ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಟಿಎಸ್‌ಇ ಪರೀಕ್ಷೆ: ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರಕ್ಕೆ ರಹದಾರಿ

Last Updated 24 ಡಿಸೆಂಬರ್ 2020, 7:59 IST
ಅಕ್ಷರ ಗಾತ್ರ

‘ರಾಜು,ಎನ್‌ಟಿಎಸ್‌ಇ ಪರೀಕ್ಷೆ 2021ರ ಜನವರಿ 25ರಂದು ನಡೆಯುತ್ತದಂತೆ. ಚೆನ್ನಾಗಿ ಓದಿದೀಯ?’ ವಿನಯ್‌ ಪ್ರಶ್ನಿಸಿದ.

‘ಇಲ್ಲಾ ಕಣೋ ವಿನಯ್. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಯಾರಿ ಮಾಡ್ತಾ ಇದೀನಿ. ಅದಕ್ಕೆ ಓದಿದ್ರೆ ಸಾಕು ಸದ್ಯ’

‘ಎಸ್ಸೆಸ್ಸೆಲ್ಸಿ ಜೊತೆಗೆ ಎನ್‌ಟಿಎಸ್‌ಇ ಗೆ ಓದಿ ಚೆನ್ನಾಗಿ ಅಂಕ ತೊಗೊಂಡ್ರೆ ತುಂಬಾ ಒಳ್ಳೇದು. ಅಷ್ಟೇ ಅಲ್ಲ, ಎನ್‌ಎಂಎಂಎಸ್‌ ನ ಪರೀಕ್ಷೆ ಕೂಡ ಜನವರಿ 25ಕ್ಕೇ ಇದೆ. ಎಂಟನೇ ತರಗತಿಯವರಿಗೆ ಅದೂ ಅಷ್ಟೇ ಮುಖ್ಯ. ಎನ್‌ಟಿಎಸ್‌ಇ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಸುಮಾರು 370 ವಿದ್ಯಾರ್ಥಿಗಳಿಗೆ ಎನ್‌ಎಂಎಂಎಸ್‌ ಪರೀಕ್ಷೆಯಲ್ಲಿ ಸುಮಾರು 5600 ವಿದ್ಯಾರ್ಥಿಗಳಿಗೆ ವೇತನ ಸಿಗುತ್ತದಂತೆ’ ಎಂದು ವಿನಯ್‌ ಈ ಪರೀಕ್ಷೆಯ ಮಹತ್ವದ ಬಗ್ಗೆ ವಿವರಿಸಿದ.

ಹಾಗಾದರೆ ಈ ಎನ್‌ಟಿಎಸ್‌ಇ/ ಎನ್‌ಎಂಎಂಎಸ್‌ ಪರೀಕ್ಷೆಗಳ ಬಗ್ಗೆ ಒಂದಿಷ್ಟು ವಿವರಗಳನ್ನು ನೋಡೋಣವೇ?

ಎನ್‌ಎಂಎಂಎಸ್‌ (ನ್ಯಾಷನಲ್‌ ಮೀನ್ಸ್‌ ಕಂ– ಮೆರಿಟ್‌ ಸ್ಕಾಲರ್‌ಶಿಪ್‌) ಪರೀಕ್ಷೆಯ ಪ್ರಮುಖ ಉದ್ದೇಶವೆಂದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ತಡೆಯುವುದು ಮತ್ತು 12ನೇ ತರಗತಿಯವರೆಗೆ ಅವರ ವಿದ್ಯಾಭ್ಯಾಸದ ಮುಂದುವರಿಕೆಗೆ ಪ್ರೇರೇಪಿಸುವುದು. ಈ ಪರೀಕ್ಷೆಯನ್ನು ಕನ್ನಡ, ಇಂಗ್ಲಿಷ್, ಉರ್ದು, ಮರಾಠಿ ಮತ್ತು ತೆಲುಗು ಮಾಧ್ಯಮಗಳಲ್ಲಿ ನಡೆಸಲಾಗುತ್ತದೆ.

ಈ ಪರೀಕ್ಷೆಯು ಬಹು ಆಯ್ಕೆ ಮಾದರಿಯ ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (ಮೆಂಟಲ್ ಎಬಿಲಿಟಿ ಟೆಸ್ಟ್ –ಎಂ.ಎ.ಟಿ.): ಈ ಪ್ರಶ್ನೆಪತ್ರಿಕೆಯಲ್ಲಿ 90 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೂ ಒಂದು ಅಂಕದಂತೆ 90 ಅಂಕಗಳನ್ನು ನಿಗದಿಪಡಿಸಲಾಗಿದ್ದು ಬೌದ್ಧಿಕ ಸಾಮರ್ಥ್ಯಗಳನ್ನು ಅಳೆಯುವ ವಿವಿಧ ಪ್ರಶ್ನೆಗಳಿರುತ್ತವೆ.

ವ್ಯಾಸಂಗಿಕ ಪ್ರವೃತ್ತ ಪರೀಕ್ಷೆ (ಸ್ಕೊಲ್ಯಾಸ್ಟಿಕ್ ಆಪ್ಟಿಟ್ಯೂಡ್ ಟೆಸ್ಟ್– ಎಸ್.ಎ.ಟಿ): ಇದರಲ್ಲಿ ಒಟ್ಟು 90 ಬಹು ಆಯ್ಕೆ ಪ್ರಶ್ನೆಗಳಿದ್ದು, ಇವುಗಳಲ್ಲಿ 35 ಪ್ರಶ್ನೆಗಳು ವಿಜ್ಞಾನ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ), 35 ಪ್ರಶ್ನೆಗಳು ಸಮಾಜ ವಿಜ್ಞಾನ (ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ) ಮತ್ತು 20 ಪ್ರಶ್ನೆಗಳು ಗಣಿತ ವಿಷಯಕ್ಕೆ ಸಂಬಂಧಿಸಿರುತ್ತವೆ. 8ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯವರೆಗಿನ ಎಲ್ಲಾ ಪಾಠಗಳನ್ನು ಹಾಗೂ 7ನೇ ತರಗತಿಯ ಪಾಠಗಳನ್ನು ಓದಿಕೊಂಡಿರಬೇಕು.

ಎನ್.ಎಂ.ಎಂ.ಎಸ್. ಪರೀಕ್ಷೆಯ ಆಯ್ಕೆ ಪ್ರಕ್ರಿಯೆ (ಸೆಲೆಕ್ಷನ್ ಪ್ರೊಸೀಜರ್)

ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಸರಾಸರಿ ಕನಿಷ್ಠ ಶೇ 40ರಷ್ಟು ಅಂಕಗಳನ್ನು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಸರಾಸರಿ ಕನಿಷ್ಠ ಶೇ 32ರಷ್ಟು ಅಂಕಗಳನ್ನು ಪಡೆಯಬೇಕು. ಪ್ರತಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ ವಿವಿಧ ಜಾತಿ/ ವರ್ಗಗಳ ವಿದ್ಯಾರ್ಥಿಗಳನ್ನು ಚಾಲ್ತಿಯಲ್ಲಿರುವ ಮೀಸಲಾತಿ ಹಾಗೂ ಅರ್ಹತಾ ನಿಯಮಗಳ ಅನುಸಾರ ರ‍್ಯಾಂಕ್ ಆಧರಿಸಿ ಮಾಡಲಾಗುವುದು. ಆಯ್ಕೆಯಾದವರಿಗೆ 9ನೇ ತರಗತಿಯಿಂದ ತಿಂಗಳಿಗೆ ಒಂದು ಸಾವಿರ ರೂಪಾಯಿಯಂತೆ ನಾಲ್ಕು ವರ್ಷಗಳವರೆಗೆ (ದ್ವಿತೀಯ ಪಿಯುಸಿಯವರೆಗೆ) ವಿದ್ಯಾರ್ಥಿ ವೇತನವನ್ನು ನೀಡಲಾಗುವುದು.

ವಿದ್ಯಾಥಿ ವೇತನ ವಿತರಣೆ: ಆಯ್ಕೆಯಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಎಂ.ಹೆಚ್.ಆರ್.ಡಿ ನವದೆಹಲಿ ಸಿದ್ಧಪಡಿಸಿರುವ ಎನ್.ಎಸ್.ಪಿ 2.0 ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿ ವೇತನಕ್ಕೆ 9ನೇ ತರಗತಿಯಿಂದ 12ನೇ ತರಗತಿವರೆಗೆ ಆನ್‌ಲೈನ್‌ಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಪ್ರತಿ ವರ್ಷವೂ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ವಿದ್ಯಾರ್ಥಿ ವೇತನ ಮುಂದುವರಿಕೆಗೆ ನಿಬಂಧನೆಗಳು

• ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು 9 ಮತ್ತು 11ನೇ ತರಗತಿಗಳಲ್ಲಿ ಕನಿಷ್ಠ ಶೇ 55ರಷ್ಟು ಮತ್ತು 10ನೇ ತರಗತಿಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಗಳಿಸಬೇಕಾಗುತ್ತದೆ. ಪ.ಜಾತಿ /ಪ.ಪಂ ವಿದ್ಯಾರ್ಥಿಗಳಿಗೆ ಶೇ 50ರಷ್ಟು ವಿನಾಯಿತಿ ಇರುತ್ತದೆ.

• ಆಯ್ಕೆಯಾದ ವಿದ್ಯಾರ್ಥಿಗಳು ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆ/ ಕಾಲೇಜಿನಲ್ಲಿ ಮಾತ್ರ ತಮ್ಮ ವಿದ್ಯಾಭ್ಯಾಸ ಮುಂದುವರಿಸಬೇಕು.

• ವಿದ್ಯಾರ್ಥಿಗಳು 9, 10 ಮತ್ತು 11ನೇ ತರಗತಿಯಲ್ಲಿ ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಯಾಗಬೇಕು.

• ವಿದ್ಯಾರ್ಥಿಗಳು ಯಾವುದಾದರೂ ಒಂದು ಯೋಜನೆಯ ವಿದ್ಯಾರ್ಥಿ ವೇತನವನ್ನು ಮಾತ್ರ ಪಡೆಯಲು ಅರ್ಹರಾಗಿರುತ್ತಾರೆ.

• ವಿದೇಶಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಹರಾಗುವುದಿಲ್ಲ.

• ಐಐಟಿ ಹಾಗೂ ಡಿಪ್ಲೊಮಾ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವವರು ವಿದ್ಯಾರ್ಥಿ ವೇತನಕ್ಕೆ ಅರ್ಹರಾಗುವುದಿಲ್ಲ.

ಎನ್‌ಟಿಎಸ್‌ಇ ಪರೀಕ್ಷೆ

2020–21ನೇ ಸಾಲಿನಲ್ಲಿ ರಾಷ್ಟ್ರೀಯ ಪ್ರತಿಭಾನ್ವೇಷಣೆ ಎನ್‌ಟಿಎಸ್‌ಇ (ನ್ಯಾಶನಲ್ ಟ್ಯಾಲೆಂಟ್ ಸರ್ಚ್‌ ಎಕ್ಸಾಮಿನೇಷನ್) ಪರೀಕ್ಷೆಯನ್ನು ಸರ್ಕಾರಿ, ಸ್ಥಳೀಯ ಸಂಸ್ಥೆಗಳ ಶಾಲೆಗಳು, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಹಾಗೂ ದೂರ ಶಿಕ್ಷಣದಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ನಿರತ ಹಾಗೂ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯನ್ನು ಕನ್ನಡ, ಇಂಗ್ಲಿಷ್, ಮರಾಠಿ ಹಾಗೂ ಉರ್ದು ಮಾಧ್ಯಮಗಳಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ ಶೇ 55ರಷ್ಟು ಅಂಕಗಳನ್ನು ಗಳಿಸಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶೇ 45ರಷ್ಟು ಅಂಕ ಗಳಿಸಿರಬೇಕು. ಈ ಪರೀಕ್ಷೆಯನ್ನು ಎರಡು ಹಂತದಲ್ಲಿ ಅಂದರೆ ಪ್ರಥಮ ಹಂತವನ್ನು ರಾಜ್ಯ ಮಟ್ಟದಲ್ಲಿ ಹಾಗೂ ದ್ವಿತೀಯ ಹಂತವನ್ನು ರಾಷ್ಟ್ರಮಟ್ಟದಲ್ಲಿ ನಡೆಸಲಾಗುತ್ತದೆ.

ಪ್ರಥಮ ಹಂತ (ಫಸ್ಟ್ ಫೇಸ್): ಈ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ರಾಜ್ಯ ಹಂತದಲ್ಲಿ ಎನ್‌ಟಿಎಸ್‌ಇ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ ಸ್ಟೇಟ್ ರ‍್ಯಾಂಕ್ ಹಾಗೂ ಸಾಮಾಜಿಕ ವರ್ಗಾವಾರು ಆಧಾರದ ಮೇಲೆ ದ್ವಿತೀಯ ಹಂತದ ಪರೀಕ್ಷೆ ಆಯ್ಕೆ ಮಾಡಲಾಗುತ್ತದೆ. ರಾಜ್ಯಮಟ್ಟದ ಪರೀಕ್ಷೆಯ ಪ್ರಥಮ ಹಂತದಲ್ಲಿ ಆಯ್ಕೆಯಾದವರಿಗೆ ಟಿ.ಬಿ.ಎಫ಼್.ನಿಂದ 5000 ರೂಪಾಯಿ ಹಾಗೂ ಪ್ರಶಸ್ತಿ ಪತ್ರವನ್ನು ಕೊಡಲಾಗುತ್ತದೆ.

ಪ್ರಥಮ ಹಂತ (ಫಸ್ಟ್ ಫೇಸ್)ದ ಪ್ರಶ್ನೆ ಪತ್ರಿಕೆಯ ಸ್ವರೂಪ: ಪತ್ರಿಕೆ-1- ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (ಮೆಂಟಲ್ ಎಬಿಲಿಟಿ ಟೆಸ್ಟ್- ಎಂ.ಎ.ಟಿ): ಈ ಪತ್ರಿಕೆಯಲ್ಲಿ 100 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೂ ಒಂದು ಅಂಕದಂತೆ 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಪ್ರಶ್ನೆಪತ್ರಿಕೆಯು ವಿದ್ಯಾರ್ಥಿಗಳು ಕಾರಣ ನೀಡುವ, ವಿಶ್ಲೇಷಿಸುವ, ಸಂಶ್ಲೇಷಿಸುವ, ಸಮಸ್ಯೆ ಬಿಡಿಸುವ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಪತ್ರಿಕೆ-2-ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ: (ಸ್ಕೊಲ್ಯಾಸ್ಟಿಕ್ ಆಪ್ಟಿಟ್ಯೂಡ್ ಟೆಸ್ಟ್ –ಎಸ್.ಎ.ಟಿ): ಈ ಪತ್ರಿಕೆಯಲ್ಲಿ 100 ಅಂಕಗಳಿಗೆ ಒಟ್ಟು 100 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಇವುಗಳಲ್ಲಿ 40 ಪ್ರಶ್ನೆಗಳು, ಸಾಮಾನ್ಯ ವಿಜ್ಞಾನ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ) 40 ಪ್ರಶ್ನೆಗಳು, ಸಮಾಜ ವಿಜ್ಞಾನ (ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ. ಸಮಾಜಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ) ಮತ್ತು 20 ಪ್ರಶ್ನೆಗಳು ಗಣಿತ ವಿಷಯವನ್ನು ಆಧರಿಸುತ್ತವೆ.

ಪರೀಕ್ಷೆಗೆ ಸಿದ್ಧವಾಗುವಾಗ ವಿದ್ಯಾರ್ಥಿಗಳು ಸ್ಟೇಟ್ / ಐಸಿಎಸ್‌ಇ / ಸಿಬಿಎಸ್‌ಇ ಯ 10ನೇ ತರಗತಿಯ ಪಠ್ಯವಸ್ತು ಚೌಕಟ್ಟಿನಲ್ಲಿರುವ ಪೂರ್ಣ ಪಾಠಗಳನ್ನು ಹಾಗೂ ಪಿಯುಸಿ ಹಂತದ ಸ್ವಲ್ಪ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.

ದ್ವಿತೀಯ ಹಂತ (ಸೆಕೆಂಡ್ ಫೇಸ್)

ರಾಜ್ಯ ಮಟ್ಟದ ಪ್ರಥಮ ಹಂತದ ಎನ್‌ಟಿಎಸ್‌ಇ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ ವಿದ್ಯಾರ್ಥಿಗಳಿಗೆ ನವದೆಹಲಿಯ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್‌ ಅಂಡ್ ಟ್ರೈನಿಂಗ್ (ಎನ್.ಸಿ.ಇ.ಆರ್.ಟಿ) ದ್ವಿತೀಯ ಹಂತದ ರಾಷ್ಟ್ರಮಟ್ಟದ ಪರೀಕ್ಷೆಯನ್ನು ನಡೆಸುತ್ತದೆ.

ಎನ್‌ಟಿಎಸ್‌ಇ ಪರೀಕ್ಷೆಯ ಉದ್ದೇಶಗಳು:

* 10ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುದು.

* ಆಯ್ಕೆಯಾದವರಿಗೆ ಆರ್ಥಿಕ ನೆರವು ನೀಡಿ ಪ್ರತಿಭೆಯನ್ನು ಮತ್ತಷ್ಟು ಪ್ರೋತ್ಸಾಹಿಸುವುದು.

ಎನ್‌ಟಿಎಸ್‌ಇ ಪರೀಕ್ಷೆಯ ಅರ್ಹತಾ ಅಂಕಗಳು ಮತ್ತು ಸೀಟು ಹಂಚಿಕೆ ವಿವರ:

ಎನ್‌ಟಿಎಸ್‌ಇ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗ, ಇತರೆ ಹಿಂದುಳಿದ ವರ್ಗಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗ (ಇ.ಡಬ್ಲ್ಯೂ.ಎಸ್.)ದ ವಿದ್ಯಾರ್ಥಿಗಳು ಶೇ 40 ರಷ್ಟು ಅರ್ಹತಾ ಅಂಕಗಳನ್ನು ಗಳಿಸಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶೇ 32ರಷ್ಟು ಅರ್ಹತಾ ಅಂಕಗನ್ನು ಗಳಿಸಬೇಕು, ಮೀಸಲಾತಿ ನಿಯಾಮಾನುಸಾರ ಆಯ್ಕೆ ಮಾಡಲಾಗುವುದು.

ವಿದ್ಯಾರ್ಥಿ ವೇತನ:

ದ್ವಿತೀಯ ಹಂತದ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಅಂತಿಮವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ಹಂತದಲ್ಲಿ ಪ್ರತಿ ತಿಂಗಳು ರೂ 1250 ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ರೂ 2000 ಹಾಗೂ ಉನ್ನತ ಶಿಕ್ಷಣ (ಪಿಎಚ್‌ಡಿ) ವ್ಯಾಸಂಗದ ಹಂತದಲ್ಲಿ ಯುಜಿಸಿ ನಿಯಮಾನುಸಾರ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ಜನವರಿ 9ರಂದು ಎನ್‌ಎಂಎಂಎಸ್‌ ಹಾಗೂ ಜನವರಿ 10ರಂದು ಎನ್‌ಟಿಎಸ್‌ಇ ಪರೀಕ್ಷೆಯ ಬಗ್ಗೆ ಡಿ.ಎಸ್.ಇ.ಆರ್.ಟಿ ನಿರ್ದೇಶಕರ ಸಹಯೋಗದಿಂದ ಚಂದನ ವಾಹಿನಿಯಲ್ಲಿ ತರಬೇತಿ ಕಾರ್ಯಕ್ರಮವಿದೆ. ಕೆ.ಎಸ್.ಇ.ಇ.ಬಿ. ವೆಬ್‍ಸೈಟ್‌ನಲ್ಲಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳಿಗೆ ಸರಿಯಾದ ಉತ್ತರವನ್ನು ಕೊಟ್ಟು ವಿವರಿಸಿದ್ದಾರೆ. ವಿದ್ಯಾರ್ಥಿಗಳು ಇವುಗಳ ಪ್ರಯೋಜನ ಪಡೆಯಬಹುದು.

(ಲೇಖಕ: ನಿವೃತ್ತ ಪ್ರಾಂಶುಪಾಲರು, ಎಂಇಎಸ್ ಶಿಕ್ಷಣ ಮಹಾವಿದ್ಯಾಲಯ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT