ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಸುತ್ತೋಲೆ ತಂದ ಸಂಕಷ್ಟ

ಐ.ಟಿ.ಐ, ಡಿಪ್ಲೊಮಾ ಅಧ್ಯಯನ ಮಾಡಿದವರಿಗೆ ಪದವಿ ತರಗತಿಗಳಿಗೆ ‍ಪ್ರವೇಶಕ್ಕೆ ತೊಂದರೆ
Last Updated 17 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕಾರವಾರ: ಐ.ಟಿ.ಐ, ಡಿಪ್ಲೊಮಾ ಅಧ್ಯಯನ ಮಾಡಿದವರು ಪ‍ದವಿ ತರಗತಿಗಳಿಗೆ ಪ್ರವೇಶ ಪಡೆಯಲು, ಪಿ.ಯು ಪರೀಕ್ಷೆಯಲ್ಲಿ ಒಂದು ಭಾಷೆ ವಿಷಯದಲ್ಲಿ ಅಥವಾ ಅದಕ್ಕೆ ಸಮನಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಎಂಬ ಕರ್ನಾಟಕ ವಿಶ್ವವಿದ್ಯಾಲಯ ಸುತ್ತೋಲೆಯಿಂದ ಹಲವು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

ಐ.ಟಿ.ಐ ಓದಿದ ವಿದ್ಯಾರ್ಥಿಗಳಿಗೆ ಪದವಿ ಅಧ್ಯಯನದ ಆಸಕ್ತಿಯಿದ್ದರೂ ಹೊಸದಾಗಿ ಪಿ.ಯು. ತರಗತಿಗಳನ್ನು ಉತ್ತೀರ್ಣರಾಗಿ ಬರುವಂತಾಗಿದೆ. ವಿಶ್ವವಿದ್ಯಾಲಯವು ಜೂನ್‍ನಲ್ಲೇ ಸುತ್ತೋಲೆ ಹೊರಡಿಸಿದೆ. ಆದರೆ, ಹಲವಾರು ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಮುಂದಾದಾಗ ವಿಚಾರ ಗೊತ್ತಾಗಿದೆ.

ಯಾವುದು ತತ್ಸಮಾನ?

ಎಸ್ಸೆಸ್ಸೆಲ್ಸಿ ನಂತರ ಎರಡು ವರ್ಷದ ಐ.ಟಿ.ಐ, ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಅಧ್ಯಯನವನ್ನು ಪಿ.ಯು.ಸಿ.ಗೆ ತತ್ಸಮಾನ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಉತ್ತೀರ್ಣರಾದವರಿಗೆ ಬಿ.ಎ, ಬಿ.ಕಾಂ, ಬಿ.ಬಿ.ಎ ಮತ್ತು ಬಿ.ಸಿ.ಎ ತರಗತಿಗಳಿಗೆ ನೇರ ಪ್ರವೇಶ ನೀಡಲು ಅವಕಾಶವಿದೆ. ಈ ಬಗ್ಗೆ ವಿಶ್ವವಿದ್ಯಾಲಯವು 2017 ಜೂನ್ 23ರಂದು ಆದೇಶ ಹೊರಡಿಸಿತ್ತು. ಆದರೆ, ಈ ವರ್ಷ ಜುಲೈ 28ರಂದು ಪರಿಷ್ಕೃತ ಸುತ್ತೋಲೆ ಪ್ರಕಟಿಸಿದೆ.

ಐ.ಟಿ.ಐ, ಡಿಪ್ಲೊಮಾ, ಜೆ.ಒ.ಸಿ, ಜೆ.ಒ.ಡಿ.ಸಿ, ಜೆ.ಎಲ್‍.ಡಿ.ಸಿ.ಯಂಥ ತಾಂತ್ರಿಕ ಕೋರ್ಸ್‍ಗಳನ್ನು ಪಿ.ಯು.ಸಿ.ಗೆ ಸಮಾನ ಎಂದು ಪರಿಗಣಿಸಬಹುದು. ಆದರೆ, ಅಭ್ಯರ್ಥಿಗಳು ರಾಷ್ಟ್ರೀಯ ಮುಕ್ತ ವಿದ್ಯಾಲಯಗಳ ಕಲಿಕಾ ಸಂಸ್ಥೆಯಿಂದ (ಎನ್‍.ಐ.ಒ.ಎಸ್‍) ನಡೆಸುವ ಒಂದು ವರ್ಷದ ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ ದೂರ ಕಲಿಕೆ ಮಾದರಿಯಲ್ಲಿ ಉತ್ತೀರ್ಣರಾಗಬೇಕು ಎಂದು ಸೂಚಿಸಲಾಗಿದೆ.

ಇದು ಸಾಧ್ಯವಾಗದಿದ್ದರೆ, ಪದವಿಪೂರ್ವ ಶಿಕ್ಷಣ ಮಂಡಳಿಯ ಪರೀಕ್ಷೆಯಲ್ಲಿ ಒಂದು ಭಾಷೆ ಅಥವಾ ಇನ್ನೊಂದು ವಿಷಯದ ಪರೀಕ್ಷೆಯನ್ನು ಉತ್ತೀರ್ಣರಾಗಿರಬೇಕು ಎಂದು ರಾಜ್ಯ ಸರ್ಕಾರ 2018ರಲ್ಲಿ ಸುತ್ತೋಲೆ ಹೊರಡಿಸಿದೆ. ಐ.ಟಿ.ಐ.ನಂಥ ತಾಂತ್ರಿಕ ಕೋರ್ಸ್ ಮಾಡಿದವರು ಭಾಷಾ ವಿಷಯಗಳ ಪರೀಕ್ಷೆಯನ್ನು ಉತ್ತೀರ್ಣರಾಗಿದ್ದರೆ ಮಾತ್ರ ಪದವಿಗೆ ಪ್ರವೇಶ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ತಾಂತ್ರಿಕ ಶಿಕ್ಷಣ ಇಲಾಖೆಯು ಐ.ಟಿ.ಐ ಜತೆ ಭಾಷಾ ವಿಷಯವನ್ನು ಸೇರಿಸುವ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಇದು ತಾಂತ್ರಿಕ ಕೋರ್ಸ್ ಅಧ್ಯಯನ ಮಾಡಿದವರನ್ನು ಗೊಂದಲಕ್ಕೀಡು ಮಾಡಿದೆ.

‘ಈ ವರ್ಷವಾದರೂ ಅವಕಾಶ ಕೊಡಿ’

‘ಕರ್ನಾಟಕ ವಿಶ್ವವಿದ್ಯಾಲಯವು ಯಾವುದೇ ಸೂಚನೆ ನೀಡದೇ ಈ ಆದೇಶವನ್ನು ಪ್ರಕಟಿಸಿದೆ. ಇದರಿಂದ ಈಗಾಗಲೇ ಐ.ಟಿ.ಐ ಅಧ್ಯಯನ ಮಾಡಿ ಪದವಿ ಪ್ರವೇಶ ಪಡೆಯಲು ಬಯಸುವವರಿಗೆ ಅನ್ಯಾಯವಾಗುತ್ತದೆ. ಈ ಶೈಕ್ಷಣಿಕ ವರ್ಷದಲ್ಲಾದರೂ ಪದವಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದೇವೆ’ ಎಂದು ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಕೆ.ಬಿ.ಗುಡಸಿ, ‘ಡಿಪ್ಲೊಮಾ ಹಾಗೂ ಐ.ಟಿ.ಐ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಪದವಿ ಪ್ರವೇಶಕ್ಕೆ ಭಾಷಾ ವಿಷಯ ಕಡ್ಡಾಯ ಮಾಡಲಾಗಿದೆ. ಇದರಿಂದ ತೊಂದರೆಯಾಗಿರುವ ವಿಷಯ ಗಮನಕ್ಕೆ ಬಂದಿದ್ದು, ಪರಿಶೀಲಿಸಲು ಸೂಚಿಸಲಾಗಿದೆ. ನಿಯಮಾವಳಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT