ಗುರುವಾರ , ಅಕ್ಟೋಬರ್ 1, 2020
20 °C

ಅನ್ನ ನೀಡೀತೇ ಅಕ್ಷರ?

ಹೃಷಿಕೇಶ್‌ ಬಿ.ಎಸ್‌. Updated:

ಅಕ್ಷರ ಗಾತ್ರ : | |

ಶಿಕ್ಷಣದ ಮೂಲ ಉದ್ದೇಶ ಜ್ಞಾನಾರ್ಜನೆಯೇ ಹೊರತು ಉದ್ಯೋಗ ಪಡೆಯುವುದಲ್ಲ ಎಂಬ ವಾದ ಒಂದೆಡೆಯಾದರೆ, ಪದವಿ ಪಡೆದು ಹೊರಬೀಳುತ್ತಿರುವ ಬಹುತೇಕ ಯುವಕರಲ್ಲಿ ಉದ್ಯೋಗ ಗಿಟ್ಟಿಸುವ ಯೋಗ್ಯತೆ ಇಲ್ಲ ಎಂಬ ವಾದ ಇನ್ನೊಂದೆಡೆ. ಹಾಗಾದರೆ ಶಿಕ್ಷಣವನ್ನು ಜ್ಞಾನಾರ್ಜನೆಯ ಜತೆಗೆ ಅನ್ನದ ಮಾರ್ಗವನ್ನಾಗಿಯೂ ಮಾಡಿಕೊಳ್ಳಲು ಸಾಧ್ಯವೇ? ಹೊಸ ಶಿಕ್ಷಣ ನೀತಿಯಲ್ಲಿ ಈ ಪ್ರಶ್ನೆಗೆ ಉತ್ತರವಿದೆಯೇ?

ವಿದ್ಯಾರ್ಥಿಗಳ ಚಾರಿತ್ರ್ಯವನ್ನು ರೂಪಿಸುವುದಷ್ಟೇ ಶಿಕ್ಷಣದ ಗುರಿಯಲ್ಲ; ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಕೊಡುಗೆ ನೀಡುವಂತಹ ವಯಸ್ಕರಾಗಿ ಅವರು ರೂಪುಗೊಳ್ಳುವಂತೆ ನೋಡಿಕೊಳ್ಳುವುದು ಕೂಡ ಅದರ ಧ್ಯೇಯ. ಆ ನಿಟ್ಟಿನಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)– 2020’ ದೇಶದ ಶಿಕ್ಷಣ ವಲಯದಲ್ಲಿ ಹೊಸ ಪರಿವರ್ತನೆಗೆ ನಾಂದಿ ಹಾಡಲಿದೆ. ಏಕೆಂದರೆ, ಶಿಕ್ಷಣದ ಮುಖ್ಯ ಗುರಿಯನ್ನು ಎನ್‌ಇಪಿ ತುಂಬಾ ಸ್ಪಷ್ಟವಾಗಿ ಗುರುತಿಸಿದೆ ಹಾಗೂ ಅದನ್ನು ಮುಟ್ಟಲು ವಾಸ್ತವಿಕ ಮಾರ್ಗವನ್ನೂ ಆಯ್ದುಕೊಂಡಿದೆ.

ಸದ್ಯದ ಸನ್ನಿವೇಶದಲ್ಲಿ, ವಿದ್ಯಾರ್ಥಿಗಳು ಶಾಲೆಯೊಳಗೆ ಇನ್ನೂ ಪ್ರಾಥಮಿಕ ಜ್ಞಾನವನ್ನು ಸಂಪಾದಿಸುವ ಮುನ್ನವೇ ವೃತ್ತಿ ಹಿಡಿಯುವ ಗುರಿಗಳ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಈ ವಿದ್ಯಮಾನದಿಂದ ಸ್ಪರ್ಧೆ ತೀವ್ರ ತರವಾಗಿ ಬೆಳೆಯುತ್ತಿದ್ದು, ಮಂಡಳಿಯ ಪರೀಕ್ಷೆಗಳಲ್ಲಂತೂ ಅದು ಪರಾಕಾಷ್ಠೆಯನ್ನು ತಲುಪುತ್ತಿದೆ. ಆ ಪರೀಕ್ಷೆಯಾದರೂ ಎಂತಹದ್ದು? ಪಾಠಗಳನ್ನು ಉರು ಹೊಡೆದು, ಗಿಳಿಪಾಠವನ್ನು ಒಪ್ಪಿಸುವುದಕ್ಕೆ ಮಾತ್ರ ಸೀಮಿತ. ಉನ್ನತ ಶಿಕ್ಷಣದಲ್ಲಿ ಕೂಡ ಇದೇ ಕಥೆ ಮುಂದುವರಿಯುತ್ತದೆ. ಯಾರು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುತ್ತಾರೋ ಅವರಿಗಷ್ಟೇ ವೃತ್ತಿಪರ ಕೋರ್ಸ್‌ಗಳನ್ನು ಸೇರಲು ಅವಕಾಶ ಸಿಗುತ್ತದೆ. ಕೋರ್ಸ್‌ ಮುಗಿಸಿ, ಪ್ರಮಾಣಪತ್ರ ಪಡೆದು ಹೊರಬಂದ ಬಳಿಕವೂ ನಮ್ಮ ಬಹುತೇಕ ಯುವಕರಲ್ಲಿ ವೃತ್ತಿ ಕೌಶಲದ ಕೊರತೆ ಮೊದಲಿನಂತೆಯೇ ಇರುತ್ತದೆ. ಇದು ಸದ್ಯದ ಚಿತ್ರಣ.

‘ಪದವಿ ಪೂರೈಸಿರುವ ನಮ್ಮ ಬಹುತೇಕ ಯುವಕರು ಕೆಲಸಕ್ಕೆ ಬೇಕಾದ ಕೌಶಲ ಹಾಗೂ ಉದ್ಯಮಶೀಲತಾ ಮನೋಭಾವದ ಕೊರತೆಯನ್ನು ಎದುರಿಸುತ್ತಿದ್ದಾರೆ’ ಎಂದು ಕೈಗಾರಿಕೋದ್ಯಮಿಗಳು ಆಗಾಗ ಹೇಳುವುದನ್ನು ನಾವು ಕೇಳಿದ್ದೇವೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕೆಲಸ ಹಿಡಿಯುವ ಸಂಕುಚಿತ ಗುರಿಯೊಂದಿಗೆ ವಿದ್ಯಾರ್ಥಿಗಳು ಓದಿದರೂ ಅದನ್ನು ಗಿಟ್ಟಿಸಿಕೊಳ್ಳುವಷ್ಟು ಯೋಗ್ಯತೆಯನ್ನು ಸಂಪಾದಿಸಿಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ. ಅಲ್ಲದೆ, ಜಗತ್ತಿನ ಅರ್ಥ ವ್ಯವಸ್ಥೆಯಲ್ಲಿ ತಮ್ಮ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವಷ್ಟು ಅವರು ಸಮರ್ಥರೂ ಆಗಿಲ್ಲ.

ಮೌಲ್ಯವೃದ್ಧಿಗೆ ಅಪೇಕ್ಷಣೀಯವಾದ ಮಾನವ ಸಂಪನ್ಮೂಲದ ಕೊರತೆ ನಮ್ಮ ಕೈಗಾರಿಕೆಗಳನ್ನು ಕಾಡದೇ ಬಿಟ್ಟಿಲ್ಲ. ಉದಾಹರಣೆಗೆ, ಸಾಫ್ಟ್‌ವೇರ್‌ ಕಂಪನಿಯೊಂದು ತನ್ನ ಹಳೆಯ ಉತ್ಪನ್ನಗಳೊಂದಿಗೆ ಎಷ್ಟು ದಿನ ಸಂತೃಪ್ತಿಯಿಂದ ಇರಲು ಸಾಧ್ಯ? ಹೊಸ ಉತ್ಪಾದನೆಗಳತ್ತ ನಿರಂತರವಾಗಿ ಅದು ಗಮನಹರಿಸುತ್ತಲೇ ಇರಬೇಕು. ಆದರೆ, ಉದ್ಯಮದ ಇಂತಹ ಬೇಡಿಕೆಗಳಿಗೆ ಸ್ಪಂದಿಸುವಂತಹ ಸಾಮರ್ಥ್ಯ ತುಂಬಾ ಕಡಿಮೆ ವಿದ್ಯಾವಂತರಲ್ಲಿದೆ. ಅಲ್ಲದೆ, ಉದ್ಯಮಶೀಲ ಕೌಶಲ ಅಥವಾ ಉದ್ಯೋಗ ಸಾಮರ್ಥ್ಯದ ಕೊರತೆಗಳನ್ನು ಉನ್ನತ ಶಿಕ್ಷಣದ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ದಿಢೀರ್‌ ಎಂದು ತುಂಬಲಾಗದು. ಆ ಕೊರತೆಯನ್ನು ನೀಗಿಸಲು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಅಗಬೇಕು. ಅಂದರೆ, ಉನ್ನತ ಶಿಕ್ಷಣದ ಸ್ವರೂಪದ ಬೇಡಿಕೆಗಳಿಗೆ ತಕ್ಕಂತೆ ಪ್ರಾಥಮಿಕ ಹಂತದಿಂದಲೇ ಕಲಿಕಾ ಪ್ರವೃತ್ತಿಯನ್ನು ಮರುರೂಪಿಸಬೇಕು. ಈ ಅಗತ್ಯವನ್ನು ಎನ್‌ಇಪಿ– 2020 ಸರಿಯಾಗಿ ಮನಗಂಡಿದೆ. ‘ಉತ್ಪಾದಕ ಮಾನವ ಸಂಪನ್ಮೂಲ’ವನ್ನು ರೂಪಿಸುವ ನಿಟ್ಟಿನಲ್ಲಿ ಎನ್‌ಇಪಿ ಒತ್ತು ನೀಡಿದ ನಾಲ್ಕು ಪ್ರಮುಖ ವಿಷಯಗಳತ್ತ ಗಮನಹರಿಸೋಣ.

ಆರಂಭಿಕ ಶಿಕ್ಷಣ
ಪ್ರಾಥಮಿಕ ಹಂತದಿಂದಲೇ ವಯೋಮಾನಕ್ಕೆ ಅನುಗುಣವಾಗಿ ಪ್ರಾಥಮಿಕ ಶಿಕ್ಷಣ ನೀಡಬೇಕೆನ್ನುವುದು ಎನ್‌ಇಪಿ ಪ್ರತಿಪಾದಿಸಿರುವ ಮೊದಲ ಅಂಶ. ಅತ್ಯಂತ ಕ್ಷಿಪ್ರಗತಿಯಲ್ಲಿ ಮಾನವನ ವಿಕಾಸ ಆಗುತ್ತಿರುವ ಯುಗದಲ್ಲಿ ನಾವಿದ್ದೇವೆ. ಈ ಕಾರಣದಿಂದ ‘ಮಕ್ಕಳು ಕೇವಲ ಕಲಿಯುವುದಲ್ಲ; ಅದಕ್ಕಿಂತ ಮುಖ್ಯವಾಗಿ, ಹೇಗೆ ಕಲಿಯಬೇಕು ಎನ್ನುವುದನ್ನು ಕಲಿಯುವುದೂ ಮುಖ್ಯ. ಹೇಗೆ ವಿಮರ್ಶಾತ್ಮಕವಾಗಿ ಯೋಚಿಸಿ, ಸಮಸ್ಯೆಗಳನ್ನು ಪರಿಹರಿಸುವುದು, ಹೇಗೆ ಸೃಜನಶೀಲ ಮತ್ತು ಬಹುಶಿಸ್ತೀಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಮತ್ತು ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ಹೇಗೆ ಹೊಸತನ ರೂಢಿಸಿಕೊಳ್ಳುವುದು ಎಂಬುದನ್ನು ಕಲಿಯುವುದು ಕೂಡ ಅಷ್ಟೇ ಮಹತ್ವದ್ದು’ ಎನ್ನುತ್ತದೆ ಎನ್‌ಇಪಿ.

ಮೇಲೆ ಪಟ್ಟಿ ಮಾಡಲಾದ ಸಾಮರ್ಥ್ಯಗಳನ್ನು ಮೈಗೂಡಿಸಿಕೊಳ್ಳದಿದ್ದರೆ ಪ್ರಸಕ್ತ ದಿನಗಳಲ್ಲಿ ‘ಉತ್ಪಾದಕ ವ್ಯಕ್ತಿ’ಯಾಗಿ ಉಳಿಯುವುದು ಕಷ್ಟಸಾಧ್ಯ. ಈ ಗುಣಗಳನ್ನು ನಾವು ಚಿಕ್ಕವರಿರುವ ಹಂತದಿಂದಲೇ ಬೆಳೆಸಿಕೊಳ್ಳಬೇಕಾದುದು ಅವಶ್ಯ. ಅಂತೆಯೇ, ನಮ್ಮ ಯುವಕರ ಈಗಿನ ಅನೇಕ ಮಿತಿಗಳಿಗೆ, ಅವರು ಆರಂಭಿಕ ಹಂತದಿಂದ ಪಡೆಯುತ್ತಾ ಬಂದ ಶಿಕ್ಷಣದ ಸ್ವರೂಪದಲ್ಲಿರುವ ಕೊರತೆಗಳೇ ಕಾರಣ ಎನ್ನದೆ ವಿಧಿಯಿಲ್ಲ.

ಮಾನವನ ಬದುಕಿನಲ್ಲಿ ನಿರ್ಣಾಯಕ ಅರಿವಿನ ಬೆಳವಣಿಗೆಗಳು ಅವನ ಬಾಲ್ಯಾವಸ್ಥೆಯಲ್ಲಿಯೇ ಆಗುತ್ತವೆ ಎಂದು ಕಳೆದ ಕೆಲವು ದಶಕಗಳಲ್ಲಿ ನಡೆದ ಸಂಶೋಧನೆಗಳು ಸ್ಪಷ್ಟವಾಗಿ ಸೂಚಿಸಿವೆ. ಹುಟ್ಟಿನಿಂದ ಸುಮಾರು ಎಂಟು ವರ್ಷಗಳವರೆಗೆ ವಿಸ್ತಾರವಾದ ಮಾನಸಿಕ ವಿಕಾಸವು ಮಿದುಳಿನ ಅದ್ಭುತ ಬೆಳವಣಿಗೆಯೊಟ್ಟಿಗೆ ನಡೆಯುತ್ತದೆ. ಮಿದುಳು ತನ್ನ ಒಟ್ಟು ಬೆಳವಣಿಗೆಯ ಶೇಕಡ 90ರಷ್ಟು ವಿಕಾಸವನ್ನು ಜನನಾನಂತರದ ಆರಂಭಿಕ ವರ್ಷಗಳಲ್ಲೇ ಕಂಡಿರುತ್ತದೆ. ದುರದೃಷ್ಟವಶಾತ್‌, ಇದುವರೆಗೆ ಮಿದುಳಿನ ಬೆಳವಣಿಗೆಯ ಆ ಅಪೂರ್ವ ಅವಧಿಯನ್ನು ನಾವು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದೆವು. ಮಾನವನ ಮಿದುಳಿನ ಬೆಳವಣಿಗೆಯ ಕುರಿತಾದ ಸಂಶೋಧನಾ ಆವಿಷ್ಕಾರಗಳ ಆಧಾರದ ಮೇಲೆ ಶೈಕ್ಷಣಿಕ ಆದ್ಯತೆಗಳನ್ನು ಮರುಹೊಂದಿಸುವ ಮತ್ತು ಆರಂಭಿಕ ವರ್ಷಗಳ ಶಿಕ್ಷಣದತ್ತ ಗಮನ ನೀಡುವ ಅಗತ್ಯವನ್ನು ಎನ್‌ಇಪಿ ಒತ್ತಿ ಹೇಳಿದೆ.

ಚಿಕ್ಕಮಕ್ಕಳಲ್ಲಿ ಅವರ ಕುತೂಹಲವನ್ನು ಉತ್ತೇಜಿಸುವ, ಅವರ ಕೌಶಲವನ್ನು ವೃದ್ಧಿಸುವ ಮತ್ತು ಭಾಷೆಗಳ ಕಲಿಕೆಗೆ ಅವರ ಆಸಕ್ತಿಯನ್ನು ಕೆರಳಿಸುವ ಮೂಲಕ, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕಿದೆ ಎನ್ನುವುದು ಎನ್‌ಇಪಿ– 2020ರಲ್ಲಿ ವ್ಯಕ್ತವಾದ ಖಚಿತ ನಿಲುವು.

ಪ್ರಾಥಮಿಕ ಕಲಿಕಾ ಹಂತದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಭಾಷೆಗಳನ್ನು ಕಲಿಯಲು ಅವಕಾಶ ನೀಡಬೇಕು ಎಂದೂ ಅದು ಶಿಫಾರಸು ಮಾಡುತ್ತದೆ. ಇದರಿಂದ ಮಕ್ಕಳಿಗೆ ತಮ್ಮ ಸುತ್ತಲಿನ ಭಾಷೆಗಳ ಸಿರಿವಂತಿಕೆಯನ್ನು ಸವಿಯಲು ಸಹಾಯವಾಗುತ್ತದೆ. ಚಿಕ್ಕ ವಯಸ್ಸಿನ ಮಕ್ಕಳ ಶಿಕ್ಷಣಕ್ಕೆ ಚಟುವಟಿಕೆ ಆಧಾರಿತ ಕಲಿಕಾ ತಂತ್ರಗಳನ್ನು ಅಳವಡಿಸಿಕೊಳ್ಳುವುದರ ಮಹತ್ವವನ್ನೂ ನೀತಿಯಲ್ಲಿ ಹೇಳಲಾಗಿದೆ. ಈ ಬಗೆಯ ಶಿಕ್ಷಣವನ್ನು ಮೂರರಿಂದ ಎಂಟು ವರ್ಷದೊಳಗಿನ ಮಕ್ಕಳಿಗೆ ಕೊಡಬೇಕು ಎಂದು ಅದು ಬಯಸುತ್ತದೆ. ಐದು ವರ್ಷಗಳ ಆರಂಭಿಕ ಕಲಿಕೆಗೆ ಅನುವಾಗುವಂತೆ ಶಾಲೆಯ ಸ್ವರೂಪವನ್ನು ಮರುವಿನ್ಯಾಸ ಮಾಡಿ, ಅದಕ್ಕೆ ಎರಡು ವರ್ಷಗಳ ನರ್ಸರಿ ಹಂತವನ್ನೂ ಸೇರ್ಪಡೆ ಮಾಡಲಾಗಿದೆ. ಈ ಅವಧಿಯಲ್ಲಿ ಮಕ್ಕಳು ಹೇಗೆ ಕಲಿಯಬೇಕು ಎನ್ನುವುದನ್ನು ಕಲಿಯಬೇಕು ಎನ್ನುವುದು ಶಿಕ್ಷಣ ನೀತಿಯ ಬಯಕೆ. ಹೌದು, ಈ ಬಗೆಯ ಶಿಕ್ಷಣದಿಂದ ಮುಂದೆ ‘ಉತ್ಪಾದಕ ವ್ಯಕ್ತಿ’ಗಳಾಗಿ ರೂಪುಗೊಳ್ಳುವ ಸಾಮರ್ಥ್ಯ ಅವರಲ್ಲಿ ಬೆಳೆಯುತ್ತದೆ.

ವೃತ್ತಿಸಂಬಂಧಿ ಶಿಕ್ಷಣ
ಶಾಲಾ ಹಂತದಲ್ಲಾಗಲಿ, ಉನ್ನತ ಶಿಕ್ಷಣ ಹಂತದಲ್ಲಾಗಲಿ, ಶಿಕ್ಷಣದುದ್ದಕ್ಕೂ ನಮ್ಮ ಯುವಕರು ವೃತ್ತಿಪರ ಕೌಶಲಗಳಿಗೆ ಒಡ್ಡಿಕೊಳ್ಳದ ಕಾರಣ ಅವರಲ್ಲಿ ಉದ್ಯಮಶೀಲತಾ ಮನೋಭಾವದ ಕೊರತೆ ಕಾಡುತ್ತಿದೆ. ಅಲ್ಲದೆ, ಶಿಕ್ಷಣವನ್ನು ಪೂರೈಸಿದ ಬಳಿಕವೂ ಉದ್ಯೋಗ ಹೊಂದಲು ಅರ್ಹರಲ್ಲದ ಸ್ಥಿತಿಯಲ್ಲಿಯೇ ಇರುತ್ತಾರೆ ಎಂದು ಹಲವು ವರದಿಗಳು ಎತ್ತಿತೋರಿವೆ. ಮಾಧ್ಯಮಿಕ ಶಿಕ್ಷಣ ಹಂತದಿಂದ (ಆರನೇ ತರಗತಿಯಿಂದ) ವೃತ್ತಿಸಂಬಂಧಿ ಕೋರ್ಸ್‌ಗಳ ಅಧ್ಯಯನವನ್ನು ಎನ್‌ಇಪಿ ಕಡ್ಡಾಯಗೊಳಿಸುತ್ತದೆ. ವೃತ್ತಿ ಶಿಕ್ಷಣವು ಆಯ್ಕೆಯ ವಿಷಯವಲ್ಲ, ಕಡ್ಡಾಯವಾದ ವಿಷಯ ಎಂಬುದು ಇಲ್ಲಿ ಒತ್ತಿ ಹೇಳಬೇಕಾಗಿರುವ ಅಂಶ.  ಪ್ರತಿಯೊಂದು ಮಗುವಿಗೂ ವೃತ್ತಿ ಶಿಕ್ಷಣ ಸಿಗಬೇಕು ಎನ್ನುವುದು ಇದರ ಹಿಂದಿನ ಆಶಯ. ಸದ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಈ ವಿಷಯ ಸಂಪೂರ್ಣ ಗೌಣವಾಗಿತ್ತು. ಈಗ ವೃತ್ತಿ ಶಿಕ್ಷಣವನ್ನು ಕಡ್ಡಾಯಗೊಳಿಸಿದ್ದರಿಂದ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳಲಿವೆ.

ಶಾಲಾ ಪಠ್ಯದಲ್ಲಿ ವೃತ್ತಿ ಶಿಕ್ಷಣದ ಅಳವಡಿಕೆಯಿಂದ ವಿವಿಧ ವೃತ್ತಿಗಳ ಕುರಿತು ಮಕ್ಕಳಲ್ಲಿ ಗೌರವಭಾವ ಮೂಡಲು ಕಾರಣವಾಗುತ್ತದೆ. ಯಾವುದಾದರೂ ಒಂದು ವೃತ್ತಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣವನ್ನು ಪಡೆಯುವಂತೆಯೂ ಪ್ರೇರೇಪಿಸುತ್ತದೆ. ಎಲ್ಲ ವಿಶ್ವವಿದ್ಯಾಲಯಗಳು ನಾಲ್ಕು ವರ್ಷಗಳ ಬಿ.ವೊಕ್‌ ಪದವಿ ಕೋರ್ಸ್‌ಗಳನ್ನು ನಡೆಸಬೇಕು ಎಂದು ಎನ್‌ಇಪಿಯಲ್ಲಿ ತಿಳಿಸಲಾಗಿದ್ದು, ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಹೊಸ ಆಯ್ಕೆಗಳ ಅವಕಾಶ ಸೃಷ್ಟಿಯಾಗಲಿದೆ.

ಕೆಲಸದ ಅನುಭವ
ಉನ್ನತ ಶಿಕ್ಷಣದ ಯಾವುದೇ ಕೋರ್ಸ್‌ಗೆ ವಿವಿಧ ಹಂತಗಳಲ್ಲಿ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ನೀಡಲು ಹೊರಟಿರುವುದು ಸುಧಾರಣಾ ಕ್ರಮಗಳಲ್ಲಿ ಅತ್ಯಂತ ಮಹತ್ವದ್ದು. ‘ಉತ್ಪಾದಕ ವ್ಯಕ್ತಿ’ಗಳನ್ನಾಗಿ ಪರಿವರ್ತಿಸುವ ಬೇಡಿಕೆಯನ್ನು ಈಡೇರಿಸುವುದು ಇದರಿಂದ ಸಾಧ್ಯ. ‘ವಿವಿಧ ಹಂತಗಳಲ್ಲಿ ಪ್ರವೇಶ ಮತ್ತು ನಿರ್ಗಮನ’ದ ಅವಕಾಶದಿಂದ ಪದವಿ ಅಧ್ಯಯನದ ಯಾವುದೇ ಹಂತದಲ್ಲಿ, ಕೆಲಸದ ಅನುಭವ ಪಡೆಯಲಿಕ್ಕಾಗಿ  ಕೋರ್ಸ್‌ನಿಂದ ನಿರ್ಗಮಿಸಬಹುದು. ಮುಂದೆ ಬೇಕೆನಿಸಿದಾಗ, ಆ ವಿದ್ಯಾರ್ಥಿಯು ಕೋರ್ಸ್‌ನ ಅಧ್ಯಯನವನ್ನು ಈ ಹಿಂದೆ ಎಲ್ಲಿಗೆ ನಿಲ್ಲಿಸಿದ್ದನೋ ಅಲ್ಲಿಂದ ಮುಂದುವರಿಸಬಹುದು.

ಉನ್ನತ ಶಿಕ್ಷಣ ಪಡೆಯುವಾಗಲೇ ಇಂಟರ್ನ್‌ಷಿಪ್‌ ಮೂಲಕ ಕೆಲಸದ ಅನುಭವ ಪಡೆಯುವಂತಾದರೆ, ಪದವಿ ಮುಗಿಸಿದ ತಕ್ಷಣ ಅಂತಹ ವ್ಯಕ್ತಿ ಉದ್ಯೋಗ ಗಿಟ್ಟಿಸುವಂತಹ ಅರ್ಹ ಅಭ್ಯರ್ಥಿಯಾಗಲು ಸಾಧ್ಯ. ಏಕೆಂದರೆ, ಕೆಲಸದ ಪ್ರಾಯೋಗಿಕ ಅನುಭವ ಅವನಿಗೆ ಲಭ್ಯವಾಗಿರುತ್ತದೆ.

ಮಗುವೊಂದು ಶಾಲಾ ವ್ಯವಸ್ಥೆಗೆ ಸೇರಿ, ಹದಿನೈದು ವರ್ಷಗಳ ಶಾಲಾ ಶಿಕ್ಷಣ ಪಡೆದು, ಯುವಕನಾಗಿ ಹೊರಬಂದಾಗಲೂ ಆರ್ಥಿಕವಾಗಿ ಸ್ವತಂತ್ರನಾಗಲು ಕೌಶಲದ ಕೊರತೆ ಕಾಡುತ್ತದೆ ಎಂಬ ಸಂಗತಿ ಬೇಸರ ತರಿಸುವಂಥದ್ದು. ಆದ್ದರಿಂದಲೇ ಶಿಕ್ಷಣದ ಸ್ವರೂಪದಲ್ಲಿ ತಕ್ಕ ಮಾರ್ಪಾಡುಗಳನ್ನು ಮಾಡಲು ಶಿಫಾರಸು ಮಾಡಲಾಗಿದೆ. ಎನ್‌ಇಪಿಯ ಮಾತಿನಲ್ಲೇ ಹೇಳುವುದಾದರೆ, ‘ಶಿಕ್ಷಣದ ಹೊಸ ಸ್ವರೂಪವು ಚಾರಿತ್ರ್ಯವನ್ನು ನಿರ್ಮಿಸುವ ಮೂಲ ಗುರಿಯನ್ನು ಚಾಚೂತಪ್ಪದೆ ಪೂರೈಸುತ್ತದೆ. ನೈತಿಕ, ತರ್ಕಬದ್ಧ, ಸೃಜನಶೀಲ ಮನೋಭಾವವನ್ನು ಬೆಳೆಸುತ್ತದೆ. ಅರಿವನ್ನು ಸಹ ಮೂಡಿಸುತ್ತದೆ. ಅದೇ ಸಮಯದಲ್ಲಿ ಉದ್ಯೋಗವನ್ನು ಗಳಿಸಲು ಅರ್ಹರಾಗುವಂತೆ ಅವರನ್ನು ಸಿದ್ಧಪಡಿಸುತ್ತದೆ’.

ಭಾಷೆಗಳು ಮತ್ತು ಸಂವಹನ
ಬೋಧನೆಗೆ ಆಯ್ದುಕೊಂಡ ಭಾಷೆಯು (language of instruction) ಮಗುವಿಗೆ ಹೆಚ್ಚು ಪರಿಚಿತವಾದ ಭಾಷೆಯೇ ಆಗಿರಬೇಕು. ಅದು ಮಾತೃಭಾಷೆ ಅಥವಾ ಮನೆಭಾಷೆಯೇ ಆಗಿರಬೇಕು ಎಂದು ನಿಸ್ಸಂದಿಗ್ಧವಾಗಿ ಹೇಳುತ್ತದೆ ಎನ್‌ಇಪಿ. ಮನೆಭಾಷೆಯ ಮಾಧ್ಯಮ ಸಾಧ್ಯವಿಲ್ಲದಿರುವ ಸಂದರ್ಭದಲ್ಲಿ, ರಾಜ್ಯ ಅಥವಾ ಪ್ರಾದೇಶಿಕ ಭಾಷೆಯ ಬೋಧನೆಯು ಎರಡನೇ ಆದ್ಯತೆಯಾಗಬೇಕು ಎಂದು ತಿಳಿಸಲಾಗಿದೆ. ಇದರರ್ಥ, ಮಗು ಬೇರೆ ಭಾಷೆಗಳನ್ನು ಕಲಿಯಬಾರದು ಎಂದಲ್ಲ. ವಾಸ್ತವವಾಗಿ, ಒಂದು ಭಾಷೆಯನ್ನು ಚೆನ್ನಾಗಿ ಕಲಿಯಲು ಅದನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಲೇಬೇಕಾದ ಅಗತ್ಯವಿಲ್ಲ ಎನ್ನುತ್ತದೆ ನೀತಿ. ಆರಂಭಿಕ ವರ್ಷಗಳಲ್ಲಿ, ತರಗತಿಯಲ್ಲಿನ ವೈವಿಧ್ಯದ ಆಧಾರದ ಮೇಲೆ ಮಕ್ಕಳು ಒಂದಕ್ಕಿಂತ ಹೆಚ್ಚಿನ ಭಾಷೆಗಳಿಗೆ ಒಡ್ಡಿಕೊಳ್ಳಬೇಕು. ಮೂರು ವರ್ಷಗಳ ಪೂರ್ವಸಿದ್ಧತಾ ಮಟ್ಟದ ಶಿಕ್ಷಣದಲ್ಲಿ, ಕನಿಷ್ಠ ಮೂರು ಭಾಷೆಗಳನ್ನು ಕಲಿಕೆಗೆ ಬಳಸಬೇಕು ಎಂದು ನೀತಿ ಶಿಫಾರಸು ಮಾಡುತ್ತದೆ.

ತ್ರಿಭಾಷಾ ನೀತಿಯ ಈ ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದದ್ದಾದರೆ, ಮಾತೃಭಾಷೆ ಅಥವಾ ತಮ್ಮ ಪರಿಸರದ ಭಾಷೆಯ ಮೇಲೆ ಹಿಡಿತ ಸಾಧಿಸಲು ಮಕ್ಕಳಿಗೆ ಸಾಧ್ಯವಾಗುತ್ತದೆ. ಅದರೊಟ್ಟಿಗೆ ಇತರ ಎರಡು ಭಾಷೆಗಳನ್ನು ಓದಲು ಹಾಗೂ ಬರೆಯುವುದನ್ನು ಕಲಿಯಲು ದಾರಿಯಾಗುತ್ತದೆ. ಆ ಮೂಲಕ ಭವಿಷ್ಯದ ಸಂವಹನಕ್ಕೆ ಇನ್ನಷ್ಟು ಸಾಧನಗಳು ಸಿಕ್ಕಂತಾಗುತ್ತವೆ. ವಿಷಯಗಳ ಮುಖ್ಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಮಾತೃಭಾಷೆ ನೆರವಿಗೆ ಬಂದರೆ, ಉಳಿದ ಎರಡರಲ್ಲಿನ ಒಂದು ವಿದೇಶಿ ಭಾಷೆಯು (ಅದು ಇಂಗ್ಲಿಷ್‌ ಸೇರಿದಂತೆ ಯಾವುದೇ ಭಾಷೆ ಆಗಿರಬಹುದು) ಅಂತರರಾಷ್ಟ್ರೀಯ ಭಾಷೆಯಿಂದ ಸಿಗಬಹುದಾದ ಎಲ್ಲ ಅವಕಾಶಗಳನ್ನೂ ಒದಗಿಸುತ್ತದೆ. ಒಂದಕ್ಕಿಂತ ಹೆಚ್ಚಿನ ಭಾಷೆಗಳ ಮೇಲಿನ ಹಿಡಿತದಿಂದ ಉದ್ಯೋಗಾವಕಾಶಗಳ ಪರಿಮಿತಿ ಕೂಡ ಹೆಚ್ಚಾಗುತ್ತದೆ.

ಲೇಖಕ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು