ಭಾನುವಾರ, ಆಗಸ್ಟ್ 25, 2019
28 °C

ಅಕ್ಷರ ಕಲಿಕೆಬಲು ಸರಳ

Published:
Updated:
Prajavani

ಏ ಕಾಗ್ರತೆ, ಕಲಿಕಾ ಸಾಮರ್ಥ್ಯ, ಕೌಶಲ ಹಾಗೂ ಇಂಗ್ಲಿಷ್ ಮಾತುಗಾರಿಕೆ - ಇವು ಶೈಕ್ಷಣಿಕ ಮತ್ತು ವೈಯಕ್ತಿಕ ಬದುಕಿನ ಯಶಸ್ಸಿಗೆ ಅತ್ಯಂತ ಮುಖ್ಯ. ಇವುಗಳನ್ನೊಳಗೊಂಡ ಶಿಕ್ಷಣವನ್ನು ಸಮಗ್ರ ಶಿಕ್ಷಣ ಎನ್ನಬಹುದು. ಇದನ್ನು ಚಿಕ್ಕಂದಿನಲ್ಲೇ ಮಕ್ಕಳಿಗೆ ದಕ್ಕಿಸಿಕೊಡಬೇಕು. ಸ್ಥೂಲವಾಗಿ ಈ ಕ್ರಮ ಮಾನಸಿಕ ವ್ಯಾಯಾಮ, ಉದ್ಘೋಷ, ಕತೆ/ ಆಟ/ ಹಾಡು/ ಚಟುವಟಿಕೆ, ಅಕ್ಷರದ ಆಕಾರ, ಅಕ್ಷರದ ಉಪಯೋಗ, ಅಕ್ಷರ ಕಲಿಕೆ ಮತ್ತು ಅಕ್ಷರ ಕಟ್ಟು ಎಂಬ ವಿವಿಧ ಹಂತಗಳನ್ನು ಒಳಗೊಂಡಿದೆ.

ಕಡ್ಡಾಯ ತರಬೇತಿ

ಮೊದಲ ತರಗತಿಯಲ್ಲಿ ಪ್ರತಿ ಮಗುವೂ ವೇದಿಕೆಗೆ ಬಂದು, ನೆಟ್ಟಗೆ ನಿಂತು, ಎಲ್ಲ ವಿದ್ಯಾರ್ಥಿಗಳನ್ನು ನೋಡುತ್ತಾ, ಸ್ಪಷ್ಟ ಮಾತುಗಳಲ್ಲಿ ತನ್ನ ಪರಿಚಯ ಮಾಡಿಕೊಳ್ಳುವುದನ್ನು ಕಲಿಸಲಾಗುತ್ತದೆ. ಇಲ್ಲಿ ಯಾವುದನ್ನೂ ಕೇವಲ ಹೇಳಿಕೊಡುವುದಿಲ್ಲ, ಕಲಿಸಲಾಗುತ್ತದೆ. ಮುಂದಿನ ಪ್ರತಿ ತರಗತಿಯ ಪ್ರಾರಂಭದಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಏಕಾಗ್ರತೆಗಾಗಿ ಮೂರು ನಿಮಿಷಗಳ ಮಾನಸಿಕ ವ್ಯಾಯಾಮ ಮಾಡಿಸಲಾಗುತ್ತದೆ. ಆನಂತರ ಆತ್ಮವಿಶ್ವಾಸದ ಹೆಚ್ಚಳಕ್ಕೆ ಮೂರು ಉದ್ಘೋಷಗಳನ್ನು ಹೇಳಿಸಲಾಗುತ್ತದೆ. ಇದು ಕಡ್ಡಾಯ.

ಮೊದಲು ಆಕಾರ

ಪ್ರತಿ ಅಕ್ಷರದ ಆಕಾರವನ್ನು ಕಲಿಸುವ ಮುನ್ನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮತ್ತು ಅವರಲ್ಲಿ ಸಕಾರಾತ್ಮಕ ಗುಣಗಳನ್ನು ಬಿತ್ತಬಲ್ಲ ಒಂದು ಚಿಕ್ಕ ಕತೆ/ ಆಟ/ ಹಾಡು/ ಚಟುವಟಿಕೆಯನ್ನು ಮಾಡಿಸಲಾಗುತ್ತದೆ. ಮಕ್ಕಳನ್ನು ಒಲಿಸಿಕೊಳ್ಳಲು ಇವು ಸಹಕಾರಿ.

ಮೊದಲಿಗೆ ಚುಕ್ಕಿಗಳನ್ನು ಸೇರಿಸುವ ಆಟದ ಮೂಲಕ ಅಡ್ಡಗೆರೆ (. . .) ಎಳೆಯುವುದನ್ನು ಅಭ್ಯಾಸ ಮಾಡಿಸಲಾಗುತ್ತದೆ. ಒಂದು ಚುಕ್ಕಿಯನ್ನೂ ಬಿಡದೆ ಎಲ್ಲ ಚುಕ್ಕಿಗಳನ್ನು ಎಡದಿಂದ ಬಲಕ್ಕೆ ಸೇರಿಸುವುದನ್ನು ಅಭ್ಯಾಸ ಮಾಡಿಸಲಾಗುತ್ತದೆ. ಹೀಗೆ ಗೆರೆ ಎಳೆಯಬೇಕೆಂದರೆ ಸಹಜವಾಗಿ ಏಕಾಗ್ರತೆ ಬೇಕಾಗುತ್ತದೆ. ಇದನ್ನು ಅಭ್ಯಾಸ ಮಾಡಿಸುವುದರಿಂದ ಅವರ ಏಕಾಗ್ರತೆ ಹೆಚ್ಚುತ್ತದೆ.

ಎ-4 ಹಾಳೆಯಲ್ಲಿ ಇಂತಹ ಸುಮಾರು 100– 120 ಬೇರೆ ಬೇರೆ ಉದ್ದದ ಮತ್ತು ಬೇರೆ ಬೇರೆ ಅಂತರದಲ್ಲಿರುವ ಚುಕ್ಕಿ-ಗೆರೆಗಳಿರುತ್ತವೆ. ಇಷ್ಟು ಚುಕ್ಕಿ-ಗೆರೆಗಳನ್ನು ಎಳೆಯುವ ಹೊತ್ತಿಗೆ ಮಕ್ಕಳ ಕೈಯೂ ಕುದುರಿರುತ್ತದೆ ಮತ್ತು ಸಲೀಸಾಗಿ ಅಡ್ಡಗೆರೆ ಎಳೆಯುವುದನ್ನು ಕಲಿತಿರುತ್ತಾರೆ.

ಮುಂದಿನ ತರಗತಿಯಲ್ಲಿ, ನೀಳವಾಗಿಟ್ಟ ಚುಕ್ಕಿಗಳಿರುತ್ತವೆ. ಇವುಗಳನ್ನು ಮೇಲಿನಿಂದ ಕೆಳಕ್ಕೆ ಒಂದು ಚುಕ್ಕಿಯನ್ನೂ ಬಿಡದೆ ಸೇರಿಸುವುದನ್ನು ಅಭ್ಯಾಸ ಮಾಡಿಸಲಾಗುತ್ತದೆ. ಹೀಗೆ ಸಲೀಸಾಗಿ ನೀಳಗೆರೆ ಎಳೆಯುವುದನ್ನು ಮಕ್ಕಳು ಕಲಿತ ನಂತರ ಇದೇ ಇಂಗ್ಲಿಷ್‌ನ ‘I’ ಅಕ್ಷರ ಎಂದು ಪರಿಚಯಿಸಲಾಗುತ್ತದೆ. ಇದು ಇಂಗ್ಲಿಷ್‌ನ ಅತ್ಯಂತ ಸರಳ ಅಕ್ಷರ. ಅತಿ ಸರಳವಾದ ಅಕ್ಷರದಿಂದ ಪ್ರಾರಂಭಿಸಿ ನಿಧಾನವಾಗಿ ಹೆಚ್ಚು ಹೆಚ್ಚು ಸಂಕೀರ್ಣವಾದ ಅಕ್ಷರಗಳ ಕಲಿಕೆಯ ಕಡೆಗೆ ಸಾಗುವ ಕ್ರಮವನ್ನು ಇಲ್ಲಿ ಅನುಸರಿಸಲಾಗಿದೆ.

ಈ ಪದ್ಧತಿಯ ಸೊಗಸೇನೆಂದರೆ ಮಗು ತಾನು ಆಡುತ್ತಿರುವ ಚುಕ್ಕಿಯಾಟದಲ್ಲಿ ಬರೆಯುತ್ತಿರುವುದು ‘I’ ಅಕ್ಷರ ಎಂಬುದು ಗೊತ್ತಿಲ್ಲದೆಯೇ ಈ ಅಕ್ಷರ ಬರೆಯುವುದನ್ನು ಕಲಿತಿರುತ್ತದೆ!

ಅಕ್ಷರದ ಉಪಯೋಗ

ಮೊದಲು ಮಾತು, ಆಮೇಲೆ ಅಕ್ಷರ ಕಲಿಕೆ - ಇದು ಕಲಿಕೆಯಲ್ಲಿ ಸಹಜ ಕ್ರಮ. ಅದನ್ನಿಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಕ್ಷರ ಕಲಿಕೆಯೊಂದಿಗೇ ಇಂಗ್ಲಿಷ್ ಮಾತುಗಾರಿಕೆಯ ತರಬೇತಿ ನಡೆಯುತ್ತದೆ. ಕಲಿಕೆ - ಬಳಕೆ ಎರಡೂ ಏಕಕಾಲದಲ್ಲಿ ನಡೆಯುತ್ತದೆ; ನಡೆಯಬೇಕು. I ಅಕ್ಷರವನ್ನು ಕಲಿಸುವುದಕ್ಕೆ ಮುಂಚೆ, I ಗೆ ಇಂಕ್‌ (INK) ಪದವನ್ನು ಆರಿಸಿಕೊಂಡು, ಇಂಕ್ ಬಾಟಲಿಯನ್ನು ತರಗತಿಗೆ ತೆಗೆದುಕೊಂಡು ಹೋಗಿ, ಅದನ್ನು ಮಕ್ಕಳಿಗೆ ತೋರಿಸುತ್ತಾ ಇದು ಇಂಕ್. ಕನ್ನಡದಲ್ಲಿ ಮಸಿ, ಶಾಯಿ ಎನ್ನುತ್ತೇವೆ. ಇದನ್ನು ಬರೆಯಲು ಉಪಯೋಗಿಸುತ್ತೇವೆ.. ಹೀಗೆ ಆಸಕ್ತಿ ಕೆರಳಿಸುವಂತೆ ಏನನ್ನಾದರೂ ಹೇಳಲಾಗುತ್ತದೆ. ಇದರಿಂದ ಮಕ್ಕಳಿಗೆ ಅಕ್ಷರದ ಉಪಯೋಗ ಮನವರಿಕೆಯಾಗುತ್ತದೆ; ಅಕ್ಷರ ಕಲಿಕೆಯಲ್ಲಿ ಆಸಕ್ತಿ ಕುದುರುತ್ತದೆ. ನಂತರ ಮಕ್ಕಳೇ ಇಂಕ್ ಪದವನ್ನು ಉಪಯೋಗಿಸುವಂತೆ ಮಾಡಬಹುದು.

ಈಗ ಇಂಕ್ ಪದವನ್ನು ಬಳಸಿ ಒಂದಿಷ್ಟು ಮಾತುಕತೆ ಆಡೋಣ ಎಂದು ಮಕ್ಕಳನ್ನು ಆಹ್ವಾನಿಸಲಾಗುತ್ತದೆ. ಶಿಕ್ಷಕರು ಮೊದಲನೆಯ ಮಗುವನ್ನು ವೇದಿಕೆಗೆ ಕರೆಯುತ್ತಾರೆ. ಇಂಕ್ ಬಾಟಲಿಯನ್ನು ತೋರಿಸುತ್ತಾ, ‘ವಾಟ್‌ ಇಸ್‌ ದಿಸ್‌’? ಎಂಬ ಪ್ರಶ್ನೆಯನ್ನು ಮಗುವಿಗೆ ಕೇಳುತ್ತಾರೆ. ಅದಕ್ಕೆ ಮಗು ‘ದಿಸ್‌ ಇಸ್‌ ಇಂಕ್‌’ ಎಂಬ ಉತ್ತರ ಹೇಳುವುದನ್ನು ಕಲಿಸಲಾಗುತ್ತದೆ. ಹೀಗೇ ಮುಂದುವರಿದು ಎಲ್ಲ ಮಕ್ಕಳನ್ನು ಪ್ರಶ್ನೆ ಕೇಳುವ ಮತ್ತು ಉತ್ತರ ಹೇಳುವ ಪ್ರಕ್ರಿಯೆಯಲ್ಲಿ ತೊಡಗಿಸಲಾಗುತ್ತದೆ.

ಇದೇ ರೀತಿ ಮುಂದೆ ಹೊಸ ಹೊಸ ಅಕ್ಷರಗಳನ್ನು ಕಲಿಸುವುದಕ್ಕೆ ಮುಂಚೆ ಆ ಅಕ್ಷರಗಳಿರುವ, ಕೇವಲ ಮೂರಕ್ಷರದ ಪದಗಳು ಮತ್ತು ಅದಕ್ಕೆ ಸಂಬಂಧಿಸಿದ ಮಾದರಿ/ ವಸ್ತುಗಳನ್ನು ಒಳಗೊಂಡ ಮಾತುಕತೆ ನಡೆಸಲಾಗುತ್ತದೆ

ಆಮೇಲೆ ಅಕ್ಷರ

ನಂತರ ಅದರ ಬರಹ ರೂಪವನ್ನು ಪರಿಚಯಿಸಲಾಗುತ್ತದೆ. ಇಂಕ್ ಅನ್ನು ಇಂಗ್ಲಿಷ್‌ನಲ್ಲಿ ಹೇಗೆ ಬರೆಯುತ್ತೇವೆ? ಇದನ್ನು ಬರೆಯಲು ನಾವು ಮೊದಲು I ಅಕ್ಷರ ಬರೆಯುವುದನ್ನು ಕಲಿಯಬೇಕು. ಈಗ ನಾವು ‘I’ ಅಕ್ಷರವನ್ನು ಕಲಿಯೋಣ ಎಂದು ಹೇಳಿ ಅಕ್ಷರದ ಕಲಿಕೆಯನ್ನು ಪ್ರಾರಂಭಿಸಲಾಗುತ್ತದೆ. 
ಹಿಂದಿನ ತರಗತಿಯಲ್ಲಿ ಕಲಿತಿರುವ ನೀಳಗೆರೆಯನ್ನು ಈಗ ಐ ಎಂದು ಗಟ್ಟಿಯಾಗಿ ಹೇಳಿಕೊಂಡು ಬರೆಯಬೇಕು ಎಂದು ಸೂಚಿಸಿ ಅದರಂತೆ ಬರೆಸಲಾಗುತ್ತದೆ. I ಆಕಾರದ ಚುಕ್ಕಿ-ಗೆರೆಗಳಿರುವ ಹಾಳೆಯ ಹಿಂಬದಿಯಲ್ಲೇ, ಇಂಕ್ ಬಾಟಲಿಯ ಚಿತ್ರವನ್ನೊಳಗೊಂಡ, I ಅಕ್ಷರದ ಚುಕ್ಕಿ-ಗೆರೆಗಳು ಇರುತ್ತವೆ.

ಇಷ್ಟು ಬರೆಯುವ ಹೊತ್ತಿಗೆ, ಎಲ್ಲ ಮಕ್ಕಳಿಗೆ I ಅಕ್ಷರವನ್ನು ಬರೆಯುವುದು ಮತ್ತು ಗುರುತಿಸುವುದು ಬಂದಿರುತ್ತದೆ. ಇದೇ ರೀತಿ ಮುಂದೆ, ಒಂದು ಚುಕ್ಕಿ-ಅಡ್ಡಗೆರೆ ಮತ್ತು ಒಂದು ಚುಕ್ಕಿ-ನೀಳಗೆರೆಯನ್ನು ಬಳಸಿ ಬರೆಯಬಹುದಾದ ಕೆಲವು ಅಕ್ಷರಗಳನ್ನು ಕಲಿಸಬಹುದು. ಇದಾದ ನಂತರ ಬಲಕ್ಕೆ ಮತ್ತು ಎಡಕ್ಕೆ ವಾಲಿದ ಚುಕ್ಕಿ-ಗೆರೆಗಳು, ಅರೆವೃತ್ತ ಮತ್ತು ಪೂರ್ಣವೃತ್ತಗಳನ್ನು ಅಭ್ಯಾಸ ಮಾಡಿಸಿ ಇತರ ಅಕ್ಷರಗಳನ್ನು ಕಲಿಸಬಹುದು.

ಅಕ್ಷರ ಕಟ್ಟು

ಮೂರು ಮೂರು ಅಕ್ಷರಗಳನ್ನು ಮಕ್ಕಳು ಬರೆಯಲು ಮತ್ತು ಗುರುತಿಸಲು ಕಲಿತ ಮೇಲೆ, ಅವರು ಕಲಿತದ್ದು ಮತ್ತಷ್ಟು ಗಟ್ಟಿಯಾಗಲಿ ಹಾಗೂ ಅವರಲ್ಲಿ ಈ ಕೌಶಲ ವೃದ್ಧಿಯಾಗಲಿ ಎಂಬ ದೃಷ್ಟಿಯಿಂದ, ಅಕ್ಷರ ಕಟ್ಟುವ ಆಟವನ್ನು ಆಡಿಸಲಾಗುತ್ತದೆ. ಇದಕ್ಕೆ ಹಳೆಯ ಮದುವೆ ಆಮಂತ್ರಣ ಪತ್ರಿಕೆಗಳಿಂದ ಕತ್ತರಿಸಿದ ಪಟ್ಟಿಗಳನ್ನು ಉಪಯೋಗಿಸಲಾಗುತ್ತದೆ. ಒಂದು ಪಟ್ಟಿಯನ್ನು ನೀಳವಾಗಿಟ್ಟರೆ I, ಅದರ ಮೇಲೆ ಮತ್ತೊಂದು ಕಡ್ಡಿ ಇಟ್ಟರೆ ಟಿ.. ಹೀಗೆ ಉಳಿದೆಲ್ಲ ಅಕ್ಷರಗಳನ್ನು ಕಡ್ಡಿಗಳಿಂದ ಕಟ್ಟುವ ಚಟುವಟಿಕೆಯನ್ನು ಮಾಡಿಸಬಹುದು.

ಈ ಮೂಲಕ ಕಲಿಕಾ ಪ್ರಕ್ರಿಯೆಯನ್ನು ಸರಳಗೊಳಿಸಬಹುದು.

ಕಲಿಕೆಯಲ್ಲಿ ಆತುರ ಬೇಡ

ಈ ಪದ್ಧತಿ ಹೆಚ್ಚು ಸಮಯವನ್ನು ಬೇಡುತ್ತದೆ, ನಿಜ. ಆದರೆ ಕಲಿಕೆ ಪಕ್ಕಾ ಇರುತ್ತದೆ. ಈ ಹಂತದ ಶಿಕ್ಷಣ ಇರುವುದು ಏನನ್ನಾದರೂ ಕಲಿಸುವುದಕ್ಕಲ್ಲ; ಕಲಿಯುವಂತೆ ತಯಾರು ಮಾಡುವುದಕ್ಕೆ. ಇದನ್ನು ಒಪ್ಪಿಕೊಂಡರೆ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಒಂದೆರಡು ತಿಂಗಳಲ್ಲಿ ಎಬಿಸಿಡಿ ಕಲಿಯಲಿ, ಅಆಇಈ ಕಲಿಯಲಿ, 1 2 3 4 ಕಲಿಯಲಿ ಎಂಬ ಧಾವಂತ ಬೇಡ. ಆತುರವಾಗಿ ಕಲಿತದ್ದು ಹೆಚ್ಚು ದಿನ ಉಳಿಯುವುದಿಲ್ಲ. ಮುಂದಿನ ತರಗತಿಗೆ ಬರುವ ಹೊತ್ತಿಗೆ ಮಕ್ಕಳು ಹಿಂದಿನದನ್ನೆಲ್ಲಾ ಮರೆತಿರುತ್ತಾರೆ. ಇವತ್ತಿನ ಕಲಿಕೆ ನಾಳಿನ ಕಲಿಕೆಗೆ ಭದ್ರ ಬುನಾದಿಯಾಗುವಂತಿರಬೇಕು.

Post Comments (+)