ಯಾವುದೂ ಕೊನೆಯ ಪರೀಕ್ಷೆ ಅಲ್ಲ!

7

ಯಾವುದೂ ಕೊನೆಯ ಪರೀಕ್ಷೆ ಅಲ್ಲ!

Published:
Updated:
Prajavani

ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ಮಕ್ಕಳಿರುವ ಮನೆಗಳಲ್ಲಿ ತರ್ತುಪರಿಸ್ಥಿತಿ ಘೋಷಣೆಯಾಗುತ್ತದೆ. ಮಕ್ಕಳು ಮೊಬೈಲ್ ಹಿಡಿಯಲಿ, ಟಿವಿ ನೋಡುತ್ತಿರಲಿ, ಆಟವಾಡುವುದಕ್ಕೆ ಹೊರಡಲಿ, ಏನಾದರೂ ತಿನ್ನಲು ಆಸೆಪಡಲಿ, ಕೊನೆಗೆ ಟಾಯ್ಲೆಟ್, ಸ್ನಾನದ ಮನೆಗಳಲ್ಲಿ ಕೆಲವು ನಿಮಿಷ ಹೆಚ್ಚೇ ಇರಲಿ - ಪೋಷಕರದ್ದು ಒಂದೇ ತಗಾದೆ ‘ಪರೀಕ್ಷೆ ಹತ್ತಿರ ಬರುತ್ತಾ ಇದೆ. ಸಮಯ ಹಾಳುಮಾಡಬೇಡ’.

ಇಷ್ಟೇ ಅಲ್ಲ ಶಾಲೆಗಳಲ್ಲಿ, ಟಿವಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎನ್ನುವ ಬಗೆಗೆ ವಿವರವಾದ ಸಲಹೆಗಳನ್ನು ನೀಡುತ್ತಾ ಕೊನೆಯಲ್ಲಿ ಪರೀಕ್ಷೆಗಳ ಬಗೆಗೆ ಮಕ್ಕಳು ಆತಂಕಪಟ್ಟುಕೊಳ್ಳಬಾರದು ಎಂದೂ ಉಪದೇಶಿಸಲಾಗುತ್ತದೆ. ಮಾನವನ ಮೆದುಳು ವಿಚಿತ್ರವಾಗಿ ಕೆಲಸ ಮಾಡುತ್ತದೆ. ಯಾವುದರ ಬಗೆಗೆ ಆತಂಕಪಟ್ಟುಕೊಳ್ಳಬಾರದು ಎಂದು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇವೆಯೋ ಅಂತಹ ನೆನಪೇ ಹೆಚ್ಚಿನ ಆತಂಕವನ್ನು ಸೃಷ್ಟಿಸುತ್ತದೆ. ಜೊತೆಗೆ ಮಕ್ಕಳ ವರ್ಷದ ಶ್ರಮ ಮತ್ತು ಭವಿಷ್ಯ 3 ಗಂಟೆಗಳ ಪರೀಕ್ಷೆಯ ಮೇಲೆ ನಿರ್ಧಾರವಾಗುವಾಗ ಆತಂಕಪಟ್ಟುಕೊಳ್ಳಬೇಡಿ ಎನ್ನುವ ಮಾತುಗಳಿಗೆ ಅರ್ಥವಿದೆಯೇ? ಹೃದಯಕ್ಕೆ ನಾಟದ ಇಂತಹ ಮಾತುಗಳನ್ನು ಪೋಷಕರು ಮತ್ತೆಮತ್ತೆ ಹೇಳುವುದರ ಸೂಚನೆ ಏನು ಗೊತ್ತೇ? ಪರೀಕ್ಷೆಗಳ ಬಗೆಗೆ ಮಕ್ಕಳಿಗಿಂತ ಪೋಷಕರಿಗೆ ಹೆಚ್ಚಿನ ಆತಂಕವಿರುತ್ತದೆ! ಆತಂಕ, ಬೇಸರ, ಹತಾಶೆಗಳನ್ನೆಲ್ಲಾ ನಿಭಾಯಿಸಲು ಮಕ್ಕಳಿಗೆ ಮಾದರಿಯಾಗಬೇಕಾಗಿರುವ ಪೋಷಕರೇ ತಮ್ಮ ಆತಂಕವನ್ನು ಯಾವಾಗಲೂ ಹೀಗೆ ಹೊರಹಾಕುತ್ತಿದ್ದರೆ ಮಕ್ಕಳಿಂದ ಏನನ್ನು ನಿರೀಕ್ಷಿಸಬಹುದು?

ಪೋಷಕರೇನು ಮಾಡಬಹುದು?
ಪರೀಕ್ಷೆಗಳಿಗೆ ಹೆಚ್ಚಿನ ಸಿದ್ಧತೆ ಮತ್ತು ಸಮಯದ ಉಪಯುಕ್ತವಾದ ಬಳಕೆಯ ಅಗತ್ಯವಿದೆ ಎನ್ನುವುದು ನಿಜ. ಇದನ್ನು ಸಾಧಿಸಲು ತುರ್ತುಪರಿಸ್ಥಿತಿ ಘೋಷಣೆ ಮಾಡುವ ಅಗತ್ಯವೇನಿದೆ? ಪೋಷಕರು ಮಕ್ಕಳ ಜೊತೆ ಸಮಯವನ್ನು ಹೇಗೆ ಉಪಯೋಗಿಸಬೇಕು ಎನ್ನುವ ಮುಕ್ತ ಚರ್ಚೆಯನ್ನು ಮಾಡಿ, ಮಕ್ಕಳಿಗೆ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಹಕರಿಸಬೇಕು. ಮಕ್ಕಳಿಗೆ ಸ್ವಾತಂತ್ರ್ಯ ನೀಡಿದರೆ ಅವರು ಅದನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಪೋಷಕರಿಗೆ ಅನ್ನಿಸಬಹುದು. ಇದಕ್ಕೆ ಪರಿಹಾರ ಪೋಷಕರ ಅಧಿಕಾರವನ್ನು ಹೆಚ್ಚಿಸುವುದರಲ್ಲಿಲ್ಲ. ಸ್ವಾತಂತ್ರ್ಯದ ಜೊತೆಗೇ ಚಲಿಸುವ ಜವಾಬ್ದಾರಿಯನ್ನೂ ಮಕ್ಕಳಿಗೆ ಕಲಿಸಬೇಕಾಗುತ್ತದೆ.

ಮಕ್ಕಳಿಗೆ ಮಾತ್ರ ಅನ್ವಯವಾಗುವಂತಹ ವಿಶೇಷ ನಿಯಮಗಳನ್ನು ಮಾಡಿದರೆ ಜಾರಿ ಮಾಡುವುದು ಕಷ್ಟ. ಟಿವಿ, ಮೊಬೈಲ್ ಬಳಕೆ, ತಿರುಗಾಟ, ಊಟ–ತಿಂಡಿಗಳ ವಿಚಾರದಲ್ಲಿ ಮಕ್ಕಳಿಗಾಗಿ ಮಾಡಿದ ನಿಯಮಗಳನ್ನು ಮನೆಯವರೆಲ್ಲಾ ಪಾಲಿಸಬೇಕು. ಕೊನೆಗೆ ಅಂಕಗಳು ಕಡಿಮೆ ಬಂದರೆ ನಿನಗಾಗಿ ಏನೆಲ್ಲಾ ಮಾಡಿದೆವು ಎಂದು ದುರಂತ ನಾಯಕರ ಮನಃಸ್ಥಿತಿಗೆ ಬರಬೇಕಾಗಿಲ್ಲ. ನಮ್ಮ ಮಕ್ಕಳಿಗೆ ನಾವು ಮಾಡುವುದು ತ್ಯಾಗವಲ್ಲ, ಸ್ವಾರ್ಥ!

ಆತಂಕ ಮಕ್ಕಳ ಮನಸ್ಸಿನಲ್ಲಿ ಮಾತ್ರ ಇರುವುದಿಲ್ಲ. ಇಡೀ ಮನೆಯ ವಾತಾವರಣದಲ್ಲಿಯೇ ಹರಿದಾಡುತ್ತಿರುತ್ತದೆ ಮತ್ತು ಗೊತ್ತಿಲ್ಲದಂತೆಯೇ ಒಬ್ಬರಿಂದ ಒಬ್ಬರಿಗೆ ವರ್ಗಾವಣೆಯಾಗುತ್ತಿರುತ್ತದೆ. ಹಾಗಾಗಿ ಪರೀಕ್ಷೆಯ ಸಮಯದಲ್ಲಿಯೂ ಕುಟುಂಬದವರೆಲ್ಲಾ ಒಟ್ಟಾಗಿ ಖುಷಿಯಾಗಿ ಸಮಯ ಕಳೆಯುವ ದಾರಿಗಳನ್ನು ಹುಡುಕಿಕೊಳ್ಳದಿದ್ದರೆ ಮಕ್ಕಳಿಗೆ ಪರೀಕ್ಷೆ ಭಾರೀ ಹೊರೆ ಎನ್ನಿಸುವುದನ್ನು ತಪ್ಪಿಸಲಾಗುವುದಿಲ್ಲ. ಸಮಯದ ಬಳಕೆಗೆ ನಿಯಮಗಳನ್ನು ನಿರ್ಧರಿಸಿಕೊಂಡ ಮೇಲೆ ಉಳಿದ ಸಮಯದಲ್ಲಿ ಮಕ್ಕಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲೇಬೇಕು.

ಇಡೀ ಮನೆಯಲ್ಲಿ ಆತಂಕ ಹಬ್ಬಿಕೊಂಡಿದೆ ಎನ್ನುವುದಕ್ಕೆ ಇನ್ನೊಂದು ಸರಳ ಸೂಚನೆಯೆಂದರೆ ಮಕ್ಕಳ ಪೋಷಕರ ನಡುವಿನ ಮಾತುಗಳು ಹದ ತಪ್ಪುವುದು. ಕೆಲವೊಮ್ಮೆ ಪೋಷಕರು ತಮ್ಮತಮ್ಮಲ್ಲೇ ನಿನ್ನಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ಕಚ್ಚಾಡುತ್ತಿದ್ದರೆ ಅದೂ ಕೂಡ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಇವೆಲ್ಲವನ್ನೂ ಕಡೆಗಣಿಸಿ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ನಿರೀಕ್ಷೆ ಮಾಡುವುದು ಅವಾಸ್ತವಿಕ. ಸೌಹಾರ್ದಯುತವಾದ ಕೌಟುಂಬಿಕ ವಾತಾವರಣ ಮಕ್ಕಳ ಮಾನಸಿಕ ಸಮತೋಲನಕ್ಕೆ ಅತ್ಯವಶ್ಯಕ.

* ಮಕ್ಕಳು ಗಮನಿಸಬೇಕಾಗಿರುವುದು
ಪರೀಕ್ಷೆಗಳು ಮಕ್ಕಳಿಗೆ ಬಹಳ ಪ್ರಮುಖ ಘಟ್ಟಗಳಾಗಿರುವುದರಿಂದ ಅವುಗಳನ್ನು ಎದುರಿಸುವುದಕ್ಕೆ ಸ್ವಲ್ಪ ಮಟ್ಟಿನ ಭಯ ಮತ್ತು ಆತಂಕ ಇರುವುದು ಸಹಜ. ಇವು ಕೇವಲ ನಿಮ್ಮ ದೌರ್ಬಲ್ಯಗಳಲ್ಲಿ ನೆನಪಿರಲಿ. ಎಲ್ಲಾ ವಯಸ್ಸಿನವರಿಗೂ ಜೀವನದ ಪ್ರಮುಖ ಘಟ್ಟಗಳನ್ನು ಎದುರಿಸುವಾಗ ಆತಂಕಗಳು ಎದುರಾಗುತ್ತವೆ. ನಮ್ಮ ಮೆದುಳಿನ ರಚನೆಯೇ ಹಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಕಲಿಯಬೇಕಾಗಿರುವುದು ಭಯ ಆತಂಕಗಳನ್ನು ಮೀರುವುದನ್ನಲ್ಲ. ಬದಲಾಗಿ ಅವುಗಳು ನಮ್ಮ ಹಿಡಿತವನ್ನು ಮೀರಿ ಫಲಿತಾಂಶಗಳ ಮೇಲೆ ಪರಿಣಾಮ ಬೀರದಂತೆ ನಿಭಾಯಿಸುವುದನ್ನು ಕಲಿಯಬೇಕು.

ಜೀವನದಲ್ಲಿ ಯಾವುದೂ ಅಂತಿಮ ಪರೀಕ್ಷೆಯಲ್ಲ ಎಂದು ನೆನಪಿಡಿ. ಅಂಕಗಳು ಎಷ್ಟೇ ಪ್ರಮುಖ ಎನ್ನಿಸಿದರೂ ಅವು ನಿಮ್ಮ ಇಡೀ ವ್ಯಕ್ತಿತ್ವವನ್ನು ಅಳೆಯುವ ಮಾನದಂಡವಲ್ಲ.

ಏಕಾಗ್ರತೆ ಕಷ್ಟ ಎನ್ನಿಸಿದರೆ ಅದು ನನ್ನ ಕೊರತೆ ಎಂದು ನಿಮ್ಮನ್ನು ನೀವು ಶಪಿಸಿಕೊಳ್ಳಬೇಕಾಗಿಲ್ಲ. ಮೊಬೈಲ್‌ನಲ್ಲಿ ಆಟಗಳನ್ನು ಗಂಟೆಗಟ್ಟಲೆ ಏಕಾಗ್ರತೆಯಿಂದ ಆಡುತ್ತಿದ್ದೀರಿ ಎಂದ ಮೇಲೆ ನಿಮ್ಮ ಮೆದುಳಿಗೆ ಸಂಪೂರ್ಣವಾದ ಶಕ್ತಿಯಿದೆ ಎಂದಾಯಿತಲ್ಲವೇ? ಈ ಶಕ್ತಿಯನ್ನು ವಿದ್ಯಾಭ್ಯಾಸಕ್ಕೆ ಬಳಸಲಾಗುತ್ತಿಲ್ಲ ಎಂದರೆ ನಿಮಗೆ ಆಸಕ್ತಿಯ ಕೊರತೆ ಇದೆ ಎಂದರ್ಥ. ಹೆಚ್ಚಿನ ಅಂಕ ಗಳಿಸುವವರಿಗೆ ಮತ್ತು ಕಡಿಮೆ ಅಂಕ ಗಳಿಸುವವರಿಗೆ ಇರುವ ವ್ಯತ್ಯಾಸ ಅವರ ಬುದ್ಧಿವಂತಿಕೆಯಲ್ಲಿಲ್ಲ. ಆದರೆ ಅವರವರ ಆಸಕ್ತಿ ಮತ್ತು ಪರಿಶ್ರಮದಲ್ಲಿದೆ. ನಿಮಗೆ ಆಸಕ್ತಿ ಇರುವ ವಿಚಾರಗಳಲ್ಲಿ ನೀವು ಶ್ರಮಪಡಲು ಸಿದ್ಧರಿರುತ್ತೀರಿ ಎಂದ ಮೇಲೆ ಆಸಕ್ತಿ ಮತ್ತು ಒಳಗೊಳ್ಳುವಿಕೆಗಳು ಮಾತ್ರ ನಿಮ್ಮ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ ಎಂದಾಯಿತು. ಪಠ್ಯಗಳನ್ನು ಆಸಕ್ತಿದಾಯಕವಾಗಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ.

ಪಠ್ಯಗಳನ್ನು ಓದುವ, ಜ್ಞಾಪಕದಲ್ಲಿಟ್ಟುಕೊಳ್ಳುವ ವಿಧಾನಗಳು ಎಲ್ಲರಿಗೂ ಒಂದೇ ಆಗಿರುವುದಕ್ಕೆ ಸಾಧ್ಯವಿಲ್ಲ. ಶಾಲೆಯಲ್ಲಿ ಗುಂಪಿನಲ್ಲಿ ಕಲಿಸಬೇಕಾಗಿರುವುದರಿಂದ ಒಂದು ಸಾಮಾನ್ಯ ಮಾದರಿಯನ್ನು ಅನುಸರಿಸಲಾಗುತ್ತದೆ. ವಿದ್ಯಾರ್ಥಿಗಳು ಕೆಲವೊಂದು ಪ್ರಯೋಗಗಳನ್ನು ಮಾಡುತ್ತಾ ತಮಗೆ ಹೊಂದುವ ವಿಧಾನಗಳನ್ನು ಹುಡುಕಿಕೊಳ್ಳಬೇಕು. ಇದಕ್ಕೆ ಸಮಯ, ಸಹನೆ, ಎಚ್ಚರಗಳ ಅಗತ್ಯವಿದೆ. ಶಿಕ್ಷಕರು ಮತ್ತು ಪೋಷಕರು ಕೂಡ ತಮ್ಮದೇ ವಿಧಾನಗಳನ್ನು ಒತ್ತಾಯದಿಂದ ಹೇರದೆ ಮಕ್ಕಳ ಸ್ವಂತಿಕೆಯ ಹುಡುಕಾಟದಲ್ಲಿ ಸಹಕರಿಸಬೇಕಾಗುತ್ತದೆ.

ಎಲ್ಲಾ ವಿಷಯಗಳಲ್ಲಿಯೂ ಹೆಚ್ಚಿನ ಅಂಕ ಗಳಿಸುವುದು ಎಲ್ಲರಿಗೂ ಸಾಧ್ಯವಾಗದೇ ಇರಬಹುದು. ಹಾಗಾಗಿ ಒಟ್ಟು ಅಂಕಗಳಿಕೆಯ ಬಗೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ. ಪದವಿ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸಗಳಲ್ಲಿ ನೀವು ಆರಿಸಿಕೊಳ್ಳಬೇಕೆಂದಿರುವ ವಿಷಯಗಳ ಬಗೆಗೆ ಹೆಚ್ಚಿನ ಗಮನ ಹರಿಸಿ. ಅಂತಹ ವಿಷಯಗಳನ್ನು ಪ್ರೌಢಶಾಲೆಯಲ್ಲಿರುವಾಗಲೇ ಗುರುತಿಸಿಕೊಳ್ಳುವುದು ಕಷ್ಟವಾಗುತ್ತಿದ್ದರೆ ಅದೂ ಕೂಡ ಸಹಜವೇ. ಹೆಚ್ಚಿನ ಮಾಹಿತಿ ಸಂಗ್ರಹಣೆ ಮಾಡುತ್ತಾ ಹೋದಂತೆ ನಿಮ್ಮ ಆಯ್ಕೆಗಳಿಗೆ ಖಚಿತತೆ ಬರುತ್ತದೆ.

ಯಾವ ತಜ್ಞರು ಏನೇ ಹೇಳಲಿ ಸಂಪೂರ್ಣ ಆತಂಕರಹಿತ ಸ್ಥಿತಿ ಕೇವಲ ಕಲ್ಪನೆ ಮಾತ್ರ. ಭಯ ಆತಂಕವೇ ನಿಮ್ಮನ್ನು ಎಚ್ಚರಿಕೆಯ ಸ್ಥಿತಿಯಲ್ಲಿಡುತ್ತದೆ. ಆದರೆ ಇವು ನಿಮ್ಮ ಬುದ್ಧಿ ನೆನಪುಗಳನ್ನು ಕುಂಠಿತಗೊಳಿಸುತ್ತಿದೆ ಎನ್ನುವುದು ನಿಮ್ಮ ಹಿಡಿತವನ್ನು ಮೀರುತ್ತಿದೆ ಎನ್ನುವುದಕ್ಕೆ ಸೂಚನೆಯಾಗಿರುತ್ತದೆ. ಆಗ ನಿಮಗೆ ತಜ್ಞರ ಸಹಾಯ ಬೇಕಾಗಬಹುದು.

ಋಣಾತ್ಮಕ ಯೋಚನೆಗಳನ್ನು ಹೊಡೆದೋಡಿಸಿ, ಧನಾತ್ಮಕ ಯೋಚನೆಗಳನ್ನು ಮಾಡಿ ಎಂದು ಹೇಳುವುದು ಕೂಡ ಅವಾಸ್ತವಿಕವೇ. ನಿಮಗೆ ಋಣಾತ್ಮಕ ಯೋಚನೆಗಳು ಬರುತ್ತಿದ್ದರೆ ಅದೂ ಕೂಡ ನಿಮ್ಮ ದೌರ್ಬಲ್ಯವಲ್ಲ. ಜೀವನದ ಪ್ರಮುಖ ಘಟ್ಟಗಳಲ್ಲಿರುವಾಗ ಮುಂದೇನಾಗಬಹುದೋ ಎನ್ನುವ ಆತಂಕ ನಮ್ಮೆಲ್ಲರ ಸಾಮಾನ್ಯ ಮನಃಸ್ಥಿತಿ. ಋಣಾತ್ಮಕ ಯೋಚನೆಗಳನ್ನು ಸಹಜವೆಂದು ಒಪ್ಪಿಕೊಳ್ಳುತ್ತಲೇ ಅವುಗಳ ಬೆನ್ನುಹತ್ತಿ ದೊಡ್ಡ ಸೋಲುಗಳ ಬಗೆಗೆ ಕಲ್ಪಿಸಿಕೊಳ್ಳುವುದನ್ನು ತಡೆದರೆ ಮನಸ್ಸು ತಾನಾಗಿಯೇ ಸಮಸ್ಥಿತಿಗೆ ಹಿಂತಿರುಗುತ್ತದೆ.

ನಿಮ್ಮ ಭಯ ಹಿಂಜರಿಕೆಗಳನ್ನೆಲ್ಲಾ ಸಹಜವಾಗಿ ಹಂಚಿಕೊಳ್ಳಲು ಸಾಧ್ಯವಾಗುವ ಸ್ನೇಹಿತರು ನಿಮಗೆ ಸಿಗಬಹುದಾದ ಅತ್ಯುತ್ತಮ ವೈದ್ಯರು. ಪೊಷಕರು ಇಂತಹ ಸ್ನೇಹಿತರಾಗಲು ಸಾಧ್ಯವಾದರೆ ಅದು ಮಕ್ಕಳಿಗೆ ಮಾಡಬಹುದಾದ ದೊಡ್ಡ ಸಹಾಯವಾಗುತ್ತದೆ.

ಪರೀಕ್ಷೆಗಳು ವಿದ್ಯಾರ್ಥಿ ಜೀವನದ ಅನಿವಾರ್ಯವಾದ ಪ್ರಮುಖ ಘಟ್ಟ. ಇವುಗಳನ್ನು ಕಡೆಗಣಿಸುವುದು ಸಾಧ್ಯವೇ ಇಲ್ಲ. ಆದರೆ ಪರೀಕ್ಷೆಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ ನೀಡಿ ಜೀವನ್ಮರಣದ ಪ್ರಶ್ನೆಯಾಗಿ ಸ್ವೀಕರಿಸಿದರೆ ಅವು ಮಕ್ಕಳ ಮನಃಸ್ಥಿತಿಯ ಮೇಲೆ ದುಷ್ಪರಿಣಾಮ ಬೀರದೆ ಇರಲು ಸಾಧ್ಯವಿಲ್ಲ. ಹಾಗಾಗಿ ಪೋಷಕರು ಮತ್ತು ಮಕ್ಕಳು ಸೇರಿ ಪ್ರತಿವರ್ಷ ಬರುವ ಪರೀಕ್ಷೆಗಳನ್ನು ಎದುರಿಸಲು ಒಂದು ಸಕ್ಷಮ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು.

**

ಉಸಿರಾಟದ ತಂತ್ರ ಬಳಕೆ
ಒತ್ತಡ ಗೊಂದಲಗಳಿದ್ದಾಗ ಯೋಚನೆಗಳ ವೇಗವನ್ನು ಹೆಚ್ಚಿಸಿ ಅವುಗಳನ್ನು ಮನಸ್ಸಿನಿಂದ ಕಿತ್ತು ಹಾಕಲು ಪ್ರಯತ್ನಿಸಬೇಡಿ. ಯೋಚನೆಗಳ ತೀವ್ರತೆ ಹೆಚ್ಚಿದಷ್ಟೂ ಮನಸ್ಸು ಗಲಿಬಿಲಿಗೊಳ್ಳುತ್ತದೆ. ಹಾಗಾಗಿ ಸ್ವಲ್ಪ ನಿಧಾನಿಸಿ. ಎರಡು ಮೂರು ನಿಮಿಷಗಳಷ್ಟು ಸಮಯ ದೀರ್ಘವಾಗಿ ಉಸಿರಾಡಿ ನಿಮ್ಮ ದೇಹದ ಭಾಗಗಳನ್ನು ಗಮನಿಸಿ. ದೇಹವನ್ನು ಸಡಿಲಗೊಳಿಸಿ ಮನಸ್ಸು ಶಾಂತಗೊಂಡ ಮೇಲೆ ಮುಂದುವರೆಯಿರಿ. ಅಭ್ಯಾಸ ಮಾಡುವಾಗ ಅಥವಾ ಪರೀಕ್ಷೆಗಳಲ್ಲಿ ಉತ್ತರಗಳು ನೆನಪಾಗದಿದ್ದಾಗ ಈ ತಂತ್ರವನ್ನು ಬಳಸಿ. ಇದಕ್ಕಾಗಿ ಉಪಯೋಗಿಸುವ ಕೆಲವೇ ನಿಮಿಷಗಳು ಖಂಡಿತ ವ್ಯರ್ಥವಾಗುವುದಿಲ್ಲ. ಆತಂಕಗಳು ಕಡಿಮೆಯಾದಂತೆ ನಿಮ್ಮ ನೆನಪು ಬುದ್ಧಿಗಳೆಲ್ಲಾ ತನ್ನಿಂದ ತಾನೇ ಚುರುಕಾಗುತ್ತದೆ. ಇದರಿಂದ ಮುಂದೆ ಸಮಯದ ಉಳಿತಾಯವೇ ಆಗುತ್ತದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !