ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ಬೈಯಲು ಬೇಡ, ನೀರ ನಿಷೇಧಿಸಬೇಡ...

ಒಂದೇ ಮಳೆಗೆ ಸೃಷ್ಟಿಯಾಗುವ ಕೃತಕ ನೆರೆಗೆ ನಾವೇ ಕಾರಣ
Last Updated 13 ಜೂನ್ 2018, 9:56 IST
ಅಕ್ಷರ ಗಾತ್ರ

ಒಂದೇ ದಿನದ ಮಳೆಯಲ್ಲಿ ಮಂಗಳೂರಿನಲ್ಲಿ ಪ್ರವಾಸ ಪರಿಸ್ಥಿತಿ ನಿರ್ಮಾಣವಾದದ್ದು ಎಲ್ಲರಿಗೂ ತಿಳಿದ ವಿಷಯ. ಜನಜೀವನ ಅಸ್ತವ್ಯಸ್ತಗೊಳಿಸಿದ ಆ ಮಳೆ ಜನರಲ್ಲಿ ಭೀತಿಯುಂಟುಮಾಡಿತ್ತು. ಇಂತಹ ಮಳೆ ಕರಾವಳಿಗೆ ಹೊಸದೇನೂ ಅಲ್ಲ. ಅದು ನಿಜವಾಗಿಯೂ ಸಹಜವೆನ್ನಬಹುದಾದ ಮಳೆ. ಆದರೆ ಅದರಿಂದುಂಟಾದ ಪರಿಣಾಮ ಮಾತ್ರ ಅಸಹಜ.

ಹಿಂದೆಲ್ಲ ಜುಲೈ ತಿಂಗಳ ಎಡೆಬಿಡದ ಜಡಿಮಳೆಗೆ ನೇತ್ರಾವತಿ ಹಾಗೂ ಅದರ ಉಪನದಿಗಳು ತುಂಬಿಹರಿದು ಕೆಲವು ಪ್ರದೇಶಗಳು ಜಲಾವೃತವಾದದ್ದಿದೆ. ಆದರೆ ನದಿಯಿಂದ ದೂರವಿರುವ ನಗರ ಒಂದೇ ಮಳೆಗೆ ಜಲಾವೃತವಾದದ್ದು ಇದೇ ಮೊದಲು. ಚರಂಡಿಗಳ ಅವ್ಯವಸ್ಥೆ, ಒತ್ತುವರಿ, ನಿರ್ವಹಣೆಯ ಕೊರತೆ, ರಸ್ತೆ ಅಗಲೀಕರಣದಂತಹ ಬೃಹತ್ ಕಾಮಗಾರಿಗಳಿಂದ ನೀರಿನ ಹರಿವಿಗೆ ತಡೆಯಾದದ್ದು ಕೃತಕ ನೆರೆಗೆ ಬಹುಮುಖ್ಯ ಕಾರಣಗಳು. ಆದರೆ ಇದಷ್ಟೇ ಈ ನೆರೆಯ ಕಾರಣಗಳಲ್ಲ. ಮಳೆನೀರು ನಮಗೆಲ್ಲಾ ಬೇಡವಾಗಿ ಬಿಟ್ಟದ್ದು ಇದರ ಹಿಂದಿನ ಅತಿ ಮುಖ್ಯ ಕಾರಣ.

ಆಶ್ಚರ್ಯಪಡಬೇಡಿ. ಖಂಡಿತವಾಗಿಯೂ ನಮಗೆ ಮಳೆನೀರು ಬೇಡವಾಗಿದೆ. ಹಿಂದಿನ ಜನರು ಹರಿಯುವ ನೀರನ್ನು ತಡೆಯುತ್ತಿರಲಿಲ್ಲ. ಆದರೆ ನಾವು ಚರಂಡಿಗಳನ್ನು ಕಸಕಡ್ಡಿ ಹಾಕಿ ಮುಚ್ಚಲೂ ಹೇಸುವುದಿಲ್ಲ. ಆಗಿನ ಜನ ನೀರಿಗಾಗಿ ಕೆರೆ, ಬಾವಿಗಳನ್ನು ಆಶ್ರಯಿಸಿದ್ದರು. ನೆಲಕ್ಕೆ ಬಿದ್ದ ಬಹುಪಾಲು ನೀರು ಇವುಗಳ ಸಮೀಪ ಇಂಗಿ, ಅಂತರ್ಜಲವಾಗುತ್ತಿತ್ತು. ಕೆರೆ ಬಾವಿಗಳಲ್ಲಿ ತುಂಬಿಕೊಳ್ಳುತ್ತಿತ್ತು. ಆದರೆ ಈಗ ಬಾವಿಗಳೂ ಕೆರೆಗಳೂ ಕಡಿಮೆಯಾಗಿವೆ. ಪ್ರತಿಯೊಂದು ಮನೆಗೂ ಸ್ವಂತ ಕೊಳವೆಬಾವಿಯಿದೆ. ಆದರೆ ಅದರಲ್ಲಿ ಮಳೆನೀರು ಸುಲಭವಾಗಿ ಮರುಪೂರಣವಾಗುವುದಿಲ್ಲ. ಹಿಂದೆ ಜನರು ಮಳೆಗಾಲದಲ್ಲಿ ತಮ್ಮ ಅಂಗಳದಲ್ಲಿ ಅಡಿಕೆಯ ಸೋಗೆ, ತೆಂಗಿನ ಗರಿ ಇತ್ಯಾದಿಗಳನ್ನು ಹರಡುತ್ತಿದ್ದರು. ಇದು ಅಂಗಳ ಜಾರದಂತೆ, ಮಣ್ಣು ಕೊಚ್ಚಿ ಹೋಗದಂತೆ ತಡೆಯುವ ಜೊತೆಗೆ ನೀರು ಒಮ್ಮೆಲೇ ಹರಿದುಹೋಗದೇ ಅಲ್ಲಿ ಇಂಗಲು ನೆರವಾಗುತ್ತಿತ್ತು. ಆದರೆ ಮಣ್ಣನ್ನೂ ಮಳೆಯನ್ನೂ ಪ್ರೀತಿಸದ ನಾವು ಮನೆಯಂಗಳಕ್ಕೆ ಇಂಟರ್ ಲಾಕ್ ಹಾಕಿಸುತ್ತಿದ್ದೇವೆ. ಬಿದ್ದ ಒಂದು ಹನಿನೀರೂ ನಮಗೆ ಬೇಡ ಎಂಬುದರ ಪರೋಕ್ಷ ಘೋಷಣೆಯಿದು.

ಹಿಂದಿನ ಕಾಲದಲ್ಲಿ ಮನೆಯ ಹುಲ್ಲಿನ ಚಾವಣಿ ಅಥವಾ ಹೆಂಚಿನ ಚಾವಣಿಯಿಂದ ಸಣ್ಣ ಧಾರೆಗಳಾಗಿ ಸುರಿಯುತ್ತಿದ್ದ ನೀರಿನ ಒಂದಂಶ ಮಣ್ಣೊಳಗೆ ಇಂಗುತ್ತಿತ್ತು. ಆದರೆ ಇಂದಿನ ಜನ ಛಾವಣಿ ನೀರಿಗೆ ದೊಡ್ಡ ಪೈಪ್ ಅಳವಡಿಸಿ ಒಂದು ತೊಟ್ಟು ನೀರೂ ತಮ್ಮ ಅಂಗಳಕ್ಕೆ ಬೀಳದೇ ನೇರವಾಗಿ ಚರಂಡಿಗೆ ಬೀಳುವ ವ್ಯವಸ್ಥೆ ಮಾಡುತ್ತಾರೆ. ಅದು ರಭಸವಾಗಿ ಹರಿದುಹೋಗುತ್ತದೆ. ತಡೆಯಿದ್ದರೆ ಜನವಸತಿಗಳತ್ತ, ರಸ್ತೆಯತ್ತ ನುಗ್ಗುತ್ತದೆ. ಕೃತಕ ನೆರೆಗೆ ಇದು ನಮ್ಮ ಕೊಡುಗೆ.

ಈಗಿನ ರಸ್ತೆಗಳು ನೇರವಾಗಿವೆ, ಅಗಲವಾಗಿವೆ. ತಿರುವುಗಳು ಬಹಳ ಕಡಿಮೆ. ಅದಕ್ಕಾಗಿ ಕಡಿದುರುಳಿಸಿದ ಮರಗಳ ಸಂಖ್ಯೆಯೋ ಬಹಳ. ಒಂದು ಮರ ಸಾವಿರಕ್ಕೂ ಹೆಚ್ಚು ಲೀಟರ್ ನೀರನ್ನು ಇಂಗಿಸಬಲ್ಲದು. ಮಣ್ಣಿನ ಸವೆತ ತಡೆಯಬಲ್ಲದು. ಆದರೆ ನಮಗೆ ಅದು ಬೇಕಿಲ್ಲ. ಅಭಿವೃದ್ಧಿಯೊಂದೇ ಸಾಕು. ಅದಕ್ಕಾಗಿ ಎಷ್ಟೊಂದು ಪರಿಸರ ನಾಶವಾದರೂ ಚಿಂತೆಯಿಲ್ಲ. ಮಳೆನೀರಿನ ಸ್ವಾಭಾವಿಕ ಸಂಗ್ರಹಾಗಾರಗಳಾದ ತಗ್ಗುಪ್ರದೇಶ ಹಾಗೂ ಜೌಗುಪ್ರದೇಶಗಳನ್ನು ನಾವು ಮಣ್ಣು ಹಾಕಿ ಎತ್ತರಿಸುತ್ತಿದ್ದೇವೆ. ಎತ್ತರವಾಗಿರುವ ಬೆಟ್ಟಗುಡ್ಡಗಳನ್ನು ಕಡಿದು ಸಮತಟ್ಟು ಮಾಡುತ್ತಿದ್ದೇವೆ.

ಎತ್ತರ-ತಗ್ಗುಗಳಿಲ್ಲದೇ ಎಲ್ಲೆಡೆಯೂ ಸಮತಟ್ಟಾಗಿರುವಾಗ ನೀರು ಆ ಸಮತಟ್ಟಿನಲ್ಲೇ ಹರಿಯಬೇಕಲ್ಲವೇ? ನಮ್ಮ ಮೂರ್ಖತನ ಈಪರಿ ಮುಂದುವರಿದರೆ ಮೊನ್ನೆ ಆದ ರೀತಿಯ ಕೃತಕ ನೆರೆಗಳನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

ಮಳೆಯೆಂಬುದು ಬರಿ ನೀರಲ್ಲ. ಅದು ಜೀವಜಲ. ಅಮೂಲ್ಯ ನಿಧಿ. ಆ ನಿಧಿ ಕಾಯುವ ಭೂತಗಳು ನಾವಾಗಬೇಕಿದೆ. ಒಂದೊಂದು ಮಳೆಹನಿಯೂ ಮುತ್ತಿನಹನಿಯೆಂಬಂತೆ ಕಾಳಜಿ ವಹಿಸಬೇಕಿದೆ. ಕಳೆದವರ್ಷ ಕುಡಿಯುವ ನೀರಿಗೂ ತತ್ತರಿಸಿದ ಮಂಗಳೂರಂತೂ ನೀರಿನ ಪ್ರಾಮುಖ್ಯತೆಯನ್ನು ಅರಿತು ಎಚ್ಚರಿಕೆಯಿಂದ ವರ್ತಿಸಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT