ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕದ ಹೊರೆಯಿಲ್ಲ, ಪಠ್ಯೇತರ ಚಟುವಟಿಕೆಯೇ ಎಲ್ಲ

Last Updated 24 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಶೈಕ್ಷಣಿಕ ಇಲಾಖೆಯ ಆದೇಶದಂತೆ ತಿಂಗಳ ಕೊನೆಯ ಶನಿವಾರವನ್ನು ‘ನೋ ಬ್ಯಾಗ್ ಡೇ’ ಎಂಬುದಾಗಿ ಆಚರಿಸಲಾಗುತ್ತಿದೆ. ಈ ದಿನದ ಆಚರಣೆಯ ಮುಖ್ಯ ಉದ್ದೇಶ ಮಕ್ಕಳಲ್ಲಿ ಪುಸ್ತಕ– ನೋಟಬುಕ್‌ನ ಬ್ಯಾಗ್ ಹೊರೆಯನ್ನು ಒಂದು ದಿನದ ಮಟ್ಟಿಗಾದರೂ ಕಡಿತಗೊಳಿಸುವುದು ಮತ್ತು ಪಠ್ಯೇತರ ಚಟುವಟಿಕೆಗಳನ್ನು ಮಕ್ಕಳಲ್ಲಿ ಮಾಡಿಸುವುದರ ಮೂಲಕ ಶಿಕ್ಷಣದ ನೈಜ ಉದ್ದೇಶವನ್ನು ಮಕ್ಕಳಲ್ಲಿ, ಪೋಷಕರಲ್ಲಿ ಮತ್ತು ಶಿಕ್ಷಕರಲ್ಲಿ ಜಾಗೃತಗೊಳಿಸುವುದು.

ಒತ್ತಡದಿಂದ ಮುಕ್ತ

ಹೆಸರೇ ತಿಳಿಸುವಂತೆ ತಿಂಗಳ ಕೊನೆಯ ಶನಿವಾರ ಮಕ್ಕಳು ಪಠ್ಯಕ್ಕೆ ಸಂಬಂಧಿಸಿದ ಯಾವುದೇ ಪುಸ್ತಕಗಳನ್ನು ಕೊಂಡೊಯ್ಯದೆ ಶಾಲೆಗಳಿಗೆ ತೆರಳಿ ಅಲ್ಲಿ ಶಿಕ್ಷಕರು ಆಯೋಜಿಸುವ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುರ ಮೂಲಕ ಪಠ್ಯಕ್ರಮದ ಅಥವಾ ಪರೀಕ್ಷೆಗಳ ಒತ್ತಡದಿಂದ ಹೊರಬರುವುದು. ಇಲಾಖೆಯ ಉದ್ದೇಶ ಸಮಂಜಸವೂ ಮತ್ತು ಪ್ರಸ್ತುತ ಸಂದರ್ಭಕ್ಕೆ ತಕ್ಕದಾಗಿಯೂ ಆಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕೇವಲ ಹೆಚ್ಚೆಚ್ಚು ಅಂಕಗಳನ್ನು ಪಡೆಯಲಷ್ಟೇ ಸೀಮಿತವಾಗಿರುವುದರಿಂದ ಮಕ್ಕಳ ಮೇಲೆಯೂ ಮತ್ತು ಶಿಕ್ಷಕರ ಮೇಲೆಯೂ ಪಠ್ಯಕ್ರಮದ ಒತ್ತಡ ಅತಿಯಾಗಿರುತ್ತದೆ. ಒಂದನೇ ತರಗತಿಯಿಂದಲೇ ಆರಂಭವಾಗುವ ಕಠಿಣ ಪಠ್ಯಕ್ರಮಗಳನ್ನು ಬೋಧಿಸುವ ಒತ್ತಡ ಶಿಕ್ಷಕರಿಗಾದರೆ, ಅದನ್ನು ಕಲಿಯುವ ಒತ್ತಡ ಮಕ್ಕಳದ್ದು. ಬಿಡುವಿಲ್ಲದ ಜೀವನಕ್ರಮಕ್ಕೆ ಹೊಂದುವಂತಹ ಶಿಕ್ಷಣಕ್ರಮವು ಮಗುವಿನಲ್ಲಿರುವ ಆಂತರಿಕವಾಗಿರುವ ಸುಪ್ತಪ್ರತಿಭೆಗಳನ್ನು ಹೊರತರುವಲ್ಲಿ ಸಂಪೂರ್ಣವಾಗಿ ವಿಫಲತೆಯನ್ನು ಅನುಭವಿಸುತ್ತದೆ. ಸರ್ಕಾರದ ಪ್ರತಿಭಾ ಕಾರಂಜಿ, ಆಟೋಟಗಳಂತಹ ಸ್ಪರ್ಧೆಗಳಿದ್ದರೂ ಕೂಡ ಅಲ್ಲಿ ಆಯ್ದ ಮಕ್ಕಳಿಗಷ್ಟೇ ಅವಕಾಶ ನೀಡಬಹುದು. ಹಾಗಾಗಿ ಎಲ್ಲ ಮಕ್ಕಳಲ್ಲಿಯೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮನೋಭಾವವಿದ್ದಾಗ ಇಂತಹ ಚಟುವಟಿಕೆಯ ದಿನಗಳು ಸಹಾಯಕವಾಗುತ್ತವೆ.

ತಿಂಗಳಲ್ಲಿ ಒಂದು ದಿನವನ್ನು ಇಂತಹ ಚಟುವಟಿಕೆಗಳಿಗೆ ಮೀಸಲಿಡುವುದರಿಂದ ಅವಕಾಶ ವಂಚಿತರಾದ ಮಕ್ಕಳ ಪ್ರತಿಭೆಗಳು ಮತ್ತು ಆಸಕ್ತಿಗಳು ಹೊರಹೊಮ್ಮುವುದು ಸಾಧ್ಯವಾಗುತ್ತದೆ. ಅಲ್ಲದೆ ಶಿಕ್ಷಣದ ಹೊಸಮುಖವೊಂದನ್ನು ಅಳವಡಿಸಿಕೊಳ್ಳಲೂ ಅವಕಾಶ ಸಿಗುತ್ತದೆ.
ಈ ದಿನ ಸಮಂಜಸವಾದ ಬಳಕೆಗೆ ಒಂದು ನಿರ್ದಿಷ್ಟ ರೂಪುರೇಷೆಯ ಅವಶ್ಯಕತೆಯಿದೆ. ಚಟುವಟಿಕೆಗಳಲ್ಲಿ ಹಲವಾರು ವಿಧಗಳಿವೆ. ವಸ್ತುಗಳ ಲಭ್ಯತೆ, ಅನುಕೂಲತೆ, ಮಕ್ಕಳ ಬೌದ್ಧಿಕ ಮಟ್ಟ ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಚಟುವಟಿಕೆಗಳನ್ನು ಮಾದರಿಗೊಳಿಸಬೇಕಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಎಲ್ಲಾ ಶಾಲೆಗಳಲ್ಲಿಯೂ ಅವಶ್ಯವಾಗಿ ಅನುಸರಿಸಬೇಕಾದ ನಿಯಮವಿದು.

ಕೆಲವು ಚಟುವಟಿಕೆಗಳು

ಪಠ್ಯೇತರ ಚಟುವಟಿಕೆಗಳಲ್ಲಿ ಬೌದ್ಧಿಕ ಬೆಳವಣಿಗೆಗೆ ಸಹಾಯಕವಾಗಬಲ್ಲ ಭಾಷಣ ಸ್ಪರ್ಧೆಗಳು, ರಸಪ್ರಶ್ನೆ, ಚಿತ್ರಕಲೆ, ಆಶುಭಾಷಣ, ಪ್ರಬಂಧ ಸ್ಪರ್ಧೆ, ನೆನೆಪಿನ ಶಕ್ತಿಯ ಸ್ಪರ್ಧೆಗಳು ಇತ್ಯಾದಿಗಳನ್ನು ಆಯೋಜಿಸಬಹುದು.

ಸಾಂಸ್ಕೃತಿಕ ಚಟುವಟಿಕೆಗಳಾದ ನೃತ್ಯ, ಸಂಗೀತ, ನಾಟಕಗಳು, ಕಾವ್ಯವಾಚನಗಳು, ಅಭಿನಯ, ಗೀತೆಗಳು, ಪ್ರಹಸನ, ಕಿರುನಾಟಕಗಳು, ಯಕ್ಷಗಾನ, ಜನಪದ ವಿಶೇಷಗಳಾದ ಹುಲಿವೇಷ, ಬುಡಕಟ್ಟು ನೃತ್ಯಗಳು ಇತ್ಯಾದಿಗಳನ್ನು ಆಯೋಜಿಸಬಹುದು.

ಕರಕುಶಲತೆಗೆ ಸಂಬಂಧಿಸಿದಂತೆ ಮಾದರಿಗಳ ತಯಾರಿಕೆ, ಮಣ್ಣಿನ ಆಕೃತಿಗಳ ತಯಾರಿಕೆ, ಗುಡಿ ಕೈಗಾರಿಕೆಗಳಂತಹ ಕರಕುಶಲ ಚಟುವಟಿಕೆಗಳನ್ನು ಕಲಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು.

ತಜ್ಞರನ್ನು ಆಹ್ವಾನಿಸಿ ಗುಡಿ ಕೈಗಾರಿಕೆಗಳು, ಮಕ್ಕಳ ಆರೋಗ್ಯವನ್ನು ಕಾಯ್ದುಕೊಳ್ಳುವ, ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ, ಆಧುನಿಕ ಕೃಷಿ ಉಪಕರಣಗಳು, ಕೃಷಿ ವಿಧಾನಗಳ ಕುರಿತು, ವೃತ್ತಿಮಾಹಿತಿಯನ್ನು ಒದಗಿಸುವಂತಹ ಕಾರ್ಯಕ್ರಮಗಳನ್ನು ಉಪನ್ಯಾಸಗಳ ಮೂಲಕ ಮಕ್ಕಳಿಗೆ ನೀಡಬಹುದು.

ಪರೀಕ್ಷಾ ಭಯವನ್ನು ಕಡಿಮೆಗೊಳಿಸುವ, ಓದುವ ವಿಧಾನವನ್ನು ತಿಳಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು.

ಪರಿಸರ ಸಂರಕ್ಷಣಾ ಆಂದೋಲನಗಳಾದ ಸ್ವಚ್ಛ ಭಾರತ ಅಭಿಯಾನ, ಪ್ಲಾಸ್ಟಿಕ್ ಮುಕ್ತ ಪರಿಸರದಂತಹ ಅಭಿಯಾನಗಳನ್ನು ಹಮ್ಮಿಕೊಳ್ಳುವುದು.

ಮಕ್ಕಳಲ್ಲಿ ಮೌಲ್ಯಗಳನ್ನು ಮತ್ತು ನೀತಿಗಳನ್ನು ತುಂಬಬಲ್ಲಂತಹ ಮಕ್ಕಳ ಕಿರುಚಿತ್ರಗಳನ್ನು, ನಾಟಕಗಳನ್ನು ಪ್ರೊಜೆಕ್ಟರ್‌ಗಳ ಸಹಾಯದಿಂದ ಪ್ರದರ್ಶಿಸುವುದು.

ಮನೋರಂಜನಾ ಆಟೋಟಗಳನ್ನು ಆಡಿಸುವುದು.

ಎಲ್ಲಾ ಹೊಸ ನಿಯಮಗಳು ಅಥವಾ ಪ್ರಯೋಗಗಳು ತಮ್ಮದೇ ಆದ ಸಾಧಕ-ಬಾಧಕಗಳನ್ನು ಹೊಂದಿರುತ್ತವೆ. ಈ ಪ್ರಯೋಗವೂ ಕೂಡ ಹಲವಷ್ಟು ಪರ-ವಿರೋಧಗಳನ್ನು ಎದುರಿಸಬೇಕಾಗುತ್ತಿದೆ.

ಅನಾನುಕೂಲಗಳು

ಪ್ರೌಢಶಾಲೆಗಳಲ್ಲಿ ಪಠ್ಯಕ್ರಮದ ಒತ್ತಡವಿರುವುದರಿಂದ ಅಲ್ಲಿನ ವ್ಯವಸ್ಥೆಗೆ ಈ ಕ್ರಮಗಳು ಸಮಯ ವ್ಯರ್ಥವೆನಿಸುತ್ತವೆ.

ತಿಂಗಳಲ್ಲಿ ಕೇವಲ ಒಂದು ದಿನವಾದ್ದರಿಂದ ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶವಿರದು.

ಎಲ್ಲಾ ಶಾಲೆಗಳಲ್ಲಿಯೂ ಕೂಡ ಒಂದೇ ತೆರನಾದ ರೂಪುರೇಷೆಗಳನ್ನು ಸಿದ್ಧಪಡಿಸಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಹೆಚ್ಚು ಸೂಕ್ತವೆನಿಸುತ್ತವೆ.

ಪ್ರಯೋಜನಗಳು

ದೈನಂದಿನ ಚಟುವಟಿಕೆಗಳಿಂದ ಬೇಸರಿಸಿದ ಮಕ್ಕಳಿಗೆ ಉತ್ತಮವಾದ ಅನುಭವನ್ನು ಒದಗಿಸುತ್ತದೆ.

ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಮುಕ್ತವಾದ ಅವಕಾಶವನ್ನು ಒದಗಿಸುತ್ತದೆ.

ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ತುಂಬುತ್ತದೆ.

ಮಕ್ಕಳ ಬೌದ್ಧಿಕ ವಿಕಾಸಕ್ಕೂ ಸಹಾಯವಾಗುತ್ತದೆ.

ಮಕ್ಕಳ ಸರ್ವತೋಮುಖ ಬೆಳವಣಿಗೆಯೆಂಬ ಶಿಕ್ಷಣದ ನೈಜ ಅರ್ಥವನ್ನು ಸಾಕಾರಗೊಳಿಸುತ್ತವೆ.

ಜೀವನ ಕೌಶಲಗಳ ಬಗೆಗೆ ಮಾಹಿತಿಗಳನ್ನು ಪಡೆದುಕೊಳ್ಳುವ ಅವಕಾಶವನ್ನು ಈ ಕಾರ್ಯಕ್ರಮ ಒದಗಿಸುತ್ತದೆ.

ಮಕ್ಕಳನ್ನು ಕ್ರಿಯಾಶೀಲರನ್ನಾಗಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT