ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕನ್ನು ಕಲಿಸುವ ಹೋಮ್‌ ಸ್ಕೂಲ್‌

Last Updated 18 ಡಿಸೆಂಬರ್ 2018, 19:32 IST
ಅಕ್ಷರ ಗಾತ್ರ

ಹೋಮ್‌ಸ್ಕೂಲ್‌ ಒಂದು ವಿಶಿಷ್ಟವಾದ ಪರಿಕಲ್ಪನೆ. ಇತಿಹಾಸ ಮರುಕಳಿಸುತ್ತದೆ ಎಂಬ ಮಾತಿನಂತೆ ಇತ್ತೀಚಿನ ದಿನಗಳಲ್ಲಿ ಹಳತೆಲ್ಲವೂ ಹೊಸದೊಂದು ರೂಪವನ್ನು ಪಡೆದು ಪುನರಾವರ್ತನೆಯಾಗುತ್ತಿದೆ. ಈ ಒಂದು ಕಲ್ಪನೆಯನ್ನು ಒಪ್ಪಿಕೊಳ್ಳುವ ಅಥವಾ ಸ್ವಾಗತಿಸುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇದಕ್ಕೆ ಕಾರಣ ಅನುಕೂಲಕ್ಕಿಂತ ಅನನುಕೂಲಗಳ ಸಂಖ್ಯೆ ಜಾಸ್ತಿ ಇರುವುದು. ವೈಚಾರಿಕ ಮನೋಭಾವ ಉಳ್ಳವರು, ವಿಶೇಷ ಮಕ್ಕಳ ಪಾಲಕರು ಹೋಮ್‌–ಸ್ಕೂಲ್ ಪದ್ಧತಿಯನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತಾರೆ.

ಹೋಮ್‌–ಸ್ಕೂಲಿನ ಪಠ್ಯಕ್ರಮ ಮಕ್ಕಳ ಮನೋವಿಕಾಸಕ್ಕೆ ಆಸ್ಪದ ಮಾಡಿಕೊಡುತ್ತದೆ. ಇಂದಿನ ಶಿಕ್ಷಣದಲ್ಲಿ ಓದು–ಬರಹಕ್ಕೆ ಮಾತ್ರವೇ ಪ್ರಾಮುಖ್ಯವನ್ನು ಕೊಡಲಾಗುತ್ತದೆ; ಇನ್ನುಳಿದ ಪಠ್ಯೇತರ ಚಟುವಟಿಕೆಗಳು ಅಪ್ರದಾನವಾಗಿರುತ್ತವೆ. ಹೋಮ್‌–ಸ್ಕೂಲ್ ಪದ್ಧತಿಯಲ್ಲಿ ಶಿಕ್ಷಣದಷ್ಟೇ ಪ್ರಾಮುಖ್ಯವನ್ನು ಕಲೆ, ಕ್ರೀಡೆ, ಕೃಷಿ, ಕ್ರಿಯಾತ್ಮಕ ಚಟುವಟಿಕೆಗಳಿಗೂ ಕೊಡಲಾಗುತ್ತದೆ. ಮಗುವಿನ ಬೌದ್ಧಿಕ ಬೆಳವಣಿಗೆಗೆ ಪೂರಕವಾದವುಗಳೆಲ್ಲ ಇಲ್ಲಿ ಪಠ್ಯಕ್ರಮವಾಗಿರುತ್ತದೆ. ಇದರಿಂದ ಭವಿಷ್ಯದಲ್ಲಿ ಆ ಮಗು ಯಾವುದೇ ಸಮಸ್ಯೆಯನ್ನು ಎದುರಿಸುವಂತಹ ಛಾತಿಯನ್ನು ಹೊಂದಿರುತ್ತದೆ. ದಿನಂಪ್ರತಿ ಅಗತ್ಯವಿರುವ ವ್ಯಾವಹಾರಿಕ ಜ್ಞಾನ ಈ ಮಕ್ಕಳಲ್ಲಿ ಹೆಚ್ಚಿನ ಮಟ್ಟದಲ್ಲಿರುತ್ತದೆ.

ಹಲವಾರು ಮಕ್ಕಳು ತಮ್ಮ ದೈಹಿಕ ನ್ಯೂನತೆಯ ಕಾರಣದಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪಾಲಕರು ವಿಧಿ ಇಲ್ಲದೆ ಇಂಥಹ ಮಕ್ಕಳ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿಯೇ ಕಡಿತಗೊಳಿಸುತ್ತಾರೆ. ಅಂಥವರಿಗೆ ಹೋಮ್‌ಸ್ಕೂಲ್ ವರದಾನವಾಗಿದೆ.

ಇಂದಿನ ಶೈಕ್ಷಣಿಕ ಪದ್ಧತಿಯಲ್ಲಿ ಮನೆಯಿಂದ ಹೊರ ಬಂದು ಒಂದೇ ಸೂರಿನಡಿ ನೂರಾರು ಮಕ್ಕಳು ಕುಳಿತು ಕಲಿಯುವುದಾಗಿದೆ. ಇದರಿಂದ ಮಕ್ಕಳು ಸಮಾಜಮುಖಿಯಾಗಲು ಹೆಚ್ಚಿನ ಅವಕಾಶವಿದೆ. ತಮ್ಮ ಓರಗೆಯವರಿಂದ ಮಕ್ಕಳು ಹೊಸ ಹೊಸ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಪರಸ್ಪರ ಸಹಕಾರ, ಭಾವನೆಗಳ ಹಂಚಿಕೊಳ್ಳುವಿಕೆಗೆ ಇಲ್ಲಿ ಆಸ್ಪದವಿದೆ. ಸ್ನೇಹ, ಅನ್ಯೂನ್ಯತೆಗಳು ಇಲ್ಲಿ ಸಾಕಾರಗೊಳ್ಳುತ್ತವೆ. ಆದರೆ ಹೋಮ್‌–ಸ್ಕೂಲ್ ಇದರಿಂದ ಭಿನ್ನವಾಗಿದೆ. ಪ್ರತಿನಿತ್ಯ ಮನೆಯಲ್ಲಿ ತಮ್ಮ ಒಡಹುಟ್ಟಿದವರೊಡನೆ ಮಾತ್ರವೇ ಮಕ್ಕಳು ಕಲಿಯಬೇಕಾಗುತ್ತದೆ. ಕೆಲವೊಮ್ಮೆ ಪೋಷಕರೇ ಅಲ್ಲಿ ಶಿಕ್ಷಕರಾಗಿರುವುರಿಂದ ಶಾಲೆಯಲ್ಲಿ ಸಿಗುವ ಬಿಗುವಾದ ವಾತಾವರಣ ಹೋಮ್‌–ಸ್ಕೂಲ್‌ಗಳಲ್ಲಿ ಲಭ್ಯವಿರುವುದಿಲ್ಲ. ಶಿಕ್ಷೆಯೂ ಕಡಿಮೆ. ಹೀಗಾದಾಗ ಮಗುವಿನ ಮನಸ್ಸು ಚಂಚಲಗೊಂಡು ಕಲಿಸುವ ಅಥವಾ ಕಲಿಯುವ ಗಂಭೀರತೆಗೆ ತೊಡಕಾಗಲೂಬಹುದು.

ಒಟ್ಟಿನಲ್ಲಿ ಹೇಳುವುದಾರೆ ಹೋಮ್‌–ಸ್ಕೂಲ್ ಒಂದು ಸರಳ, ಅರ್ಥಪೂರ್ಣ ಕಲ್ಪನೆಯಾಗಿದೆ. ಪ್ರಾಥಮಿಕ ಹಂತದಲ್ಲಿಯೇ ಡೊನೇಷನ್ ಎಂಬ ಹೆಸರಲ್ಲಿ ಪಾಲಕರನ್ನು ಸುಲಿಗೆ ಮಾಡುವ ಶಾಲೆಗಳಿಗಿಂತ ಹೋಮ್‌ಸ್ಕೂಲ್ ಬಡವರಿಗೆ ಆಶಾದಾಯಕವಾಗಿದೆ. ಬದುಕಿಗೆ ಬೇಕಿರುವುದು ಕೇವಲ ಅಕ್ಷರಜ್ಞಾನವಲ್ಲ. ಸಮಗ್ರ ಕೌಶಲಗಳ ಅಳವಡಿಕೆಯ ಜ್ಞಾನದ ಅಗತ್ಯವಿದೆ. ಈ ನಿಟ್ಟಿನ ಉದ್ದೇಶ ಹೊಂದಿದ ಹೋಮ್‌ಸ್ಕೂಲ್ ಪದ್ಧತಿ ಇಂದಿನ ಮಕ್ಕಳಿಗೆ ಅವಶ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT