ಬುಧವಾರ, ಅಕ್ಟೋಬರ್ 23, 2019
27 °C

ಕನಸಿನ ಉದ್ಯೋಗಕ್ಕೆ ಒಂದೇ ಹೆಜ್ಜೆ

Published:
Updated:

ಒಳ್ಳೆಯ ಕಾಲೇಜಿಗೆ ಪ್ರವೇಶ ಪಡೆಯುವುದು ಎಲ್ಲ ವಿದ್ಯಾರ್ಥಿಗಳ ಕನಸು. ಆದರೆ ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿದ್ದಾಗಲೇ ಭವಿಷ್ಯದ ಬಗ್ಗೆ ಒತ್ತಡ, ಆತಂಕಗಳು ಶುರು. ಯಾವ ಕಂಪನಿಯಲ್ಲಿ ಉದ್ಯೋಗ ದೊರಕಬಹುದು ಎಂಬ ಆತಂಕವದು. ನೀವು ಒಂದೊಂದೇ ವರ್ಷದಲ್ಲಿ ಉತ್ತೀರ್ಣರಾಗುತ್ತ ಹೋದಂತೆ ನಿಮ್ಮ ಅರ್ಹತೆಯೂ ಏರುತ್ತದೆ. ಹಾಗೆಯೇ ನಿಮ್ಮ ನಿರೀಕ್ಷೆಗಳೂ ಕೂಡ.

ವಿದ್ಯಾರ್ಥಿಗಳಿಗೆ ಪದವಿಯ ಅಂತಿಮ ವರ್ಷದಲ್ಲಿ ಇರುವಾಗ ಔದ್ಯೋಗಿಕ ಜೀವನದ ಬಗ್ಗೆ ಯೋಚನೆ ಶುರು. ಅದು ಆಫ್ ಕ್ಯಾಂಪಸ್ ಆಗಿರಲಿ, ಆನ್ ಕ್ಯಾಂಪಸ್ ಆಗಿರಲಿ ಒಟ್ಟಿನಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಅಂತಿಮ ಘಟ್ಟವನ್ನು ತಾವು ಅಂದುಕೊಂಡ ಉದ್ಯೋಗ ಪಡೆಯುವ ಮೂಲಕ ಪೂರ್ಣಗೊಳಿಸಬೇಕೆಂಬುದು ಎಲ್ಲ ವಿದ್ಯಾರ್ಥಿಗಳ ಆಶಯ. ಇದು ಪೂರ್ಣಗೊಳ್ಳಲು ನೀವು ತಯಾರಿಯನ್ನು ಪದವಿಯ ಅಂತಿಮ ವರ್ಷದಿಂದ ಆರಂಭಿಸಿದರೆ ಸಫಲತೆಯ ಸಾಧ್ಯತೆ ಕಡಿಮೆ. ಕಾರಣ ಬಹುತೇಕ ಕಂಪನಿಗಳು ಆನ್ ಕ್ಯಾಂಪಸ್ ಸಂದರ್ಶನದಲ್ಲಿ ನೀವು ಎಸ್ಎಸ್ಎಲ್‌ಸಿ, ಪಿಯುಸಿ ಹಾಗೂ ಪದವಿಯಲ್ಲಿ ಪಡೆದ ಅಂಕಗಳನ್ನು ಅರ್ಹತಾ ಮಾನದಂಡವಾಗಿ ಬಳಸುತ್ತವೆ. ಉದಾಹರಣೆಗೆ ಎಸ್ಎಸ್ಎಲ್‌ಸಿ, ಪಿಯುಸಿ, ಡಿಗ್ರಿ ಕನಿಷ್ಠ ಶೇ 60 ಅಂಕಗಳು.

ಕಂಪನಿಗಳು ಈ ಸಂದರ್ಶನದಲ್ಲಿ ತಮಗೆ ಸರಿಹೊಂದುವಂತಹ ಉತ್ತಮ ಸಾಮರ್ಥ್ಯ ಹಾಗೂ ನಾಯಕತ್ವ ಗುಣ ಹೊಂದಿರುವಂತಹ ಪರಿಣತ ಅಭ್ಯರ್ಥಿಯನ್ನು ಕಾಯ್ದಿರಿಸುತ್ತವೆ. ಈ ಮೂಲಕ ಕಂಪನಿಗಳು ತಮ್ಮ ಆಯ್ಕೆಯ ಶ್ರಮ ಮತ್ತು ಸಮಯವನ್ನು ಕಡಿತಗೊಳಿಸುತ್ತವೆ. ಕೆಲವೊಮ್ಮೆ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪೈಪೋಟಿ ನೀಡಿ ಎರಡರಿಂದ ಮೂರು ಕಂಪನಿಗಳಲ್ಲಿ ಆಯ್ಕೆ ಹೊಂದಿ ಕೊನೆಗೆ ತಮಗಿಷ್ಟವಾದ ಪ್ರತಿಷ್ಠಿತ, ಉತ್ತಮ ವೇತನದ ಹಾಗೂ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬಲ್ಲ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವುದುಂಟು. ಹಾಗಾಗಿ ವಿದ್ಯಾರ್ಥಿಗಳು ಸೂಕ್ತ ಪರಿಶ್ರಮದೊಂದಿಗೆ ಎರಡನೇ ಗುಂಪಿಗೆ ಸೇರುವುದು ಉತ್ತಮ.

ಸಂದರ್ಶನಕ್ಕೆ ತಯಾರಿ

ಈ ಸ್ಪರ್ಧಾತ್ಮಕ ಸಂದರ್ಶನದಲ್ಲಿ ಪೈಪೋಟಿ ನೀಡಿ ಉದ್ಯೋಗ ಗಿಟ್ಟಿಸಿಕೊಳ್ಳಲು ರೆಸ್ಯುಮೆಯಿಂದ ಸಂದರ್ಶನದವರೆಗೂ ಸೂಕ್ತ ತಯಾರಿ ಅತ್ಯಗತ್ಯ. ಸಾಮಾನ್ಯವಾಗಿ ಸಂದರ್ಶನವು ಪೂರ್ವನಿಯೋಜಿತ ಚರ್ಚೆ, ಆಪ್ಟಿಟ್ಯೂಡ್ ಟೆಸ್ಟ್, ಗುಂಪು ಚರ್ಚೆ, ಸಂದರ್ಶನ ಎಂಬ ವಿವಿಧ ಹಂತಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ ಪರೀಕ್ಷೆಗಳ ಕ್ಲಿಷ್ಟತೆಯ ಹಂತ ಕಂಪನಿಯಿಂದ ಕಂಪನಿಗೆ ಬದಲಾಗುತ್ತ ಹೋಗುತ್ತದೆ.

ವಿದ್ಯಾರ್ಥಿಯು ಸ್ವಯಂ ಮೌಲ್ಯಮಾಪನದಿಂದ ತನ್ನಲ್ಲಿರುವ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ಅರಿತುಕೊಂಡು ಋಣಾತ್ಮಕ ಅಂಶಗಳ ಅಧ್ಯಯನ ನಡೆಸಬೇಕು. ಉದಾಹರಣೆಗೆ ಹಲವಾರು ಅಣಕು ಆಪ್ಟಿಟ್ಯೂಡ್ ಪರೀಕ್ಷೆಗಳ ಸಹಾಯದಿಂದ ತನ್ನಲ್ಲಿರುವ ಕೊರತೆಯನ್ನು ನೀಗಿ, ನಿರ್ದಿಷ್ಟ ವಿಷಯಗಳ ಅಧ್ಯಯನದೊಂದಿಗೆ ಹೆಚ್ಚು ಅಂಕ ಗಳಿಸಬೇಕು. ಹಾಗೆಯೇ ಗುಂಪು ಚರ್ಚೆಯಲ್ಲಿ ಪಾಲ್ಗೊಳ್ಳಲು ವಿವಿಧ ವಿಷಯಗಳ ಆಧಾರದ ಮೇಲೆ ಚರ್ಚೆಯ ಅಭ್ಯಾಸ ನಡೆಸಬೇಕು. ಕಂಪನಿಗಳು ನಾಯಕತ್ವಗುಣ, ಸಮಸ್ಯೆ ಪರಿಹಾರ ಸಾಮರ್ಥ್ಯ, ತ್ವರಿತ ಕಲಿಕೆಗೆ ಮಹತ್ವ ನೀಡುವುದರಿಂದ ವಿದ್ಯಾರ್ಥಿಯು ಇವುಗಳತ್ತ ಹೆಚ್ಚು ಗಮನಹರಿಸಬೇಕು. ಈ ಎಲ್ಲ ತರಬೇತಿಯನ್ನು ಹಲವು ವಿದ್ಯಾಸಂಸ್ಥೆಗಳು ನಿಗದಿತ ಸಮಯದಲ್ಲಿ ಆರಂಭಿಸಿ ಹೆಚ್ಚು ವಿದ್ಯಾರ್ಥಿಗಳ ಸಫಲತೆಗೆ ನೆರವಾಗುವುದಲ್ಲದೆ ತಮ್ಮ ಸಂಸ್ಥೆಯ ಬೆಳವಣಿಗೆಯತ್ತ ಸಹ ಗಮನ ನೀಡುತ್ತವೆ.

ಆಫ್ ಕ್ಯಾಂಪಸ್ ಸಂದರ್ಶನ

ಇದೆಲ್ಲಾ ಆನ್ ಕ್ಯಾಂಪಸ್ ಸಂದರ್ಶನದ ಭಾಗವಾದರೆ ಅರ್ಹತಾ ಮಾನದಂಡದಲ್ಲಿ ಹಾಗೂ ಸಂದರ್ಶನದ ವಿವಿಧ ಹಂತಗಳಲ್ಲಿ ವಿಫಲರಾಗಿ ಹೊರಗುಳಿದು ಪದವಿ ಪೂರ್ಣಗೊಳಿಸಿದವರ ಕಥೆಯೇನು?

ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳು ನೋಡುವುದು ಆಫ್ ಕ್ಯಾಂಪಸ್ ಸಂದರ್ಶನ. ಇದರಲ್ಲಿ ಪ್ರಶ್ನೆಗಳ ಕ್ಲಿಷ್ಟತೆ ಸ್ವಲ್ಪ ಜಾಸ್ತಿಯಾಗುವುದು ಬಿಟ್ಟರೆ ಉಳಿದಂತೆ ಆನ್ ಕ್ಯಾಂಪಸ್ ಸಂದರ್ಶನದ ಮಾದರಿಯೇ. ಹಾಗಾಗಿ ವಿದ್ಯಾರ್ಥಿಯು ಆರಂಭದಲ್ಲಿಯೇ ಸೂಕ್ತ ತಯಾರಿ ನಡೆಸಿ ಕೆಲಸ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಬೇಕು. ಆರಂಭದ ದಿನಗಳಲ್ಲಿ ಕಂಪನಿಯಿಂದ ಕಂಪನಿಗೆ ಬದಲಾಗದೆ ಕನಿಷ್ಠ ಒಂದರಿಂದ ಎರಡು ವರ್ಷ ಅಥವಾ ಅಗತ್ಯಕ್ಕೆ ತಕ್ಕಂತೆ ಉದ್ಯೋಗದ ಅನುಭವ ಪಡೆದು ಸೂಕ್ತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸಬೇಕು. ಆರಂಭದ ದಿನಗಳಲ್ಲಿ ಕಡಿಮೆ ಸಂಬಳ ಜೊತೆಗೆ ಹೆಚ್ಚು ಕೆಲಸದ ಒತ್ತಡ ಎಂಬ ಕಾರಣಕ್ಕೆ ಉದ್ಯೋಗ ತ್ಯಜಿಸುವುದು ಒಳ್ಳೆಯ ನಿರ್ಧಾರವಲ್ಲ. ಪಡೆದ ಕಡಿಮೆ ಸಂಬಳ ಉನ್ನತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಬೇಕಾದ ಅಧ್ಯಯನ ಸಾಮಗ್ರಿಗಳ ಖರ್ಚಿಗೆ ಸಹಾಯವಾದರೆ ಉದ್ಯೋಗದಲ್ಲಿರುವುದು ನೌಕರಿ ಮುಂದುವರಿಸಲು ಹಾಗೂ ಕೆಲಸದ ಅನುಭವ ಹೊಂದಲು ಸಹಾಯವಾಗುತ್ತದೆ.

ಪ್ರಾರಂಭದಲ್ಲಿ ಉದ್ಯೋಗ ದೊರಕದೇ ಹೋದರೆ ಅಥವಾ ತಡವಾದರೆ ವಿದ್ಯಾರ್ಥಿಯು ಧೃತಿಗೆಡಬಾರದು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಹಾಗೂ ಸ್ನೇಹಿತರ ಮಾರ್ಗದರ್ಶನ ಪಡೆದು ಸೂಕ್ತ ಕೋರ್ಸ್‌ಗಳನ್ನು ಪಡೆಯುತ್ತಾ ಜೊತೆಯಲ್ಲಿ ಉದ್ಯೋಗದ ಹುಡುಕಾಟ ಮುಂದುವರಿಸಿರಿ. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗೆ ಸಕಾರಾತ್ಮಕ ಚಿಂತನೆ ಹಾಗೂ ತಾಳ್ಮೆಯ ಅವಶ್ಯವಿರುತ್ತದೆ.

ಒಡಂಬಡಿಕೆ ಷರತ್ತಿಗೆ ಗಮನ ಕೊಡಿ

ವಿದ್ಯಾರ್ಥಿಯು ಕ್ಯಾಂಪಸ್ ಸಂದರ್ಶನದಲ್ಲಿ ತೇರ್ಗಡೆ ಹೊಂದಿದ ಮಾತ್ರಕ್ಕೆ ಆತನ ವೃತ್ತಿ ಜೀವನದಲ್ಲಿ ಋಣಾತ್ಮಕ ಅಂಶಗಳಿಲ್ಲ ಎಂದರ್ಥವಲ್ಲ. ಅನೇಕ ಕಂಪನಿಗಳು ವಿದ್ಯಾರ್ಥಿ ಕಂಪನಿ ಸೇರುವ ಸಮಯದಲ್ಲಿ ನಿರ್ದಿಷ್ಟ ಸಮಯದವರೆಗೂ 2, 3, 5 ವರ್ಷಗಳ ಕಾಲ (ಇದು ಕಂಪನಿಯ ಮೇಲೆ ಅವಲಂಬಿತವಾಗಿರುತ್ತದೆ) ಉದ್ಯೋಗ ತ್ಯಜಿಸುವಂತಿಲ್ಲ ಎಂಬ ಒಡಂಬಡಿಕೆ ಮಾಡಿಕೊಂಡಿರುತ್ತವೆ. ಮುಂದೊಮ್ಮೆ ವಿದ್ಯಾರ್ಥಿಯು ಸೂಕ್ತ ತಯಾರಿ ನಡೆಸಿ ಉತ್ತಮ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರೂ ಸಹ ಆ ಒಡಂಬಡಿಕೆ ತಡೆಯಾಗಬಹುದು. ಇದು ವಿದ್ಯಾರ್ಥಿಯ ಔದ್ಯೋಗಿಕ ಏಳ್ಗೆಗೆ ಋಣಾತ್ಮಕ ಅಲ್ಲದೇ ಮತ್ತಿನ್ನೇನು?

ಹಾಗಾಗಿ ವಿದ್ಯಾರ್ಥಿ ಒಡಂಬಡಿಕೆಗಳ ಸಮಯದಲ್ಲಿ ಹಿರಿಯ ವಿದ್ಯಾರ್ಥಿಗಳ, ಪ್ರಾಧ್ಯಾಪಕರ ಮಾರ್ಗದರ್ಶನ ಪಡೆದು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಲಿಲ್ಲ ಎಂಬ ಬಗ್ಗೆ ಯೋಚಿಸದೆ ಸಂದರ್ಶನಕ್ಕೆ ತಯಾರಿ ನಡೆಸಿ ಉದ್ಯೋಗ ಗಿಟ್ಟಿಸಿಕೊಳ್ಳುವತ್ತ ಯೋಚಿಸಬೇಕು.

ಇನ್ನು ಕೆಲವೊಮ್ಮೆ ಸಂದರ್ಶನದಲ್ಲಿ ತೇರ್ಗಡೆ ಹೊಂದಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಕಂಪನಿಗಳು ತ್ವರಿತ ಕಲಿಕೆಗೆ ಇಲ್ಲ, ನಿರ್ಣಯ ತೆಗೆದುಕೊಳ್ಳುವಲ್ಲಿ ಎಡವುತ್ತಾನೆ, ಸ್ಮಾರ್ಟ್ ವರ್ಕ್‌ನ ಕೊರತೆ ಇದೆ... ಹೀಗೆ ಹಲವಾರು ಕಾರಣ ನೀಡಿ ಉದ್ಯೋಗದಿಂದ ವಜಾಗೊಳಿಸಿದ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ ಆನ್ ಕ್ಯಾಂಪಸ್ ಉದ್ಯೋಗ ಒಳ್ಳೆಯದೋ ಅಥವಾ ಆಫ್ ಕ್ಯಾಂಪಸ್ ಉದ್ಯೋಗ ಒಳಿತೋ ಎಂಬ ನಿರ್ಧಾರಕ್ಕೆ ಬರಬೇಡಿ. ಈ ಎರಡರಲ್ಲೂ ದೊರಕುವುದು ಒಂದೇ ಉದ್ಯೋಗ; ಬೇಕಾಗಿರೋದು ಒಂದೇ ಕೌಶಲ. ಹಾಗಾಗಿ ವಿದ್ಯಾರ್ಥಿಯು ಕಂಪನಿಗಳ ಅವಶ್ಯಕತೆಗೆ ತಕ್ಕಂತೆ ಸೂಕ್ತ ತಯಾರಿಯನ್ನು ನಡೆಸಿ ಉದ್ಯೋಗದ ಭದ್ರತೆ ಕಾಯ್ದುಕೊಳ್ಳಬೇಕು. 

ಆತ್ಮವಿಶ್ವಾಸ: ನಿಮ್ಮಲ್ಲಿರುವ ಈ ಗುಣ ಸಂದರ್ಶಕರನ್ನು ಫಿದಾ ಮಾಡುವುದರಲ್ಲಿ ಸಂಶಯವಿಲ್ಲ. ನೀವು ಆತಂಕಗೊಂಡಿದ್ದು ಅವರಿಗೆ ಗೊತ್ತಾದರೆ ಅದು ನಿಮ್ಮ ವೈಫಲ್ಯದ ಮೊದಲ ಹಂತ ಎಂದೇ ತಿಳಿಯಿರಿ. ಈಗಿನ ಕಂಪನಿಗಳು ಯುವಕರಲ್ಲಿ ಪ್ರತಿಭೆಯ ಜೊತೆ ಆತ್ಮವಿಶ್ವಾಸವನ್ನು ಬಯಸುತ್ತವೆ.

ಒಳ್ಳೆಯ ಸಂವಹನ ಕಲೆ: ಈ ಕೌಶಲದಿಂದ ನೀವು ಇತರರಿಗೆ ಪೈಪೋಟಿ ನೀಡಬಹುದು. ನೀವು ಏನನ್ನು ಹೇಳಬೇಕಾಗಿದೆಯೋ ಅದನ್ನು ಸಂದರ್ಶಕರಿಗೆ ಅರ್ಥ ಮಾಡಿಸುವುದು ಒಳ್ಳೆಯ ಸಂವಹನ ಕೌಶಲದಿಂದ ಮಾತ್ರ ಸಾಧ್ಯ. ಇದರಿಂದ ಯಾವುದೇ ರೀತಿಯ ಗೊಂದಲ ಇರಲಾರದು.

ನಾಯಕತ್ವ ಗುಣ: ಕಂಪನಿಗಳು ನಿಮಗಿಂತ ಒಂದು ಹೆಜ್ಜೆ ಮುಂದಿರುತ್ತವೆ. ಅಭ್ಯರ್ಥಿಯಲ್ಲಿ ಭವಿಷ್ಯದ ನಾಯಕನ ಗುಣಗಳನ್ನು ಅವು ಬಯಸುತ್ತವೆ. ನೀವು ಕಾಲೇಜಿನಲ್ಲಿ ನಿಮ್ಮ ತಂಡವನ್ನು ಹೇಗೆ ಮುನ್ನಡೆಸಿದಿರಿ ಎಂದು ಹೇಳಿ. ಜೊತೆಗೆ ತಂಡದ ನಾಯಕ ಹೇಗೆ ನಡೆದುಕೊಳ್ಳಬೇಕು ಎಂದು ವಿವರಿಸಿ.

ಇತರ ಕೌಶಲಗಳು: ಬಹಳಷ್ಟು ಕಂಪನಿಗಳು ಬಹುಮುಖ ಕೌಶಲಗಳನ್ನು ಬಯಸುತ್ತವೆ. ಹೀಗಾಗಿ ನಿಮಗೆ ಗೊತ್ತಿರುವ, ಉದ್ಯೋಗಕ್ಕೆ ಬೆಂಬಲಿಸುವ ಕೌಶಲಗಳನ್ನು ಸಂದರ್ಶಕರಿಗೆ ವಿವರಿಸಿ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)