ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಶಾಲೆಗೆ ಹೋಗಲ್ಲ!

Last Updated 26 ಮೇ 2019, 19:45 IST
ಅಕ್ಷರ ಗಾತ್ರ

ಬೇಸಿಗೆ ರಜೆ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರ ಬಾಲ್ಯದ ಸಿಹಿ ನೆನಪುಗಳು ಆ ರಜೆಗಳ ಜೊತೆ ಬೆಸೆದುಕೊಂಡಿವೆ. ಆ ದಿನಗಳ ಸ್ವಚ್ಛಂದವಾದ ಬದುಕು, ಬೆಳಿಗ್ಗೆ ಬೇಗ ಏಳಬೇಕೆಂಬ ಧಾವಂತವಿಲ್ಲ. ಎಲ್ಲ ಕಸಿನ್ಸ್ ಅಜ್ಜಿ ಮನೆಯಲ್ಲಿ ಒಟ್ಟಿಗೆ ಸೇರಿ, ಮರ ಕೋತಿಯಾಟ, ಕುಂಟೆಬಿಲ್ಲೆ, ಲಗೋರಿ ಆಡಿ, ದೊಡ್ಡವರಿಗೆ ಮಧ್ಯಾಹ್ನ ಮಲಗಲು ಬಿಡದೇ ಅವರಿಂದ ಚೆನ್ನಾಗಿ ಬೈಗುಳ ತಿಂದು, ಅಲ್ಲೆ ನಕ್ಕು, ಕಪಿಸೇನೆ ಮುಂದಿನ ಲಂಕೆಗೆ ಲಗ್ಗೆಯಿಡಲು ಸಾಗುತ್ತಿತ್ತು.

ಯಾವುದೇ ಯೋಚನೆ ಇಲ್ಲ. ಕೇವಲ ಆಟ, ಊಟ, ಓಡಾಟ. ನಗುವುದು ಹಾಗೂ ನಿದ್ದೆಯಷ್ಟೆ! ರಜಾ ದಿನಗಳು ಕಳೆಯುತ್ತ ಕಳೆಯುತ್ತ ಶಾಲೆಗೆ ಹೋಗುವ ಸಮಯ ಸಮೀಪ ಬಂದಂತೆ, ಹೊಟ್ಟೆಯಲ್ಲಿ ಏನೋ ತಳಮಳ ಶುರುವಾಗುತ್ತದೆ. ಶಾಲೆಯ ಶಿಸ್ತು, ಹೋಂ ವರ್ಕ್‌, ಬೆಳಿಗ್ಗೆ ಬೇಗನೇ ಏಳುವುದು ಎಲ್ಲವೂ ಒಂಥರಾ ಜುಗುಪ್ಸೆಯನ್ನುಂಟು ಮಾಡುತ್ತಿದ್ದವು. ಶಾಲೆಗೆ ಹೋಗುವುದೇ ಬೇಡ ಎಂದೆನಿಸುತ್ತಿತ್ತು. ಈ ರೀತಿಯ ಭಾವನೆಯನ್ನು ನಾವೆಲ್ಲರೂ ಅನುಭವಿಸಿರುತ್ತೇವೆ. ರಜೆಯ ನಂತರ ಮಕ್ಕಳು, ಶಾಲೆಗೆ ಹೋಗುವಾಗ ತಗಾದೆ ತೆಗೆಯುವುದು ಸಾಮಾನ್ಯ. ಆದರೆ ಕೆಲವೇ ಕೆಲವು ದಿನಗಳ ನಂತರ ಶಾಲೆಯ ವಾತಾವರಣಕ್ಕೆ ಹೊಂದಿಕೊಂಡು, ಶಾಲೆಯ ವಾತಾವರಣದ ಖುಷಿ ಅನುಭವಿಸುತ್ತಾರೆ.

ಮಕ್ಕಳ ಶಾಲೆಯ ನಿರಾಕರಣೆ ಪಾಲಕರು ಅನುಭವಿಸುವ ಬಹುಸಾಮಾನ್ಯ ಸಮಸ್ಯೆ. ಇದು ಸಾಮಾನ್ಯವಾಗಿ ಪ್ರಥಮ ಬಾರಿಗೆ ಶಾಲೆಗೆ ಹೋಗುವಾಗ, ಶಾಲೆ ಬದಲಾದಾಗ, ರಜೆಗಳು ಕಳೆದು ಮರಳಿ ಶಾಲೆ ಶುರುವಾದಾಗ ಕಂಡುಬರಲಿದೆ.

ಮಕ್ಕಳು ನನಗೆ ಶಾಲೆಗೆ ಹೋಗಲು ಇಷ್ಟವಿಲ್ಲ, ನನ್ನನ್ನು ಶಾಲೆಗೆ ಕಳಿಸಬೇಡಿ ಎಂದು ಅಂಗಲಾಚಬಹುದು. ಅಳುವುದು, ಪ್ರತಿಭಟಿಸುವುದು ಸಾಮಾನ್ಯವೆನಿಸಲಿದೆ. ಕೆಲವೊಮ್ಮೆ ಹೊಟ್ಟೆ ನೋವು, ತಲೆನೋವು ಎಂದೂ ಸಹ ಹೇಳಿ ಶಾಲೆ ತಪ್ಪಿಸಲು ನೋಡಬಹುದು. ಶಾಲೆಯಲ್ಲಿ ಏನೋ ಒಂದು ನೆಪ ಹೇಳಿ ಮನೆಗೆ ಮರಳಬಹುದು. ತರಗತಿಯಿಂದ ಗೈರು ಉಳಿಯುವುದು, ಕೆಲ ದಿನಗಳಿಂದ ವಾರಗಳವರೆಗೂ ನಡೆಯಬಹುದು. ಶಾಲೆ ನಿರಾಕರಣೆಯು, 5ರಿಂದ 6ನೇ ವಯಸ್ಸಿನಲ್ಲಿ ಹಾಗೂ 10ರಿಂದ 11ನೇ ವಯಸ್ಸಿನವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ತರಗತಿಯಿಂದ ಹೊರಗುಳಿದು ದುಶ್ಚಟಗಳನ್ನು ಮಾಡುವುದು, ಅಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವುದು ಮುಂತಾದವುಗಳನ್ನು ಮಾಡುವುದು ಹದಿಹರೆಯದವರಲ್ಲಿ ಕಂಡುಬರುತ್ತದೆ.

ಕಾರಣಗಳು
ಪಾಲಕರಿಂದ ಬೇರ್ಪಡುವ ಆತಂಕ, ಪಾಲಕರ ಗಮನ ಸೆಳೆಯಲು, ಖುಷಿ ಕೊಡದ ಶಾಲೆಯ ಪರಿಸರ, ಶಾಲೆಯಲ್ಲಿ ಸಹಪಾಠಿಗಳು ಅಥವಾ ಹಿರಿಯ ವಿದ್ಯಾರ್ಥಿಗಳು ಬೆದರಿಸುತ್ತಿದ್ದರೆ ಅಥವಾ ರ‍್ಯಾಗಿಂಗ್ ಇದ್ದರೆ ಮಕ್ಕಳು ಶಾಲೆಗೆ ಹೋಗಲು ಇಷ್ಟ ಪಡುವುದಿಲ್ಲ. ಶಾಲೆ ನಿರಾಕರಣೆಗೆ ಖಿನ್ನತೆ, ಆತಂಕ, ಫೋಬಿಯದಂತಹ ಗಂಭೀರ ಸಮಸ್ಯೆಗಳೂ ಕಾರಣವಾಗಿರಬಹುದು.

ಶಿಕ್ಷಕರು ಹಾಗೂ ಪಾಲಕರು ಮಗು ಶಾಲೆಗೆ ಹೋಗುವುದನ್ನು ನಿರಾಕರಿಸುತ್ತಿರುವುದಕ್ಕೆ, ಭಾವನಾತ್ಮಕವಾದ ಸಮಸ್ಯೆಯೆಂದಾದರೆ ಅದಕ್ಕೆ ತಕ್ಷಣವೇ ಸ್ಪಂದಿಸಬೇಕು.

ಪರಿಹಾರವೇನು?
ಪಾಲಕರು ಹಾಗೂ ಶಿಕ್ಷಕರು ಒಟ್ಟಾಗಿ ಮಗುವಿನ ಸಮಸ್ಯೆಯ ಬಗ್ಗೆ ಚರ್ಚಿಸಿ, ಪರಿಣತ ಮನೋರೋಗತಜ್ಞ ಅಥವಾ ಮನಃಶಾಸ್ತ್ರಜ್ಞರೊಂದಿಗೆ ಸಮಾಲೋಚನೆ ಮಾಡಬೇಕು. ಮಗುವಿನ ಸಮಸ್ಯೆಗನುಸಾರವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು.

ಪಾಲಕರ ಪಾತ್ರ
ಪ್ರತಿ ದಿನ ನಿಮ್ಮ ಮಗುವಿನೊಡನೆ ಕಾಲ ಕಳೆಯಿರಿ. ಆ ಸಮಯದಲ್ಲಿ, ಮಗುವಿನ ಆ ದಿನದ ಆಗುಹೋಗುಗಳ ಬಗ್ಗೆ ಚರ್ಚಿಸಿ. ಶಾಲೆಯಲ್ಲಿ ಏನಾಗುತ್ತಿದೆ. ಶಿಕ್ಷಕರ ಕಾಳಜಿ, ಕಲಿಸುವಿಕೆಯ ಬಗ್ಗೆ ಮಗುವಿನ ಅಭಿಪ್ರಾಯ, ಮಗುವಿನ ಸಹಪಾಠಿಗಳ ಬಗ್ಗೆ ಮಾಹಿತಿಯ ಬಗ್ಗೆ ಮಾತನಾಡಿ. ಮಗುವಿನ ಮಾತುಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸಬೇಡಿ. ಏಕೆಂದರೆ ಮಕ್ಕಳು ತಮ್ಮ ಭಾವನೆಗಳನ್ನು, ಅತಿ ಸೂಕ್ಷ್ಮವಾಗಿ ಹಾಗೂ ಪರೋಕ್ಷವಾಗಿ ವ್ಯಕ್ತಪಡಿಸಬಹುದು.

ಶಾಲೆಗೆ ಮರಳಿ ಕಳುಹಿಸುವ ಕ್ರಮಗಳು
ಮಕ್ಕಳನ್ನು ಹಂತಹಂತವಾಗಿ, ಶಾಲೆಗೆ ಕಳುಹಿಸುವುದು. ಮೊದಲನೇ ದಿನ, ಶಾಲೆಯ ಕಾಂಪೌಂಡ್‌ ಹತ್ತಿರ ಪಾಲಕರು ಮಕ್ಕಳನ್ನು ಕರೆದುಕೊಂಡು ಬರುವುದು. ಎರಡನೇ ದಿನ, ಶಾಲೆಯ ಆವರಣದೊಳಗೆ ಹೋಗುವುದು. ನಂತರ ಶಾಲೆಯ ವಿಶ್ರಾಂತಿ ಪಡೆಯುವ ಕೊಠಡಿಗೆ ಹೋಗುವುದು. ನಂತರ ತರಗತಿಗೆ ಹೋಗುವುದು.

ಯಾವ ಶಿಕ್ಷಕರೊಂದಿಗೆ ಮಗು ಭಯವಿಲ್ಲದೇ ಇರುತ್ತದೆಯೋ, ಆ ಶಿಕ್ಷಕರು ಆ ಮಗುವಿನ ಬಗ್ಗೆ ಗಮನ ವಹಿಸಬೇಕು.

ಇತರ ಕ್ರಮಗಳು
ಪಾಲಕರು ಮಗುವಿನ ದಿನಚರಿಯನ್ನು ಮಾಡಿ, ಮಗು ಅದನ್ನು ಪಾಲಿಸುತ್ತಿದೆ ಎಂಬುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಒಳ್ಳೆಯ ನಡವಳಿಕೆಯನ್ನು ಪ್ರಶಂಸಿಸಬೇಕು ಹಾಗೂ ಋಣಾತ್ಮಕ ನಡವಳಿಕೆಗಳನ್ನು ಅಲಕ್ಷಿಸಬೇಕು. ಶಿಕ್ಷಕರು, ಪಾಲಕರ ಸಂಪರ್ಕದಲ್ಲಿದ್ದು ಮಗುವಿನ ಬೆಳವಣಿಗೆ, ವರ್ತನೆಯ ಬಗ್ಗೆ ಹೇಳುತ್ತಿರಬೇಕು.

ಮಗುವಿನ ಹಾಜರಾತಿಯನ್ನು ಪರಿಶೀಲಿಸುತ್ತಿರಬೇಕು. ಸಂಪೂರ್ಣ ಹಾಜರಾತಿಗೆ ಬಹುಮಾನ, ಪ್ರಶಂಸೆ ದೊರೆಯುವಂತಿರಬೇಕು. ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿಯಲ್ಲಿ, ಶಿಕ್ಷಕರ ಪಾತ್ರ ಅತಿ ಮುಖ್ಯವಾಗುತ್ತದೆ. ಶಿಕ್ಷಕರು ತಮ್ಮ ತರಬೇತಿಯ ಸಮಯದಲ್ಲಿ ಮಕ್ಕಳ ಮನಃಶಾಸ್ತ್ರವನ್ನು ಓದಿರುತ್ತಾರೆ. ಆದರೆ, ಪ್ರತಿ ಶಾಲೆಯಲ್ಲೂ ಆಸಕ್ತಿ ಹೊಂದಿದ ಶಿಕ್ಷಕ/ಕಿಯನ್ನು ವಿದ್ಯಾರ್ಥಿ ಆಪ್ತಸಮಾಲೋಚಕರನ್ನಾಗಿ ನೇಮಿಸಬೇಕು ಹಾಗೂ ಅವರಿಗೆ ಕಾಲಕಾಲಕ್ಕೆ ತರಬೇತಿ ನೀಡುತ್ತಿರಬೇಕು. ಇಂದಿನ ಮಕ್ಕಳೇ ದೇಶದ ಭವಿಷ್ಯದ ಆಸ್ತಿ. ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಲು, ಅವರ ದೈಹಿಕ ಆರೋಗ್ಯದ ಜೊತೆಗೆ, ಮಾನಸಿಕ ಆರೋಗ್ಯವನ್ನು ಸದೃಢವನ್ನಾಗಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT