ಕಲಿಕೆಯಲ್ಲಿ ರಹಸ್ಯವಲ್ಲದ ರಹಸ್ಯಗಳು

7

ಕಲಿಕೆಯಲ್ಲಿ ರಹಸ್ಯವಲ್ಲದ ರಹಸ್ಯಗಳು

Published:
Updated:
Deccan Herald

ತಾರ್ಕೋವಸ್ಕಿ ಎನ್ನುವ ಮೇಧಾವಿ ಚಿತ್ರನಿರ್ದೇಶಕನ ಒಂದು ಸಿನಿಮಾ ‘ಆಂದ್ರೆಯಿ ರೂಬ್ಲೆವ್’. ಜಗತ್ತಿನ ಸರ್ವಶ್ರೇಷ್ಠ ಚಿತ್ರಗಳ ಪೈಕಿ ಒಂದೆಂದು ತಿಳಿಯಲಾದ ಚಿತ್ರ ಅದು. ಅದರಲ್ಲಿ ಒಂದು ಘಟನೆ. ಹದಿನೈದನೆಯ ಶತಮಾನದ ಊಳಿಗಮಾನ್ಯ ರಷ್ಯಾದೇಶ. ನಾಡಿನ ಪಾಳೇಗಾರ ತಾನು ಕಟ್ಟಿಸಿರುವ ಹೊಸ ಇಗರ್ಜಿಗೆ ಒಂದು ಬೃಹದಾಕಾರದ ಲೋಹದ ಗಂಟೆ ಮಾಡಿಸಬೇಕೆಂದು ಫರ್ಮಾನು ಹೊರಡಿಸುತ್ತಾನೆ. ಆದರೆ, ಗಂಟೆ ಮಾಡುವ ಕಮ್ಮಾರರ ಕುಲದ ಮುಖ್ಯಸ್ಥ ಮತ್ತು ಅವನ ಜನರೆಲ್ಲಾ ನಾಡಿಗೆ ಬಡಿದ ಪ್ಲೇಗು ಮಾರಿಯಿಂದ ಸತ್ತುಹೋಗಿದ್ದಾರೆ.

ಕಮ್ಮಾರನ ಮಗ, ಹದಿನಾರು ಹದಿನೆಂಟು ವಯಸ್ಸಿನ ಬೋರಿಸ್ಕಾ ಮಾತ್ರ ಬದುಕಿದ್ದಾನೆ. ತಾನೂ ಒಬ್ಬ ಜನ ಅಂತ ನಾಲ್ಕು ಮಂದಿಯ ಮುಂದೆ ಆಗಬೇಕೆಂದರೆ ಇದೇ ಅವನಿಗೆ ಅವಕಾಶ. ತನ್ನ ತಂದೆ ಸಾಯುವ ಮುಂಚೆ ಗಂಟೆ ಮಾಡುವ ರಹಸ್ಯವಿದ್ಯೆಯನ್ನು ತನಗೇ ಧಾರೆ ಎರೆದ ವಿಚಾರವನ್ನು ಬೋರಿಸ್ಕಾ ಪಾಳೇಗಾರನ ಭಟರಲ್ಲಿ ಹೇಳುತ್ತಾನೆ. ಅವರು ಇವನನ್ನು ತಂದು ಪಾಳೇಗಾರನ ಮುಂದೆ ನಿಲ್ಲಿಸಿತ್ತಾರೆ. ಇವನಿಗೆ ಗಂಟೆ ಮಾಡುವ ಕೆಲಸ ವಹಿಸುತ್ತಾರೆ. ಆದರೆ ಒಂದು ಷರತ್ತು. ಗಂಟೆ ಕೆಟ್ಟರೆ, ಅದರ ಸದ್ದು, ಶ್ರುತಿಯ ಠೇಂಕಾರ ಸರಿಯಿಲ್ಲದಿದ್ದರೆ, ಆ ಪಾಳೇಗಾರ ಬೋರಿಸ್ಕಾ ಮತ್ತವನ ಸಹಾಯಕರ ತಲೆ ತೆಗೆಯುತ್ತಾನೆ. ಈಗಾಗಲೇ ಆ ಪಾಳೇಗಾರ ಇಂಥದ್ದೇ ಯಾವುದೋ ಹಟಕ್ಕೆ ಬಿದ್ದು ತನ್ನ ಸ್ವಂತ ತಮ್ಮನ ತಲೆಯನ್ನೇ ತೆಗೆದಿದ್ದಾನೆ.

ಈಗ ಕುಲುಮೆ ಕಟ್ಟುವ, ಲೋಹ ಕಾಯಿಸುವ, ಅಚ್ಚು ಹಾಕುವ, ಅಚ್ಚಿಗೆ ಕಾದ ಲೋಹ ಸುರಿಯುವ ಒಂದೊಂದೇ ಕೆಲಸಕ್ಕೆ ಚಾಲನೆ ಸಿಗುತ್ತದೆ. ಸುಮಾರು ಎರಡು ಮೂರು ಆಳು ಉದ್ದದ್ದ ಗಂಟೆ ಅದು. ಕುದುರೆಗಳನ್ನು ಗಾಣಕ್ಕೆ ಕಟ್ಟಿ ತಿದಿ ಒತ್ತಬೇಕಾದಂತಹ ದೊಡ್ಡ ಕುಲುಮೆ. ತಿಂಗಳೆರಡು ಕಳೆದು ಗಂಟೆ ಸಿದ್ಧವಾಗುತ್ತದೆ. ಕೊನೆಗೂ ಗಂಟೆಯನ್ನು ಪರೀಕ್ಷಿಸುವ ದಿನ ಬರುತ್ತದೆ. ದೊಡ್ಡ ದೊಡ್ಡ ಸುತ್ತಿಗೆಗಳಿಂದ ಗಂಟೆಯ ಹೊರಮೈಯ ಮಣ್ಣಿನ ಅಚ್ಚನ್ನು ಒಡೆದು ತೆಗೆಯುತ್ತಾರೆ. ಹೊಳೆಹೊಳೆವ ಕಂಚಿನ ಗಂಟೆ, ಅಷ್ಟೆತ್ತರದ್ದು, ಒಡಮೂಡುತ್ತದೆ. ಪಾಳೇಗಾರ ಮತ್ತವನ ಪಾಳಿಯ ಜನ ಬರುತ್ತಾರೆ. ಐದಾರು ಜನ ಹೊರಬೇಕಾದ ಮರದ ದಿಮ್ಮಿಯನ್ನು ಒಂದೇ ಉಸಿರಿಗೆ ಹೊತ್ತು ತಂದು ಗಂಟೆಗೆ ಗುದ್ದಿದಾಗ, ಒಂದು ಕ್ಷಣ ಬೋರಿಸ್ಕಾನ ಕಣ್ಣು ಕತ್ತಲೆ ಕವಿಯುತ್ತದೆ. ಕಿವಿ ಕಿವುಡಾಗುತ್ತದೆ. ನೀರವ ಆಕಾಶದಲ್ಲಿ ಹಕ್ಕಿ ಹಾರಿದ್ದು ಕಾಣುತ್ತದೆ. ಅನಂತರ ಗಂಟೆಯ ಠೇಂಕಾರ, ಶ್ರುತಿಬದ್ಧವಾದ, ಧೀರಗಂಭೀರ ನಾದ ಬಯಲಂಚಿನವರೆಗೂ ತೇಲಿತೇಲಿ ಅಪ್ಪಳಿಸುತ್ತದೆ. ಬೋರಿಸ್ಕಾನ ತಲೆ ಉಳಿಯುತ್ತದೆ. ಮಂದಿ ಮರಳುತ್ತಾರೆ. ಉಳಿದವನು ಬೋರಿಸ್ಕಾ ಮತ್ತು ಅವನನ್ನು ಇಷ್ಟು ದಿನವೂ ತದೇಕವಾಗಿ ಗಮನಿಸುತ್ತಿದ್ದ ವರ್ಣಚಿತ್ರಕಾರ ಆಂದ್ರೆಯಿ ರೂಬ್ಲೆವ್. ಬೋರಿಸ್ಕಾ ನೆಲಕ್ಕೆ ಕುಸಿದು ಗಳಗಳನೆ ಅಳಲು ತೊಡಗುತ್ತಾನೆ. ರೂಬ್ಲೆವ್ ವಿಚಾರಿಸಿದಾಗ ಸತ್ಯ ಹೊರಬರುತ್ತದೆ.

ಬೋರಿಸ್ಕಾನ ಅಪ್ಪ ತನ್ನ ಮಗನಿಗೆ ಯಾವ ರಹಸ್ಯವಿದ್ಯೆಯನ್ನೂ ಹೇಳಿಕೊಟ್ಟಿರಲಿಲ್ಲ. ಹೇಳಿಕೊಡಲು ಅಲ್ಲಿ ಅಂತಹ ಯಾವ ರಹಸ್ಯವಿದ್ಯೆಯೂ ಇಲ್ಲ. ಇರುವುದು ಒಂದೇ. ಕಲಿಕೆ. ಅನುಭವ. ಸಾಧನೆ. ಸೋಲು. ಪುನಃ ಪ್ರಯತ್ನ. ಅಷ್ಟೆ. ಇವತ್ತು ಬೋರಿಸ್ಕಾನಿಗೆ ಗಂಟೆ ಮಾಡುವ ವಿದ್ಯೆಯ ನಿಜವಾದ ಕಷ್ಟ ಅರ್ಥವಾಗಿದೆ. ತನ್ನ ತಂದೆಯನ್ನು ನೋಡಿ, ಅವನ ಕೈಕೆಳಗೆ ಕೆಲಸ ಮಾಡಿ ಕಸುಬು ಕಲಿತದ್ದು ಎಷ್ಟೋ ಅಷ್ಟೇ ಅವನಿಗೆ ದಕ್ಕಿರುವುದೇ ವಿನಾ ಅದರಾಚೆಗೆ ಯಾವ ರಹಸ್ಯವಿದ್ಯೆಯೂ ಇಲ್ಲ, ಚಮತ್ಕಾರದ ಮಂತ್ರತಂತ್ರವೂ ಇಲ್ಲ. ನೆನ್ನೆಯವರೆಗೂ ಜಾಣ ಹುಡುಗನಾಗಿದ್ದ ಬೋರಿಸ್ಕಾ, ಕಣ್ಣಲ್ಲಿ ಕನಸಿದ್ದ ಹುಡುಗ, ಇವತ್ತು ವಯಸ್ಕರ ಪ್ರಪಂಚದ ಮೊದಲ ಕಹಿರುಚಿ ನೋಡಿದ್ದಾನೆ. ಹುಡುಗರ ಪ್ರಪಂಚದ ಯಾವ ಇಂದ್ರಜಾಲವೂ ಇಲ್ಲಿಲ್ಲ. ಇಲ್ಲಿರುವುದು ಕಸುಬಿನಲ್ಲಿ ಕೈಪಳಗುವ ಕ್ರಮವೊಂದೇ.

ಶಿಕ್ಷಣ ನಮ್ಮ ಪ್ರಪಂಚದಲ್ಲಿ ಬಾಳಲು ಮಕ್ಕಳನ್ನು ರೂಪಿಸುವುದಿಲ್ಲ ಎಂದು ನಮ್ಮ ದೂರು. ಆದಕ್ಕೆ ಯಾವುದೋ ರಹಸ್ಯಪರಿಕರವನ್ನು ಶಿಕ್ಷಣದಲ್ಲಿ ಸೇರಿಸಿದರೆ ಪರಿಹಾರ ದೊರಕುತ್ತದೆ ಎನ್ನುವ ನಂಬಿಕೆ ನಮಗೆ. ಆದರೆ, ರೂಬ್ಲೆವ್ ತೋರಿಸಿದ ಒಂದು ಸರಳ ಸತ್ಯವೂ ಇದೆಯಲ್ಲ. ನಮ್ಮ ಪ್ರಪಂಚಕ್ಕೆ ಮಕ್ಕಳನ್ನು ಸಿದ್ಧಗೊಳಿಸುವುದು ಎಂದರೆ ಅವರಲ್ಲಿ ಕಸುಬಿನ ಜ್ಞಾನ ಮತ್ತು ಅದರ ಕುರಿತ ಶ್ರದ್ಧೆಯನ್ನು ಬೆಳೆಸುವುದು ಎನ್ನುವ ಸರಳ ವಿಚಾರ. ಈಚಿನ ದಿನಗಳಲ್ಲಿ ಎಲ್ಲೋ ಕೆಲವು ಪಾರಂಪರಿಕ ಕುಲಕಸುಬಿನ ಮಂದಿ ಮತ್ತು ವ್ಯವಹಾರ ವಾಣಿಜ್ಯ ಮಾಡುವ ಕುಟುಂಬದ ಜನರನ್ನು ಹೊರತುಪಡಿಸಿದರೆ, ಇಂತಹ ರೀತಿಯ ಶಿಕ್ಷಣ ಅಪರೂಪ. ಎಲ್ಲರೂ ವಿಚಾರಗಳನ್ನು ಹೇಳಿಕೊಡುವವರೇ ಹೊರತೂ, ಕಸುಬನ್ನು ಕಲಿಸುವವರಿಲ್ಲ. ಕಸುಬು ಎಂದ ತಕ್ಷಣ ಅದೇನೂ ನೇಗಿಲು ಹಿಡಿದು, ಉಳುಮೆ ಮಾಡಬೇಕಾದ ರೀತಿಯದ್ದೇ ಎಂದೇನೂ ಅಲ್ಲ. ವ್ಯಾಪಾರದಲ್ಲಿ ಲೆಕ್ಕ ಇಡುವುದು, ಕೈತೋಟದಲ್ಲಿ ಕಸಿ ಮಾಡುವುದು ಮತ್ತು ಕಂಪ್ಯೂಟರಿನಲ್ಲಿ ನಮಗೆ ಬೇಕಾದ ಸಣ್ಣಪುಟ್ಟ ಕೆಲಸಗಳಿಗೆ ನಾವೇ ಕೋಡ್ ಬರೆಯುವುದು ಇವೆಲ್ಲವೂ ಇಂಥವೇ ಕಸುಬುಗಳ ಉದಾಹರಣೆ.

ಹಿಂದೊಮ್ಮೆ ಮಲ್ಲಿಕಾರ್ಜುನ ಮನಸೂರರನ್ನು ಆಕಾಶವಾಣಿಯವರು ಸಂದರ್ಶನ ಮಾಡಿದ್ದರು. ಅವರು ತಮ್ಮ ಗುರುಗಳಾದ ಮಂಜೀ ಖಾನ್ ಸಾಹೇಬರೊಡನೆ ಕಲಿಯುತ್ತಿದ್ದ ದಿನಗಳ ಕುರಿತು ಹೇಳುತ್ತಿದ್ದರು. ಕೆಲವೊಮ್ಮೆ ಮಂಜೀ ಖಾನರ ತಂದೆ ಮತ್ತು ಅವರ ಗುರುಗಳಾದ ಖಾನ ಸಾಹೇಬರೇ ಸಂಗೀತಪಾಠ ಮಾಡಲು ಬರುತ್ತಿದ್ದರಂತೆ. ಸಂದರ್ಶಕರು ಮಧ್ಯೆ ಪ್ರವೇಶಿಸಿ, ಖಾನ ಸಾಹೇಬರು ಅಂದರೆ, ಅಲ್ಲಾದಿಯಾಖಾನ ಸಾಹೇಬರೆ ಎಂದು ಪ್ರಶ್ನೆ ಕೇಳಿದರು. ಮನಸೂರರ ಉತ್ತರ, ‘ಹಾ ಅವರೇ’.

ಗುರುಗಳನ್ನು ಹೆಸರು ಹಿಡಿದು ಕರೆಯುವ ಹಾಗಿಲ್ಲ. ಅದು ಆಕಾಶವಾಣಿಯ ಸಂದರ್ಶಕರಿಗೆ ತಿಳಿಯದು. ಖಾನ ಸಾಹೇಬರು ಹೇಗೆ ಪಾಠ ಮಾಡುತ್ತಿದ್ದರು ಎಂದು ಕುತೂಹಲ ಸಂದರ್ಶಕರಿಗೆ. ಮನಸೂರರ ಉತ್ತರ ಬಹಳ ಸರಳ, ಆದರೂ ವಿಚಿತ್ರ. ‘ಅವರು ಬಂದು ಕುಳಿತು, ‘ಹಾಂ, ಹಾಡು’ ಎನ್ನುತ್ತಿದ್ದರು. ನಾನು ಹಾಡುತ್ತಿದ್ದೆ. ಮಧ್ಯದಲ್ಲಿ ತಪ್ಪಿದ್ದರೆ ತಿದ್ದುತ್ತಿದ್ದರು.’ ಅದರಲ್ಲೇನು ವಿಶೇಷ ಎಂದು ಕೇಳಿದಿರೋ? ಏನೂ ವಿಶೇಷವಿಲ್ಲ. ಅದೇ ವಿಶೇಷ. ಹಾಡು ಕಲಿಸುವ ಯಾವ ರಹಸ್ಯವಿದ್ಯೆಯೂ ಇಲ್ಲ. ಹಾಡುವವರ ಒಡನೆ ಕುಳಿತು ಅಭ್ಯಾಸ ಮಾಡಬೇಕು. ಅವರು ಮಾಡಿದ್ದನ್ನೇ ನಾವೂ ಮಾಡಬೇಕು. ತಪ್ಪಾದರೆ ಅವರು ತಿದ್ದುತ್ತಾರೆ. ಹೀಗೆಯೇ ಒಂದು ದಿನ ಆ ವಿದ್ಯೆ ಕರಗತವಾಗುತ್ತದೆ.

ಆದರೆ, ಇದರಲ್ಲಿ ಒಂದು ಮುಖ್ಯವಾದ ವಿಚಾರ. ವಿದ್ಯೆ ಎಂದರೆ ಒಂದು ಕ್ಷೇತ್ರಕ್ಕೆ ಅಥವಾ ಕಸುಬಿಗೆ ಸಂಬಂಧಪಟ್ಟದ್ದು. ಹಾಡುವ ವಿದ್ಯೆ ಸಂಗೀತಕ್ಷೇತ್ರಕ್ಕೆ ಸಂಬಂಧಪಟ್ಟಿದ್ದು. ಲೆಕ್ಕಾಚಾರದ ವಿದ್ಯೆ ವ್ಯಾಪಾರ ವಹಿವಾಟಿಗೆ ಸಂಬಂಧಪಟ್ಟಿದ್ದು, ಕಸಿ ಮಾಡುವ ವಿದ್ಯೆ ಕೃಷಿಯ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಅಂದರೆ, ವಿದ್ಯೆಗೆ ಭೂಮಿಕೆಯಾಗಿರುವುದು ನಮ್ಮ ಬದುಕಿನ ಯಾವುದೋ ಒಂದು ಕಸುಬಿನ ಕ್ಷೇತ್ರ. ಪ್ರಾಕ್ಟಿಕಲ್ ಡೊಮೈನ್ ಎನ್ನುತ್ತೇವಲ್ಲ, ಅಂಥದ್ದು. ಮಿಕ್ಕ ಅಮೂರ್ತವಿಜ್ಞಾನ, ಗಣಿತ, ಸಮಾಜಶಾಸ್ತ್ರ ಎಲ್ಲವೂ ಆ ಕ್ಷೇತ್ರಗಳ ವಿದ್ಯೆಯನ್ನೇ ಹೆಚ್ಚು ಹೆಚ್ಚು ಸಂಸ್ಕರಿಸಿ ಶೋಧಿಸಿದ ರೂಪ. ಅಂದಮೇಲೆ, ಮಕ್ಕಳಿಗೆ ವಿದ್ಯೆ ಎಂದರೆ ವಿಶ್ವವಿದ್ಯಾಲಯದಲ್ಲಿ ಇರುವ ಜ್ಞಾನಶಿಸ್ತುಗಳ ರೀತಿಯಲ್ಲಿ ಹೇಳಿಕೊಡುವುದು ಎಂದಲ್ಲ. ನಮ್ಮ ಜೀವನದ ಪ್ರಾಕ್ಟಿಕಲ್ ಡೊಮೈನ್ ಅಥವಾ ಕಸುಬಿನ ಕ್ಷೇತ್ರಗಳ ಹಿನ್ನೆಲೆಯಿಂದ ಹೇಳಿಕೊಡುವುದು. ಅದರಲ್ಲಿ ಸರಿತಪ್ಪುಗಳ ನಿರ್ಧಾರ ಆಗುವುದು ಆ ನಿರ್ದಿಷ್ಟ ಕಸುಬುಗಳು ರೂಪಿಸಿಕೊಂಡು ಬಂದಿರುವ ಮಾನದಂಡಗಳ ಮೇಲೆ. ಗಂಟೆ ಮಾಡುವ ಸರಿಯಾದ ಕ್ರಮ ಯಾವುದೆಂದರೆ, ಗಂಟೆ ಮಾಡುವ ಕಮ್ಮಾರರು ಯಾವ ಕ್ರಮವನ್ನು ಮೆಚ್ಚಿ ಅಹುದಹುದು ಎನ್ನುತ್ತಾರೋ ಅದೇ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !