ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹ ಹಗುರಾದರೆ ಮನಸ್ಸೂ ಹಗುರ

Last Updated 25 ನವೆಂಬರ್ 2018, 19:30 IST
ಅಕ್ಷರ ಗಾತ್ರ

* ಈ 53ರ ಹರೆಯದಲ್ಲೂ 18ರ ಉತ್ಸಾಹವನ್ನು ಉಳಿಸಿಕೊಂಡು ಬಂದಿದ್ದೀರಿ ಇದು ಹೇಗೆ ಸಾಧ್ಯ?

ಊಟ–ಉಡುಗೆಯೇ ಇರಲಿ, ಕ್ರೀಡೆ–ಸಿನಿಮಾ ಇರಲಿ, ಪ್ರೀತಿಯೇ ಆಗಲಿ… ಯಾವುದಕ್ಕೂ ವಯಸ್ಸು ಅಡ್ಡಿಯಾಗಲಾರದು. ಆಗಲೂ ಎಪ್ಪತ್ತೈದು ಕೆ.ಜಿ. ಇದ್ದೆ. ಈಗಲೂ ಅದೇ ತೂಕವಿದೆ. ಇದಕ್ಕಾಗಿ ನಾನೇನು ಪಡಬಾರದ ಕಷ್ಟ ಪಡುತ್ತಿಲ್ಲ. ಇದು ನನಗೆ ದೇವರು ಕೊಟ್ಟ ವರ.

* ನಿಮ್ಮ ದಿನ ಆರಂಭವಾಗುವುದು ಯಾವ ಸಮಯಕ್ಕೆ?

ಹಾಸಿಗೆ ಬಿಟ್ಟು ಎದ್ದೇಳುವುದರಲ್ಲಿ ನಾನೂ ತುಸು ಸೋಮಾರಿ. ಎಚ್ಚರವಾಗಿ ಹತ್ತು ನಿಮಿಷವಾದರೂ ಹಾಸಿಗೆಯಲ್ಲೇ ಹೊರಳಾಡುತ್ತೇನೆ. ಈಗಿದೆಯಲ್ಲ… ಇಂಥ ಥಂಡಿ ಥಂಡಿ ಹವಾ ಇದ್ದರಂತೂ ಅರ್ಧ ಗಂಟೆ. ಕೆಲವೊಮ್ಮೆ ಒಂದು ಗಂಟೆ ತೆಗೆದುಕೊಳ್ಳುವುದೂ ಉಂಟು. ನಾನು ಯಾವುದನ್ನೂ ತುಂಬಾ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಬೆಳಿಗ್ಗೆ ಏಳುವ ಸಮಯವೇ ಆಗಲಿ, ಜನರಾಡುವ ಗಾಳಿ ಮಾತುಗಳೇ ಇರಲಿ. ಜೀವನದಲ್ಲಿ ಕಟ್ಟಪ್ಪಣೆಗಳೆಲ್ಲ ಇರಬಾರದು, ಒಂದು ಮಟ್ಟಿನ ಶಿಸ್ತಿದ್ದರೆ ಸಾಕು.

* ತಿನ್ನುಣ್ಣುವುದರಲ್ಲಿ ನೀವು ಹೇಗೆ?

ಹೀಗೇ ಅಂತೇನೂ ಇಲ್ಲ. ಸುಲಭವಾಗಿ ಕರಗುವ ಊಟ, ತಿಂಡಿ ನನ್ನ ಆಯ್ಕೆ. ತಿನ್ನುವುದು ನಾಲಿಗೆಗೆ ಮಾತ್ರವಲ್ಲ, ಉದರಕ್ಕೂ ಹಿತವಾಗಿರಬೇಕು. ಕರುಳಿಗೂ–ಕಿಡ್ನಿಗೂ–ಹೃದಯಕ್ಕೂ ಕಷ್ಟ ಕೊಡುವ ಊಟದಿಂದ ದೂರ ನಿಲ್ಲಬೇಕು. ಆರೋಗ್ಯಕರ ಆಹಾರ ನಮ್ಮ ಆಯ್ಕೆಯಾಗಬೇಕು.

* ಜಿಮ್‌ನಲ್ಲಿ ಎಷ್ಟು ಹೊತ್ತು ವರ್ಕ್ ಔಟ್ ಮಾಡ್ತೀರಿ?

ಅಯ್ಯೊ... ನಾನು ಜಿಮ್‌ಗೆ ಕಾಲಿಡದೇ ಯಾವುದೋ ಕಾಲವಾಯ್ತು. ನನ್ನ ಸ್ವಂತ ಜಿಮ್‌ ಇತ್ತು. ಅದನ್ನು ಮಾರಿದ ಮೇಲಂತೂ ಜಿಮ್‌ ಮರೆತಂತಾಗಿದೆ. ಅದಕ್ಕಿಂತ ಓಟವೇ ಅತ್ಯುತ್ತಮ ಸಂಗಾತಿ. ಎಲ್ಲಿ–ಯಾವಾಗ ಬೇಕಾದರೂ ನೀವು ಓಡಬಹುದು.

* ದಿನಕ್ಕೆ ಎಷ್ಟು ಹೊತ್ತು ಓಡುತ್ತೀರಿ?

ಇಷ್ಟೇ ಅಂತೇನೂ ಇಲ್ಲ. ಸಮಯ–ಸ್ಥಳ ಯಾವುದೂ ನಿಗದಿ ಇಲ್ಲ. ಸಮಯ ಸಿಕ್ಕಾಗ ಓಡ್ತೀನಿ. ಎಷ್ಟು ಸಾಧ್ಯವೊ ಅಷ್ಟು ಓಡ್ತೀನಿ. ಬೆಂಗ್ಳೂರೇ ಇರಲಿ, ಮುಂಬೈ ಇರಲಿ ಸಮಯ ಸಿಗಬೇಕಷ್ಟೆ.

* ಓಟದ ಉಡುಗೆಯ ಬಗ್ಗೆ ನಿಮ್ಮ ವ್ಯಾಖ್ಯಾನ.

ನೋಡಿ, ಓಟದ ಉಡುಗೆ ಅನ್ನುವುದೊಂದು ಹುಸಿ ಕಲ್ಪನೆ. ಈ ಕಲ್ಪನೆಗೆ ಹೆದರಿಯೇ ಎಷ್ಟೊ ಹೆಣ್ಮಕ್ಕಳು ಓಡಲು ಬರುವುದಿಲ್ಲ. ಆರೋಗ್ಯವಾಗಿರಲು ಪ್ರತಿಯೊಬ್ಬರೂ ಓಡಬೇಕು. ಸಮಯ ಸಿಕ್ಕಾಗೆಲ್ಲ ಓಡುತ್ತಿರಬೇಕು ಅಷ್ಟೆ. ಅದಕ್ಕೆ ಇಂಥದ್ದೇ ಉಡುಗೆ–ತೊಡುಗೆ ಅಂತೇನೂ ರೂಲ್ಸ್‌ ಇಲ್ಲ. ಅವರಿಗೆ ಇಷ್ಟವಾಗುವ ಯಾವ ಬಟ್ಟೆಯಾದರೂ ಸರಿ. ಸೀರೆ, ಬುರ್ಖಾ, ಚೂಡಿದಾರ, ಸೆಲ್ವಾರ್‌, ಜೀನ್ಸ್‌, ಟೈಟ್ಸ್‌, ಧೋತಿ...

* ಹರಿದ ಜೀನ್ಸ್‌ನಲ್ಲೇ ಹೆಚ್ಚು ಕಾಣಿಸಿಕೊಳ್ತೀರಿ…

ಓಹ್‌… ರಿಪ್ಡ್‌ ಜೀನ್ಸ್‌… ಜೀನ್ಸ್‌ ಮಾತ್ರವೇ ನನ್ನ ಉಡುಗೆ. ನನಗೆ ಸೂಟ್‌–ಕೋಟ್‌ ಎಲ್ಲಾ ಅಷ್ಟೊಂದು ಇಷ್ಟವಾಗಲ್ಲ. ಜೀನ್ಸ್‌–ಟೀಶರ್ಟ್‌ ಮಾತ್ರ ಹಿತವಾಗಿರುತ್ತೆ. ಅದರಲ್ಲೂ ಈ ರಿಪ್ಡ್‌ ಜೀನ್ಸ್‌ ಒಂತಾರಾ ಟ್ರೆಂಡಿಯಾಗಿಯೂ ಇರುತ್ತೆ, ಆರಾಮದಾಯಕವೂ ಆಗಿರುತ್ತೆ.

* ಇತ್ತೀಚೆಗೆ ನೀವು ಆಟೋಟಗಳಲ್ಲಿಹೆಚ್ಚು ಕಾಣಿಸಿಕೊಳ್ಳುತ್ತಿದ್ದೀರಿ…

ನಾನೊಬ್ಬ ಮಾಡೆಲ್‌, ನಟ ಎನ್ನುವುದಕ್ಕಿಂತ ಮುಖ್ಯವಾಗಿ ನಾನೊಬ್ಬ ಕ್ರೀಡಾಪಟು ಎಂದು ಹೇಳಿಕೊಳ್ಳುವುದರಲ್ಲಿ ಹೆಮ್ಮೆ ಇದೆ. ಈಜು–ಸೈಕ್ಲಿಂಗ್‌ ಕೂಡ ನನಗಿಷ್ಟ. ಹಾಂ, ಅಂದಹಾಗೆ ಇತ್ತೀಚೆಗೆ ನಾನು ಆರೋಗ್ಯ ಮತ್ತು ಫಿಟ್‌ನೆಸ್‌ ಬಗ್ಗೆ ಹೆಚ್ಚು ಮಾತಾಡುತ್ತಿರುವುದೂ ಸತ್ಯ. ನಾನಷ್ಟೇ ಅಲ್ಲ, ಇದು ಈಗೀಗ ‘ಗ್ಲೋಬಲ್‌ ಟ್ರೆಂಡ್‌’ ಆಗಿ ಮಾರ್ಪಡುತ್ತಿದೆ. ಒಬ್ಬರಿಂದ ಒಬ್ಬರು ಸ್ಫೂರ್ತಿ ಪಡೆದು ಆಟೋಗಳಿಗೆ ಹೆಚ್ಚು ಸಮಯ ಹಾಕುತ್ತಿದ್ದಾರೆ. ದುಡಿಯುವ ಮಹಿಳೆಯರು, ಗೃಹಿಣಿಯರು, ನಿವೃತ್ತರು, ಕ್ಯಾನ್ಸರ್‌ನೊಂದಿಗೆ ಬದುಕುತ್ತಿರುವವರು, ಅಂಗವಿಕಲರು, ಎಲ್ಲರಿಗೂ ಆರೋಗ್ಯ ಹಾಗೂ ಫಿಟ್‌ನೆಸ್‌ನ ಮಹತ್ವ ಅರ್ಥವಾಗಿದೆ. ನಾನು ಪಿಂಕಥಾನ್‌ನ ಮೊದಲ ಆವೃತ್ತಿಯನ್ನು ಬೆಂಗ್ಳೂರಿನಲ್ಲಿ ಆಯೋಜಿಸಿದಾಗ ಕೇವಲ ಐವತ್ತು ಜನ ಮಹಿಳೆಯರು ಬಂದಿದ್ದರು. ನನಗೆ ಬಹಳ ಖೇದವೆನಿಸಿತ್ತು. ಆದರೆ ಆರನೇ ಆವೃತ್ತಿಗೆ ಬಂದಾಗ ಮೂರೂವರೆ ಸಾವಿರ ಜನ ಓಡಿದ್ದರು. ಈ ಸಲ ಇನ್ನೂ ಹೆಚ್ಚಿನ ಮಾನಿನಿಯರು ನಮ್ಮ ಓಟಕ್ಕೆ ಸಾತ್‌ ನೀಡುತ್ತಾರೆನ್ನುವ ಖಾತರಿ ಇದೆ. ಇದು ಸಣ್ಣ ಸಂಗತಿ ಏನೂ ಅಲ್ಲ. ಯಾವ ಪವಾಡವೂ ಅಲ್ಲ. ಹೆಣ್ಣುಮಕ್ಕಳು ಬದಲಾಗುತ್ತಿದ್ದಾರೆ. ಒಂದು ಪೈಸೆ ಖರ್ಚಿಲ್ಲದ ಓಟದಿಂದ ಎಷ್ಟೆಲ್ಲ ಲಾಭವಿದೆ ಎನ್ನುವುದನ್ನು ಅರಿತುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT