ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಲ್‌: ಈಜಿಪ್ಟ್‌ನ ವರದಾನ

Last Updated 5 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಈಶಾನ್ಯ ಆಫ್ರಿಕಾ ಕುರಿತು ಕುತೂಹಲ ಎಲ್ಲರಲ್ಲೂ ಸಹಜ. ಅಲ್ಲಿರುವ ನೈಲ್‌ ನದಿಯಂತೂ ಪ್ರಪಂಚದಲ್ಲೇ ಖ್ಯಾತಿ ಪಡೆದಿರುವಂತಹದ್ದು. ಅಂತಹ ನೈಲ್‌ ನದಿಯ ಬಗ್ಗೆ ಕೆಲವು ವಿವರಗಳು ಇಲ್ಲಿವೆ.

ಪ್ರಪಂಚದಲ್ಲೇ ಅತ್ಯಂತ ಉದ್ದವಾದ ನದಿಯಿದು. ಎಷ್ಟೆಂದರೆ ಇದರ ಉದ್ದ 6695 ಕಿ.ಮೀ.ನಷ್ಟು. ಆದರೆ ಕೆಲವು ವಿಜ್ಞಾನಿಗಳು ದಕ್ಷಿಣ ಅಮೆರಿಕದ ಅಮೆಜಾನ್‌ ನದಿಯೇ ಅತ್ಯಂತ ಉದ್ದ ಎನ್ನುತ್ತಿದ್ದಾರೆ. ಹೀಗಾಗಿ ಗೊಂದಲಗಳೂ ಇವೆ.

ನೈಲ್‌ ಈಜಿಪ್ಟ್‌ ಜೊತೆ ತಳಕು ಹಾಕಿಕೊಂಡಿದ್ದರೂ ಇದು ಇನ್ನೂ 10 ದೇಶಗಳಲ್ಲಿ ಹರಿಯುತ್ತಿದೆ. ತಾಂಜಾನಿಯ, ಉಗಾಂಡಾ, ಕಾಂಗೊ ಗಣರಾಜ್ಯ, ರುವಾಂಡಾ, ಬುರುಂಡಿ, ಇಥಿಯೋಪಿಯ, ಕೆನ್ಯಾ, ಎರಿಟ್ರಿಯ, ದಕ್ಷಿಣ ಸುಡಾನ್‌, ಸುಡಾನ್‌.

ಈ ನದಿಗೆ ಎರಡು ಉಪನದಿಗಳಿವೆ. ಒಂದು ಬಿಳಿ ನೈಲ್‌, ಇದು ದಕ್ಷಿಣ ಸುಡಾನ್‌ನಲ್ಲಿ ಹುಟ್ಟಿದೆ. ಇನ್ನೊಂದು ನೀಲಿ ನೈಲ್‌ ಇಥಿಯೋಪಿಯಾದಲ್ಲಿ ಹುಟ್ಟಿದೆ.

ಬಿಳಿ ಹಾಗೂ ನೀಲಿ ನೈಲ್‌ ಉಪನದಿಗಳು ಸುಡಾನ್‌ನ ಖಾರ್ಟುಂ ಎಂಬಲ್ಲಿ ಸಂಗಮವಾಗುತ್ತವೆ. ಅಲ್ಲಿಂದ ಇದು ಉತ್ತರಕ್ಕೆ ಹರಿದು ಈಜಿಪ್ಟ್‌ ಮೂಲಕ ಮೆಡಿಟರೇನಿಯನ್‌ ಸಮುದ್ರವನ್ನು ಸೇರುತ್ತದೆ.

ಇಡೀ ಇತಿಹಾಸದುದ್ದಕ್ಕೂ ನೈಲ್‌ ಜನರಿಗೆ ಜೀವನದಿ ಎನಿಸಿಕೊಂಡಿದೆ. ಸುಮಾರು 5000 ವರ್ಷಗಳ ಹಿಂದೆ ಪ್ರಾಚೀನ ಈಜಿಪ್ಟ್‌ ಜನರು ಕುಡಿಯುವ ನೀರು, ಆಹಾರ ಹಾಗೂ ಸಾಗಣೆಗೆ ಈ ನದಿಯನ್ನು ಅವಲಂಬಿಸಿದ್ದರು. ಬೆಳೆ ಬೆಳೆಯಲು ಈ ನದಿಯ ಮುಖಜ ಭೂಮಿಯ ಮಣ್ಣು ಅತ್ಯಂತ ಫಲವತ್ತಾದದ್ದು.

ಆದರೆ ಈಜಿಪ್ಟ್‌ ನಿವಾಸಿಗಳು ಇಂತಹ ಮರುಭೂಮಿಯಲ್ಲಿ ಹೇಗೆ ಬೆಳೆ ತೆಗೆಯುತ್ತಿದ್ದರು ಎಂದು ಅಚ್ಚರಿ ಆಗಬಹುದಲ್ಲವೇ? ಈ ನದಿಗೆ ಪ್ರತಿ ವರ್ಷ ಆಗಸ್ಟ್‌ನಲ್ಲಿ ಪ್ರವಾಹ ಬರುತ್ತದೆ. ಆಗ ಪೌಷ್ಟಿಕಾಂಶಗಳಿಂದ ಕೂಡಿದ ಫಲವತ್ತಾದ ಮಣ್ಣು ನದಿಯ ದಂಡೆಗೆ ಬಂದು ಬೀಳುತ್ತದೆ. ಈ ತೇವದ ಮಣ್ಣು ಬೆಳೆಗೆ ಅತ್ಯಂತ ಯೋಗ್ಯವಾದದ್ದು.

ಆದರೆ ಈಗ ಪ್ರತಿ ವರ್ಷವೂ ನೈಲ್‌ಗೆ ನೆರೆ ಬರುವುದಿಲ್ಲ. ಏಕೆಂದರೆ 1970ರಲ್ಲಿ ಅಸ್ವಾನ್‌ ಅಣೆಕಟ್ಟನ್ನು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಅದು ಹರಿಯುವ ನೀರಿನ ಮೇಲೆ ನಿಯಂತ್ರಣವಿಟ್ಟಿದೆ. ಅಣೆಕಟ್ಟಿನ ನೀರನ್ನು ವಿದ್ಯುತ್‌ ಉತ್ಪಾದನೆಗೆ, ಬೆಳೆಗೆ ಉಣಿಸಲು ಹಾಗೂ ಜನರಿಗೆ ಕುಡಿಯುವ ನೀರು ಒದಗಿಸಲು ಬಳಸಲಾಗುತ್ತಿದೆ.

ಈಜಿಪ್ಟ್‌ನ ಶೇ. 95ರಷ್ಟು ಮಂದಿ ಈ ನದಿಯ ನೀರನ್ನು ಅವಲಂಬಿಸಿದ್ದಾರೆ. ನದಿಯಲ್ಲಿ ಹಾಗೂ ದಡದಲ್ಲಿ ವಿವಿಧ ಜಾತಿಯ ಮೀನು, ಹಕ್ಕಿಗಳು, ಆಮೆ, ಹಾವು, ನೀರಾನೆ, ಮೊಸಳೆಗಳು ವಾಸಿಸುತ್ತಿವೆ.

ಪ್ರತಿ ವರ್ಷ ಆಗಸ್ಟ್‌ನಲ್ಲಿ ಈಜಿಪ್ಟ್‌ ಜನರು ‘ವಫಾ ಅನ್‌ ನಿಲ್‌’ ಎಂಬ 15 ದಿನಗಳ ರಜೆ ಪಡೆದು ಪ್ರಾಚೀನ ಕಾಲದಲ್ಲಿ ನದಿಗೆ ಬರುತ್ತಿದ್ದ ಪ್ರವಾಹದ ಸಂಭ್ರಮವನ್ನು ಆಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT