ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಶಿಕ್ಷಕ ವಗ್ಗ ಶಾಲೆಯ ಆದಂ ಸಾಹೇಬ್

ದಾನಿಗಳ ಸಹಾಯದಿಂದಲೇ ಶಾಲೆಗೆ ಮೂಲಸೌಕರ್ಯ ಕಲ್ಪಿಸಿದ ಸಂಘಟನಾಕಾರ
Last Updated 27 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಮಾತಿದೆ. ಈ ಮಾತನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವವರು ವಿರಳಾತಿವಿರಳ. ಆದರೆ ಸರ್ಕಾರಿ ಶಾಲೆಯೊಂದರಲ್ಲಿ ಅಧ್ಯಾಪನ ವೃತ್ತಿಯಲ್ಲಿದ್ದುಕೊಂಡು, ದಾನಿಗಳ ನೆರವು ಪಡೆದು ತನ್ನ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುತ್ತಿರುವ ಮಾದರಿ ಶಾಲಾ ಶಿಕ್ಷಕ ಶೇಖ್ ಆದಂ ಸಾಹೇಬ್.

ಬಂಟ್ವಾಳ ತಾಲ್ಲೂಕಿನ ವಗ್ಗ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಆದಂ ಸಾಹೇಬ್ ಮೂಲತಃ ನೆಲ್ಯಾಡಿಯವರು. ನೆಲ್ಯಾಡಿ ದಿ. ಶೇಖ್ ಫಕೀರ್ ಸಾಹೇಬ್ ಮತ್ತು ಕುಲ್ಸೂಂಬಿ ದಂಪತಿಯ ಪುತ್ರ.

ಆಂಗ್ಲ ಭಾಷಾ ಸ್ನಾತಕೋತ್ತರ ಪದವೀಧರರಾಗಿರುವ ಅವರು 1998 ರಲ್ಲಿ ಗುರುಕಂಬಳ ಎ.ಕೆ.ಯು ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. 2004 ರಲ್ಲಿ ವಗ್ಗ ಸರ್ಕಾರಿ ಪ್ರೌಢಶಾಲೆಯಲ್ಲಿ ಉಪನ್ಯಾಸಕರಾಗಿ ನೇಮಕಗೊಂಡ ಆದಂ ಸಾಹೇಬ್, 2012 ರಿಂದ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದೆರೆಡು ವರ್ಷಗಳಿಂದ ಶಾಲೆಯು ನೂರು ಶೇಕಡಾ ಫಲಿತಾಂಶ ದಾಖಲಿಸಿದೆ. ಜೊತೆಗೆ ಆಂಗ್ಲ ಭಾಷೆಯಲ್ಲಿ ನಾಲ್ಕು ವರ್ಷಗಳಿಂದ ಸತತ ನೂರು ಶೇಕಡಾ ಫಲಿತಾಂಶವನ್ನು ದಾಖಲಿಸಿ ಜಿಲ್ಲಾ ಮಟ್ಟದಲ್ಲೇ ಹೆಗ್ಗಳಿಕೆ ಗಳಿಸಿದೆ. ಅದಕ್ಕಾಗಿ ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ಪ್ರಮಾಣ ಪತ್ರವನ್ನೂ ನೀಡಿದೆ.

ದಾನಿಗಳ ಹಾಗೂ ಊರವರ ಸಹಕಾರದಿಂದ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾದರಿ ಶಾಲೆಯನ್ನಾಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸುಸಜ್ಜಿತ ತರಗತಿ ಕೋಣೆ, ಸಭಾಭವನ, ವಿಶೇಷ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಶಾಲಾ ಸುರಕ್ಷತೆಗೆ ಸಿ.ಸಿ.ಟಿವಿ ಕ್ಯಾಮೆರಾ, ಆವರಣ ಗೋಡೆ, ಹೂದೋಟ, ಸ್ಮಾರ್ಟ್ ಕ್ಲಾಸ್, ಇಂಟರ್‍ಲಾಕ್, ಡಿಜಿಟಲ್ ಸೌಂಡ್ ಸಿಸ್ಟಮ್, ಗ್ರೀನ್ ಬೋರ್ಡ್‍ಗಳ ಅಳವಡಿಕೆ, ಸ್ಕ್ರೀನಿಂಗ್ ವ್ಯವಸ್ಥೆ... ಹೀಗೇ ₹ 38 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿ, ಒಂದು ಖಾಸಗಿ ಶಾಲೆಯಲ್ಲಿ ಏನೆಲ್ಲಾ ಆಧುನಿಕ ವ್ಯವಸ್ಥೆಗಳಿರುತ್ತದೋ ಅವೆಲ್ಲವನ್ನೂ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಿಕೊಟ್ಟಿರುವುದು ಹೆಮ್ಮೆಯ ವಿಚಾರ.

ಅಲ್ಲದೇ, ತಮ್ಮ ಮುಂದಾಳುತ್ವಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅತ್ಯುತ್ತಮ ಆಯೋಜಕರಾಗಿಯೂ ಪ್ರಶಂಸೆಗೆ ಪಾತ್ರರಾಗಿದ್ದಾರೆ. 2016 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ, 2018 ರಲ್ಲಿ ಎಂಟು ಜಿಲ್ಲೆಗಳ ಆಯ್ದ ತಂಡಗಳ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ, ತಾಲ್ಲೂಕು ಮಟ್ಟದ ಸ್ಕೌಟ್ಸ್ ರ‍್ಯಾಲಿ, ಮಕ್ಕಳ ಸಂಸತ್ ಕಾರ್ಯಕ್ರಮ, ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳುವುದರ ಮೂಲಕ ಯಶಸ್ವಿ ಆಯೋಜಕರಾಗಿ ಎಲ್ಲರ ಮನೆಮಾತಾಗಿದ್ದಾರೆ. ಅಲ್ಲದೇ ವಗ್ಗ ಸರಕಾರಿ ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ ಹಳದಿ ಶಾಲೆ ಪ್ರಶಸ್ತಿ, ಪರಿಸರ ಮಿತ್ರ ಕಿತ್ತಳೆ ಶಾಲೆ ಪ್ರಶಸ್ತಿ, ಸ್ವಚ್ಛ ವಿದ್ಯಾಲಯ ಪ್ರಶಸ್ತಿಗಳನ್ನು ತಂದು ಕೊಟ್ಟು ಜಿಲ್ಲೆಯಲ್ಲಿ ಈ ಶಾಲೆಯನ್ನು ಗುರುತಿಸುವಂತೆ ಮಾಡಿದ್ದಾರೆ.

ಕಳೆದ 21 ವರ್ಷಗಳಿಂದ ಇವರ ಅವಿರತ ಶ್ರಮಕ್ಕಾಗಿ 2017 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, 2018 ರಲ್ಲಿ ಯೇನಪೋಯ ಉತ್ತಮ ಶಿಕ್ಷಕ ಪ್ರಶಸ್ತಿ, ಬಂಟ್ವಾಳದ ರೋಟರಿ ಕ್ಲಬ್ ವತಿಯಿಂದ ನೇಷನ್ ಬಿಲ್ಡರ್ ಅವಾರ್ಡ್ ಹಾಗೂ 2019 ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಹೀಗೇ ಅನೇಕ ಸಂಘ ಸಂಸ್ಥೆಗಳಿಂದಲೂ ಪ್ರಶಸ್ತಿ, ಪುರಸ್ಕಾರಗಳು ಅರಸಿಕೊಂಡು ಬಂದಿವೆ.

‘ಜವಾಬ್ದಾರಿ ಹೆಚ್ಚಿಸಿದ ಪ್ರಶಸ್ತಿ’

‘ಪ್ರಶಸ್ತಿಗಳು ಮತ್ತು ಗೌರವಗಳು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿವೆ. ವಿದ್ಯಾರ್ಥಿಗಳ ಶ್ರಮ, ಸಹಪಾಠಿಗಳ ಪ್ರೋತ್ಸಾಹದಿಂದಾಗಿ ಇಲ್ಲಿಯವರೆಗೂ ತಲುಪಿದ್ದೇನೆ. ಜೊತೆಗೆ ಎಸ್.ಡಿ.ಎಂ.ಸಿ ಹಾಗೂ ಹಲವಾರು ದಾನಿಗಳ ಸಹಕಾರವೂ ಇದೆ’ ಎನ್ನುತ್ತಾರೆ ಶಿಕ್ಷಕ ಶೇಖ್ ಆದಂ ಸಾಹೇಬ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT