ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಮಿಸ್ಟ್ರಿಯಲ್ಲಿ M.Sc ಪಡೆದವರಿಗೆ ಸರ್ಕಾರಿ ಉದ್ಯೋಗ ಸಿಗಬಹುದೇ?

Last Updated 29 ಜನವರಿ 2020, 5:54 IST
ಅಕ್ಷರ ಗಾತ್ರ

* ನಾನು ಜನರಲ್‌ ಕೆಮಿಸ್ಟ್ರಿಯಲ್ಲಿ 2015ರಲ್ಲಿ ಎಂ.ಎಸ್‌ಸಿ. ಮಾಡಿಕೊಂಡಿದ್ದೇನೆ. ನನಗೆ ಪ್ರಾಧ್ಯಾಪಕಿಯಾಗಲು ಆಸಕ್ತಿ ಇಲ್ಲ. ಕೈಗಾರಿಕೆಗಳಲ್ಲಿ ಉದ್ಯೋಗ ಮಾಡುವ ಆಸೆ. ಇಂತಹ ಉದ್ಯೋಗವನ್ನು ಹೇಗೆ ಹುಡುಕಲಿ? ಅದರಲ್ಲೂ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಲ್ಲಿ ನೌಕರಿ ಹುಡುಕುವುದು ಹೇಗೆ?

- ವೀಣಾ, ಊರು ಇಲ್ಲ.

ವೀಣಾ, ನೀವು ಕೆಮಿಸ್ಟ್ರಿ ಕ್ಷೇತ್ರದಲ್ಲಿ ಉದ್ಯೋಗ ಹುಡುಕುವ ಮತ್ತು ಸರ್ಕಾರಿ ಹುದ್ದೆಗಳ ಲಭ್ಯತೆ ಬಗ್ಗೆ ಕೇಳಿದ್ದೀರಿ. ಮೊದಲಿಗೆ ನೀವು ಪ್ರಯತ್ನಪಡಬಹುದಾದ ಸರ್ಕಾರಿ ಕೆಲಸಗಳ ಬಗ್ಗೆ ತಿಳಿಯೋಣ.

ಸಾಮಾನ್ಯವಾಗಿ ರಸಾಯನ ಶಾಸ್ತ್ರ ಕ್ಷೇತ್ರದಲ್ಲಿ ನೀವು ಕೆಮಿಸ್ಟ್, ಕೆಮಿಕಲ್ ಅಸಿಸ್ಟೆಂಟ್, ರಿಸರ್ಚ್ ಅಸಿಸ್ಟೆಂಟ್, ರಿಸರ್ಚ್ ಅನಾಲಿಸ್ಟ್, ಕ್ವಾಲಿಟಿ ಕಂಟ್ರೋಲ್ ಕೆಮಿಸ್ಟ್, ಲ್ಯಾಬೊರೇಟರಿ ಅಸಿಸ್ಟೆಂಟ್.. ಇತ್ಯಾದಿ ಹುದ್ದೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರ ಎರಡರಲ್ಲೂ ಕೆಲಸ ನಿರ್ವಹಿಸಬಹುದು. ವೈದ್ಯಕೀಯ ಮತ್ತು ಔಷಧಿ ತಯಾರಿಕ ಕ್ಷೇತ್ರ, ಪತ್ತೇದಾರಿ ಸಂಸ್ಥೆಗಳು, ರಾಸಾಯನಿಕ ತಯಾರಿಕೆ ಕಂಪನಿಗಳು, ರಸಗೊಬ್ಬರ ತಯಾರಿಕ ಸಂಸ್ಥೆಗಳು, ಆಹಾರ ಸಂಸ್ಕರಣ ಇತ್ಯಾದಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಬಹುದು. ಡಿಆರ್‌ಡಿಒ, ಬಾಬಾ ಆ್ಯಟಮಿಕ್ ರಿಸರ್ಚ್ ಸೆಂಟರ್, ಸಿ.ಎಸ್.ಐ.ಆರ್. ಇತ್ಯಾದಿ ಪ್ರಯೋಗಾಲಯಗಳಲ್ಲಿ ವೈಜ್ಞಾನಿಕ ಸಹಾಯಕ ಹುದ್ದೆ, ಭಾರತೀಯ ರೈಲ್ವೆ ಇಲಾಖೆ, ಎಚ್.ಪಿ.ಸಿ.ಎಲ್, ಒ.ಎನ್.ಜಿ.ಸಿ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಪೆಟ್ರೋಲಿಯಂ ಸಂಸ್ಥೆಗಳು, ಎಂ.ಆರ್.ಪಿ.ಎಲ್, ಇತ್ಯಾದಿ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳಿಗೆ ಪ್ರಯತ್ನಿಸಬಹುದು. ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತೀರಿ ಎಂದಾದರೆ ನಿಮ್ಮ ಪದವಿ ಶಿಕ್ಷಣದ ಆಧಾರದ ಮೇಲೆ ಬ್ಯಾಂಕಿಂಗ್ ಕ್ಷೇತ್ರ, ನಾಗರಿಕ ಸೇವೆ, ಎಸ್.ಎಸ್.ಸಿ. ಮತ್ತು ಇತರೆ ಹುದ್ದೆಗಳಿಗೆ ಪ್ರಯತ್ನಿಸಬಹುದು.

ಕೆಲಸಗಳನ್ನು ಹುಡುಕಲು ನೀವು ಬೇರೆ ಬೇರೆ ಮೂಲಗಳ ಸಹಾಯ ಪಡೆಯಬಹುದು. ಈ ಕ್ಷೇತ್ರದಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ನಿಮ್ಮ ಸ್ನೇಹಿತರ, ಹಿರಿಯ ವಿದ್ಯಾರ್ಥಿಗಳ ಅಥವಾ ಶಿಕ್ಷಕರ ಸಹಾಯ ಪಡೆಯಿರಿ. ಅಂತರ್ಜಾಲದಲ್ಲಿ ನಿಯಮಿತವಾಗಿ ಹುಡುಕುತ್ತ ಇರಬೇಕು. ನೌಕರಿ.ಕಾಮ್, ಮಾನ್‌ಸ್ಟರ್ ಇತ್ಯಾದಿ ಖಾಸಗಿ ಜಾಬ್ ಪೋರ್ಟಲ್‌ಗಳಲ್ಲಿ ನಿಮ್ಮ ಬಯೋಡೇಟಾವನ್ನು ಹಾಕಿ ಮತ್ತು ಅಲ್ಲಿಯೂ ನಿಯಮಿತವಾಗಿ ಹುಡುಕುತ್ತ ಇರಬೇಕು. ಅಂತರ್ಜಾಲದಲ್ಲಿ ರಸಾಯನ ಶಾಸ್ತ್ರದ ಪದವೀಧರರನ್ನು ನೇಮಿಸಿಕೊಳ್ಳುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳನ್ನು ಹುಡುಕಿ ಅವುಗಳ ವೆಬ್‌ಸೈಟ್‌ ಅನ್ನು ಆಗಾಗ ಪರಿಶೀಲಿಸಬೇಕು ಮತ್ತು ಅವಕಾಶವಿದ್ದಲ್ಲಿ ಅಲ್ಲಿಯೂ ನಿಮ್ಮ ಮಾಹಿತಿ ಅಥವಾ ಬಯೋಡೇಟಾವನ್ನು ಹಾಕಿರಬೇಕು. ಶುಭವಾಗಲಿ.

* ನಾನು ಪಿಸಿಎಂಬಿ ತೆಗೆದುಕೊಂಡು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಬಯೋಇನ್‌ಫಾರ್ಮಾಟಿಕ್ಸ್‌ನಲ್ಲಿ ಆಸಕ್ತಿಯಿದೆ. ಈ ಕೋರ್ಸ್‌ ಇರುವ ಕಾಲೇಜುಗಳು ಮತ್ತು ಪ್ರವೇಶ ಪರೀಕ್ಷೆ ಬಗ್ಗೆ ವಿವರ ನೀಡಿ.

- ಕಾರ್ತಿಕ್‌ ಎಂ.ಜೆ., ಊರು ಬೇಡ

ಕಾರ್ತಿಕ್, ಜೈವಿಕ ವಿಜ್ಞಾನವನ್ನು ವ್ಯಾಖ್ಯಾನಿಸಲು ಕಂಪ್ಯೂಟರ್ ವಿಜ್ಞಾನ, ಗಣಿತ, ಎಂಜಿನಿಯರಿಂಗ್ ಮತ್ತು ಸಂಖ್ಯಾಶಾಸ್ತ್ರಗಳಂತಹ ವಿವಿಧ ಕ್ಷೇತ್ರವನ್ನು ಬಳಸಿಕೊಳ್ಳುವ ಬಯೋಇನ್‌ಫಾರ್ಮಾಟಿಕ್ಸ್‌ ಕ್ಷೇತ್ರವು ಸದ್ಯ ಹೆಚ್ಚು ಪ್ರಗತಿ ಆಗುತ್ತಿರುವ ವಿಶೇಷವಾದ ಕ್ಷೇತ್ರ. ಈ ಕ್ಷೇತ್ರದಲ್ಲಿ ಶಿಕ್ಷಣ ಪಡೆಯಲು ಬಯೋಇನ್‌ಫಾರ್ಮಾಟಿಕ್ಸ್‌ ಬಿ.ಎಸ್‌ಸಿ. ಅಥವಾ ಬಿ.ಟೆಕ್., ಬಿ.ಇ. ಓದಬೇಕಾಗುತ್ತದೆ. ನಂತರ ಆ ಸಂಬಂಧ ವೃತ್ತಿ ಮಾಡಬಹುದು ಅಥವಾ ಎಂ.ಟೆಕ್. ಅಥವಾ ಎಂ.ಎಸ್‌ಸಿ., ಪಿಎಚ್.ಡಿ. ಓದಿ ವಿದ್ಯಾಭ್ಯಾಸ ಮುಂದುವರಿಸಬಹುದು. ಭಾರತದಲ್ಲಿ ಪ್ರಸಿದ್ಧ ವಿದ್ಯಾಸಂಸ್ಥೆಗಳಾದ ಇನ್‌ಸ್ಟಿಟ್ಯೂಟ್ ಆಫ್ ಬಯೋಇನ್‌ಫಾರ್ಮಾಟಿಕ್ಸ್‌ ಅಂಡ್‌ ಅಪ್ಲೈಡ್ ಬಯೋಟೆಕ್ನಾಲಜಿ, ಬೆಂಗಳೂರು, ಐ.ಐ.ಎಸ್.ಸಿ, ಬೆಂಗಳೂರು, ಐಐಟಿ ದೆಹಲಿ, ಐಐಟಿ ಖರಗ್‌ಪುರ್, ಐಐಟಿ ಹೈದರಾಬಾದ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಭೂಪಾಲ್ ಮೊದಲಾದ ಕಡೆ ಈ ಕೋರ್ಸ್‌ ಲಭ್ಯ. ಇದಲ್ಲದೆ ಬೇರೆ ಕಾಲೇಜುಗಳಲ್ಲಿ ಈ ಕೋರ್ಸ್‌ನ ಲಭ್ಯತೆ ತಿಳಿಯಲು ಆಯಾ ಕಾಲೇಜುಗಳ ವೆಬ್‌ಸೈಟ್‌ ಪರಿಶೀಲಿಸಿ. ಈ ಪ್ರತಿಷ್ಠಿತ ಕಾಲೇಜುಗಳಲ್ಲಿ ಮೆರಿಟ್ ಆಧಾರವಾಗಿ ದಾಖಲಾತಿ ಪಡೆಯಲು ಜೆ.ಇ.ಇ. ಪರೀಕ್ಷೆಯನ್ನು ನಿಮ್ಮ ಪಿ.ಯು. ಪರೀಕ್ಷೆಯ ನಂತರ ಬರೆಯಬೇಕಾಗುತ್ತದೆ. ಕರ್ನಾಟಕದ ವ್ಯಾಪ್ತಿಯ ಕಾಲೇಜುಗಳಲ್ಲಿ ಸೀಟು ದೊರಕಲು ಸಿ.ಇ.ಟಿ. ಪರೀಕ್ಷೆಯ ಮುಖಾಂತರ ಪ್ರಯತ್ನಿಸಬೇಕು.

ಬಯೋಇನ್‌ಫಾರ್ಮಾಟಿಕ್ಸ್‌ ಪದವಿಯ ನಂತರ ವೈದ್ಯಕೀಯ ಮತ್ತು ಔಷಧೀಯ ತಯಾರಿಕೆ ಕಂಪನಿಗಳು, ಬಯೋಟೆಕ್ನಾಲಜಿ ಕಂಪನಿಗಳು, ಸಂಶೋಧನ ಸಂಸ್ಥೆಗಳಲ್ಲಿ, ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಬಹುದು. ಬಯೋಇನ್‌ಫಾರ್ಮಾಟಿಕ್ಸ್‌ ಅನಾಲಿಸ್ಟ್, ಪ್ರೋಗ್ರಾಮರ್, ಎಂಜಿನಿಯರ್, ಸಂಶೋಧನೆ, ಬೋಧನೆ ಮತ್ತು ಶೈಕ್ಷಣಿಕ ಕ್ಷೇತ್ರ ಇತ್ಯಾದಿ ಕಾರ್ಯಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. ಶುಭಾಶಯ.

* ನಾನು ಬಿಸಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಮುಂದೆ ಎಂಸಿಎ ಬದಲಾಗಿ ಬ್ಯಾಂಕ್‌ನಲ್ಲಿ ನೌಕರಿ (ಅದರಲ್ಲೂ ಕರ್ನಾಟಕ ಬ್ಯಾಂಕ್‌) ಮಾಡಬೇಕು ಎಂದಿದೆ. ಬ್ಯಾಂಕ್‌ ಕೋಚಿಂಗ್‌ಗೆ ಎಲ್ಲಿ, ಯಾವ ಸಂಸ್ಥೆಗೆ ಸೇರಿದರೆ ಉತ್ತಮ?

- ಕೃತಿಕಾ ಎಚ್‌.ಆರ್., ಊರು ಬೇಡ

ಕೃತಿಕಾ, ಬ್ಯಾಂಕಿಂಗ್ ಪರೀಕ್ಷೆಗಳ ತಯಾರಿ ನಡೆಸುವಾಗ ನೀವು ಹೆಚ್ಚು ಬ್ಯಾಂಕಿಂಗ್ ಪರೀಕ್ಷೆಗಳ ಗುರಿ ಇರಿಸಿಕೊಂಡು ಮಾಡಿದರೆ ಎಲ್ಲಾದರೂ ಒಂದು ಕಡೆ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕೇವಲ ಕರ್ನಾಟಕ ಬ್ಯಾಂಕ್ ಮಾತ್ರವಲ್ಲದೆ ಐ.ಬಿ.ಪಿ.ಎಸ್. ಮುಖಾಂತರ ಆಗುವ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಗ್ರಾಮೀಣ ಬ್ಯಾಂಕ್‌ಗಳ ನೇಮಕಾತಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗುಂಪುಗಳ ನೇಮಕಾತಿ, ಭಾರತೀಯ ರಿಸರ್ವ್ ಬ್ಯಾಂಕ್ ನೇಮಕಾತಿಗೆ ಪ್ರಯತ್ನಿಸಿದರೆ ಉತ್ತಮ. ಈ ಎಲ್ಲ ಬ್ಯಾಂಕ್‌ಗಳ ನೇಮಕಾತಿ ಪರೀಕ್ಷೆಯ ಪಠ್ಯಕ್ರಮ ಮತ್ತು ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಪರಿಶೀಲಿಸಿ ಸಮಗ್ರವಾಗಿ ತಯಾರಿ ನಡೆಸಲು ಪ್ರಯತ್ನಿಸಿ. ಸಾಮಾನ್ಯವಾಗಿ ಎಲ್ಲಾ ಬ್ಯಾಂಕಿಂಗ್ ಪರೀಕ್ಷೆಗಳ ಪಠ್ಯಕ್ರಮವು ಸಾಮಾನ್ಯ ಗಣಿತ, ತಾರ್ಕಿಕ ಚಿಂತನೆ, ಭಾಷೆ, ಬ್ಯಾಂಕಿಂಗ್ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಾಮಾನ್ಯ ಜ್ಞಾನ, ಕಂಪ್ಯೂಟರ್ ಜ್ಞಾನಗಳನ್ನು ಹೊಂದಿರುತ್ತದೆ. ಇನ್ನು ನಿಮ್ಮ ಹತ್ತಿರದ ತರಬೇತಿ ಸಂಸ್ಥೆಗಳಲ್ಲಿ ಉತ್ತಮವಾದ ತರಬೇತಿ ಸಂಸ್ಥೆಯನ್ನು ಅಲ್ಲಿ ಹಿಂದೆ ಪಡೆದಿರುವವರ ಅನುಭವ, ಜನರ ಅಭಿಪ್ರಾಯ ನೋಡಿ ನಿರ್ಧರಿಸಿ. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT