ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಎಂಬ ದೇಗುಲ

Last Updated 20 ನವೆಂಬರ್ 2018, 19:45 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳೇ, ನಿಮ್ಮ ಶಾಲೆ ಅಥವಾ ಕಾಲೇಜಿನಲ್ಲಿರುವ ಗ್ರಂಥಾಲಯಕ್ಕೆ ವಾರದಲ್ಲಿ ಎಷ್ಟು ಬಾರಿ ಭೇಟಿಕೊಡುತ್ತಿರಿ? ಅಲ್ಲಿರುವ ಸಂಪನ್ಮೂಲಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡಿದ್ದಿರಿ? ಗ್ರಂಥಾಲಯಗಳು ನಿಮ್ಮ ಕಲಿಕಾ ಪ್ರಕ್ರಿಯೆಗೆ ಅತ್ಯಂತ ಅವಶ್ಯಕವಾದ ಪ್ರಮುಖ ಸಂಪನ್ಮೂಲಗಳಲ್ಲೊಂದು. ಗ್ರಂಥಾಲಯಗಳು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಜ್ಞಾನಸಂಪತ್ತಿನ ಅಗರಗಳು. ವಿದ್ಯಾರ್ಥಿಗಳಿಗೆ ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೇನ್‌ ಹೇಳಿರುವ ಕಿವಿಮಾತು ಹೀಗಿದೆ: ‘ನಿಮಗೆ ಖಚಿತವಾಗಿ ತಿಳಿದಿರಲೇಬೇಕಾದ ಏಕೈಕ ಅಂಶವೆಂದರೆ, ನಿಮ್ಮ ವಿದ್ಯಾಸಂಸ್ಥೆಯಲ್ಲಿ ಗ್ರಂಥಾಲಯ ಇರುವ ಜಾಗ’.

ನಮ್ಮ ರಾಷ್ಟ್ರಪತಿಗಳಾಗಿದ್ದ ಖ್ಯಾತ ವಿಜ್ಞಾನಿ ಡಾ. ಅಬ್ದುಲ್ ಕಲಾಂ ಅವರ ಅಭಿಪ್ರಾಯದಲ್ಲಿ ‘ಒಂದು ಅತ್ಯುತ್ತಮ ಪುಸ್ತಕ ನೂರು ಉತ್ತಮ ಸ್ನೇಹಿತರಿಗೆ ಸಮ. ಆದರೆ, ಒಬ್ಬ ಅತ್ಯುತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ’. ವಿದ್ಯಾರ್ಥಿಯೊಬ್ಬನ ಶೈಕ್ಷಣಿಕ ಸಾಧನೆಯ ಮೇಲೆ ಧನಾತ್ಮಕ ಪರಿಣಾಮ ಬೀರುವ ಹಲವಾರು ಅಂಶಗಳಲ್ಲಿ ಗ್ರಂಥಾಲಯಗಳ ಸದ್ಬಳಕೆಯೂ ಒಂದು. ಯಾವುದೇ ಭೇಧಭಾವವಿಲ್ಲದೆ, ಪ್ರತಿ ವಿದ್ಯಾರ್ಥಿಗೂ ಅಗತ್ಯವಾದ ಜ್ಞಾನವನ್ನು ಒದಗಿಸಿಕೊಡುವ ಕೇಂದ್ರಗಳೇ ಗ್ರಂಥಾಲಯಗಳು. ಬದಲಾಗುತ್ತಿರುವ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪರಿಸರದಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಕೌಶಲಗಳನ್ನು ರೂಢಿಸಿಕೊಳ್ಳುವಲ್ಲಿ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ.

ವಿದ್ಯಾರ್ಥಿಯ ವೈಯುಕ್ತಿಕ ಅಭಿವೃದ್ಧಿಯಲ್ಲಿ ಪೂರಕವಾಗುವ ಆತನ ಸಾಂಸ್ಕೃತಿಕ, ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಗ್ರಂಥಾಲಯಗಳ ಪಾತ್ರ ಮಹತ್ತರವಾದುದು. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಅಧ್ಯಯನಕ್ಕೆ ಪೂರಕವಾಗಿ ಗ್ರಂಥಾಲಯಗಳನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ನೀಡುವುದು ಈ ಲೇಖನದ ಉದ್ದೇಶ.

ಏಕಾಗ್ರತೆಯ ಕೇಂದ್ರ

ಗ್ರಂಥಾಲಯವನ್ನು ಪ್ರವೇಶಿಸುತ್ತಿದ್ದಂತೆ ನೀವು ಗಮನಿಸಿರಬಹುದಾದ ಒಂದು ಪ್ರಕಟಣೆಯೆಂದರೆ ‘ದಯವಿಟ್ಟು ನಿಶ್ಶಬ್ದವಾಗಿರಿ’, ಅಲ್ಲವೇ? ಇದರ ಹಿಂದಿನ ಕಾರಣವೆಂದರೆ, ಅಲ್ಲಿ ಕುಳಿತುಕೊಂಡು ಅಧ್ಯಯನ ಮಾಡುತ್ತಿರುವವರ ಏಕಾಗ್ರತೆಗೆ ಯಾವುದೇ ಭಂಗ ಬರದಿರಲಿ ಎಂಬುದು. ಗ್ರಂಥಾಲಯದಲ್ಲಿ ಕುಳಿತು ಅಧ್ಯಯನ ಮಾಡಿದವರಿಗೆ ಏಕಾಗ್ರತೆಯನ್ನು ಬೆಳೆಸಿಕೊಳ್ಳುವುದು ಸುಲಭವಾಗುತ್ತದೆ. ನಿಯತವಾಗಿ ಗ್ರಂಥಾಲಯಗಳನ್ನು ಬಳಸಿಕೊಳ್ಳುವವರಿಗೆ ಇದರ ಅನುಭವವಾಗಿರುತ್ತದೆ. ಇದೇ ರೀತಿಯ ವಾತಾವರಣವನ್ನು ನಿಮ್ಮ ಮನೆಯಲ್ಲಿ ನೀವು ಅಧ್ಯಯನ ಮಾಡುವ ಜಾಗದಲ್ಲಿ ನಿರ್ಮಿಸಿಕೊಂಡಲ್ಲಿ ನಿಮ್ಮ ಓದು ಸರಾಗವಾಗುತ್ತದೆ.

ಬಿಡುವಿನ ವೇಳೆಯ ಸದುಪಯೋಗ

ಶಾಲೆಯಲ್ಲಿನ ನಿಮ್ಮ ದೈನಂದಿನ ವೇಳಾಪಟ್ಟಿಯಲ್ಲಿ ಪಾಠದ ಪೀರಿಯಡ್‌ಗಳ ಜೊತೆಗೆ ದೈಹಿಕ ಶಿಕ್ಷಣ ಹಾಗೂ ಕ್ರೀಡೆಗಳಿಗೂ ಅವಕಾಶ ಮಾಡಿರಲಾಗುತ್ತದೆಯಲ್ಲವೇ? ಅದರ ಜೊತೆಗೆ, ನೀವು ಶಾಲೆಯಲ್ಲಿರುವ ಅವಧಿಯಲ್ಲಿ ದಿನಕ್ಕೆ ಕನಿಷ್ಠ ಅರ್ಧ ಗಂಟೆ ಕಾಲ ಗ್ರಂಥಾಲಯಕ್ಕೆ ಭೇಟಿ ನೀಡುವ ಅಭ್ಯಾಸ ಬೆಳೆಸಿಕೊಳ್ಳಿ. ಇಲ್ಲವೇ, ಯವುದಾದರೊಂದು ಪೀರಿಯಡ್ ಬಿಡುವು ಇದ್ದಲ್ಲಿ, ಆ ಅವಧಿಯನ್ನೂ ಗ್ರಂಥಾಲಯಕ್ಕೆ ಭೇಟಿ ನೀಡುವುದಕ್ಕೆ ಬಳಸಿಕೊಳ್ಳಿ. ಅಲ್ಲಿ ಯಾವುದೇ ವಿಷಯದಲ್ಲಿ ಅಂದಿನ ನಿಮ್ಮ ಪಾಠಕ್ಕೆ ಸಂಬಂಧಿಸಿದ ಪುಸ್ತಕವನ್ನು ಪಡೆದು ಅಧ್ಯಯನ ಮಾಡಿ. ಇದರಿಂದ, ವಿಷಯವನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆಯಲ್ಲದೆ, ನಿಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಲು ನೆರವಾಗುತ್ತದೆ.

ಹೆಚ್ಚಿನ ಜ್ಞಾನಾರ್ಜನೆಗಾಗಿ

ನಿಮಗೆ ತಿಳಿದಿರುವಂತೆ, ಗ್ರಂಥಾಲಯದಲ್ಲಿ ನಿಮ್ಮ ಪಠ್ಯವಸ್ತುವಿನಲ್ಲಿರುವ ಎಲ್ಲ ವಿಷಯಗಳ ಬಗ್ಗೆ ಹಾಗೂ ಭಾಷೆಗೆ ಸಂಬಂಧಿಸಿದ ವಿವಿಧ ಪ್ರಕಾರಗಳ ಬಗ್ಗೆ ಪುಸ್ತಕಗಳು ಇರುತ್ತವೆ. ಹೀಗಾಗಿ, ನಿಮ್ಮ ಪಾಠಗಳಿಗೆ ಸಂಬಂಧಿಸಿದಂತೆ ಇರುವ ಪುಸ್ತಕಗಳ ಪಟ್ಟಿಯನ್ನು ಗ್ರಂಥಪಾಲಕರಿಂದ ಕೇಳಿ ತಿಳಿದುಕೊಳ್ಳಿ. ಶಾಲೆಯಲ್ಲಿ ಬಿಡುವಿನ ಸಮಯದಲ್ಲಿ ಬೇಕಾದ ಪುಸ್ತಕಗಳನ್ನು ಪಡೆದು ಅದರಿಂದ ನಿಮ್ಮ ಪಾಠಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಪುಸ್ತಕಗಳಿಂದ ಮಾಹಿತಿಯನ್ನು ಪಡೆದು ಟಿಪ್ಪಣಿ ಮಾಡಿಕೊಳ್ಳಿ.

ಈ ಮೂಲಕ ನಿಮ್ಮ ಪಾಠದ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನಿಮ್ಮ ಜ್ಞಾನದ ವಿಸ್ತಾರವನ್ನು ಹೆಚ್ಚಿಸಿಕೊಳ್ಳಿ. ಪಠ್ಯಪುಸ್ತಕದಿಂದ ಅಥವಾ ನಿಮ್ಮ ತರಗತಿಯ ನೋಟ್ಸ್‌ಗಳಿಂದ ನೀವು ಪಡೆದಿರುವ ಮಾಹಿತಿಗೆ ಪೂರಕವಾದ ವಿವರಣೆ ಅಥವಾ ಹೆಚ್ಚಿನ ಮಾಹಿತಿಯನ್ನು ಆಗಾಗ್ಗೆ ಗ್ರಂಥಾಲಯದ ಸಹಾಯದಿಂದ ಪಡೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಒಂದು ಉತ್ತಮ ಹವ್ಯಾಸ. ಈ ರೀತಿಯ ಹವ್ಯಾಸಗಳು ಮಾಹಿತಿ ಸಂಗ್ರಹ, ಅದರ ವ್ಯವಸ್ಥಿತ ಜೋಡಣೆ, ವಿಶ್ಲೇಷಣೆ, ಸಂವಹನ, ಸಮಸ್ಯೆ ಬಿಡಿಸುವ ಕೌಶಲ, ಮುಂತಾದ ಹಲವು ಬಗೆಯ ಉಪಯುಕ್ತ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದಕ್ಕೆ ಅತ್ಯಂತ ಅವಶ್ಯಕ.

ನಿಯತಕಾಲಿಕಗಳನ್ನು ಪರಾಮರ್ಶಿಸಿ

ಗ್ರಂಥಾಲಯದಲ್ಲಿ ಕೇವಲ ವಿಜ್ಞಾನ, ಕಲೆ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಶ್ರೇಷ್ಠ ಕೃತಿಗಳ ಜೊತೆಗೆ ಇಂಗ್ಲಿಷ್ ಮತ್ತು ಕನ್ನಡಭಾಷೆಯ ವೃತ್ತಪತ್ರಿಕೆಗಳನ್ನೂ ಹಾಗೂ ಹಲವಾರು ಉಪಯುಕ್ತ ನಿಯತಕಾಲಿಕಗಳನ್ನೂ ತರಿಸಲಾಗುತ್ತದೆ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಈ ರೀತಿಯ ಪತ್ರಿಕೆಗಳನ್ನು ಗ್ರಂಥಾಲಯದಲ್ಲಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ. ದಿನ ನಿತ್ಯದ ಆಗುಹೋಗುಗಳ ಜೊತೆಗೆ ಉಪಯುಕ್ತವಾದ ಇತರ ಅನೇಕ ವಿಷಯಗಳ ಬಗ್ಗೆಯೂ ನಿಮ್ಮ ಓದನ್ನು ವಿಸ್ತರಿಸಬಹುದು. ವಿವಿಧ ಹಂತಗಳಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ನಿಯತಕಾಲಿಕಗಳನ್ನು ಗ್ರಂಥಾಲಯದಲ್ಲಿಯೇ ಓದಿ ಟಿಪ್ಪಣಿ ಮಾಡಿಕೊಳ್ಳಬಹುದು.
ಗ್ರಂಥಾಲಯದಲ್ಲಿರುವ ತಂತ್ರಜ್ಞಾನದ ಸಹಾಯವನ್ನೂ ಪಡೆದುಕೊಳ್ಳಿ.

ಇತ್ತೀಚಿನ ವರ್ಷಗಳಲ್ಲಿ ಗ್ರಂಥಾಲಯಗಳು ಆಧುನಿಕ ತಂತ್ರಜ್ಙಾನದ ಸೌಲಭ್ಯಗಳನ್ನು ಅಳವಡಿಸಿಕೊಳ್ಳುತ್ತಿರುವುದನ್ನು ನೀವು ಗಮನಿಸಿರಬಹುದು. ನಿಮಗೆ ಅವಶ್ಯಕವಾದ ಯಾವುದೇ ಪುಸ್ತಕವನ್ನು ಗ್ರಂಥಾಲಯದಲ್ಲಿ ಸುಲಭವಾಗಿ ಪತ್ತೆ ಮಾಡುವುದು ಇದರಿಂದ ಸಾಧ್ಯವಾಗಿದೆ. ಅಲ್ಲದೇ, ಅಂತರ್ಜಾಲದ ಸೌಲಭ್ಯದ ಜೊತೆಗೆ ಆನ್‌ಲೈನ್ ಮಾಹಿತಿ ಪರಾಮರ್ಶೆ ಮುಂತಾದ ಹಲವಾರು ಸೌಲಭ್ಯಗಳನ್ನು ಈ ಡಿಜಿಟಲ್ ಗ್ರಂಥಾಲಯಗಳು ಒದಗಿಸುತ್ತವೆ. ದುಬಾರಿಯಾಗಿರುವ ಶೈಕ್ಷಣಿಕ ಸಂಪನ್ಮೂಲಗಳನ್ನು ಇಂಥ ಡಿಜಿಟಲ್ ಗ್ರಂಥಾಲಯಗಳ ಸಹಾಯದಿಂದ ಸುಲಭವಾಗಿ ಪಡೆದು ಬಳಸಿಕೊಳ್ಳುವುದು ಈಗ ಸಾಧ್ಯ.

**

ಸಾರ್ವಜನಿಕ ಗ್ರಂಥಾಲಯಗಳಿಗೆ ಭೇಟಿ ನೀಡಿ

ಹೆಚ್ಚಿನ ಜ್ಞಾನಾರ್ಜನೆಯ ನಿಮ್ಮ ಪ್ರಯತ್ನವನ್ನು ನಿಮ್ಮ ಶಾಲೆ ಅಥವಾ ಕಾಲೇಜಿನ ಗ್ರಂಥಾಲಯಕ್ಕೆ ಸೀಮಿತಗೊಳಿಸಬೇಡಿ. ಸರ್ಕಾರವು ಪ್ರತಿ ಬಡಾವಣೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ಪ್ರಾರಂಭಿಸಿದೆ. ನಿಮ್ಮ ಮನೆಯ ಸಮೀಪ ಇರುವ ಅಂಥ ಗ್ರಂಥಾಲಯವನ್ನು ಪತ್ತೆ ಮಾಡಿ, ಆಗಾಗ್ಗೆ ಅಲ್ಲಿಗೆ ಭೇಟಿ ನೀಡುವ ಕ್ರಮವನ್ನು ಅಳವಡಿಸಿಕೊಳ್ಳಿ. ಶಾಲೆಯ ಗ್ರಂಥಾಲಯದಲ್ಲಿ ನೀವು ನೋಡಿಲ್ಲದಿರಬಹುದಾದ ಕೆಲವು ಉತ್ತಮ ಪುಸ್ತಕಗಳು ಇಲ್ಲಿ ನಿಮಗೆ ದೊರಕಬಹುದು.

ನಿಮ್ಮ ಬಳಿ ಲ್ಯಾಪ್‌ಟಾಪ್, ಮೊಬೈಲ್ ಮುಂತಾದ ಎಲೆಕ್ಟ್ರಾನಿಕ್ಸ್‌ ಉಪಕರಣಗಳಿರಬಹುದು. ಅವುಗಳ ನೆರವಿನಿಂದ ಅಂತರ್ಜಾಲ ಬಳಸಿ ಬೇಕಾದ ಮಾಹಿತಿಯನ್ನು ಪಡೆಯಬಲ್ಲೆ ಎಂಬ ಅಭಿಪ್ರಾಯ ನಿಮಗಿರಬಹುದು. ಆದರೆ, ನೆನಪಿಡಿ. ಗ್ರಂಥಾಲಯ ಬಳಕೆಗಿಂತ ಅತ್ಯುತ್ತಮವಾದ ಉಪಯುಕ್ತ ಹವ್ಯಾಸ ಇನ್ನೊಂದಿಲ್ಲ.

**

ಸಾಹಿತ್ಯ ಕೃತಿಗಳನ್ನು ಓದಿ

ನಿಮ್ಮ ಶಾಲೆಯ ಗ್ರಂಥಾಲಯದಲ್ಲಿ ಇಂಗ್ಲಿಷ್‌ ಮತ್ತು ಕನ್ನಡಭಾಷೆಗಳಿಗೆ ಸಂಬಂಧಿಸಿದಂತೆ, ಕಥಾಸಂಗ್ರಹ, ಕಾದಂಬರಿ, ಕವನಸಂಗ್ರಹ, ನಾಟಕ – ಮುಂತಾದ ಹಲವು ಪ್ರಕಾರಗಳ ಪುಸ್ತಕಗಳು ಇರುವುದನ್ನು ನೀವು ಗಮನಿಸಿರಬಹುದು. ಪ್ರತಿಯೊಂದು ಪ್ರಕಾರದಲ್ಲಿಯೂ ಹಲವಾರು ಜನಪ್ರಿಯ ಲೇಖಕರ ಕೃತಿಗಳನ್ನು ಗ್ರಂಥಾಲಯದಲ್ಲಿ ಸಂಗ್ರಹಿಸಲಾಗಿರುತ್ತದೆ. ನಿಮ್ಮ ಶಿಕ್ಷಕರ ಸಲಹೆ ಪಡೆದು ಅಂಥ ಪುಸ್ತಕಗಳನ್ನು ನಿಮ್ಮ ಗ್ರಂಥಾಲಯದಿಂದ ಎರವಲು ಪಡೆದು ಓದುವ ಕ್ರಮವನ್ನು ಅಳವಡಿಸಿಕೊಳ್ಳಿ. ತಿಂಗಳಿಗೆ ಕನಿಷ್ಠ ಎರಡು, ಸಾಧ್ಯವಾದಲ್ಲಿ ವಾರಕ್ಕೆ ಒಂದರಂತೆ ಈ ರೀತಿಯ ಪುಸ್ತಕಗಳನ್ನು ಓದಲು ಪ್ರಾರಂಭಿಸಿ.

ಮನೆಯಲ್ಲಿನ ನಿಮ್ಮ ಅಧ್ಯಯನದ ವೇಳಾಪಟ್ಟಿಯಲ್ಲಿ ಈ ರೀತಿಯ ಓದಿಗೂ ಒಂದೆರಡು ಗಂಟೆಗಳ ಸಮಯಾವಕಾಶವನ್ನು ಮಾಡಿಕೊಳ್ಳಿ. ಇಂಥ ಒಂದು ಅಭ್ಯಾಸವು ನಿಮಗೆ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಪರಿಚಯ ಮಾಡಿಕೊಳ್ಳುವುದಕ್ಕೆ ನೆರವಾಗುತ್ತದೆ. ಜೊತೆಗೆ, ಕೆಲವು ಶ್ರೇಷ್ಠ ಕೃತಿಗಳ ಹಾಗೂ ಅವುಗಳನ್ನು ರಚಿಸಿದ ಲೇಖಕರ ಬಗ್ಗೆ ತಿಳಿದುಕೊಳ್ಳುವುದಕ್ಕೂ ಅನುಕೂಲವಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮ ಭಾಷಾಸಂಪತ್ತು ಶ್ರೀಮಂತವಾಗುತ್ತದೆ. ನಿಮ್ಮ ವೈಯುಕ್ತಿಕ ಬೆಳವಣಿಗೆಯಲ್ಲಿ ಇಂಥ ಅಭ್ಯಾಸಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT