ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿರದ ನರ್ಸರಿ ಶಾಲೆ ಅನುಕೂಲಗಳ ಸರಮಾಲೆ

Last Updated 27 ಜನವರಿ 2020, 19:30 IST
ಅಕ್ಷರ ಗಾತ್ರ

ಮುದ್ದಾದ ತನ್ನ ಐದೂ ಬೆರಳುಗಳಿಂದ ತಮ್ಮ ಒಂದು ಬೆರಳನ್ನು ಹಿಡಿದು ಈಗಷ್ಟೇ ಸರಿಯಾಗಿ ನಡೆದಾಡುವ ಮಗುವಿಗೆ ಎಲ್ಲವನ್ನೂ ಹೇಳಿಕೊಡುವ ಧಾವಂತ ಹೆತ್ತವರಿಗೆ. ಒಂದರ್ಥದಲ್ಲಿ ಅವರೇ ಮಗುವಿನ ಜೀವನದ ಮೊದಲ ಗುರು. ಪೋಷಕರಾಗಿ, ಗುರುವಾಗಿ ಮಗುವಿನ ವಿಷಯದಲ್ಲಿ ಒಂದಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯೂ ಹೆಗಲಿಗಿರುತ್ತದೆ. ಎಲ್ಲಕ್ಕಿಂತ ಮೊದಲ ಮತ್ತು ಅತ್ಯಂತ ಪ್ರಮುಖವಾದದ್ದು ಮಗುವಿಗೆ ಸರಿ ಹೊಂದುವಂತಹ ಶಾಲೆಯನ್ನು ಆಯ್ಕೆ ಮಾಡಿಕೊಳ್ಳುವುದು. ಯಾಕೆಂದರೆ ಶಾಲೆಯ ಆಯ್ಕೆಯೇ ಮಗುವಿನ ಶಿಕ್ಷಣಕ್ಕೆ ನೀವು ಇಡುವ ಮೊದಲ ಹೆಜ್ಜೆ. ಇದು ಮಗುವಿನ ಮುಂದಿನ ಉಜ್ವಲ ಭವಿಷ್ಯಕ್ಕೆ ನೀವು ಹಾಕುವ ಬುನಾದಿಯೂ ಹೌದು.

ಕೂಸು ಹುಟ್ಟುವುದಕ್ಕೆ ಮುಂಚೆಯೇ ಕುಲಾಯಿ ಹೊಲೆಸುವುದು ಏನಿದ್ದರೂ ಹಳೆಯ ಗಾದೆ, ಅದೀಗ ಕೂಸು ಹುಟ್ಟುವುದಕ್ಕೂ ಮುನ್ನ ಶಾಲೆಗೆ ತಯಾರಿ ಎನ್ನುವ ಬದಲಾದ ರೂಪದಲ್ಲಿ ನಮ್ಮ ಮುಂದಿದೆ. ತನ್ನ ಮಗುವಿಗೆ ಅತ್ಯುತ್ತಮವಾದ ಶಿಕ್ಷಣವನ್ನು ಕೊಡಿಸಬೇಕೆನ್ನುವುದು ಎಲ್ಲ ಪೋಷಕರ ಅಲಿಖಿತ ಗುರಿ. ಆ ಗುರಿ ಸಾಧನೆಗಾಗಿ ಮಾಡುವ ಮೊದಲ ಕೆಲಸ ಶಾಲೆಯ ಆಯ್ಕೆ. ಬೀದಿಗೊಂದರಂತೆ ಇರುವ ಶಾಲೆಗಳ ಪಟ್ಟಿ ತೆಗೆದು ಅದರಲ್ಲಿ ದಿ ಟಾಪ್ ಶಾಲೆಯನ್ನು ಆಯ್ಕೆ ಮಾಡುವುದು ಬಹುದೊಡ್ಡ ಕೆಲಸ. ಸ್ನೇಹಿತರ ಸಲಹೆಯಂತೆಯೋ, ಶಾಲಾ ಬೋರ್ಡ್‌ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎನ್ನುವ ಕಾರಣಕ್ಕೋ, ಪಕ್ಕದ ಮನೆಯ ಮಗು ಅಥವಾ ನಮ್ಮದೇ ದೊಡ್ಡ ಮಗು ಹೋಗುವ ಶಾಲೆಗೇ ಒಟ್ಟಿಗೆ ಹೋಗಲಿ ಎನ್ನುವ ಕಾರಣಕ್ಕೋ ದೂರದ ಶಾಲೆಗಳಿಗೆ ಸೇರಿಸುವವರಿದ್ದಾರೆ. ಆದರೆ ಪಕ್ಕದ ಬೀದಿಯಲ್ಲಿಯೋ ಅಥವಾ ಮನೆಗೆ ಹತ್ತಿರದಲ್ಲೇ ಇರುವ ಶಾಲೆಗಳ ಕಡೆ ಗಮನ ಹರಿಸುವುದು ಕೊಂಚ ಕಡಿಮೆಯೇ. ಸಂಶೋಧನೆಯ ಪ್ರಕಾರ ಸಣ್ಣ ಮಕ್ಕಳಿಗೆ ಶಾಲೆ ಹತ್ತಿರದಲ್ಲೇ ಇದ್ದರೆ ಅದರಿಂದಾಗುವ ಅನುಕೂಲಗಳೇ ಹೆಚ್ಚು.

ಮಗುವಿನ ಸುರಕ್ಷತೆಯ ದೃಷ್ಟಿಯಿಂದ

ಮಗುವಿಗೇನಾದರೂ ಆರೋಗ್ಯದಲ್ಲಿ ವ್ಯತ್ಯಾಸವಾದರೆ ನೀವು ಅಲ್ಲಿಗೆ ತಲುಪುವಲ್ಲಿಯೇ ಒಂದು ತಾಸು ಹಿಡಿದರೆ, ದಾರಿಯುದ್ದಕ್ಕೂ ನಿಮಗೆ ಆತಂಕ. ಮಗುವಿಗಲ್ಲಿ ಸಂಕಟ. ಇನ್ನು ಮಗು ಮನೆ ತಲುಪುವುದು ಹತ್ತು ನಿಮಿಷ ತಡವಾದರೆ ಇಲ್ಲಸಲ್ಲದ ನಕಾರಾತ್ಮಕ ಯೋಚನೆಗಳೇ ಮೊದಲು ತಲೆಯಲ್ಲಿ ಸುಳಿಯೋದು. ಜೊತೆಗೆ ಬಸ್ ಹತ್ತುವಾಗ, ಇಳಿಯುವಾಗ ಮಗುವಿಗೆ ಜೋಪಾನ ಎಂದು ಹೇಳುವುದನ್ನು ಮರೆಯುವುದೇ ಇಲ್ಲ. ಆದ್ದರಿಂದ ಹತ್ತಾರು ಕಿಲೋ ಮೀಟರ್ ದೂರದ ಶಾಲೆಗಳಿಗೆ ಸೇರಿಸಿ ನಂತರ ಅವರ ಸುರಕ್ಷತೆಯ ಬಗ್ಗೆ ಯೋಚಿಸುವುದಕ್ಕಿಂತ ಹತ್ತಿರದ ಶಾಲೆಗೆ ಸೇರಿಸಿದರೆ ಸುರಕ್ಷತೆ ದೃಷ್ಟಿಯಿಂದ ಸ್ವಲ್ಪ ನಿರಾತಂಕವಾಗಿರಬಹುದು. ವಿಶ್ವಾಸವೂ ಹೆಚ್ಚುತ್ತದೆ.

ಸಮಯದ ಉಳಿತಾಯ

ಪ್ರತಿದಿನ ಸುಮಾರು ಎರಡು ತಾಸು ಮಗು ಪ್ರಯಾಣದಲ್ಲಿಯೇ ಕಳೆದರೆ ಅದರ ಆಟ- ಪಾಠದ ಸಮಯವೂ ಪ್ರಯಾಣಕ್ಕೆ ವ್ಯಯವಾಗುತ್ತದೆ. ಅಲ್ಲದೇ ಪೋಷಕರೇ ಮಗುವನ್ನು ಶಾಲೆಗೆ ಬಿಡುವುದಾದರೆ ಅಲ್ಲಿ ಇಬ್ಬರ ಸಮಯವೂ ವಿನಾಕಾರಣ ವ್ಯರ್ಥವಾದಂತೆ ಸರಿ. ಆ ಸಮಯವನ್ನು ಮಗುವಿನ ಓದು ಅಥವಾ ಇನ್ನಿತರೆ ಆಟಗಳ ಕಡೆ ಗಮನಹರಿಸಬಹುದು.

ಆಗಾಗ್ಗೆ ಭೇಟಿ ನೀಡುವ ಅವಕಾಶ

ಶಾಲೆ ಹತ್ತಿರದಲ್ಲೇ ಇದ್ದರೆ ಪೋಷಕರು ಆಗ್ಗಿಂದಾಗೆ ಭೇಟಿಕೊಟ್ಟು ಮಗುವಿನ ಸರ್ವತೋಮುಖ ಬೆಳವಣಿಗೆ ಕಡೆಗೆ ಹೆಚ್ಚಿನ ಗಮನ ಹರಿಸಬಹುದು. ಎಷ್ಟೋ ಸಲ ಶಾಲೆ ಮನೆಯಿಂದ ಅಥವಾ ತಮ್ಮ ಆಫೀಸ್‌ನಿಂದ ದೂರವಿದೆ ಎನ್ನುವ ಕಾರಣಕ್ಕೆ ಪೇರೆಂಟ್ಸ್ ಮೀಟಿಂಗ್‌ಗಳಿಗೂ ಹೋಗದೆ ಇರುವ ಪೋಷಕರೂ ಇದ್ದಾರೆ. ಶಾಲೆ ಹತ್ತಿರದಲ್ಲೆ ಇದ್ದರೆ ಒಬ್ಬರಾದರೂ ಭೇಟಿ ನೀಡಬಹುದು.

ಆತ್ಮೀಯತೆ ಹೆಚ್ಚುವ ಸಾಧ್ಯತೆ

ಪ್ರತಿದಿನ ಮಗುವನ್ನು ತಾವೇ ಶಾಲೆಗೆ ಜೊತೆಯಲ್ಲಿಯೇ ಬಿಡುವ ಮತ್ತು ಕರೆತರುವ ಮನೆಗಳಲ್ಲಿ ಪೋಷಕರ ಮತ್ತು ಮಕ್ಕಳ ನಡುವೆ ಆತ್ಮೀಯತೆ ಒಂಚೂರು ಹೆಚ್ಚೇ ಇರುತ್ತದೆ. ಕಾರಣ, ಜೊತೆಯಾಗಿ ಓಡಾಡುವಾಗ ಸಿಗುವ ಸಮಯದಲ್ಲಿ ಮಕ್ಕಳು ತಮಗನಿಸಿದ ಸಾಕಷ್ಟು ವಿಷಯಗಳನ್ನು ಪೋಷಕರೊಟ್ಟಿಗೆ ಹಂಚಿಕೊಳ್ಳಬಲ್ಲರು. ಇದರಿಂದ ಆತ್ಮೀಯತೆ ತನ್ನಿಂದ ತಾನೆ ಬೆಳೆಯುತ್ತಾ ಹೋಗುತ್ತದೆ.

ಮಗುವಿಗೂ ಧೈರ್ಯ

ತನಗೆ ಪರಿಚಯವಿರುವ, ತಾನು ಓಡಾಡಿ ನೋಡಿರುವ ಅಥವಾ ಮನೆಗೆ ಹತ್ತಿರವಿರುವ ಶಾಲೆಯಾದರೆ ಮಗುವಿನ ಮನಸ್ಸಿಗೆ ಸಮಾಧಾನ. ತಾನು ಮನೆಯ ಆಸುಪಾಸಿನಲ್ಲೇ ಇರುವೆ ಎನ್ನುವ ಧೈರ್ಯ, ಸುರಕ್ಷತಾ ಭಾವ ಮಗು ಶಾಲೆಗೆ ಬೇಗ ಹೊಂದಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಹೆಚ್ಚು ಹಟ ಮಾಡದೆ ಮಗು ಶಾಲೆಗೆ ಹೋಗುತ್ತದೆ.

ಆಯಾಸ ಕಡಿಮೆ

ಎರಡು ತಾಸು ಪ್ರಯಾಣ ಮಾಡಿದರೆ ದೊಡ್ಡವರಿಗೇ ಆಯಾಸವಾಗುತ್ತದೆ. ಹೆಚ್ಚು ನಿದ್ರಿಸಬೇಕಿರುವ ವಯಸ್ಸಲ್ಲಿ ಮಗುವಿಗೆ ಆಯಾಸವಾಗುವುದರಲ್ಲಿ ಅನುಮಾನವೇ ಇಲ್ಲ. ಆಯಾಸಗೊಂಡ ಮಗು ಇತರೆ ಚಟುವಟಿಕೆಗಳಲ್ಲಿ ನಿರುತ್ಸಾಹ ತೋರಬಹುದು.

ಪೋಷಕರೂ ಶಾಲೆಯಲ್ಲಿ ಭಾಗಿಯಾಗಬಹುದು

ಬಿಡುವಿರುವ ಪೋಷಕರು ವಾರದಲ್ಲಿ ಅಥವಾ ತಿಂಗಳಲ್ಲಿ ಒಂದು ದಿನ ಶಾಲೆಯಲ್ಲಿ ಕಳೆಯಬಹುದು. ಶಾಲೆಯವರು ಅನುವು ಮಾಡಿಕೊಟ್ಟರೆ ಕ್ರಾಫ್ಟ್, ಕಂಪ್ಯೂಟರ್ ತರಬೇತಿ, ನೀತಿ ಕಥೆಗಳನ್ನ ಹೇಳುವುದು, ಕಲಿಕಾ ಆಟಗಳನ್ನು ಆಡಿಸುವುದು ಅಥವಾ ನಿಮಗಿರುವ ಆಸಕ್ತಿ, ಕಲೆಗಳನ್ನು ಮಕ್ಕಳೊಟ್ಟಿಗೆ ಹಂಚಿಕೊಳ್ಳಬಹುದು.

ಶಾಲೆಯ ವಾತಾವರಣದ ಅನುಭವ

ಶಾಲೆಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ ಎಂದಾದರೆ ಆ ಸಮಯದಲ್ಲಿ ನೀವು ಶಿಕ್ಷಕರು ಮತ್ತು ಮಕ್ಕಳ ನಡುವಿನ ಒಡನಾಟವನ್ನು ಗಮನಿಸಬಹುದು.

(ಲೇಖಕಿ ಉಪನ್ಯಾಸಕಿ, ಪತ್ರಿಕೋದ್ಯಮ ವಿಭಾಗ, ತುಮಕೂರು ವಿಶ್ವವಿದ್ಯಾಲಯ ಕಲಾ ಕಾಲೇಜು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT