ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಕೇಂದ್ರ ಗ್ರಂಥಾಲಯಕ್ಕೆ ಐವತ್ತರ ಸಂಭ್ರಮ

Last Updated 14 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಶಾಂತಚಿತ್ತವಾಗಿ ಕುಳಿತು ಅಭ್ಯಸಿಸಲು, ಆಲೋಚಿಸಲು, ಜ್ಞಾನಾರ್ಜನೆಗೆ ಸೂಕ್ತ ಎನಿಸುವ ಸ್ಥಳ ಗ್ರಂಥಾಲಯ. ಗ್ರಂಥಗಳ ನಡುವೆ ಮುಳುಗಿ ತಮ್ಮನ್ನು ತಾವೇ ಕಳೆದುಕೊಂಡವರಂತೆ ಓದಿನಲ್ಲಿ ದಿನ ಕಳೆಯುವವರನ್ನು ನೋಡಿರಬಹುದು. ಅಂಥವರಿಗೆ ಗ್ರಂಥಾಲಯವೇ ದೇವಾಲಯ.

ಬಾವುಟಗುಡ್ಡೆಯಲ್ಲಿರುವ ಕಾರ್ನಾಡ್ ಸದಾಶಿವ ರಾವ್ ಜಿಲ್ಲಾ ನಗರ ಕೇಂದ್ರ ಗ್ರಂಥಾಲಯಕ್ಕೆ ಈ ವರ್ಷಕ್ಕೆ ಐವತ್ತು ವರ್ಷ ತುಂಬಿದೆ. ಅರ್ಧ ಶತಮಾನ ಕಳೆದ ಈ ಗ್ರಂಥಾಲಯ, ಹಲವಾರು ಓದುಗರ ಅಕ್ಷರದಾಹ ತಣಿಸಿದ ಕೇಂದ್ರ. ಹಲವು ಬರಹಗಾರರನ್ನು ಸೃಷ್ಟಿಸಿದ, ಹಲವರನ್ನು ಪ್ರೇರೇಪಿಸಿದ ಸ್ಥಳವು ಹೌದು. 1,16,326 ಗ್ರಂಥಗಳನ್ನು ಒಳಗೊಂಡಿರುವ ಈ ಗ್ರಂಥಾಲಯದಲ್ಲಿ ಕುಳಿತು ಓದಲು, ಬರೆಯಲು ಉತ್ತಮ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಕೆಲವು ವರ್ಷಗಳಿಂದ ಹೊಸತನಗಳನ್ನು ಕಾಣುತ್ತ ಬಂದಿರುವ ಇಲ್ಲಿ, ಇಂಟರ್‌ನೆಟ್ ಬ್ರೌಸಿಂಗ್ ಸೆಂಟರ್, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಬೇಕಾದ ಬಹಳಷ್ಟು ಪುಸ್ತಕಗಳಿವೆ. ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ಮಾಡುವವರಿಗೆ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರ ಇದೆ.

ನೆಲಮಹಡಿಯಲ್ಲಿ ಕನ್ನಡ, ಇಂಗ್ಲಿಷ್‌ ದಿನ ಪತ್ರಿಕೆಗಳು, ವಾರಪತ್ರಿಕೆ, ಮಾಸಪತ್ರಿಕೆ, ನಿಯತಕಾಲಿಕೆಗಳು ಓದಲು ಲಭ್ಯವಿರುತ್ತದೆ. ಸಂಶೋಧನಾ ಗ್ರಂಥಗಳು ಹಾಗೂ ಪ್ರಮುಖ ಗ್ರಂಥಗಳನ್ನು ಮುಂಭಾಗದಲ್ಲಿ ಇಡಲಾಗಿದೆ. ಹೊಸ ಕೃತಿಗಳನ್ನೂ ಈ ರೀತಿ ಇಡಲಾಗುತ್ತದೆ. ಸಣ್ಣ ಮಕ್ಕಳಿಗೆ ಆಟಿಕೆ ಸಾಮಾನುಗಳು, ಮಕ್ಕಳ ಪುಸ್ತಕಗಳು ಕೂಡಾ ಇಲ್ಲಿ ಲಭ್ಯ ಎನ್ನುವುದು ವಿಶೇಷ. ಅಂಧರಿಗಾಗಿ ಬ್ರೈಲ್‌ ಲಿಪಿಯಲ್ಲಿ ಕೆಲವು ಕೃತಿಗಳನ್ನು ರಚಿಸಲಾಗಿದೆ. ಅವುಗಳಲ್ಲಿ ಮುಖ್ಯವಾಗಿ ಕೋಟ ಶಿವರಾಮ ಕಾರಂತರ ‘ಚೋಮನ ದುಡಿ’ ಕೃತಿಯನ್ನು ಕಾಣಬಹುದು.

‘ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ನೋಟಿಸ್‌ ಬೋರ್ಡ್‌ನಲ್ಲಿ ಹಚ್ಚಿಡುವುದು ಈ ಗ್ರಂಥಾಲಯದ ವಿಶೇಷತೆ. ಇದು ಉದ್ಯೋಗವಿಲ್ಲದ ಹಲವಾರು ಯುವಕರಿಗೆ ಸಹಕಾರಿಯಾಗುತ್ತದೆ. ಗ್ರಂಥಾಲಯಕ್ಕೆ ಪ್ರವೇಶಿಸುವಾಗಲೇ ಬಲಗಡೆಯಲ್ಲಿ ಈ ನೋಟಿಸ್‌ ಬೋರ್ಡ್‌ ಇದೆ. ಇದೀಗ ಗ್ರಂಥಾಲಯದ ಪಕ್ಕದಲ್ಲಿ ₹98 ಲಕ್ಷ ವೆಚ್ಚದಲ್ಲಿ 200 ಮಂದಿಗೆ ಕುಳಿತುಕೊಳ್ಳಬಹುದಾದ ಸಭಾಂಗಣ ನಿರ್ಮಾಣವಾಗುತ್ತಿದ್ದು, ಪಾರ್ಕಿಂಗ್‌ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಘವೇಂದ್ರ ಕೆ.ವಿ.

ಸಂಚಾರ ಗ್ರಂಥಾಲಯದ ವ್ಯವಸ್ಥೆ ಈ ಗ್ರಂಥಾಲಯದ ಇನ್ನೊಂದು ವಿಶೇಷತೆ. ಪುಸ್ತಕಗಳು ತಲುಪದ ಪ್ರದೇಶಗಳಿಗೆ ತಮ್ಮ ಸಂಸ್ಥೆಯ ವಾಹನದ ಮೂಲಕ ಪುಸ್ತಕಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಸಂಚಾರ ಗ್ರಂಥಾಲಯ ನಗರದಲ್ಲಿ ಮಾಡುತ್ತಿದೆ. ಇದರಿಂದ ಓದುಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಜತೆಗೆ, ಕೃತಿ ಲಭ್ಯವಾಗದೆ, ಓದುವ ಹವ್ಯಾಸವನ್ನು ಕೈಬಿಡುವ ಹಂತಕ್ಕೆ ತಲುಪುವ ಮನಸ್ಸುಗಳಿಗೆ ಮತ್ತೆ ಚೈತನ್ಯ ತುಂಬಿದಂತಾಗಿದೆ.

ಒಂದು ದಿನದಲ್ಲಿ 400ರಷ್ಟು ಮಂದಿ ಭೇಟಿ ನೀಡುವ ಈ ಗ್ರಂಥಾಲಯದಲ್ಲಿ ಎಲ್ಲಾ ಪುಸ್ತಕಗಳನ್ನು ಓದುಗರಿಗೆ ಸುಲಭವಾಗಿ ಪಡೆಯಲು ಸಾಧ್ಯವಾಗುವಂತೆ ಜೋಡಿಸಿಡಲಾಗಿದೆ. ಹೆಚ್ಚು ಹುಡುಕುವ ಅಗತ್ಯ ಬೀಳದಂತೆ ಇ– ಗ್ರಂಥಾಲಯ ಸಾಫ್ಟ್‌ವೇರ್‌ ಮೂಲಕ ಸುಲಭವಾಗಿ ಹುಡಕುವ ವ್ಯವಸ್ಥೆಯೂ ಇದೆ. ನಗರದ ಬೇರೆ ಬೇರೆ ಕಾಲೇಜುಗಳ ಹಲವಾರು ವಿದ್ಯಾರ್ಥಿಗಳು ಈ ಗ್ರಂಥಾಲಯ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಹಲವರ ಪಾಲಿಗೆ ಪ್ರಶಾಂತತೆಯ, ಕಲಿಕೆಗೆ ಯೋಗ್ಯವಾದ ಆಸರೆಯಾಗಿ ನಗರ ಕೇಂದ್ರ ಗ್ರಂಥಾಲಯ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT