ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಮಕ್ಕಳಿಗೂ ಆನ್‌ಲೈನ್‌ ಪಾಠ

Last Updated 27 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಮಗು ಕೈಕಾಲು ಆಡಿಸುತ್ತಿಲ್ಲ. ನಾಲ್ಕು ತಿಂಗಳಾದರೂ ಮಗುಚಿಕೊಳ್ಳುತ್ತಿಲ್ಲ ಎಂದು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ತೋರಿಸಿ ಫಿಸಿಯೊಥೆರಪಿ ಕೊಡಿಸಿದ ದಾವಣಗೆರೆಯ ರಾಜೇಶ್‌–ಆಶಾ ದಂಪತಿ (ಹೆಸರು ಬದಲಾಯಿಸಲಾಗಿದೆ) ನಂತರ ದಾವಣಗೆರೆಯಲ್ಲೇ ಇರುವ ‘ಸಿಆರ್‌ಸಿ’ಯಲ್ಲಿ (ಕಾಂಪೋಸಿಟ್‌ ರೀಜನಲ್‌ ಸೆಂಟರ್‌ ಫಾರ್‌ ಸ್ಕಿಲ್‌ ಡೆವಲಪ್‌ಮೆಂಟ್‌, ರಿಹ್ಯಾಬಿಲಿಟೇಶನ್‌ ಅಂಡ್‌ ಎಂಪವರ್‌ಮೆಂಟ್‌ ಆಫ್‌ ಪರ್ಸನ್ಸ್‌ ವಿತ್‌ ಡಿಸೆಬಿಲಿಟೀಸ್‌) ಥೆರಪಿ ಮುಂದುವರಿಸಿದರು. ಈಗ ಒಂದು ವರ್ಷ ತುಂಬಿದ ನಿಶಾಂತ್‌ (ಹೆಸರು ಬದಲಾಯಿಸಲಾಗಿದೆ) ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಓಡಾಡಲು ಪ್ರಯತ್ನಿಸುತ್ತಿರುವುದನ್ನು ಕಂಡು ಪೋಷಕರ ಸಂತಸಕ್ಕೆ ಎಣೆಯಿಲ್ಲವಾಗಿದೆ.

ಸದ್ಯ ಬೆಂಗಳೂರಿನಲ್ಲಿ ಲಾಕ್‌ಡೌನ್‌ ಆಗಿರುವ ಇವರಿಗೆ ಸಿಆರ್‌ಸಿಯಿಂದ ನಿರಂತರವಾಗಿ ಆನ್‌ಲೈನ್‌ ಮೂಲಕ ಮಾರ್ಗದರ್ಶನ ಲಭಿಸುತ್ತಿದೆ. ವಿಡಿಯೊ ಕಾಲ್‌ಗಳಲ್ಲಿ ಮಗುವಿಗೆ ಮಾಡಿಸಬೇಕಾದ ವ್ಯಾಯಾಮಗಳನ್ನು ಮಾಡಿ ತೋರಿಸಲಾಗುತ್ತದೆ. ಅದನ್ನು ಮಗುವಿಗೆ ದಿನಕ್ಕೆ ಮೂರು ಬಾರಿ ಕಡ್ಡಾಯವಾಗಿ ಮಾಡಿಸಬೇಕಿದೆ.

ದಾವಣಗೆರೆಯ ರೇಖಾ ಹಾಗೂ ಹನುಮಂತಪ್ಪ ಅವರ ಪುತ್ರ 12 ವರ್ಷದ ಚಿರಂಜೀವಿಗೆ ಕಳೆದ ಒಂದು ವರ್ಷದಿಂದ ‘ಸಿಆರ್‌ಸಿ’ಯಲ್ಲಿ ಸ್ಪೀಚ್‌ ಥೆರಪಿ ಕೊಡಿಸಲಾಗುತ್ತಿದೆ. ಲಾಕ್‌ಡೌನ್‌ ಆದರೂ ತರಬೇತಿ ನಿಂತಿಲ್ಲ ಎನ್ನುವುದೇ ರೇಖಾ ಅವರಿಗೆ ಸಂತಸ ತಂದಿದೆ. ‘ಫೋನ್‌ನಲ್ಲಿ ರಾಜು ಸರ್‌ ಅವರ ಆದೇಶ ಬರುತ್ತಲೇ ನಮ್ಮ ಚಿರು ಅವರು ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸುತ್ತಾನೆ. ಸುಲಲಿತವಾಗಿ ಮಾತನಾಡಲು ಕಲಿತಿದ್ದಾನೆ’ ಎಂದು ಖುಷಿ ಹಂಚಿಕೊಂಡರು.

ಲಾಕ್‌ಡೌನ್‌ ಕಾರಣದಿಂದಾಗಿ ಎಲ್ಲರ ಜೀವನದ ದಿಕ್ಕು ಬದಲಾಗಿದೆ. ಮಕ್ಕಳ ಕಲಿಕೆಗೆ ಹಲವು ಶಾಲೆ-ಕಾಲೇಜುಗಳು ಆನ್‌ಲೈನ್‌ ಕಲಿಕೆಯ ಹಾದಿ ಹುಡುಕಿಕೊಂಡಿವೆ. ಅಂಗವಿಕಲ ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ತರಬೇತಿ ನೀಡುವ ದಾವಣಗೆರೆ ‘ಸಿಆರ್‌ಸಿ’ ಸಹ ಆನ್‌ಲೈನ್‌ ಬೋಧನೆಯ ಮೊರೆಹೋಗಿದೆ.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅಡಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಸಂಸ್ಥೆಯಾದ ‘ಸಿಆರ್‌ಸಿ’ಯಲ್ಲಿ ಕಲಿಕೆಯ ಸಮಸ್ಯೆ ಇರುವ, ಮಾತಿನ ಸಮಸ್ಯೆ ಇರುವ, ಬುದ್ಧಿಮಾಂದ್ಯ ಹಾಗೂ 21 ಬಗೆಯ ಅಂಗವೈಕಲ್ಯ ಇರುವ ಮಕ್ಕಳಿಗೆ ಚಿಕಿತ್ಸೆ, ತರಬೇತಿ ನೀಡಲಾಗುತ್ತದೆ. ಇಂಥ ಮಕ್ಕಳಿಗೆ ತರಬೇತಿ ನೀಡುವ ಶಿಕ್ಷಕರಿಗೂ ತರಬೇತಿ ಕೋರ್ಸ್‌ಗಳು ನಡೆಯುತ್ತಿವೆ.

ಸದ್ಯ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಬಳ್ಳಾರಿಯ ಮಕ್ಕಳು ಇಲ್ಲಿಗೆ ತರಬೇತಿಗಾಗಿ ಬರುತ್ತಿದ್ದಾರೆ. ಲಾಕ್‌ಡೌನ್‌ ಜಾರಿಯಾದಾಗಿನಿಂದ ಇಲ್ಲಿಗೆ ಬರಲು ವಾಹನವಿಲ್ಲದೇ ಈ ಮಕ್ಕಳ ತರಬೇತಿಗೆ ತಡೆ ಉಂಟಾಗಿತ್ತು. ಮೊದಲೇ ವಾಟ್ಸ್ಆ್ಯಪ್ ಗ್ರೂಪ್‌ಗಳ ಮೂಲಕ ಮಕ್ಕಳ ಪಾಲಕರಿಗೆ ಸೂಚನೆಗಳನ್ನು ನೀಡುತ್ತಿದ್ದ ಸಿಆರ್‌ಸಿಯ ಶಿಕ್ಷಕರು ಈಗ ಆನ್‌ಲೈನ್‌ ಬೋಧನೆಯ ಹಲವು ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಮನೆಯಲ್ಲೇ ಕಲಿಕೆಯ ವಿವಿಧ ಚಟುವಟಿಕೆ, ವರ್ಕ್‌ಶೀಟ್ಸ್‌ ಸಿದ್ಧಪಡಿಸಿ ಮಕ್ಕಳ ಪೋಷಕರಿಗೆ ವಿಡಿಯೊ ಕಾಲ್, ವಾಟ್ಸ್ಆ್ಯಪ್ ಹಾಗೂ ಮೈಕ್ರೊಸಾಫ್ಟ್‌ ಥೀಮ್ ಮೊದಲಾದ ವಿಧಾನಗಳ ಮೂಲಕ ತಲುಪಿಸುತ್ತಿದ್ದಾರೆ. ಅದನ್ನು ಅನುಸರಿಸಿ ಪೋಷಕರು ಮಕ್ಕಳಿಗೆ ಅದನ್ನು ಕಲಿಸಿ ನಂತರ ಅವರ ಅಭಿವ್ಯಕ್ತಿಯನ್ನು ವಿಡಿಯೊ ಕಾಲ್ ಮೂಲಕ ಶಿಕ್ಷಕರಿಗೆ ನಿಗದಿತ ಸಮಯದಂದು ಪ್ರದರ್ಶಿಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವರಿಗೆ, ಇಂಟರ್‌ನೆಟ್‌ ಇಲ್ಲದವರಿಗೆ, ಫೋನ್ ಕಾಲ್ ಮೂಲಕ ತರಬೇತಿ ನೀಡುವ ಕಾರ್ಯವನ್ನೂ ಸಂಸ್ಥೆ ಮಾಡುತ್ತಿದೆ.

ಬಿಪಿಎಲ್ ಪಡಿತರ ಕಾರ್ಡ್ ಇರುವವರಿಗೆ ಇಲ್ಲಿ ತರಬೇತಿ, ಸೇವೆ ಉಚಿತ. ಉಳಿದವರಿಗೆ ಮೂರು ತಿಂಗಳ ಒಂದು ಚಿಕಿತ್ಸಾ ಕೋರ್ಸ್‌ಗೆ ₹ 70 ಇದೆ. 2017ರ ಫೆಬ್ರುವರಿಯಲ್ಲಿ ದಾವಣಗೆರೆಯಲ್ಲಿ ಆರಂಭವಾದ ಈ ಸಂಸ್ಥೆಯಲ್ಲಿ ಈವರೆಗೆ 1,800 ಮಂದಿ ನೋಂದಾಯಿಸಿ ಕೊಂಡು ತರಬೇತಿ, ಥೆರಪಿ ಪಡೆದಿದ್ದಾರೆ. ಆಗಾಗ ಬಂದು ಮತ್ತೆ ತರಬೇತಿ, ಶಿಕ್ಷಣ ಪಡೆದು ಹೋಗುತ್ತಿದ್ದಾರೆ. ಇವರಿಗೂ ದೂರವಾಣಿ ಹಾಗೂ ಆನ್‌ಲೈನ್‌ ಮೂಲಕ ಫಾಲೊಅಪ್‌ ಮಾಡಲಾಗುತ್ತಿದೆ.

ಹೆಚ್ಚಾಗಿ 15 ವರ್ಷದೊಳಗಿನ ಮಕ್ಕಳು ಚಿಕಿತ್ಸೆಗಾಗಿ ಬರುತ್ತಾರೆ. ಈ ಕೇಂದ್ರ ಬೆಳಿಗ್ಗೆ 9ರಿಂದ ಸಂಜೆ 5.30ರ ವರೆಗೆ ಕಾರ್ಯನಿರ್ವಹಿಸುತ್ತದೆ. ಸ್ಪೆಷಲ್ ಎಜುಕೇಟರ್ಸ್-2, ಕ್ಲಿನಿಕಲ್ ಸೈಕಾಲಜಿಸ್ಟ್-1, ಸ್ಪೀಚ್ ಪೆಥಾಲಜಿಸ್ಟ್‌-1, ಫಿಸಿಯೊಥೆರಪಿಯಲ್ಲಿ ಒಬ್ಬರು ಪ್ರಾಧ್ಯಾಪಕರು ಹಾಗೂ ಒಬ್ಬರು ಸಹಾಯಕರು ಇದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಪ್ರತಿದಿನ ಸರಾಸರಿ 30 ಮಂದಿ ಫಿಸಿಯೊಥೆರಪಿಗಾಗಿಯೇ ಇಲ್ಲಿಗೆ ಬರುವುದು ವಿಶೇಷ.

‘50 ವಿಶೇಷ ಮಕ್ಕಳಿಗೆ ಆನ್‌ಲೈನ್‌ ಮೂಲಕ ಪಾಠ ಹೇಳಲಾಗುತ್ತಿದೆ. ಸಂಸ್ಥೆಯಲ್ಲಿ ವಿಶೇಷ ಮಕ್ಕಳಿಗಾಗಿ ಹಲವು ಸಾಧನ- ಸಲಕರಣೆಗಳಿದ್ದು, ಲಾಕ್‌ಡೌನ್‌ನಿಂದಾಗಿ ಅವುಗಳ ಬಳಕೆಗೆ ಅಡ್ಡಿಯುಂಟಾಗಿದೆ. ವಿಶೇಷ ಮಕ್ಕಳನ್ನು ಸದಾ ಕ್ರಿಯಾಶೀಲರಾಗಿ ಇರಿಸಲು ಇಂಥ ಉಪಕರಣಗಳು ಮಹತ್ವದ ಪಾತ್ರ ವಹಿಸುತ್ತವೆ’ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಡಾ. ಜ್ಞಾನವೇಲ್.

‘ಸದ್ಯ ರಾಜ್ಯ ಸರ್ಕಾರ ನೀಡಿರುವ ಕಟ್ಟಡದಲ್ಲಿರುವ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ನಗರದ ಹೊರವಲಯದಲ್ಲಿ 10 ಎಕರೆ ಭೂಮಿ ಮಂಜೂರಾಗಿದೆ. ಇಲ್ಲಿ ಕಟ್ಟಡ ನಿರ್ಮಾಣವಾದ ನಂತರ ಸುಸಜ್ಜಿತ ಚಿಕಿತ್ಸೆ, ತರಗತಿ, ವಸತಿ ನಿಲಯಗಳು ಆರಂಭವಾಗಲಿವೆ’ ಎಂದು ಪುನರ್ವಸತಿ ಅಧಿಕಾರಿ ಕನಗ ಸಭಾಪತಿ ತಿಳಿಸಿದರು.

ಲಾಕ್‌ಡೌನ್‌ ಮುಗಿದ ನಂತರವೂ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ
ವಾಗಿರುವುದರಿಂದ ಬರುವವರು ಫೋನ್ ಮೂಲಕ ತಿಳಿಸಿ ನಿಗದಿತ ಸಮಯಕ್ಕೆ ಬರಬೇಕು ಎಂದು ಅವರು ತಿಳಿಸಿದರು. ಮಾಹಿತಿಗೆ– 08192-233464, 9445153327 ಸಂಪರ್ಕಿಸಬಹುದು.‌

ನೇರ ಸಂವಹನವೇ ಪರಿಣಾಮಕಾರಿ

ವಿಶೇಷ ಮಕ್ಕಳಿಗೆ ನೇರ ಸಂವಹನದಿಂದ ಮಾತ್ರ ಪರಿಣಾಮಕಾರಿಯಾಗಿ ಕಲಿಸಬಹುದು. ಲಾಕ್‌ಡೌನ್‌ನಿಂದಾಗಿ ಅನಿವಾರ್ಯವಾಗಿ ಆನ್‌ಲೈನ್‌ ಕಲಿಕೆಗೆ ಮೊರೆಹೋಗಬೇಕಾಯಿತು. ಏ. 20ರಿಂದಲೇ ವಿಶೇಷ ಮಕ್ಕಳು ಸ್ಥಳಕ್ಕೇ ಬಂದು ಕಲಿಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ವಾಹನ ಸೌಕರ್ಯ ಆರಂಭವಾಗದ ಕಾರಣ ಆನ್‌ಲೈನ್‌ ಕಲಿಕೆ ಮುಂದುವರಿದಿದೆ. ಮೇ 3ರ ನಂತರ ಸರ್ಕಾರದ ಸೂಚನೆಗಳ ಅನುಸಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದುದಾವಣಗೆರೆಸಿಆರ್‌ಸಿ ನಿರ್ದೇಶಕಡಾ. ಜ್ಞಾನವೇಲ್ ಹೇಳುತ್ತಾರೆ.

ಹೊಸ ಅನುಭವ

ಸಿಆರ್‌ಸಿಯಲ್ಲಿ ನಾನು 2 ವರ್ಷಗಳ ಡಿಎಸ್‌ಸಿ ಎಚ್‌ಐ (ಹಿಯರಿಂಗ್‌ ಇಂಪ್ಯಾರ್ಡ್‌) ಕೋರ್ಸ್‌ ಓದುತ್ತಿರುವೆ. ಲಾಕ್‌ಡೌನ್‌ ಜಾರಿಯಾದಾಗಿನಿಂದ ಆನ್‌ಲೈನ್‌ ತರಗತಿಗಳು ಆರಂಭವಾಗಿವೆ. ಇದೊಂದು ಹೊಸ ಅನುಭವ. ಆಡಿಯೊ ಹಾಗೂ ವಿಡಿಯೊ ಎರಡೂ ವಿಧಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಕಾಲೇಜಿಗೆ ಹೋಗುವ ಬದಲು ಈಗ ಮನೆಯಲ್ಲೇ ಕುಳಿತು ಓದುತ್ತಿದ್ದೇವೆ ಎಂದುಡಿಎಸ್‌ಸಿ ಏಚ್‌ಐ(ಡಿಇಡಿ ಸಮಾನ)ಉಷಾ ಹೇಳುತ್ತಾರೆ.

ಚಿತ್ರಕೃಪೆ: ಸಿಆರ್‌ಸಿ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT