ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣಶಕ್ತಿ ಎಂಬ ಸಂಪನ್ಮೂಲ

Last Updated 12 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಓದಿದ್ದನ್ನು, ಶಿಕ್ಷಕರು ಮಾಡಿದ ಪಾಠವನ್ನು ತಕ್ಷಣ ಅರ್ಥ ಮಾಡಿಕೊಳ್ಳುವ ಬುದ್ಧವಂತಿಕೆ ಹಲವರಲ್ಲಿರಬಹುದು. ಆದರೆ ಅಗತ್ಯವಿದ್ದಾಗ ಓದಿದ್ದು ನೆನಪಿಗೆ ಬರದಿದ್ದರೆ ಎಲ್ಲವೂ ವ್ಯರ್ಥವಾದಂತೆ. ನಾವು ಕಲಿತ ಕೌಶಲಗಳನ್ನು ನೆನಪಿಟ್ಟುಕೊಳ್ಳಲು, ಸಂಗ್ರಹವಾದ ಮಾಹಿತಿಯನ್ನು ಅಗತ್ಯವಿದ್ದಾಗ ಹಿಂಪಡೆಯಲು ನೆನಪಿನ ಶಕ್ತಿ ಅತ್ಯಂತ ಅಗತ್ಯ. ಮೆದುಳಿನ ಸಂಗ್ರಹದಲ್ಲಿರುವ ಮಾಹಿತಿಯನ್ನು ಸಕಾಲದಲ್ಲಿ ಸರಿಯಾಗಿ ಬಳಸದೇ ಹೋದರೆ ಸ್ಮರಣಶಕ್ತಿ ಸರಿಯಾಗಿಲ್ಲವೆಂದೇ ಅರ್ಥ.

ಮೆಮೊರಿ ಅಥವಾ ಸ್ಮರಣೆ ಎಂಬುದು ಮೆದುಳಿನ ಒಂದು ಫೈಲಿಂಗ್ ಸಿಸ್ಟಮ್. ನಾವು ಕಲಿತ ಎಲ್ಲವನ್ನೂ ಅದು ಒಳಗೊಂಡಿದೆ. ನಾವು ಗಳಿಸಿದ ಮಾಹಿತಿಯನ್ನು ಸಂಕೇತಿಕರಿಸಿ ಸಂಗ್ರಹಿಸುತ್ತದೆ ಮತ್ತು ಅಗತ್ಯವಾದಾಗ ಸಂಕೇತಿಕರಣವನ್ನು ಜ್ಞಾನದ ಅನುಭವವನ್ನಾಗಿ ತೋರಿಸುವ ಸಾಮರ್ಥ್ಯವಾಗಿದೆ. ಸ್ಮರಣೆಯು ಹಿಂದಿನ ಕಲಿಕೆಯನ್ನು ಪ್ರತಿಬಿಂಬಿಸುವ ಜೊತೆಗೆ ಪ್ರಸ್ತುತ ಕಲಿಕೆಯನ್ನು ಒರೆಗೆ ಹಚ್ಚುತ್ತದೆ. ಹಾಗಾಗಿ ಸ್ಮರಣೆಯು ಹಿಂದಿನ ಮತ್ತು ಪ್ರಸ್ತುತತೆಯ ನಡುವೆ ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ. ಹಿಂದಿನ ಕಲಿಕಾ ಅನುಭವಗಳು ಸಕ್ರಿಯವಾಗಿದ್ದರೆ ವ್ಯಕ್ತಿ ಯಶಸ್ಸು ಗಳಿಸಲು ಸಾಧ್ಯ.

ನೆನಪಿನ ಶಕ್ತಿ ಹೆಚ್ಚಿಸುವ ಕೆಲವು ತಂತ್ರಗಳು

ಹೊಸದನ್ನು ಕಲಿಯಿರಿ: ಸ್ಮರಣಾ ಸಾಮರ್ಥ್ಯ ಕೇವಲ ಸ್ನಾಯುವಿನ ಶಕ್ತಿಯಾಗಿದೆ. ಅದನ್ನು ನೀವು ಹೆಚ್ಚು ಹೆಚ್ಚು ಬಳಸಿದಷ್ಟೂ ಅದು ಪ್ರಬಲವಾಗುತ್ತದೆ. ಮೆದುಳನ್ನು ಪ್ರಬಲವಾಗಿಸಲು ಅದಕ್ಕೆ ಸವಾಲುಗಳನ್ನು ಒಡ್ಡುವುದು ಅನಿವಾರ್ಯ. ಅದಕ್ಕಾಗಿ ಹೊಸ ಹೊಸ ಕಲಿಕೆಯನ್ನು ರೂಢಿಸಿಕೊಳ್ಳಬೇಕು. ಹೊಸ ಕೌಶಲವನ್ನು ಕಲಿಯುವುದರಿಂದ ಸಾಮರ್ಥ್ಯ ಹೆಚ್ಚುತ್ತದೆ. ಅದಕ್ಕಾಗಿ ಭಾಷೆ, ಹೊಸ ಸಂಗೀತ, ಆಟ ಮೊದಲಾದವುಗಳನ್ನು ಕಲಿಯಿರಿ. ಚಿತ್ರಕಲೆ, ಕುಂಬಾರಿಕೆ, ಕಸೂತಿ
ಯಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಸುಡೋಕು, ಚೆಸ್‌ನಂತಹ ಮಾನಸಿಕ ಆಟಗಳನ್ನು ಆಡಿ. ಹೊಸ ಶೈಲಿಯ ನೃತ್ಯ ಕಲಿಯಿರಿ.

ಪುನರಾವರ್ತನೆ: ನೀವು ಕಲಿತ ಹೊಸ ಮಾಹಿತಿಯ ತುಣುಕೊಂದನ್ನು ಪದೇ ಪದೇ ನೆನಪಿಸಿಕೊಳ್ಳುತ್ತಿರಿ. ಅಂದರೆ ಕಲಿಕೆಯನ್ನು ಪುನರಾವರ್ತಿಸಿದರೆ ಅದು ಮಾನಸಿಕವಾಗಿ ದಾಖಲಾಗುತ್ತದೆ. ಕೇಳಿದ್ದನ್ನು ವಾಕ್ಯದ ರೂಪದಲ್ಲಿ ದಾಖಲಿಸಿ ಮತ್ತು ಅದನ್ನು ಪದೇ ಪದೇ ಗಟ್ಟಿಯಾಗಿ ಓದಿ. ನಂತರ ಪುನರಾವರ್ತನೆಯನ್ನು ಸರಳಗೊಳಿಸಿ. ಹೀಗೆ ಗಳಿಸಿಕೊಂಡ ಕಲಿಕೆಯನ್ನು ಆಗಾಗ ನೆನಪಿಸಿಕೊಂಡು ಬಳಸಿ. ಕಲಿಕೆಯನ್ನು ಒರೆಗೆ ಹಚ್ಚಿ. ಪುನರಾವರ್ತಿತ ಅಭ್ಯಾಸದಿಂದ ಅರ್ಥಪೂರ್ಣ ಕಲಿಕಾ ಅನುಭವ ಸೃಷ್ಟಿಯಾಗುತ್ತದೆ.

ಸಂಕ್ಷೇಪಣಗಳನ್ನು ಬಳಸಿ: ಕಲಿಕೆ ಸರಳವಾಗಲು ಸಂಕೇತಿಕರಣ ಮತ್ತು ಸಂಕ್ಷೇಪಿಕರಣಗಳು ಅಗತ್ಯ. ದೀರ್ಘವಾದ ಕಲಿಕೆಯನ್ನು ಹೀಗೆ ಸಂಕೇತಿಕರಣ/ ಸಂಕ್ಷೇಪಿಸುವುದರಿಂದ ಕಲಿಕೆ ಶಾಶ್ವತವಾಗುತ್ತದೆ. ಹಾಡುಗಳು/ಪ್ರಾಸಗಳ ರೂಪದಲ್ಲಿ ಕಲಿಕಾಂಶವನ್ನು ಸಂಕೇತಿಕರಿಸುವುದರಿಂದ ಜ್ಞಾಪಕಶಕ್ತಿ ವೃದ್ದಿಸುತ್ತದೆ.

ಚಂಕ್: ಹೊಸದಾಗಿ ಕಲಿತ ಮಾಹಿತಿಯನ್ನು ಗುಂಪುಗಳನ್ನಾಗಿ ವಿಂಗಡಿಸುವ ಪ್ರಕ್ರಿಯೆಯೇ ಚಂಕ್. ನಿಮ್ಮ ಗಣಿತದ ಸೂತ್ರ
ವೊಂದು 12 ಅಂಕಿಗಳನ್ನು ಒಳಗೊಂಡಿದೆ ಎಂದಿಟ್ಟುಕೊಳ್ಳಿ. ಇವುಗಳನ್ನು ಜ್ಞಾಪಕದಲ್ಲಿಡುವುದು ಕಷ್ಟ. ಆಗ ನಾಲ್ಕಂಕಿಯ ಗುಂಪುಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ.

ಕಾರ್ಯನಿರತ ವೇಳಾಪಟ್ಟಿ ಇರಲಿ: ಸಾಮಾನ್ಯವಾಗಿ ಓದಲು ವೇಳಾಪಟ್ಟಿ ತಯಾರಿಸುವುದು ವಾಡಿಕೆ. ಇದರ ಬದಲಾಗಿ ಇಡೀ ದಿನದ ವೇಳಾಪಟ್ಟಿ ತಯಾರಿಸಿ ಅದರಂತೆ ಕಾರ್ಯನಿರತವಾಗಿರಲು ಪ್ರಯತ್ನಿಸಿ. ಬಿಡುವಿಲ್ಲದ ವೇಳಾಪಟ್ಟಿ ಉತ್ತಮ ಜ್ಞಾನವನ್ನು ಕಾಪಾಡುತ್ತದೆ ಎಂಬ ಅಂಶ ಅಧ್ಯಯನಗಳಿಂದ ಸಾಬೀತಾಗಿದೆ.

ನಿಯಮಿತ ವೇಳೆಯಲ್ಲಿ ನಿದ್ದೆ ಮಾಡಿ: ಪ್ರತಿರಾತ್ರಿಯೂ ನಿಯಮಿತ ವೇಳೆಗೆ ಮಲಗಿ, ಬೆಳಿಗ್ಗೆ ನಿಯಮಿತ ವೇಳೆಗೆ ಏಳಲು ಪ್ರಯತ್ನಿಸಿ. ಮಲಗುವ ಮುನ್ನ ಸೆಲ್‌ಫೋನ್, ಟಿ.ವಿ, ಕಂಪ್ಯೂಟರ್ ಅಥವಾ ಪ್ರಕಾಶಮಾನವಾದ ಸ್ಕ್ರೀನ್ ನೋಡುವುದನ್ನು ನಿಲ್ಲಿಸಿ. ಸ್ಕ್ರೀನ್‌ನಿಂದ ಹೊರಬರುವ ನೀಲಿ ಬೆಳಕು ನಿದ್ರೆಯ ಹಾರ್ಮೋನಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸ್ಮರಣಶಕ್ತಿ ಹೆಚ್ಚಳಕ್ಕೆ ನಿಗದಿತ ನಿದ್ರೆ ಮತ್ತು ವಿಶ್ರಾಂತಿ ಅಗತ್ಯ.

ಸೋಮಾರಿತನ ಬೇಡ: ಇತ್ತೀಚಿನ ಆಧುನಿಕ ತಂತ್ರಜ್ಞಾನವು ನಮ್ಮನ್ನು ಮಾನಸಿಕ ಸೋಮಾರಿಗಳನ್ನಾಗಿಸುತ್ತದೆ. ಸಣ್ಣ ಸಣ್ಣ ಲೆಕ್ಕಾಚಾರಕ್ಕೂ ಕ್ಯಾಲ್ಕುಲೇಟರ್ ಮೊರೆಹೋಗುವುದು, ಚಿಕ್ಕ ಚಿಕ್ಕ ಪ್ರಶ್ನೆಗಳಿಗೆ ಉತ್ತರವನ್ನು ಗೂಗಲ್‌ನಲ್ಲಿ ಹುಡುಕುವುದು ಸಾಮಾನ್ಯವಾಗಿದೆ. ಪ್ರಶ್ನೆಗೆ ಉತ್ತರ ಅಥವಾ ಲೆಕ್ಕಾಚಾರಗಳಿಗೆ ಪರಿಹಾರವನ್ನು ಹಿಂದಿನ ಕಲಿಕೆಯ ಆಧಾರದ ಮೇಲೆ ಕಂಡುಕೊಳ್ಳಲು ಪ್ರಯತ್ನಿಸಬೇಕು. ಮೆದುಳಿನಲ್ಲಿ ಸಂಗ್ರಹವಾದ ಮಾಹಿತಿಯನ್ನು ಹಿಂಪಡೆಯಲು ಪ್ರಯತ್ನಿಸಬೇಕು. ಇದರಿಂದ ಮೆದುಳಿನ ನರವ್ಯೂಹದ ಹಾದಿಗಳನ್ನು ಬಲಪಡಿಸಲು ಸಹಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT