ಗಣಿತ ಸುಲಭ ಕಣ್ರೀ..

ಭಾನುವಾರ, ಏಪ್ರಿಲ್ 21, 2019
26 °C

ಗಣಿತ ಸುಲಭ ಕಣ್ರೀ..

Published:
Updated:
Prajavani

ಗಣಿತವು ಸಂಖ್ಯೆ ಹಾಗೂ ಅಪರಿಮಿತ ಅವಕಾಶಗಳ ವಿಜ್ಞಾನ. ಗಣಿತ ಬದುಕಿಗೊಂದು ನಿರಂತರತೆಯನ್ನು, ನಮ್ಮ ಸುತ್ತಲಿನ ಸಾಮಾಜಿಕ ನಿಲುವುಗಳಲ್ಲಿ, ಮಾನವ ಸಂಬಂಧಗಳಲ್ಲಿ ನಿಖರತೆಯನ್ನು ತಂದು ಕೊಡುತ್ತದೆ. ಪ್ರಕೃತಿಯನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲು, ಜೀವನದ ಕ್ಲಿಷ್ಟಕರ ಸಮಸ್ಯೆಗಳನ್ನು ಸುಲಭವಾಗಿ ಅರಿತುಕೊಂಡು, ಸುಲಲಿತವಾಗಿ ಬಗೆಹರಿಸಲು, ಅವುಗಳನ್ನು ಸಂಜ್ಞೆ, ಸಂಕೇತಗಳ ಸಹಾಯದಿಂದ ಪ್ರಮಾಣಿಕರಿಸಲು ನೆರವಾಗುತ್ತದೆ.

ಗಣಿತಕ್ಕೆ ಅದರದೇ ಆದ ಒಂದು ಭಾಷೆಯಿದೆ. ಸಂಜ್ಞೆಗಳು, ಚಿಹ್ನೆಗಳು, ಅಂಕೆಗಳು, ತರ್ಕಪದ್ಧತಿಗಳು, ಅಂತರ್‌ದೃಷ್ಟಿ, ವಿವೇಕಯುಕ್ತವಾದ ವೀಕ್ಷಣಾ ಕ್ರಮ, ಅರ್ಥಕಲ್ಪನೆ ಇತ್ಯಾದಿ ಯಾವುದೇ ವಿಷಯಗಳ ವಸ್ತುನಿಷ್ಠ ವಿಚಾರಗಳನ್ನು ನಾವು ಗಣಿತದ ಸಹಾಯದಿಂದ ಅರಿತುಕೊಳ್ಳಬಹುದು; ಅಮೂರ್ತವಾದ ವಿಚಾರಗಳನ್ನು ಕೂಡ ನಿಖರವಾಗಿ ವಿವರಿಸಬಹುದು. ಗಣಿತದ ಉದ್ದೇಶ ಕೇವಲ ಲೆಕ್ಕದ ಜ್ಞಾನ, ಸೂತ್ರಗಳು ಮತ್ತು ಯಾಂತ್ರಿಕ ವಿಧಿ ವಿಧಾನಗಳನ್ನು ಕಲಿಸುವುದಲ್ಲ. ಅದರ ಬದಲು ತಾರ್ಕಿಕ ಚಿಂತನೆ, ಸೂತ್ರೀಕರಿಸುವುದು ಗಣಿತೀಕರಣದ ಜ್ಞಾನ ಪಡೆಯುವುದರ ಮೂಲ ಉದ್ದೇಶ.

ಲೆಕ್ಕವನ್ನು ಕಲಿಸುವುದರಿಂದ ಮಗುವಿನ ವಿವೇಚನೆ ಮತ್ತು ತಾರ್ಕಿಕತೆಗಳ ವರ್ಧನೆ, ಅಮೂರ್ತ ರೂಪಗಳನ್ನು ಚಿತ್ರಿಸಿಕೊಳ್ಳುವುದು ಮತ್ತು ಅವುಗಳೊಡನೆ ವ್ಯವಹರಿಸುವುದು, ಸಮಸ್ಯೆಗಳನ್ನು ಬಿಡಿಸುವುದು ಮತ್ತು ಸೂತ್ರಿಕರಿಸುವುದು ಸಾಧ್ಯವಾಗಬೇಕು. ಗಣಿತೀಕರಣಕ್ಕೆ ಮಕ್ಕಳ ಸಾಮರ್ಥ್ಯಗಳನ್ನು ಬೆಳೆಸುವುದೇ ಗಣಿತ ಶಿಕ್ಷಣದ ಬಹು ಮುಖ್ಯ ಗುರಿ. ಶಾಲಾ ಗಣಿತದ ಗುರಿ ಎಂದರೆ ಉಪಯುಕ್ತ ಸಾಮರ್ಥ್ಯಗಳನ್ನು ಬೆಳೆಸುವುದು. ಅದರಲ್ಲೂ ವಿಶೇಷವಾಗಿ ಅಂಕೆಗಳ ಜ್ಞಾನ, ಅವುಗಳ ಬಳಕೆ, ಅಳತೆಗಳು, ದಶಮಾಂಶ, ಮತ್ತು ಶೇಕಡಾವಾರುಗಳಿಗೆ ಸಂಬಂಧಪಟ್ಟವುಗಳು. ಮಗುವು ಯೋಚಿಸಿ ತರ್ಕಿಸುವಂತೆ, ಊಹೆಗಳನ್ನು ತಾರ್ಕಿಕ ನಿರ್ಣಯಗಳಿಗೆ ತಲುಪಿಸುವಂತೆ ಮಗುವಿನ ಸಂಪನ್ಮೂಲ ಜ್ಞಾನವನ್ನು ಬೆಳೆಸುವುದು ಅದರ ಗುರಿ.

ಇದಕ್ಕೆ ಮುಖ್ಯವಾಗಿ ಗಣಿತ ತತ್ವಗಳನ್ನು ಬೋಧಿಸುವ ಪಠ್ಯಕ್ರಮ ಬೇಕಾಗುತ್ತದೆ. ಬಿಡಿಬಿಡಿಯಾಗಿ ದೊರಕುವ ವಿಧಾನ ಮತ್ತು ಕೌಶಲಗಳು (ಅಂಕಗಣಿತ, ಬೀಜಗಣಿತ, ರೇಖಾಗಣಿತ), ಬೇರೆ ಕ್ಷೇತ್ರಗಳಾದ ವಿಜ್ಞಾನ ಮತ್ತು ಸಾಮಾಜಿಕ ಅಧ್ಯಯನಗಳ ಕುರಿತು ಬರಬಹುದಾದ ಸಮಸ್ಯೆಗಳನ್ನು ವಿವೇಚಿಸುವ ಸಾಮರ್ಥ್ಯವನ್ನು ಪ್ರೌಢಶಾಲೆಗಳಲ್ಲಿ ಪಡೆಯುವಂತಾಗಬೇಕು.

ಶಾಲಾ ಗಣಿತದ ಶಿಕ್ಷಣದಲ್ಲಿನ ಕೆಲವು ಸಮಸ್ಯೆಗಳು

ಬಹುತೇಕ ಮಕ್ಕಳು ಒಂದು ರೀತಿಯ ಭಯ ಮತ್ತು ವೈಫಲ್ಯದ ಮನೋಭಾವ ಹೊಂದಿರುತ್ತವೆ.

ಈಗಿನ ಪಠ್ಯಕ್ರಮವನ್ನು ಎದುರಿಸಲು ಒಂದಷ್ಟು ಹಿಂಜರಿಕೆಯನ್ನು ಹೊಂದಿವೆ.

ಪಠ್ಯವು ಪ್ರತಿಭಾವಂತ ಮಕ್ಕಳ ಮಟ್ಟವನ್ನು ತಲುಪಲು ಪೂರಕವಾಗಿಲ್ಲ.

ಪಠ್ಯಕ್ರಮವು ಪ್ರಾಥಮಿಕದಿಂದ ಮಾಧ್ಯಮಿಕ, ಮಾಧ್ಯಮಿಕದಿಂದ ಪ್ರೌಢಶಾಲೆಗೆ ಬದಲಾಗುವ ಹಂತಗಳಲ್ಲಿ ಒಂದಷ್ಟು ಅತಾರ್ಕಿಕ ಕ್ರಮವಿದೆ.

ಲೆಕ್ಕಗಳು, ಅಭ್ಯಾಸಗಳು ಮತ್ತು ಮೌಲ್ಯಮಾಪನ ವಿಧಾನಗಳಲ್ಲಿ ಸುಧಾರಣೆಯ ಅವಶ್ಯಕತೆಯಿದೆ.

ಲೆಕ್ಕಾಚಾರಕ್ಕೆ ಹೆಚ್ಚಿನ ಒತ್ತು ನೀಡುವ ತಾಂತ್ರಿಕ ಮತ್ತು ಪುನರಾವರ್ತನ ವಿಧಾನಗಳಿದ್ದರೂ ಪಠ್ಯಕ್ರಮದಲ್ಲಿ ಅಳವಡಿಸಿಲ್ಲ.

ಶಾಲಾ ಗಣಿತದ ಪಠ್ಯ ಹೇಗಿರಬೇಕೆಂದರೆ ಮಕ್ಕಳು ಗಣಿತಕ್ಕೆ ಹೆದರುವ ಬದಲು ಆನಂದಿಸುವಂತಾಗಬೇಕು. ಅವರು ತಮ್ಮೊಳಗೆ ಮಾತನಾಡಿಕೊಳ್ಳಲು, ಚರ್ಚೆ ಮಾಡಲು, ಒಟ್ಟಿಗೆ ಕೆಲಸ ಮಾಡಲು ಮತ್ತು ಸಂವಹನಕ್ಕಾಗಿ ಗಣಿತವನ್ನು ಪರಿಗಣಿಸಬೇಕು. ಮಕ್ಕಳು ಅರ್ಥಪೂರ್ಣ ಸಮಸ್ಯೆಗಳನ್ನು ಮುಂದಿಟ್ಟು ಪರಿಹರಿಸುವಂತೆ ಇರಬೇಕು. ಅಮೂರ್ತ ಕಲ್ಪನೆಗಳನ್ನು, ಸಂಬಂಧಗಳನ್ನು ಗ್ರಹಿಸಲು ಹಾಗೂ ರಚನೆಗಳನ್ನು ಅರ್ಥಮಾಡಿಕೊಳ್ಳಲು, ತರ್ಕಬದ್ಧವಾಗಿ ಚಿಂತಿಸಲು ಬಳಸುವಂತಿರಬೇಕು. ಗಣಿತದ ಮೂಲ ರಚನೆಯನ್ನು ಗ್ರಹಿಸುವಂತಿರಬೇಕು. ತರಗತಿಯಲ್ಲಿ ಪ್ರತಿಯೊಂದು ಮಗುವೂ ಗಣಿತವನ್ನು ಕಲಿಯಬಲ್ಲದು ಎಂಬ ನಂಬಿಕೆಯಲ್ಲಿ ಶಿಕ್ಷಕರು ಕಲಿಸುವಂತಿರಬೇಕು.

ಇದಕ್ಕೆ ಪೂರಕವಾಗಿ ಪ್ರೌಢಶಿಕ್ಷಣದ ಗಣಿತದ ಪಾಠ ಮಾಡುವಾಗ ಕೆಲವೊಂದು ಹೊಸ ವಿಷಯಗಳನ್ನು ಅಳವಡಿಸಿಕೊಳ್ಳ
ಬಹುದು. ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವಂತಹ ಮತ್ತು ಸ್ವತಃ ತೊಡಗಿಕೊಳ್ಳುವಂತಹ ಗಣಿತದ ಒಳನೋಟಗಳಿರಬೇಕು. ನಾವಿಟ್ಟುಕೊಂಡಿರುವ ಶಿಕ್ಷಣದ ಗುರಿಗಳನ್ನು ಕಾಲಕಾಲಕ್ಕೆ ಪುನರ್‌ವಿಮರ್ಶೆ ಮಾಡಿ ಇಂದಿನ ಅಗತ್ಯಗಳಿಗೆ, ಮಕ್ಕಳ ಸಾಮರ್ಥ್ಯ, ಅವರ ಆಶೋತ್ತರಗಳು, ಅವುಗಳಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿ ಪಠ್ಯಕ್ರಮ ಪುನರ್‌ ರಚನೆಯಾಗಬೇಕು. ಆಧುನಿಕ ವಿಚಾರಗಳೊಂದಿಗೆ ಅತ್ಯಂತ ಅಗತ್ಯವಿರುವ ಪ್ರಾಚೀನ ವಿಚಾರಗಳು ಹಾಗೂ ಸತ್ಯಾಂಶಗಳು ಮಿಳಿತವಾಗಿರಬೇಕು. ಶಾಲೆಗಳಲ್ಲಿ ಅತ್ಯಾಧುನಿಕ ಬೋಧನಾ ಸಲಕರಣೆಗಳನ್ನು ಒದಗಿಸಿ ಅವುಗಳನ್ನು ಶಿಕ್ಷಕರಿಗೆ ಸರಿಯಾಗಿ ಬಳಸಲು ಮಾರ್ಗದರ್ಶನ ಮಾಡಬೇಕು. ಇದರಿಂದ ಜಾಗತೀಕರಣದ ಬದಲಾವಣೆಗೆ ನಮ್ಮ ಮಕ್ಕಳು ಸಕಾರತ್ಮಕವಾಗಿ ಸ್ಪಂದಿಸುವಲ್ಲಿ ಸಹಕಾರಿಯಾಗುತ್ತದೆ. 

ಗಣಿತ ಶಿಕ್ಷಣದಲ್ಲಿನ ಕೆಲವು ಸಮಸ್ಯೆಗಳು...

ಶಾಲೆಯಲ್ಲಿ ಮಕ್ಕಳಿಗೆ ಗಣಿತದ ಸಮಸ್ಯೆಯನ್ನು ಬಗೆಹರಿಸುವ ಕೌಶಲಗಳನ್ನು ಬೆಳೆಸುವುದು.

ವಸ್ತುಸ್ಥಿತಿಗೆ ಹತ್ತಿರವಾದ ಪಠ್ಯಕ್ರಮವಿಟ್ಟು ಮಕ್ಕಳ ಕಲಿಕಾ ಅಗತ್ಯಗಳನ್ನು ಈಡೇರಿಸುವುದು.

ಕಲಿಕೆಯನ್ನು ಜೀವನದ ಅವಶ್ಯಕತೆಗಳೊಂದಿಗೆ ಜೋಡಿಸುವುದು.

ಕಂಠಪಾಠ ಪದ್ಧತಿಗೆ ವಿದಾಯ ಹೇಳುವುದು. 

ಜ್ಞಾನ ಅಭಿವೃದ್ಧಿಗೆ ಕಲಿಕಾ ಅನುಭವಗಳನ್ನು ಬಳಸುವುದು.

ದೈನಂದಿನ ಜೀವನದಲ್ಲಿ ಗಣಿತವನ್ನು ಅನ್ವಯಿಸಿಕೊಂಡು ಅರ್ಥೈಸಿಕೊಳ್ಳುವ ಸಾಮರ್ಥ್ಯ ಬೆಳೆಸುವುದು.

ಗಣಿತದ ಬೇರೆ ಬೇರೆ ಶಾಖೆಗಳನ್ನು ಮತ್ತು ಅವುಗಳ ನಡುವಿನ ಸಂಬಂಧ ತಿಳಿಯುವುದು.

ಕೇವಲ ಔಪಚಾರಿಕ ಬೋಧನೆ ಮಾತ್ರವಲ್ಲದೆ ಸೃಜನಾತ್ಮಕ ವಿಧಾನ, ತಾರ್ಕಿಕ ಚಿಂತನೆಯ ಮೂಲಕ ಜ್ಞಾನ ಪಡೆಯಲು ಸೂಕ್ತವಾದ ವೇದಿಕೆಯೊದಗಿಸುವುದು.

ವಿನೋದ ಗಣಿತದಿಂದ ಕಲಿಕೆಯ ಏಕತಾನತೆ ಮರೆಸುವುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !