7

ಕಲಿಕೆಯಲ್ಲಿ ಪ್ರಯೋಗಗಳ ಮಹತ್ವ

Published:
Updated:

ವಿದ್ಯಾರ್ಥಿ ಮಿತ್ರರೇ, ತರಗತಿಯಲ್ಲಿ ನಿಮ್ಮ ಶಿಕ್ಷಕರು ಹೇಳಿದ್ದನ್ನು ಗಮನವಿಟ್ಟು ಕೇಳಿಸಿಕೊಳ್ಳುವುದು ನಿಮ್ಮ ಕಲಿಕೆಯ ಪ್ರಕ್ರಿಯೆಯ ಒಂದು ಬಹು ಮುಖ್ಯ ಭಾಗ. ಹಾಗೆಯೇ, ನಿಮ್ಮ ಶಿಕ್ಷಕರು ಬೋರ್ಡಿನ ಮೇಲೆ ಬರೆದ ಪದಗಳನ್ನು ಹಾಗೂ ಚಿತ್ರಗಳನ್ನು ನೋಡಿ ಬರೆದುಕೊಳ್ಳುವುದೂ ಕಲಿಕೆಗೆ ಅತ್ಯವಶ್ಯ. ಕೆಲವು ಸಂದರ್ಭಗಳಲ್ಲಿ ಶಿಕ್ಷಕರು ನಿಮಗೆ ಪ್ರಾತ್ಯಕ್ಷಿಕೆಗಳನ್ನು ತೋರಿಸಿ ವಿಷಯವನ್ನು ಮನದಟ್ಟು ಮಾಡಿಸುವ ಪ್ರಯತ್ನವನ್ನೂ ಮಾಡುತ್ತಾರೆ. ಗಮನವಿಟ್ಟು ಕೇಳುವುದು ಮತ್ತು ನೋಡುವುದು ಕಲಿಕೆಯನ್ನು ಸರಾಗವಾಗಿಸುತ್ತದೆ. ಕಲಿಕೆಗೆ ಸಂಬಂಧಪಟ್ಟಂತೆ ‘ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದು ಉತ್ತಮ, ನೋಡಿ ಕಲಿಯುವುದಕ್ಕಿಂತ ಮಾಡಿ ಕಲಿಯುವುದು ಇನ್ನೂ ಉತ್ತಮ’ ಎಂಬ ಮಾತೊಂದು ಕನ್ನಡದಲ್ಲಿದೆ.

ಈ ಹಿನ್ನೆಲೆಯಲ್ಲಿ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಪ್ರತ್ಯಕ್ಷವಾಗಿ ಪ್ರಯೋಗಗಳನ್ನು ಮಾಡಿ ತೋರಿಸುವ ಮೂಲಕ, ಅಥವಾ ನಿಮ್ಮಿಂದಲೇ ಮಾಡಿಸುವ ಮೂಲಕ ನಿಮ್ಮ ಶಿಕ್ಷಕರು ನಿಮ್ಮ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡುತ್ತಾರೆ. ವಿಜ್ಞಾನದ ವಿಷಯಗಳ ಕಲಿಕೆಯಲ್ಲಿ ಈ ಅನುಭವ ನಿಮಗಾಗಿರುತ್ತದೆ. ವಿಜ್ಞಾನದ ವಿಷಯಗಳಲ್ಲಿ ಬರುವ ಹಲವಾರು ಸಿದ್ಧಾಂತಗಳನ್ನು ಪ್ರಯೋಗಗಳ ಸಹಾಯದಿಂದ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಅದರಲ್ಲಿಯೂ ಭೌತವಿಜ್ಞಾನ, ರಸಾಯನವಿಜ್ಞಾನ, ಎಲೆಕ್ಟ್ರಾನಿಕ್ಸ್, ಜೀವವಿಜ್ಞಾನ ಮುಂತಾದ ವಿಷಯಗಳ ಕಲಿಕೆಯಲ್ಲಿ ಪ್ರಯೋಗಗಳ ಪಾತ್ರ ಹಿರಿದು.

ಕಲಿಕೆಯಲ್ಲಿ ಪ್ರಯೋಗಗಳ ಪಾತ್ರವೇನು ?
ಪ್ರಯೋಗಗಳನ್ನು ಮಾಡುವಾಗ ವಿದ್ಯಾರ್ಥಿಗಳಾದ ನೀವು ಪ್ರತಿ ಹಂತವನ್ನು ಸೂಕ್ಷ್ಮವಾಗಿ ಅವಲೋಕಿಸುವ ಹಾಗೂ ಅಧ್ಯಯನ ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದ ವಸ್ತುಗಳನ್ನು ನಿಮ್ಮ ಕೈಯಾರೆ ಬದಲಾವಣೆಗೆ ಒಳಪಡಿಸುವ ಪ್ರಕ್ರಿಯೆಯಲ್ಲಿ ನಿಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡಿರುತ್ತೀರಿ. ಈ ರೀತಿಯ ವೀಕ್ಷಣಾ ಸಾಮರ್ಥ್ಯ ನೀವು ಕಲಿಯುತ್ತಿರುವ ವಿಷಯದ ಬಗೆಗಿನ ನಿಮ್ಮ ಜ್ಞಾನವನ್ನು ವಿಸ್ತರಿಸುತ್ತದೆ. ಪ್ರಯೋಗದ ಅವಧಿಯಲ್ಲಿ ಹಲವು ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು. ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ತವಕ ನಿಮ್ಮಲ್ಲಿ ಉಂಟಾಗುತ್ತದೆ. ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ಘಟನೆಗಳನ್ನು ಹಾಗೂ ಅವುಗಳಿಗೆ ಸಂಬಂಧಿಸಿದ ವಿಷಯ ಹಾಗೂ ವಸ್ತುಗಳನ್ನು ಗುರುತಿಸಲು ಪ್ರಯೋಗಗಳು ನಿಮಗೆ ನೆರವಾಗುತ್ತವೆ. ಯಾವುದೇ ವಿಷಯದ ಯಾವುದೇ ಒಂದು ಕ್ಲಿಷ್ಟ ಸಿದ್ಧಾಂತವನ್ನು ಸರಳವಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯೋಗಗಳು ಸಹಾಯಕವಾಗುತ್ತವೆ. ಪ್ರಯೋಗಗಳು ನಿಮ್ಮಲ್ಲಿರುವ ಆಲೋಚನಾ ಶಕ್ತಿಯನ್ನು ಪ್ರೇರೇಪಿಸುತ್ತವೆ.

ಜೊತೆಗೆ, ಪ್ರಯೋಗಗಳನ್ನು ಮಾಡಲು ಬೇಕಾದ ಕೆಲವು ಕೌಶಲಗಳನ್ನು ನೀವು ಅಭಿವೃದ್ಧಿ ಪಡಿಸಿಕೊಳ್ಳುತ್ತೀರಿ. ಪ್ರಯೋಗಕ್ಕೆ ಬೇಕಾದ ಸಲಕರಣೆಗಳನ್ನು ಆಯ್ಕೆ ಮಾಡಿಕೊಳ್ಳುವುದು, ಅವುಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿಕೊಳ್ಳುವುದು, ಪ್ರಯೋಗಕ್ಕೆ ಸಿದ್ಧತೆ ಮಾಡಿಕೊಳ್ಳುವುದು, ಪ್ರಯೋಗದ ಮುಂಚೆ ಹಾಗೂ ಪ್ರಯೋಗದ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಕಡೆಗೆ ಗಮನ ಹರಿಸುವುದು, ಇವೇ ಮುಂತಾದ ಕೌಶಲಗಳು ನಿಮಗೆ ಸಿದ್ಧಿಸುತ್ತವೆ. ಪ್ರಯೋಗ ಪ್ರಾರಂಭವಾದ ಮೇಲೆ ಅದನ್ನು ಗಮನವಿಟ್ಟು ವೀಕ್ಷಿಸುವುದರ ಜೊತೆಗೆ, ನೀವು ಅಲ್ಲಿ ಗಮನಿಸಿದ ಬದಲಾವಣೆಗಳನ್ನು ನಿಖರವಾಗಿ ದಾಖಲಿಸಿಕೊಳ್ಳುತ್ತೀರಿ. ಪೂರಕವಾದ ಕ್ಯಾಲ್ಕ್ಯುಲೇಶನ್‍ಗಳನ್ನು ಮಾಡುವುದನ್ನು ಕಲಿಯುತ್ತೀರಿ. ಅವಶ್ಯವಿದ್ದೆಡೆ ಚಿತ್ರಗಳನ್ನು ಬಿಡಿಸುತ್ತೀರಿ. ನೀವು ಪಡೆದಿರುವ ಮಾಹಿತಿಯನ್ನು ಗ್ರಾಫ್ ಮೂಲಕ ವಿವರಿಸುವುದನ್ನು ಕಲಿಯುತ್ತೀರಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮಲ್ಲಿ ವೈಜ್ಞಾನಿಕವಾಗಿ ಯೋಚಿಸುವ, ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತದೆ. ಹೀಗೆ, ಪ್ರಯೋಗಗಳು ನಿಮಗೆ ಹಲವಾರು ಕೌಶಲಗಳನ್ನು ಬೆಳೆಸಿಕೊಳ್ಳುವುದಕ್ಕೆ ನೆರವಾಗುತ್ತವೆ.

ಪ್ರಾಯೋಗಿಕ ತರಗತಿಗಳಿಗೆ ಸಿದ್ಧತೆ ಹೀಗಿರಲಿ
ಪ್ರೌಢಶಾಲೆಯ ಹಂತದಲ್ಲಿ ಪ್ರಯೋಗಗಳನ್ನು ಕೇವಲ ಕಲಿಕೆಗೆ ಪೂರಕವಾಗಿ ಸೂಚಿಸಲಾಗಿರುವುದರಿಂದ, ನಿಮ್ಮ ಶಿಕ್ಷಕರು ಬಹುತೇಕ ಪ್ರಯೋಗಗಳನ್ನು ಸಾಮಾನ್ಯವಾಗಿ ತರಗತಿಯಲ್ಲಿಯೇ ಮಾಡಿ ತೋರಿಸುತ್ತಾರೆ ಇಲ್ಲವೇ, ಶಾಲೆಯಲ್ಲಿ ಪ್ರಯೋಗಾಲಯವಿದ್ದಲ್ಲಿ ಅಲ್ಲಿಗೆ ನಿಮ್ಮನ್ನು ಕರೆದೊಯ್ದು ನಿಮ್ಮಿಂದಲೇ ಮಾಡಿಸುತ್ತಾರೆ. ಯಾವ ವಿಷಯದ ಯಾವ ಪಾಠಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಪ್ರಯೋಗ ಮಾಡಲಿದ್ದಾರೆ ಅಥವಾ ಮಾಡಿಸಲಿದ್ದಾರೆ ಎಂಬುದನ್ನು ನೀವು ಮುಂಚಿತವಾಗಿ ತಿಳಿದುಕೊಳ್ಳಬೇಕು. ಆ ಪಾಠಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಿಕೊಂಡು, ಪೂರ್ವಸಿದ್ಧತೆಯೊಂದಿಗೆ ನೀವು ತರಗತಿಗೆ ಹೋದಾಗ ಪ್ರಯೋಗದ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವುದು ನಿಮಗೆ ಸುಲಭವಾಗುತ್ತದೆ. ಪ್ರಯೋಗದ ಮೂಲತತ್ವ ಹಾಗೂ ಹಂತಗಳನ್ನು ಚೆನ್ನಾಗಿ ಮನನ ಮಾಡಿಕೊಳ್ಳಿ. ಪ್ರಯೋಗದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ಪ್ರಯೋಗ ಮಾಡುತ್ತಿರುವಾಗ ನೀವು ಗಮನಿಸುವ ಪ್ರತಿಯೊಂದು ಅಂಶವನ್ನೂ ದಾಖಲಿಸಿಕೊಳ್ಳಿ. ಸಂಶಯಗಳಿದ್ದರೆ ಅಥವಾ ಸಮಸ್ಯೆಗಳಿದ್ದರೆ ನಿಮ್ಮ ಶಿಕ್ಷಕರನ್ನು ಕೇಳಿ ಬಗೆಹರಿಸಿಕೊಳ್ಳಿ. ಪ್ರಯೋಗಗಳ ಫಲಿತಾಂಶದಿಂದ ನೀವು ಕಟ್ಟಿಕೊಂಡಿರುವ ಜ್ಞಾನವನ್ನು ಇನ್ನೆಲ್ಲಿಗೆ ಅನ್ವಯಿಸಬಹುದು ಅಥವಾ ವಿಸ್ತರಿಸಬಹುದು ಎಂಬುದನ್ನು ಯೋಚಿಸಿ ನೋಡಿ.

ಪದವಿಪೂರ್ವ ಹಂತದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳು ಕಲಿಕೆಯ ಜೊತೆಗೆ ಪರೀಕ್ಷೆಯ ಅವಿಭಾಜ್ಯ ಅಂಗಗಳಾಗಿವೆ. ವಿಜ್ಞಾನದ ಪ್ರತಿಯೊಂದು ವಿಷಯದಲ್ಲಿ ಅವರು ಪ್ರಾಯೋಗಿಕ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಅದಕ್ಕೆ 30 ಅಂಕಗಳನ್ನು ಮೀಸಲಿಡಲಾಗಿದೆ. ಹೀಗಾಗಿ, ಪದವಿಪೂರ್ವ ಹಂತದ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದ ಪ್ರಯೋಗಾಲಯದಲ್ಲಿ ತಾವು ಕಲಿಯುವ ಅಂಶಗಳ ಕಡೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಭೌತವಿಜ್ಞಾನದ, ರಸಾಯನವಿಜ್ಞಾನದ ಮತ್ತು ಜೀವವಿಜ್ಞಾನದ ಪ್ರಯೋಗಾಲಯಗಳಲ್ಲಿ ಒಂದೊಂದರಲ್ಲಿಯೂ ಪ್ರಯೋಗದ ವಿಧಿ, ವಿಧಾನಗಳಲ್ಲಿ ಬಹಳಷ್ಟು ಭಿನ್ನತೆ ಇದೆ. ವರ್ಷದ ಪ್ರಾರಂಭದಲ್ಲಿಯೇ ಪ್ರತಿಯೊಂದು ವಿಷಯದಲ್ಲಿ ಪ್ರಯೋಗಾಲಯಕ್ಕೆ ಸಂಬಂಧಿಸಿದಂತೆ ನಿಮಗೆ ಕೈಪಿಡಿಯೊಂದನ್ನು ನೀಡಲಾಗುತ್ತದೆ. ಅದರಲ್ಲಿ ಈ ವರ್ಷ ನೀವು ಮಾಡಬೇಕಾಗಿರುವ ಪ್ರಯೋಗಗಳ ಪಟ್ಟಿಯ ಜೊತೆಗೆ ಹಲವಾರು ಉಪಯುಕ್ತ ವಿಷಯಗಳನ್ನು ಸೇರಿಸಲಾಗಿರುತ್ತದೆ. ಪ್ರಯೋಗಾಲಯದ ನೀತಿ, ನಿಯಮಗಳು, ನೀವು ಅನುಸರಿಸಬೇಕಾಗಿರುವ ಎಚ್ಚರಿಕೆಯ ಕ್ರಮಗಳು, ನೀವು ಸಿದ್ಧಪಡಿಸಿಟ್ಟುಕೊಳ್ಳಬೇಕಾದ ಸಲಕರಣೆಗಳು ಮುಂತಾದ ವಿಷಯಗಳ ಜೊತೆಗೆ, ಪ್ರತಿಯೊಂದು ಪ್ರಯೋಗಕ್ಕೆ ಸಂಬಂಧಿಸಿದಂತೆ ಮಾಡುವ ವಿಧಾನವನ್ನು ಹಾಗೂ ಫಲಿತಾಂಶಗಳನ್ನು ದಾಖಲಿಸುವ ವಿಧಾನಗಳನ್ನು ಅದರಲ್ಲಿ ಸೂಚಿಸಲಾಗಿರುತ್ತದೆ. ಹೀಗಾಗಿ, ಯಾವುದೇ ವಿಷಯದ ಪ್ರಾಯೋಗಿಕ ತರಗತಿಗೆ ಹೋಗುವ ಮುನ್ನ ಅದಕ್ಕೆ ಪೂರಕವಾದ ಅಗತ್ಯ ಪೂರ್ವಸಿದ್ಧತೆ ಮಾಡಿಕೊಂಡು ಹೋಗುವುದು ಒಳ್ಳೆಯದು.

ಯಾವುದೇ ಕಾರಣಕ್ಕೂ ಪ್ರಾಯೋಗಿಕ ತರಗತಿಗಳಿಗೆ ಗೈರುಹಾಜರಾಗಬೇಡಿ. ಮತ್ತೆ ಆ ಪ್ರಯೋಗವನ್ನು ಮಾಡುವ ಅವಕಾಶ ನಿಮಗೆ ತಪ್ಪಿಹೋಗಬಹುದು. ಪ್ರತಿ ಬಾರಿ ಪ್ರಾಯೋಗಿಕ ತರಗತಿಗೆ ಹೋಗುವ ಮುನ್ನ ಆ ದಿನದ ಪ್ರಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಓದಿಕೊಂಡು ಹೋಗಿ. ಪ್ರತಿ ವಿಷಯದ ಪ್ರಾಯೋಗಿಕ ತರಗತಿಯಲ್ಲಿ ನೀವು ವೈಯಕ್ತಿಕವಾಗಿ ಗಮನಿಸಿದ ಅಂಶಗಳನ್ನು ಹಾಗೂ ನೀವು ಪಡೆದಿರುವ ಫಲಿತಾಂಶವನ್ನು ದಾಖಲಿಸಿ. ವಿಷಯಕ್ಕೆ ಸಂಬಂಧಿಸಿದ ನಿಮ್ಮ ಶಿಕ್ಷಕರಿಗೆ ಅದನ್ನು ತೋರಿಸಿ ಅವರ ಸಹಿ ಪಡೆದುಕೊಳ್ಳಿ. ಕೆಲವೊಮ್ಮೆ ನಿಮ್ಮ ಶಿಕ್ಷಕರು ಇಡೀ ಪ್ರಯೋಗವನ್ನು ಮತ್ತೊಮ್ಮೆ ಮಾಡುವಂತೆ ಸೂಚಿಸಬಹುದು ಅಥವಾ ನೀವು ಮಾಡಿರುವ ಕ್ಯಾಲ್ಕ್ಯುಲೇಶನ್ ಅನ್ನು ಮತ್ತೆ ಪರಿಶೀಲಿಸುವಂತೆ ಸೂಚಿಸಬಹುದು. ಬೇಸರಿಸದೆ, ಅವರ ಸಲಹೆಯನ್ನು ಸ್ವೀಕರಿಸಿ. ಶಿಕ್ಷಕರು ಅನುಮೋದಿಸಿದ ಮೇಲೆ ಆ ದಿನದ ನಿಮ್ಮ ಪ್ರಯೋಗದ ವಿವರಗಳನ್ನು ಅದೇ ದಿನವೇ ಪ್ರಾಕ್ಟಿಕಲ್ ರೆಕಾರ್ಡ್‌ನಲ್ಲಿ ನೀಟಾಗಿ ಬರೆದು ದಾಖಲಿಸಿ. ಇದನ್ನು ವರ್ಷದ ಕೊನೆಯವರೆಗೆ ಮುಂದೂಡಬೇಡಿ. ರೆಕಾರ್ಡ್‌ಗೂ ಅಂಕಗಳಿದೆ ಎಂಬುದು ನೆನಪಿರಲಿ.

ಮ್ಯಾಥ್ಸ್ ಲ್ಯಾಬ್ ಮತ್ತು ಬಿಸಿನೆಸ್ ಲ್ಯಾಬ್ 
ವಿಜ್ಞಾನದ ಪ್ರಮುಖ ವಿಷಯಗಳಿಗೆ ಮಾತ್ರ ಸೀಮಿತವಾಗಿದ್ದ ಪ್ರಯೋಗಾಲಯ ಸಿದ್ಧಾಂತವನ್ನು ಇತ್ತೀಚಿನ ವರ್ಷಗಳಲ್ಲಿ ಇತರ ವಿಷಯಗಳಿಗೂ ವಿಸ್ತರಿಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ವಿಜ್ಞಾನ ವಿಷಯಗಳಿಗೆ ಮಾತ್ರವಲ್ಲದೆ ಗಣಿತ ಹಾಗೂ ವಾಣಿಜ್ಯ ವಿಷಯಗಳಿಗೂ ಈಗ ಪ್ರಯೋಗಾಲಯಗಳನ್ನು ಒದಗಿಸಲಾಗುತ್ತಿದೆ.

‘ಮ್ಯಾಥ್ಸ್ ಲ್ಯಾಬ್’ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದಿರುವ ಒಂದು ಹೊಸ ಪರಿಕಲ್ಪನೆ. ಪ್ರಾಥಮಿಕ ಹಂತದಿಂದ ಪದವಿಪೂರ್ವ ಹಂತದವರೆಗೆ ಈ ಪರಿಕಲ್ಪನೆಯನ್ನು ವಿಸ್ತರಿಸಬಹುದು. ಇಲ್ಲಿ ಆಟಿಕೆಗಳ ಹಾಗೂ ಮಾದರಿಗಳ ಮೂಲಕ ಗಣಿತದ ವಿವಿಧ ಪ್ರಕಾರಗಳನ್ನು ಸುಲಭವಾಗಿ ಕಲಿಯಬಹುದು. ಗಣಿತಕ್ಕೆ ಸಂಬಂಧಿಸಿದ ಕುತೂಹಲಕರ ಸಮಸ್ಯೆಗಳನ್ನು ಬಿಡಿಸುವುದಕ್ಕೆ, ಕ್ಲಿಷ್ಟ ಎನಿಸಬಹುದಾದ ಸಿದ್ಧಾಂತ ಹಾಗೂ ಪ್ರಮೇಯಗಳನ್ನು ಮಾದರಿಗಳ ಮತ್ತು ಚಟುವಟಿಕೆಗಳ ಸಹಾಯದಿಂದ ಅರ್ಥ ಮಾಡಿಕೊಳ್ಳುವುದಕ್ಕೆ ಈ ರೀತಿಯ ಗಣಿತದ ಪ್ರಯೋಗಾಲಯಗಳು ನೆರವಾಗುತ್ತವೆ. ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಯೇ ನೇರವಾಗಿ ಇಲ್ಲವೇ ಶಿಕ್ಷಕರ ಸಹಾಯದಿಂದ ಇಲ್ಲಿ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬಹುದು.

ಅದೇ ರೀತಿ ವಾಣಿಜ್ಯ ಸಂಯೋಜನೆಗೆ ಸಂಬಂಧಿಸಿದ ವಿಷಯಗಳಿಗೆ ‘ಬಿಸಿನೆಸ್ ಲ್ಯಾಬ್‌’ಗಳನ್ನು ಈಗ ಒದಗಿಸಲಾಗುತ್ತಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದೃಷ್ಟಿಯಿಂದ ಅವಶ್ಯಕವಾಗಿ ಬೆಳೆಸಿಕೊಳ್ಳಬೇಕಾಗಿರುವ ಸಾಮರ್ಥ್ಯಗಳನ್ನು ಕಲಿಸುವುದಕ್ಕೆ ಈ ರೀತಿಯ ಲ್ಯಾಬ್‍ಗಳು ನೆರವಾಗುತ್ತವೆ. ಸಣ್ಣ ತಂಡಗಳಲ್ಲಿ ವಿದ್ಯಾರ್ಥಿಗಳಿಗೆ ಗುಂಪು ಚರ್ಚೆ, ಸಂವಹನ ಸಾಮರ್ಥ್ಯ, ಮುಂತಾದ ಉಪಯುಕ್ತ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ ಅಧ್ಯಯನಕ್ಕೆ ಪೂರಕವಾದ ಮಾದರಿಗಳನ್ನು ಹಾಗೂ ಪ್ರಾತ್ಯಕ್ಷಿಕೆಗಳನ್ನು ಇಲ್ಲಿ ಪರಿಚಯಿಸಲಾಗುತ್ತದೆ.

ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ಪೂರ್ತಿ ಅಂಕ ಗಳಿಸಿ
ನಿಮ್ಮ ವಾರ್ಷಿಕ ಪರೀಕ್ಷೆಯ ಮುಂಚೆಯೇ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ನಿಮ್ಮ ಸಿದ್ಧತೆ ಪರಿಪೂರ್ಣವಾಗಿದ್ದಲ್ಲಿ, ಈ ಪರೀಕ್ಷೆಯಲ್ಲಿ ನೀವು ಪೂರ್ಣ ಅಂಕಗಳನ್ನು ಸುಲಭವಾಗಿ ಗಳಿಸಬಹುದು. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನೀವು ನಿರಾತಂಕವಾಗಿ ವಾರ್ಷಿಕ ಪರೀಕ್ಷೆಗಳನ್ನು ಎದುರಿಸಬಹುದು. ಹೆಚ್ಚಿನ ಅಂಕಗಳನ್ನು ಗಳಿಸಬಹುದು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !