂ ಹೆಚ್ಚು ಶಾಲೆಗಳನ್ನು ತಲುಪುವ ಉದ್ದೇಶ ಇದೆ. ಮಕ್ಕಳಿಗೆ ಹೆಚ್ಚಿನ ಶ್ರಮ ಇಲ್ಲದೇ ಗುಣಾಕಾರ, ಭಾಗಾಕಾರಗಳನ್ನು ಕಲಿಸಲು ಕ್ರೀಡೊದ ಪರಿಕರಗಳು ನೆರವಾಗಲಿವೆ. ಶಿಕ್ಷಕರ ಬೋಧನೆಯೂ ಸುಲಭವಾಗಿದೆ. ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಯಾಗುವುದು ಕಂಡು ಪಾಲಕರೂ ಖುಷಿಪಡುತ್ತಿದ್ದಾರೆ ಎಂದು ಮೃದುಳಾ ಅವರು  ಹೇಳುತ್ತಾರೆ. ಮಾಹಿತಿಗೆ https://kreedology.comಗೆ ಭೇಟಿ ನೀಡಬಹುದು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !