ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶತಮಾನದ ಶಾಲೆ’ ಉಳಿಸಿದ ಹಳೆ ವಿದ್ಯಾರ್ಥಿಗಳು

37 ವಿದ್ಯಾರ್ಥಿಗಳಿದ್ದ ಸರ್ಕಾರಿ ಶಾಲೆಗೆ 150 ಮಕ್ಕಳು
Last Updated 15 ಜೂನ್ 2019, 12:42 IST
ಅಕ್ಷರ ಗಾತ್ರ

ಪಡುಬಿದ್ರಿ: ಮಕ್ಕಳ ಕೊರತೆಯಿಂದ ಮುಚ್ಚುವ ಅಪಾಯದಲ್ಲಿದ್ದ ಇಲ್ಲಿನ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಳೀಯರ ಜೊತೆಗೂಡಿ ಹಳೆ ವಿದ್ಯಾರ್ಥಿಗಳು ದತ್ತು ಪಡೆದು ದಾಖಲಾತಿ ಕ್ರಾಂತಿ ಮಾಡಿದ್ದಾರೆ. ಇದಿರಂದ ಕೇವಲ 37 ಮಕ್ಕಳು ಓದುತ್ತಿದ್ದ ಶಾಲೆಯಲ್ಲಿ ಈಗ 150 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಶಾಲೆಯ ಶತಮಾನೋತ್ಸವವನ್ನು ಕೆಲವು ತಿಂಗಳ ಹಿಂದೆ ಆಚರಿಸಲಾಗಿತ್ತು. ಆ ಸಮಾರಂಭದಲ್ಲಿ ಸೇರಿದ್ದ ಹಳೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು, ಶಾಲೆಯ ಪುನರುಜ್ಜೀವನಕ್ಕೆ ಪಣ ತೊಟ್ಟರು. ಅವರೆಲ್ಲ ಸೇರಿಕೊಂಡು ‘ನಂದಿಕೂರು ಎಜುಕೇಶನ್ ಟ್ರಸ್ಟ್’ ಸ್ಥಾಪಿಸಿ, ಶಾಲೆಯನ್ನು ದತ್ತು ಪಡೆದುಕೊಂಡರು.

ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮದಲ್ಲಿಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನೂ ನೀಡುವ ಯೋಜನೆಯನ್ನು ಕೈಗೆತ್ತಿಕೊಂಡರು.

ಅಷ್ಟು ಮಾತ್ರವಲ್ಲ,ಅತ್ಯಾಧುನಿಕ ಸೌಲಭ್ಯಗಳ ಮೂಲಕ ಶಿಕ್ಷಣದ ಗುಣಮಟ್ಟವನ್ನೂ ಹೆಚ್ಚಿಸಿದರು. ನಾಲ್ಕು ತಂಡಗಳನ್ನು ರಚಿಸಿ ಸುತ್ತಲಿನ ಗ್ರಾಮಗಳ ಅಂಗನವಾಡಿಗಳು, ಮನೆಗಳಿಗೆ ಭೇಟಿ ನೀಡಿ ಪಾಲಕರೊಂದಿಗೆ ಮಾತುಕತೆ ನಡೆಸಿದರು. ಇದರಿಂದ ಉತ್ತಮ ಸ್ಪಂದನೆ ದೊರಕಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸಿದರು.

ಆಧುನಿಕ ಕಲಿಕೋಪಕರಣಗಳು, ಆಕರ್ಷಕ ತರಗತಿ ಕೋಣೆಗಳು, ದೃಶ್ಯ-ಶ್ರವಣ ವಿಧಾನ ಕಲಿಕೆ, ಉಚಿತ ಪುಸ್ತಕಗಳು, ಸಮವಸ್ತ್ರ ಮತ್ತು ಪಾದರಕ್ಷೆಗಳು, ಸಂಗೀತ, ಯಕ್ಷಗಾನದಂತಹ ಚುವಟಿಕೆಗಳ ಜೊತೆರಿಯಾಯಿತಿ ದರದಲ್ಲಿ ಬಸ್ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಶಾಲೆಗೆ ನಂದಿಕೂರು ಮಾತ್ರವಲ್ಲದೇ ದೂರದ ಪಡುಬಿದ್ರಿ, ಫಲಿಮಾರು, ಕಾಂಜರಕಟ್ಟೆ, ಇನ್ನಾ ಮತ್ತಿತರ ಪ್ರದೇಶಗಳಿಂದಲೂ ವಿದ್ಯಾರ್ಥಿಗಳು ಬರುತಿದ್ದಾರೆ.

ಇತಿಹಾಸ: ಪಟ್ಟಣದಿಂದ ಮೂರು ಕಿ.ಮೀ. ಅಂತರದಲ್ಲಿರುವನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ದುರ್ಗಾಪರಮೇಶ್ವರೀ ದೇವಸ್ಥಾನದ ಗೋಪುರದಲ್ಲಿ ಆರಂಭಗೊಂಡಿತ್ತು. ಅಂದು ರಾಮರಾವ್ ಪಡುಬಿದ್ರಿ ಕಾಲ್ನಡಿಗೆಯಲ್ಲಿ ಬಂದು ಮರಳಿನಲ್ಲಿಯೇ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡುತ್ತಿದ್ದರು. ಆಗ, ‘ಅರಮಂದ ಕಾಡು ಶಾಲೆ’ ಎಂದು ಪ್ರಚಲಿತಗೊಂಡಿತ್ತು.

ಕ್ರಮೇಣ ಸಮೀಪದ ಅಡ್ವೆ, ಬೆಳ್ಳಿಬೆಟ್ಟು, ನಂದಿಕೂರು, ಸಜೆ, ಕೊಳಚೂರು, ಪಾದೆಬೆಟ್ಟು, ಕಂಚಿನಡ್ಕ, ಪಾಂಡ್ಯಾರು ಪರಿಸರದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಕೇಂದ್ರವಾಯಿತು. ಸುಮಾರು 600‌ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 20 ಶಿಕ್ಷಕರಿದ್ದರು.1945ರಲ್ಲಿ ಚೀಂಕ್ರಗುತ್ತು ರಾಘುಶೆಟ್ಟಿ ಹಾಗೂ ಗ್ರಾಮಸ್ಥರ ನೆರವಿನಿಂದ ಶಾಲೆಯ ನೂತನ ಕೊಠಡಿ ಗಳು ನಿರ್ಮಾಣಗೊಂಡಿದ್ದವು ಎಂದು ಗ್ರಾಮದ ಹಿರಿಯರು ತಿಳಿಸಿದರು.

ಒಂದರಿಂದ ಏಳನೇ ತರಗತಿವರೆಗಿರುವ ಈ ಶಾಲೆಯಲ್ಲಿ ಈಚಿನ ಕೆಲ ಬೆಳವಣಿಗೆಗಳು, ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿ ಮತ್ತು ಸರ್ಕಾರಿ ಶಾಲೆಗಳ ಮೇಲೆ ಜನರ ನಿರುತ್ಸಾಹ, ಮೂಲಸೌಕರ್ಯದ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಗೆ ಕಾರಣವಾಗಿತ್ತು.

**

2020–21 ನೇ ಶೈಕ್ಷಣಿಕ ವರ್ಷದಲ್ಲಿ5 ಮತ್ತು 6 ನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ಪರವಾನಗಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
-ಲಕ್ಷ್ಮಣ್ ಶೆಟ್ಟಿವಾಲ್, ಅಧ್ಯಕ್ಷ, ನಂದಿಕೂರು ಎಜ್ಯುಕೇಶನ್ ಟ್ರಸ್ಟ್

**

ಸರ್ಕಾರಿ ಶಾಲೆಯನ್ನು ಕಾನೂನು ಪ್ರಕಾರ ದತ್ತು ಪಡೆದು ಅಭಿವೃದ್ಧಿ ಪಡಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ನಂದಿಕೂರು ಎಜ್ಯುಕೇಶನ್‌ ಟ್ರಸ್ಟ್‌ ಉತ್ತಮ ಕೆಲಸ ಮಾಡುತ್ತಿದೆ.
-ಶೇಷಶಯನ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT