ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಸ್ತಕಗಳನ್ನು ಓದುವುದು ನನಗೆ ಇಷ್ಟ’

Last Updated 13 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಹತ್ತನೇ ತರಗತಿಯ ಮಕ್ಕಳೆಂದರೆ ಮಣಭಾರದ ಪುಸ್ತಕಗಳನ್ನು ಹೊತ್ತುಕೊಂಡು ಶಾಲೆಗೆ ಹೋಗುವುದು, ಆಟ ಎಂಬ ಪದವನ್ನು ಮರೆತು ಗಂಟೆಗಟ್ಟಲೇ ಅಭ್ಯಾಸ ಮಾಡುವುದು... ಹೀಗೆ ಅಂಕ ಬೇಟೆಗಾಗಿ ಪರಿತಪಿಸುವುದೇ ಕಾಣಿಸುತ್ತದೆ.

ಉತ್ತಮ ರ‍್ಯಾಂಕ್‌ ಗಳಿಸಬೇಕೆಂಬ ಹಂಬಲದಿಂದ ತಮ್ಮ ಹವ್ಯಾಸಗಳನ್ನೂ ಬದಿಗೊತ್ತಿ ನಿದ್ರೆ ಕೆಡಿಸಿಕೊಂಡು ಓದುವ ಮಕ್ಕಳೇ ಹೆಚ್ಚಾಗಿದ್ದಾರೆ. ಆದರೆ ನ್ಯಾಷನಲ್‌ ಹಿಲ್‌ ವ್ಯೂ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ದುರ್ಗಾ ಪಠ್ಯ ಪುಸ್ತಕಗಳನ್ನು ಓದುವುದರ ಜತೆಗೆ ಕಥೆ, ಕಾದಂಬರಿ ಪುಸ್ತಕಗಳನ್ನು ಓದುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾಳೆ. ಜತೆಗೆ ಪುಟ್ಟ ಕಥೆ, ಕವನಗಳನ್ನು ಬರೆಯುತ್ತಾಳೆ.

ಈಚೆಗೆ ಲ್ಯಾಂಡ್‌ಮಾರ್ಕ್ ಬುಕ್‌ಸ್ಟೋರ್ಸ್‌ ಏರ್ಪಡಿಸಿದ್ದ ಪುಸ್ತಕ ಓದುವ ಸ್ಪರ್ಧೆಯಲ್ಲಿ ಭಾಗವಹಿಸಿ ತನ್ನ ನೆಚ್ಚಿನ ಲೇಖಕ ರಸ್ಕಿನ್‌ ಬಾಂಡ್‌ ಅವರನ್ನು ಭೇಟಿಯಾಗಿ ಮಾತನಾಡಿಸುವ ಅವಕಾಶವನ್ನೂ ಪಡೆದಿದ್ದಾಳೆ.

‘ಚಿಕ್ಕಂದಿನಿಂದಲೂ ಸಾಹಿತ್ಯವೆಂದರೆ ಆಸಕ್ತಿ. ನಮ್ಮ ಶಾಲೆಯ ಶಿಕ್ಷಕರು ಈ ಸ್ಪರ್ಧೆ ಬಗ್ಗೆ ಮಾಹಿತಿ ನೀಡಿ, ಭಾಗವಹಿಸುವಂತೆ ಸೂಚಿಸಿದರು. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಂತಿಮ ಸುತ್ತಿನಲ್ಲೇ 65ರಿಂದ 70 ವಿದ್ಯಾರ್ಥಿಗಳಿದ್ದರು. ವಿವಿಧ ನಗರಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳ ಪೈಕಿ ನಾನೂ ಒಬ್ಬಳು. ಮುಸ್ಸೊರಿಯಲ್ಲಿರುವ ಬಾಂಡ್‌ ಅವರ ಮನೆಗೆ ಹೋಗಿ ಸುಮಾರು ಒಂದು ಗಂಟೆ ಅವರೊಂದಿಗೆ ಮಾತನಾಡಿದೆ’ ಎಂದು ದುರ್ಗಾ ಖುಷಿಯಿಂದ
ಹೇಳುತ್ತಾಳೆ.

‘ಕಥೆ, ಕಾದಂಬರಿ ಬರೆಯಬೇಕೆಂಬ ಆಸೆ ನನ್ನಲ್ಲಿ ಇದೆ. ಈ ವಿಷಯವನ್ನು ಬಾಂಡ್ ಅವರ ಬಳಿ ಹೇಳಿದಾಗ ‘ಚೆನ್ನಾಗಿ ಬರೆಯಬೇಕೆಂದರೆ, ಹೆಚ್ಚು ಓದಬೇಕು ಮಗು’ ಎಂದು ಸಲಹೆನೀಡಿದರು. ಎಂತಹ ಪುಸ್ತಕಗಳನ್ನು ಓದಬೇಕು ಎಂಬ ಮಾಹಿತಿಯನ್ನೂ ನೀಡಿದರು. ಅವರೇ ರಚಿಸಿರುವ ‘ದಿ ಲಿಟ್ಲ್ ಬುಕ್‌ ಆಫ್‌ ಕರೇಜ್‌’ ಎಂಬ ಪುಸ್ತಕವನ್ನು ಹಸ್ತಾಕ್ಷರ ಮಾಡಿ ಉಡುಗೊರೆಯಾಗಿ ನೀಡಿದರು’ ಎಂದು ಸಂತಸಪಟ್ಟಳು.

‘ನಮ್ಮ ಶಾಲೆಯ ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳಿವೆ. ಅವನ್ನು ಒಂದೊಂದಾಗಿ ಓದುತ್ತಲೇ ಓದುವ ಹವ್ಯಾಸ ರೂಢಿಸಿಕೊಂಡೆ, ನನ್ನ ತಂದೆ–ತಾಯಿ ಬ್ರಿಟಿಷ್‌ ಲೈಬ್ರರಿಯಲ್ಲಿ ಸದಸ್ಯತ್ವ ಕೊಡಿಸಿದರು. ಹೀಗೆ ನಗರದ ಹಲವು ಗ್ರಂಥಾಲಯಗಳಲ್ಲಿ ಸದಸ್ಯತ್ವ ಪಡೆದಿದ್ದೇನೆ’ ಬಿಡುವ ಸಿಕ್ಕಾಗಲೆಲ್ಲಾ ಕಥೆ, ಕಾದಂಬರಿ ಪುಸ್ತಕಗಳನ್ನು ಓದುತ್ತೇನೆ’ ಎನ್ನುತ್ತಾಳೆ ದುರ್ಗಾ.

ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸಲು ಬ್ರಿಟಿಷ್ ಲೈಬ್ರರಿಯವರು ಪ್ರತೀ ವರ್ಷ ಓದುವ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಆರು ವಾರಗಳಲ್ಲಿ ಕನಿಷ್ಠ ಆರು ಪುಸ್ತಕಗಳನ್ನಾದರೂ ಓದಬೇಕು. ಮೂರನೇ ತರಗತಿಯಿಂದಲೇ ಪುಸ್ತಕ ಓದುವ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾಳೆ. ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿರುವುದರಿಂದಾಗಿ ಜ್ಞಾನವೂ ಹೆಚ್ಚುತ್ತಿದೆ. ವಿವಿಧ ಲೇಖಕರ ಬರವಣಿಗೆ, ಕಥೆಯ ನಿರೂಪಣಾ ಶೈಲಿ ತಿಳಿದುಕೊಳ್ಳುತ್ತಿದ್ದೇನೆ ಎನ್ನುತ್ತಾಳೆ .

ಸಾಮಾನ್ಯವಾಗಿ 10ನೇ ತರಗತಿ ಎಂದರೆ ಹೆಚ್ಚು ಓದಬೇಕಾಗುತ್ತದೆ ಓದಿನ ನಡುವೆ ಈ ರೀತಿಯಸ್ಪರ್ಧೆಗಳ ಕಡೆಗೂ ಗಮನ ಕೊಡುವುದೆಂದರೆ ಕಷ್ಟ. ಈ ವಿದ್ಯಾರ್ಥಿನಿ ಓದಿಗೆ ನೀಡುವ ಮಹತ್ವವನ್ನು ಸಾಹಿತ್ಯಕ್ಕೂ ನೀಡುತ್ತಾಳೆ. ‘ಇಷ್ಟಪಟ್ಟರೆ ಯಾವುದೂ ಕಷ್ಟವಲ್ಲ. 9ನೇ ತರಗತಿಯಲ್ಲಿ ಶೇ 98.6 ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದೇನೆ. 10ನೇ ತರಗತಿಯಲ್ಲೂ ಹೀಗೆ ಅಂಕಗಳಿಸುತ್ತೇನೆ’ ಎಂದು ಆತ್ಮವಿಶ್ವಾಸದಿಂದಹೇಳುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT