ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಬಿ.ಎ.ಉದ್ಯೋಗಕ್ಕೆ ಬೇಕು ಕೌಶಲ ಅಭಿವೃದ್ಧಿ

Last Updated 5 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಎಂ.ಬಿ.ಎ. ಪದವಿಯನ್ನು ಕೇವಲ ಪಡೆದುಕೊಂಡಿದ್ದೇನೆ ಅನ್ನುವುದಕ್ಕಿಂತ ಹೇಗೆ ಪಡೆದುಕೊಂಡಿದ್ದೀರಿ ಎಂಬುದು ಪ್ರಮುಖವಾದ ವಿಚಾರವಾಗಿರುತ್ತದೆ. ಈ ಎರಡು ವರ್ಷದ ವೃತ್ತಿಪರ ಕೋರ್ಸ್‌ನಲ್ಲಿ ಹಲವಾರು ವಿಷಯಗಳನ್ನು ಕಲಿಸುವುದರ ಜೊತೆಜೊತೆಗೆ ಮಾರುಕಟ್ಟೆ ನಿರ್ವಹಿಸಲು, ಗ್ರಾಹಕರು, ಮಾರಾಟಗಾರರು ಹಾಗೂ ಪೂರೈಕೆದಾರರ ಜೊತೆ ಉತ್ತಮ ಬಾಂಧವ್ಯ ಕಲ್ಪಿಸಿಕೊಳ್ಳಲು, ತಮ್ಮ ಸಹೋದ್ಯೋಗಿ ಹಾಗೂ ಉದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಾಗೂ ಅವರನ್ನು ಸಂತುಷ್ಟವಾಗಿರಿಸಲು ಅಗತ್ಯವಾಗಿರುವ ಕೌಶಲಗಳನ್ನು ಕಲಿಸುವುದು ಒಂದು ಒಳ್ಳೆ ಎಂ.ಬಿ.ಎ. ಸಂಸ್ಥೆಯ ಕರ್ತವ್ಯ. ಹಾಗೆಯೇ ವಿದ್ಯಾರ್ಥಿಗಳು ಕೌಶಲಗಳನ್ನು ಈ ಎರಡು ವರ್ಷದ ಅವಧಿಯಲ್ಲಿಯೇ ಅಭಿವೃದ್ಧಿ ಮಾಡಿಕೊಳ್ಳುವುದು ಅವರ ಮಹತ್ತರ ಜವಾಬ್ದಾರಿ. ಹಾಗಾದರೆ, ಒಂದು ಎಂ.ಬಿ.ಎ. ಸಂಸ್ಥೆಯಲ್ಲಿ ಯಾವ ರೀತಿಯ ಕೌಶಲಗಳನ್ನು ಹೇಗೆ ವಿದ್ಯಾರ್ಥಿಗಳಿಗೆ ಕಲಿಸಬೇಕು?

ವಿಶ್ಲೇಷಣಾತ್ಮಕ ಕೌಶಲ
ಎಂ.ಬಿ.ಎ. ಪದವೀಧರರಿಗೆ ವ್ಯಾಪಾರ ವಹಿವಾಟುಗಳ ಮೂಲ ತತ್ವಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಬೇಕು. ಹಾಗೂ ಆ ಮಾಹಿತಿಯನ್ನು ನೈಜ ಮಾರುಕಟ್ಟೆಯಲ್ಲಿ ಉಪಯೋಗಿಸುವ ಕಲೆಯನ್ನು ಹೇಳಿಕೊಡಬೇಕು. ಈ ಕಾರಣಕ್ಕಾಗಿ ಪ್ರಾಧ್ಯಾಪಕರು ನಿತ್ಯವೂ ಏಕ ವಿಷಯ ಪದ್ಧತಿಯನ್ನು ಉಪಯೋಗಿಸುವ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳಿಗೆ ಪ್ರತಿ ವರ್ಷದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಜೆಟ್‌ ಅಧ್ಯಯನ ಮಾಡಿಕೊಂಡು ಬರಬೇಕೆಂದು ಹೇಳಲೇಬೇಕಾಗುತ್ತದೆ. ಪ್ರತಿನಿತ್ಯದ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಚಲಿತ ವ್ಯಾಪಾರದ ವಿದ್ಯಮಾನಗಳ ಕುರಿತು ಅವರದೇ ಆದ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕು. ಪ್ರಾಧ್ಯಾಪಕರು ತಾವು ನಡೆಸುವ ಕಿರು ಪರೀಕ್ಷೆ, ಆಂತರಿಕ ಮೌಲ್ಯಮಾಪನಗಳಲ್ಲಿ ಈ ಕೌಶಲಗಳನ್ನು ಉಪಯೋಗಿಸಿ ಉತ್ತರಿಸುವ ಹಾಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಬೇಕಾಗುತ್ತದೆ ಹಾಗೂ ಅವರಿಗೆ ದಿನನಿತ್ಯದ ವ್ಯಾಪಾರಕ್ಕೆ ಸಂಬಂಧಪಟ್ಟ ಪ್ರಚಲಿತ ವಿದ್ಯಮಾನಗಳನ್ನು ಗಮನಿಸಲು, ಯಾವುದೇ ಒಂದು ಅತ್ಯುತ್ತಮ ದಿನಪತ್ರಿಕೆ ಹಾಗೂ ನಿಯತಕಾಲಿಕೆಯನ್ನು ಓದುವಂತೆ ತಿಳಿ ಹೇಳಬೇಕು.
ಎಂ.ಬಿ.ಎ.ಯ ಎಲ್ಲಾ ವಿಷಯ (ಮಾರ್ಕೆಟಿಂಗ್‌, ಫೈನಾನ್ಸ್‌, ಎಚ್‌ಆರ್‌, ಸಪ್ಲೈ ಚೈನ್‌, ಆರ್ಗ್‌ನೈಜೇಶನ್‌ ಬಿಹೇವಿಯರ್‌) ಗಳಲ್ಲಿ ವಿದ್ಯಾರ್ಥಿಗಳು ವಿಶ್ಲೇಷಣಾ ಸಾಮರ್ಥ್ಯ ಹೊಂದಿರಬೇಕು.

ಸಮಾಲೋಚನಾ ಕೌಶಲ
ಗ್ರಾಹಕರು, ಮಾರಾಟಗಾರರು, ಪೂರೈಕೆದಾರರ ಜೊತೆ ಪರಿಣಾಮಕಾರಿಯಾಗಿ ವ್ಯವಹಾರ ಕುದುರಿಸಲು ಹಾಗೂ ಕಂಪನಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಈ ಕೌಶಲದ ಅವಶ್ಯಕತೆ ಇದೆ. ಈ ಹಂತದಲ್ಲಿ ಒಬ್ಬ ಮ್ಯಾನೇಜರ್ ಗೆಲುವು–ಗೆಲುವು ಸ್ಥಿತಿಯನ್ನು ತಲುಪಬೇಕಾಗುತ್ತದೆ. ಕೆಲವು ಮ್ಯಾನೇಜ್‌ಮೆಂಟ್‌ ಗೇಮ್ಸ್, ಅಣಕು ನೈಜ ಮಾರುಕಟ್ಟೆ ಪರಿಸ್ಥಿತಿ ಗುಂಪು ಚರ್ಚೆ, ಅಣಕು ಮೀಟಿಂಗ್ ಹಾಗೂ ಕೆಲವು ವಿದ್ಯಾರ್ಥಿ ವೇದಿಕೆಗಳನ್ನು ಏರ್ಪಡಿಸುವುದರ ಮೂಲಕ ವಿದ್ಯಾರ್ಥಿಗಳು ಈ ಕೌಶಲಗಳನ್ನು ಕರಗತ ಮಾಡಿಕೊಳ್ಳುವಂತೆ ಪ್ರೇರೇಪಿಸಬಹುದು.

ಸಂವಹನ ಕೌಶಲ
ಕ್ಯಾಂಪಸ್ ನೇಮಕಾತಿಗಾಗಿ ಭೇಟಿ ನೀಡುವ ಕಂಪನಿಗಳು ತಾನು ಆಯ್ಕೆ ಮಾಡಿಕೊಳ್ಳುವ ಎಂ.ಬಿ.ಎ ಪದವೀಧರ ಅತ್ಯುತ್ತಮ ಸಂವಹನ ಕೌಶಲಗಳನ್ನು ಹೊಂದಬೇಕೆಂದು ಹಾಗೂ ಅದು ಅವರ ಪ್ರಥಮ ಆದ್ಯತೆ ಎಂದು ಹೇಳುತ್ತಾರೆ. ಇದಕ್ಕಾಗಿ ಎಂಬಿಎ ಸಂಸ್ಥೆಗೆ ಒಂದು ಪ್ರತ್ಯೇಕ ಭಾಷಾ ಪ್ರಯೋಗಾಲಯ ಹಾಗೂ ಒಬ್ಬ ಆಂಗ್ಲಾಭಾಷಾ ತರಬೇತುದಾರನ ಅವಶ್ಯಕತೆ ಇದೆ. ಶ್ರವಣ-ದೃಶ್ಯ ಮಾಧ್ಯಮದ ಉಪಕರಣಗಳೊಂದಿಗೆ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆ ಮಾತನಾಡಲು ಪ್ರೇರೇಪಿಸುತ್ತ ಈ ಕೌಶಲವನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ.

ಕಂಪ್ಯೂಟರ್ ಕೌಶಲ
ಎಂ.ಬಿ.ಎ ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್ ವರ್ಡ್, ಎಕ್ಸ್‌ಲ್ ಹಾಗೂ ಪವರ್ ಪಾಯಿಂಟ್ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವ ಕಲೆ ಇರಬೇಕು. ಅಂತರ್‌ರ್ಜಾಲ ಮತ್ತು ಇ-ಮೇಲ್‌ಗಳ ಬಗ್ಗೆ ಮಾಹಿತಿ ಹಾಗೂ ಉಪಯೋಗವನ್ನು ಎಂ.ಬಿ.ಎ. ವಿದ್ಯಾರ್ಥಿ ಹೊಂದಿರಲೇಬೇಕಾಗುತ್ತದೆ. ಕಾರ್ಪೊರೇಟ್‌ ಜಗತ್ತು ಈ ಕೌಶಲವನ್ನು ಅತ್ಯವಶ್ಯಕ ಕೌಶಲವೆಂದು ಭಾವಿಸುತ್ತದೆ.

ಸಮಸ್ಯೆ ಪರಿಹರಿಸುವ ಕೌಶಲ
ಎಂ.ಬಿ.ಎ. ಪದವೀಧರ ಮುಂದೆ ತನ್ನ ಹುದ್ದೆ ಹಾಗೂ ಕಂಪನಿಗಳಲ್ಲಿ ಬರಬಹುದಾದ ದಿನನಿತ್ಯದ ಸಮಸ್ಯೆಗಳನ್ನು ತನ್ನ ಸೃಜಲಶೀಲತೆಯಿಂದ ಬಗೆಹರಿಸಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಸ್ಟ್ಯಾಟಿಸ್ಟಿಕ್ಸ್‌ ಫಾರ್‌ ಮ್ಯಾನೇಜ್‌ಮೆಂಟ್‌, ಕ್ವಾಂಟಿಟೇಟಿವ್‌ ಟೆಕ್ನಿಕ್ಸ್‌, ಪ್ರೊಡಕ್ಷನ್‌ ಆ್ಯಂಡ್‌ ಆಪರೇಶನ್‌ ಮ್ಯಾನೆಜ್‌ಮೆಂಟ್‌, ಫೈನಾನ್ಶಿಯಲ್‌ ಮ್ಯಾನೇಜ್‌ಮೆಂಟ್‌, ಬ್ಯುಸಿನೆಸ್‌ ರಿಸರ್ಚ್‌ ಮೆಥಡ್‌ ಮೊದಲಾದ ವಿಷಯಗಳನ್ನು ಅಭ್ಯಸಿಸುವ ಅವಕಾಶವಿರುತ್ತದೆ. ಈ ಮೇಲ್ಕಾಣಿಸಿದ ವಿಷಯಗಳು ವಿದ್ಯಾರ್ಥಿಯ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹಾಗೂ ಕೌಶಲವನ್ನು ಹೆಚ್ಚಿಸುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಈ ಕೌಶಲದ ಅಭಿವೃದ್ಧಿಗೆ ಮೀಸಲಿರಿಸಬೇಕು.

ನಾಯಕತ್ವ ತರಬೇತಿ
ತಮ ತಮ್ಮ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುವ ಪ್ರಮುಖ ಉದ್ಯಮಗಳ ನಾಯಕರ ಸಂದರ್ಶನಗಳ ವಿಡಿಯೊಗಳನ್ನು ತೋರಿಸುವುದು, ಯಶಸ್ವಿ ನಾಯಕರನ್ನು ಸಂಸ್ಥೆಗಳಿಗೆ ಆಹ್ವಾನಿಸಿ ಅವರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದು, ಪ್ರತಿ ವರ್ಷ ಮ್ಯಾನೇಜ್‌ಮೆಂಟ್‌ ಉತ್ಸವವನ್ನು ಆಯೋಜಿಸಿ, ವಿದ್ಯಾರ್ಥಿಗಳನ್ನು ವಿವಿಧ ತಂಡಗಳಾಗಿ ರಚಿಸಿ ಜವಾಬ್ದಾರಿ ನೀಡುವುದರ ಮೂಲಕ ಅವರೊಳಗಿನ ನಾಯಕನನ್ನು ಹೊರತರುವುದು ಈ ಕೌಶಲವನ್ನು ಅಭಿವೃದ್ಧಿ ಮಾಡುವಲ್ಲಿ ಸಹಾಯಕವಾಗಬಲ್ಲದು. ಇದನ್ನು ಎಂ.ಬಿ.ಎ. ಪದವೀಧರ ಅಭಿವೃದ್ಧಿ ಮಾಡಿಕೊಂಡರೆ ನಿಮಗೆ ಒಳ್ಳೆಯ ಕೆಲಸ ಸಿಗುವುದು ಕನಸಿನ ಮಾತೇನಲ್ಲ.

ಕಂಪನಿಯ ಪ್ರಮುಖ ಸ್ಥಾನಗಳಿಗೆ ಆಯ್ಕೆಯಾದ ವ್ಯಕ್ತಿ ಕಂಪನಿಯ ವ್ಯವಹಾರಗಳ ಬಗ್ಗೆ ಸರಿಯಾದ ತೀರ್ಮಾನ ತೆಗೆದುಕೊಳ್ಳುವ ಅನಿವಾರ್ಯತೆ ಹಾಗೂ ಜವಾಬ್ದಾರಿ ಎಂ.ಬಿ.ಎ. ಪದವೀಧರರದ್ದಾಗಿರುತ್ತದೆ. ಇಂತಹ ಸಂದರ್ಭಗಳನ್ನು ಪರಿಣಾಮಕರಿಯಾಗಿ ನಿರ್ವಹಿಸಲು ‘ಡಿಶಿಷನ್‌ ಮೇಕಿಂಗ್‌ ಸ್ಕಿಲ್‌’ ಅನ್ನು ಎಂ.ಬಿ.ಎ. ಮಟ್ಟದಲ್ಲೇ ಕರಗತ ಮಾಡಿಕೊಳ್ಳಬಹುದು. ಇದು ಅನಾವಶ್ಯಕ ಗೊಂದಲಗಳನ್ನೂ ತಪ್ಪಿಸುತ್ತದೆ. ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ತಾರ್ಕಿಕ ಆಲೋಚನೆಗೆ ಹೆಚ್ಚು ಒತ್ತು ನೀಡಬೇಕು. ಪ್ರತಿವಾರವೂ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಒಂದು ನಿಜ ವಸ್ತು ಸ್ಥಿತಿಯ ಸಾಧಕ ಬಾಧಕಗಳನ್ನು ಚರ್ಚಿಸುವುದರ ಮೂಲಕ, ಪ್ರಚಲಿತ ಕಂಪನಿಯ ನಿರ್ಧಾರಗಳನ್ನು ಚರ್ಚಿಸುತ್ತಾ, ಉದಾಹರಿಸುತ್ತಾ, ಗುಂಪು ಚರ್ಚೆ, ಸಭೆ ಏರ್ಪಡಿಸಬೇಕು. ದಿನನಿತ್ಯ ಪತ್ರಿಕೆ ಹಾಗೂ ನಿಯತಕಾಲಿಕೆ ಓದಿಯೇ ಕೊಟ್ಟಿರುವ ಮನೆಕೆಲಸ ತಯಾರಿಸುವಂತೆ ವಿದ್ಯಾರ್ಥಿಗಳಿಗೆ ಪ್ರೇರೇಪಿಸುತ್ತಾ ವಿದ್ಯಾರ್ಥಿಗಳು ಈ ಕೌಶಲಗಳನ್ನು ಕಲಿಯುವಂತೆ ನೋಡಿಕೊಳ್ಳುವುದು ಒಂದು ಉತ್ತಮ ಬಿ ಸ್ಕೂಲ್‌ನ ಲಕ್ಷಣ.

(ಲೇಖಕರು ತುಮಕೂರು ಸಿದ್ಧಗಂಗಾ ಸ್ನಾತಕೋತ್ತರ ಮ್ಯಾನೇಜ್‌ಮೆಂಟ್ ಅಧ್ಯಯನ ವಿಭಾಗ ಹಾಗೂ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT