ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಸೋಲಿನ ಭಯ: ಜಗದೀಶ ಶೆಟ್ಟರ್

Last Updated 23 ಏಪ್ರಿಲ್ 2018, 8:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗುಪ್ತಚರದಳ ಮಾಹಿತಿ ನೀಡಿದೆ. ಹೀಗಾಗಿ ಸೋಲಿನ ಭೀತಿಯಿಂದ ಅವರು ಬಾದಾಮಿಯಿಂದಲೂ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶೆಟ್ಟರ್, ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಅವರ ಪತ್ನಿ ಶಿಲ್ಪಾ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಹಾನಗರ ಪಾಲಿಕೆ ಉಪಮೇಯರ್ ಮೇನಕಾ ಹುರಳಿ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ನಾಗಶೆಟ್ಟಿ ಕೊಪ್ಪದ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ವಾದ್ಯ ಮೇಳದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ತೆರದ ವಾಹನದಲ್ಲಿ ಮೆರವಣಿಗೆ ನಡೆಸಿದರು.

‘ಬಿಜೆಪಿ ಅಭ್ಯರ್ಥಿಯಾಗಿ ಆರನೆಯ ಬಾರಿಗೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಜನರ ಆಶಿರ್ವಾದದಿಂದ ಐದು ಬಾರಿ ಆಯ್ಕೆಯಾಗಿದ್ದೇನೆ. ಈ ಬಾರಿಯೂ ಗೆಲ್ಲುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಲೆ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂಘಟನಾತ್ಮಕ ಹೋರಾಟದಿಂದ ಗೆಲುವು ನಮ್ಮದಾಗಲಿದೆ’ ಎಂದು ಶೆಟ್ಟರ್ ಹೇಳಿದರು.

‘ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಶಾಪ’: ‘ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿಯ ಶಾಪ ತಟ್ಟಿದೆ. ಬನಶಂಕರಿ ದೇವಿಯ ಶಾಪವೂ ತಟ್ಟಲಿದೆ. ಸೋಲಿನ ಭಯದಿಂದ ಬಾಲಸುಟ್ಟ ಬೆಕ್ಕಿನಂತೆ ಬಾದಾಮಿಗೆ ಬಂದಿದ್ದಾರೆ’ ಎಂದು ಸಂಸದ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.

‘ಆರನೆಯ ಬಾರಿ ಜಗದೀಶ ಶೆಟ್ಟರ್ ನಾಮಪತ್ರ ಸಲ್ಲಿಸುತ್ತಿದ್ದಾರೆ. ಅವರಿಗೆ ಸಭ್ಯತೆ, ಬದ್ಧತೆಯ ಗುಣಗಳಿವೆ. ಕ್ಷೇತ್ರದ ಜನರು ಶೆಟ್ಟರ್ ಬೆಂಬಲಕ್ಕಿದ್ದಾರೆ. ಜಗದೀಶ ಶೆಟ್ಟರ್ ಆರನೆಯ ಬಾರಿ ಸಿಕ್ಸರ್ ಹೊಡೆಯುವ ಲಕ್ಷಣ ಕಾಣಿಸುತ್ತಿದೆ’ ಎಂದು ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT