ಶಿಕ್ಷಕರ ತರಬೇತಿ ಪೋಲಾಗದಿರಲಿ

7
ಎಂ.ಇಡಿ.ಕೋರ್ಸ್‍ನ ಸ್ಥಿತಿಗತಿ

ಶಿಕ್ಷಕರ ತರಬೇತಿ ಪೋಲಾಗದಿರಲಿ

Published:
Updated:

ಶಿಕ್ಷಕರ ಶಿಕ್ಷಣದ ಮಹತ್ವದ ತರಬೇತಿ ಕೋರ್ಸ್ ಆದ ಎಂ.ಇಡಿ. ಈಗ ಅಳಿವಿನ ಅಂಚಿನಲ್ಲಿದೆ. ಗೌರವಾನ್ವಿತ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಸಮಿತಿಯು ಶಿಕ್ಷಕರ ಶಿಕ್ಷಣದ ಗುಣಮಟ್ಟದ ಸುಧಾರಣೆಗೆ ನೀಡಿರುವ ವರದಿಯ ಆಧಾರದ ಮೇಲೆ ದೇಶದೆಲ್ಲೆಡೆ ಒಂದು ವರ್ಷದ ಎಂ.ಇಡಿ. ಕೋರ್ಸ್‌ ಅನ್ನು ಎರಡು ವರ್ಷಕ್ಕೆ ಹೆಚ್ಚಿಸಲಾಯಿತು. ಇದರ ಪರಿಣಾಮ ವಿದ್ಯಾರ್ಥಿಗಳು ಎರಡು ವರ್ಷದ ಕೋರ್ಸ್‌ ಅನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದು ಕರ್ನಾಟಕದಲ್ಲಿ ಅಷ್ಟೆ ಅಲ್ಲ, ಇಡೀ ದೇಶದೆಲ್ಲೆಡೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳನ್ನೂ ಒಳಗೊಂಡಂತೆ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಕಡಿಮೆಯಾಗಿದೆ. ಉದಾ: ಕಳೆದ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದಲ್ಲಿ ನಾಲ್ಕು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಆರು, ಮುಂಬೈ ವಿಶ್ವವಿದ್ಯಾಲಯದಲ್ಲಿ ಐದು, ಹಾಗೆಯೆ ಎನ್.ಸಿ.ಇ.ಆರ್.ಟಿ.ಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲೊಂದಾದ ಆರ್.ಐ.ಇ. ಮೈಸೂರಿನಲ್ಲಿಯೂ ಆರು ವಿದ್ಯಾರ್ಥಿಗಳಷ್ಟೆ ದಾಖಲಾಗಿರುವುದು ಸದ್ಯದ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಒಂದು ವರ್ಷದ ಎಂ.ಇಡಿ. ಕೋರ್ಸ್ ಅನ್ನು ಎರಡು ವರ್ಷಕ್ಕೆ ಹೆಚ್ಚಿಸಲಾದ ಕಾರಣ ಒಂದು ಕಡೆಯಾದರೆ, ಉದ್ಯೋಗ ಪಡೆಯುವಲ್ಲಿರುವ ವಿರಳ ಅವಕಾಶಗಳು ಇನ್ನೊಂದು ಕಡೆಯ ಕಾರಣವಾಗಿದೆ.

 ಎಂ.ಇಡಿ. ಶಿಕ್ಷಕ ವೃತ್ತಿಪರ ಕೋರ್ಸ್. ಇದರ ಉದ್ದೇಶವೇ ಭಾವಿ ಶಿಕ್ಷಕರಲ್ಲಿ ಬೋಧನಾ ಪ್ರವೀಣತೆಯನ್ನು ಬೆಳೆಸುವುದು; ದೇಶದ ಅಭಿವೃದ್ದಿಗೆ ಅವಶ್ಯಕವಿರುವ ಸಾಮರ್ಥ್ಯವುಳ್ಳ, ಸೃಜನಾತ್ಮಕ ಮತ್ತು ಮೌಲ್ಯವುಳ್ಳ ವಿದ್ಯಾರ್ಥಿಗಳನ್ನು ಅವರ ಮೂಲಕ ರೂಪಿಸುವುದು. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನೂ ಪ್ರತಿಭೆಯನ್ನೂ ಹೊರಸೆಳೆದು, ಜಾಗತಿಕವಾಗಿ ಸ್ವಾಸ್ಥ್ಯಪೂರ್ಣವಾದ ಸಮಾಜವನ್ನು ಕಟ್ಟುವುದು. ಇಷ್ಟು ಮಾತ್ರವಲ್ಲದೇ ಎಂ.ಇಡಿ. ಕೋರ್ಸ್ ಈ ಮುಂದಿನ ಅಂಶಗಳನ್ನು ಒಳಗೊಂಡಿದೆ: ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ – ಬೋಧನೆಗೆ ಅವಶ್ಯಕವಿರುವ ಕೌಶಲಗಳನ್ನು, ಸಾಮರ್ಥ್ಯಗಳನ್ನು ಬೆಳೆಸುವುದರೊಂದಿಗೆ, ನಾಯಕತ್ವದ ಗುಣ, ಮೇಲ್ವಿಚಾರಣೆಯ ಕೌಶಲಗಳು, ಆಪ್ತ ಸಮಾಲೋಚನೆಯ ಜ್ಞಾನ ಮತ್ತು ಸಾಮರ್ಥ್ಯ, ವಿವಿಧ ಪಠ್ಯಕ್ರಮಗಳ ರಚನೆ, ಪಾಲಿಸಿಗಳ ರಚನೆ, ತಂತ್ರಜ್ಞಾನದ ಕೌಶಲಗಳು ಮತ್ತು ಅನ್ವಯ – ಹೀಗೆ ವಿಧವಿಧವಾದ ಅನೇಕ ವಿಷಯಗಳು ಮತ್ತು ಅವುಗಳ ಸಮರ್ಪಕ ಬಳಕೆಯ ವಿಧಾನಗಳನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳು ಕಲಿಯುತ್ತಾರೆ. ಅಂತಹವರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯಬೇಕಾಗಿರುವುದು ನ್ಯಾಯಯುತವಾದದ್ದು.

ಆದರೆ ಇದಕ್ಕೆ ತದ್ವಿರುದ್ಧವಾಗಿ ಸರ್ಕಾರದ ಅನೇಕ ಸೇವೆಗಳಿಗೆ ಪರಿಗಣಿಸಬೇಕಾದ ಮಾನದಂಡವೇ ಎಂ.ಇಡಿ. ಕೋರ್ಸ್‌ಗೆ ಇಲ್ಲದಂತಾಗಿದೆ. ಈ ಸ್ನಾತಕೋತ್ತರ ಶಿಕ್ಷಕ ವೃತ್ತಿಪರ ಕೋರ್ಸ್ ಅನ್ನು ಮಾನದಂಡವಾಗಿ ಪರಿಗಣಿಸಬಹುದಾದ ಉದ್ಯೋಗಗಳೆಂದರೆ, ಸರ್ಕಾರಿ ಮತು ಖಾಸಗಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ನೇಮಕಾತಿ, ನವೋದಯ ಹಾಗೂ ಮೊರಾರ್ಜಿ ದೇಸಾಯಿ ಶಾಲೆಗಳ ಮುಖ್ಯ ಶಿಕ್ಷಕರ ನೇಮಕಾತಿ, ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ನೇಮಕಾತಿ, ಸಮಾಜಕಲ್ಯಾಣ ಇಲಾಖೆಯ ಮತ್ತು ಹಿಂದುಳಿದ ವರ್ಗಗಳ ನಿಲಯಗಳ ಮೇಲ್ವಿಚಾರಕರ ನೇಮಕಾತಿ, ಪಠ್ಯಕ್ರಮ ರಚನಾಕಾರರ ನೇಮಕಾತಿ ಮತ್ತು ಶಾಲೆಗಳಿಗೆ ಆಪ್ತ ಸಮಾಲೋಚಕರ ನೇಮಕಾತಿಯಲ್ಲಿ ಪರಿಗಣಿಸಬೇಕು. ಅಷ್ಟೇ ಅಲ್ಲದೆ ಬೇರೆ ಬೇರೆ ಬೋಧನಾ ತರಬೇತಿ ಅಕಾಡೆಮಿಗಳಲ್ಲಿ (ಉನ್ನತ ಶಿಕ್ಷಣ, ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ, ಫಾರ್ಮಸಿ ಮತ್ತು ಕಾನೂನು) ಬೋಧನಾ ಕೌಶಲಗಳನ್ನು ಕಲಿಸುವ ಬೋಧಕರಾಗಿ ನೇಮಕಾತಿ ಹಾಗೂ ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಸ್ಟಾಫ್ ಕಾಲೇಜುಗಳಲ್ಲಿ ಖಾಯಂ ಬೋಧಕರಾಗಿ ನೇಮಕ ಮಾಡುವುದು ಈ ಪಟ್ಟಿಯಲ್ಲಿ ಸೇರುತ್ತದೆ.

ವಿವಿಧ ಆಯಾಮಗಳಲ್ಲಿ ತರಬೇತಿಯನ್ನು ಹೊಂದಿರುವ ಮಾನವ ಸಂಪನ್ಮೂಲವನ್ನು ಪೋಲು ಮಾಡದೆ, ಎಂ.ಇಡಿ. ಸ್ನಾತಕೋತ್ತರ ಪದವಿಧರರಿಗೆ ಸೂಕ್ತವಾಗಿರುವ ಉದ್ಯೋಗಗಳಿಗೆ ಅವಕಾಶ ನೀಡಿದ್ದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಧನಾತ್ಮಕ ಬದಲಾವಣೆಗೆ ನಾಂದಿ ಹಾಡಿದಂತಾಗುತ್ತದೆ. ಇದಲ್ಲದೆ, ಸೇವಾನಿರತ ಪದವಿ ಪೂರ್ವ ಕಾಲೇಜುಗಳು ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಎಂ.ಇಡಿ. ಕೋರ್ಸ್‌ ತರಬೇತಿಗೆ ನಿಯೋಜನೆಯ ಆಧಾರದ ಮೇಲೆ ಕಳುಹಿಸುವುದು ಕೂಡ ಸೂಕ್ತವಾದ ನಿರ್ಧಾರವಾದೀತು. 

ಈ ಸಂಗತಿಯನ್ನು ಸರ್ಕಾರದ ಗಮನಕ್ಕೆ ತರಲಾಗುತ್ತಿದೆ. ನೇಮಕಾತಿಗೆ ಪೂರಕವಾದ ನಿಯಮಾವಳಿಯನ್ನು ರೂಪಿಸಲು ಮನವಿ ಮತ್ತು ಸಲಹೆಯನ್ನೂ ಸರ್ಕಾರಕ್ಕೆ ನೀಡಲಾಗುವುದು. ಎಲ್ಲ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಶಿಕ್ಷಣ ವಿಭಾಗದ ಅಧ್ಯಾಪಕರು, ಅಧ್ಯಕ್ಷರು, ಶಿಕ್ಷಣ ನಿಕಾಯದ ಡೀನ್‌ಗಳು ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿ ನೇಮಕಾತಿಗೆ ಪೂರಕವಾದ ನಿಯಮಾವಳಿಗಳನ್ನು ರೂಪಿಸುವಲ್ಲಿ ಮಹತ್ವವಾದ ಪಾತ್ರವನ್ನು ವಹಿಸಬೇಕಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !