ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಮುದಾಯದ ನಡುವೆ ಶಿಕ್ಷಣದ ಹುಳುಕು ಹರಳುಗಟ್ಟಿದೆ

Last Updated 20 ಸೆಪ್ಟೆಂಬರ್ 2020, 8:11 IST
ಅಕ್ಷರ ಗಾತ್ರ

ಅಡ್ಡಿ ಆತಂಕಗಳ ನಡುವೆಯೇ ಆನ್‌ಲೈನ್‌ ಶಿಕ್ಷಣ ಸಾಗುತ್ತಿದೆ. ಇಲ್ಲಿ ಸಂವಾದ ಸಾಧ್ಯವಾಗದೆ ಸ್ಟಿರಿಯೊ ರೂಪದಲ್ಲಿ ಏಕಮುಖ ಸಂವಹನ ಆಗುತ್ತಿದೆ. ಹೀಗೆನ್ನುವ ಕೊರತೆಯನ್ನೂ ನಿಭಾಯಿಸಿಕೊಂಡು ಖಾಸಗಿ ಶಾಲೆಗಳು ಆನ್‌ಲೈನ್‌ ಮೂಲಕ ಮಕ್ಕಳನ್ನು ತಲುಪುತ್ತಿವೆ. ಸರ್ಕಾರ ‘ವಿದ್ಯಾಗಮ’ ಎಂಬ ಯೋಜನೆ ಜಾರಿಗೊಳಿಸಿ ತನ್ನ ವಿದ್ಯಾರ್ಥಿಗಳನ್ನು ಅವರ ಮನೆಯಂಗಳದಲ್ಲಿಯೇ ಸಂಧಿಸುವ ಯತ್ನ ಮಾಡುತ್ತಿದೆ. ಈ ಎರಡೂ ಭಿನ್ನತೆಯ ಸ್ವರೂಪವನ್ನೇ ಬಿಂಬಿಸುತ್ತಿರುವುದು ಬೇರೆ ವಿಷಯ. ತಾಂತ್ರಿಕ ಅಡೆ ತಡೆಗಳ ಯಶಸ್ಸಿನ ಜೊತೆಗೆ ಸಮುದಾಯದ ಒಳ ಹೊಕ್ಕಿರುವ ಶಿಕ್ಷಣ ತನ್ನ ಮೂಲಸತ್ವವೇಅಸಹನೀಯ ಎನ್ನುವ ಅರಿವನ್ನು ಸಮುದಾಯದಲ್ಲಿ ಮೂಡಿಸಿದೆ.

ಅದಕ್ಕೆ ಉದಾಹರಣೆಯಾಗಿ ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ಘಟನೆಯನ್ನು ನೋಡಬಹುದು. ಕನ್ನಡ ಭಾಷಾ ಬೋಧನೆ ಸಂದರ್ಭದಲ್ಲಿ ‘ದಿಗಂತ’ ಎಂಬ ಪದಕ್ಕೆ ವಿರುದ್ಧ ಪದವೇನು ಎಂದು ಮಗುವೊಂದು ಕೇಳುತ್ತದೆ. ಅದಕ್ಕೆ ಶಿಕ್ಷಕಿ ದಿಗಂತಕ್ಕೆ ವಿರುದ್ಧ ಪದ ಇಲ್ಲ ಎಂಬ ಉತ್ತರವನ್ನು ನೀಡುತ್ತಾರೆ. ಈ ವಿಚಾರವನ್ನು ಗಮನಿಸಿದ ಪಾಲಕರು ತಮ್ಮ ಮಗನಿಗೆ ‘ದಿಗಂತಕ್ಕೆ ನಿರ್ದಿಗಂತ’ ಎಂದು ಉತ್ತರಿಸುವಂತೆ ಪ್ರೇರೇಪಿಸುತ್ತಾರೆ. ಮಗು ಅಪ್ಪ ಹೇಳಿದಂತೆ ಉತ್ತರಿಸುತ್ತದೆ. ಶಿಕ್ಷಕಿ ಮಾತ್ರ ದಿಗಂತಕ್ಕೆ ವಿರುದ್ಧ ಶಬ್ದ ಇಲ್ಲ ಎನ್ನುವುದೇ ‘ಸರಿ’ ಎಂದು ಹೇಳುತ್ತಾರೆ. ಅವರ ದೃಷ್ಟಿಯಲ್ಲಿ ಭೂಮಿ X ಆಕಾಶದಂತೆಯೇ ದಿಗಂತಕ್ಕೂ ವಿರುದ್ಧ ರೂಪ ಇರಬೇಕಿತ್ತೋ ಏನೋ ಗೊತ್ತಿಲ್ಲ.

ಉತ್ತರವನ್ನು ಹೇಳಿದ ಮಗುವಿನ ಪಾಲಕರು ದಿಗಂತಕ್ಕೆ ವಿರುದ್ಧ ಶಬ್ದ ಇಲ್ಲವೇ ಎಂದು ಕೇಳಿದ್ದರಿಂದ ಇಂತಹ ದುರಂತದ ಕಥೆ ಗೊತ್ತಾಯಿತು. ‘ಕನ್ನಡ’ವನ್ನು ಓದಿ ಬರೆಯಲು ಬರುವವರು ಯಾರಾದರೂ ಪಾಠ ಮಾಡಬಹುದು ಎನ್ನುವ ಖಾಸಗಿ ಶಾಲೆಗಳ ‘ವಿಶಾಲ’ ದೃಷ್ಟಿಕೋನವೇ ಇಂತಹ ತಪ್ಪು ಜ್ಞಾನಕ್ಕೆ ಕಾರಣವಾಗುತ್ತಿದೆ. ಕಡಿಮೆ ಸಂಭಾವನೆಗೆ ಯಾರು ಬರುತ್ತಾರೋ ಅವರೇ ಕನ್ನಡ ಶಿಕ್ಷಕರಾಗಿ ನೇಮಿಸಿಕೊಳ್ಳುವ ನಿಯಮವೇ ಇದಕ್ಕೆಲ್ಲ ಮೂಲ.

ಕುವೆಂಪು ಅವರ ‘ಅನಿಕೇತನ’ ಕವಿತೆಯನ್ನು ಕೇಳದ– ಓದದ ಒಬ್ಬ ವ್ಯಕ್ತಿ ಕನ್ನಡ ಭಾಷಾ ಶಿಕ್ಷಕ/ಕಿ ಆಗಿರುತ್ತಾರೆ ಎಂದರೆ ಇದಕ್ಕಿಂತ ಜಗತ್ತಿನ ಮತ್ತೊಂದು ಅದ್ಭುತ ಇರಲಾರದು. ಕುವೆಂಪು ತಮ್ಮ ಕವಿತೆಯಲ್ಲಿ ‘ಓ ನನ್ನ ಚೇತನ...’

‘ನೂರು ಮತದ ಹೊಟ್ಟ ತೂರಿ

ಎಲ್ಲ ತತ್ವದೆಲ್ಲೆ ಮೀರಿ

ನಿರ್ದಿಗಂತವಾಗಿ ಏರಿ’ ಎಂದು ಬರೆಯುತ್ತಾರೆ. ಬಹುತೇಕ ಈ ಗೀತೆಯನ್ನು ಕೇಳದ ಕನ್ನಡಿಗರು ಇರಲಾರರು. ಹೀಗೆ ಭಾವಿಸಿದರೆ, ಉಲ್ಲೇಖಿಸಿದ ಮೂರನೇ ಸಾಲಿನ ‘ಚೇತನ...ನಿರ್ದಿಗಂತವಾಗಿ ಏರಿ’ ಎನ್ನುವ ವಾಕ್ಯ ಗಮನಕ್ಕೆ ಬರದೇ ಇರಲು ಸಾಧ್ಯವೇ ಇಲ್ಲ. ಒಬ್ಬ ಕನ್ನಡ ಭಾಷಾ ಶಿಕ್ಷಕರು ಪ್ರಜ್ಞೆ– ಜ್ಞಾನ– ಸೃಜನಶೀಲತೆ ಎನ್ನುವುದು ಅನಂತವಾದದು, ದಿಗಂತವನ್ನೂ ಮೀರುವಂತಹದ್ದು ಎನ್ನುವುದನ್ನು ಹೇಗೆ ತಾನೆ ಮಕ್ಕಳಿಗೆ ದಕ್ಕಿಸಲು ಸಾಧ್ಯ? ಹೆಚ್ಚಿನ ಪಾಲಕರಿಗೆ ತಮ್ಮ ಮಕ್ಕಳಿಗೆ ಕನ್ನಡ ಚೆನ್ನಾಗಿಯೇ ಬರುತ್ತದೆ ಅದಕ್ಕೆ ಒತ್ತುಕೊಟ್ಟು ಓದುವ ಅಗತ್ಯ ಇಲ್ಲ ಎನ್ನುವ ಧೋರಣೆ ಇರುತ್ತದೆ. ಅದನ್ನೇ ಬಂಡವಾಳ ಮಾಡಿಕೊಂಡ ಶಾಲೆಗಳಲ್ಲಿ ಭಾಷಾ ಬೋಧಕರು ಶಿಕ್ಷಕರಲ್ಲಿಯೇಎರಡನೇ ದರ್ಜೆಯವರಾಗಿರುತ್ತಾರೆ. ಗಣಿತ– ವಿಜ್ಞಾನ– ಇಂಗ್ಲಿಷ್ ಬೋಧಕರಿಗೆ ಇರುವ ಮನ್ನಣೆ ಮತ್ತು ಸಂಭಾವನೆ ಅವರಿಗೆ ಇರುವುದಿಲ್ಲ.ಸಾಧಕರು, ವಿಜ್ಞಾನಿಗಳು, ಚಿಂತಕರು, ತತ್ವಜ್ಞಾನಿಗಳು, ಚರಿತ್ರೆಯನ್ನು ರೂಪಿಸಿದ ಹೋರಾಟಗಾರರ ಬದುಕಿನ ಪರಿಚಯವನ್ನು ಭಾಷಾ ಪಠ್ಯ ಹೇಳುತ್ತದೆ. ಆ ಮೂಲಕ ಜೀವನ ಮೌಲ್ಯವನ್ನೂ ಕಲಿಸುತ್ತದೆ. ವ್ಯಾವಹಾರಿಕ ಲೆಕ್ಕಾಚಾರದಲ್ಲಿ ಅದೆಲ್ಲ ತುಂಬ ಸುಲಭವೂ ಭವಿಷ್ಯಕ್ಕೆ ಬೇಡದ ಸರಕಾಗಿ ಗೋಚರಿಸುತ್ತಿದೆ. ಸಮಕಾಲೀನ ಆದ್ಯತೆ ಭಾಷೆಯಲ್ಲಿ ಇಂಗ್ಲಿಷ್‌, ಕೋರ್‌ ವಿಷಯದಲ್ಲಿ ಗಣಿತ ಮತ್ತು ವಿಜ್ಞಾನ ಇದ್ದರೆ ಸಾಕು ಉಳಿದದ್ದಲ್ಲ ‘ವ್ಯರ್ಥ’ ಎನ್ನವಅರ್ಥ ಶೂನ್ಯವನ್ನು ಆವರಿಸಿದೆ. ಹೀಗಾಗಿ ‘ದಿಗಂತ’ಕ್ಕೆ ವಿರುದ್ಧ ಶಬ್ದ ಬೇಕೋ ಬೇಡವೋ ಎನ್ನುವುದು ವಿವೇಚನೆಗೆ ನಿಲುಕದ ಪ್ರಶ್ನೆ.

ಸರ್ಕಾರಿ ಶಾಲೆಯಲ್ಲಿ ಇಂತಹ ದೋಷ ಆಗುವ ಸಾಧ್ಯತೆ ಕಡಿಮೆ. ಅಲ್ಲಿನ ಕನ್ನಡ ಬೋಧಕರು ಕನ್ನಡ ಐಚ್ಛಿಕ ವಿಷಯವನ್ನು ಓದಿರಲೇಬೇಕು.ಡಿಇಡಿ‌, ಬಿಇಡಿ ತರಬೇತಿಯ ಬೋಧನಾಶಾಸ್ತ್ರದಲ್ಲಿ ತಮ್ಮ ಬೋಧನಾ ವಿಷಯವನ್ನೇ ಓದಿರುತ್ತಾರೆ. ಅದರಂತೆಯೇ ಶಾಲಾ ಪಠ್ಯವೂ ಇರುವುದರಿಂದ ಅಂತಹ ಲೋಪ ಆಗುವುದಿಲ್ಲ. ಜೊತೆಗೆ ಸರ್ಕಾರಿ ಶಾಲಾ ಶಿಕ್ಷಕರುಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ)ಯಲ್ಲಿ ಉತ್ತೀರ್ಣವಾಗಿರುತ್ತಾರೆ. ನಂತರ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ತಮ್ಮ ಹುದ್ದೆಗೆ ಆಯ್ಕೆಯಾಗಿರುತ್ತಾರೆ. ಈ ನಿಯಮಾನುಸಾರ ಖಾಸಗಿ ಶಾಲೆಯ ಶಿಕ್ಷಕರ ಆಯ್ಕೆ ಆಗುವುದಿಲ್ಲ. ಎಲ್ಲರೂ ಅರ್ಹ ವಿದ್ಯಾರ್ಹತೆಯನ್ನು ಪಡೆದಿರಲೇಬೇಕು ಎನ್ನುವ ನಿಯಮವೂ ಹೆಚ್ಚಿನ ಸಂದರ್ಭದಲ್ಲಿ ಪಾಲನೆ ಆಗುವುದಿಲ್ಲ.

ಗೂಗಲ್ ಮೀಟ್‌,‌ ಜೂಮ್‌, ಮೈಕ್ರೋಸಾಫ್ಟ್‌ ಟೀಮ್‌, ಜಿ ಸೂಟ್‌, ಸಿಸ್ಕೊ ವೆಬೆಕ್ಸ್‌.... ಹೀಗೆ ಬೇರೆ ಬೇರೆ ತಂತ್ರಾಂಶವನ್ನು (ಪರಿಕರ) ಆನ್‌ಲೈನ್‌ ಪಾಠಕ್ಕೆ ಬಳಸಲಾಗುತ್ತಿದೆ. ನೆಟ್‌ವರ್ಕ್‌ ಕಾಡಾಟದಲ್ಲಿ ಹೇಗೋ ಪಾಠ– ಪ್ರವಚನಗಳು ಸಾಗುತ್ತಿವೆ. ಶಿಕ್ಷಕರು ಪಾಠಕ್ಕೆ ಪೂರಕವಾಗಿ ತೋರಿಸುವಫೋಟೊ ಅಥವಾ ವಿಡಿಯೊ ಕಾಣದಿದ್ದರೂ ಕಂಡಂತೆಯೇ ಮಕ್ಕಳು ಭಾವಿಸಿಕೊಳ್ಳಬೇಕು. ಶಿಕ್ಷಕರು ನೀಡುವಹೋಮ್‌ವರ್ಕ್‌ ಕೂಡ ಮಕ್ಕಳು ಮಾಡದಿದ್ದರೂ ಮಾಡಿದಂತೆ ಭಾವಿಸುವಂತೆ ಮಾಡುವುದೇ ಆನ್‌ಲೈನ್‌ ಶಿಕ್ಷಣ. ಈ ಪದ್ಧತಿಯಲ್ಲಿ ಆಸಕ್ತ ಮಕ್ಕಳಿಗೆ ಹೆಚ್ಚು ಒತ್ತಡವಾಗುತ್ತಿದೆ. ಅಂತಹ ಮಕ್ಕಳ ಪಾಲಕರಿಗೆ ಬೇರೆ ಬೇರೆ ಮಕ್ಕಳಿಗೆ ವ್ಯಾಟ್ಸ್‌ಆ್ಯಪ್‌ನಲ್ಲಿ ನೋಟ್ಸ್‌ ಕಳಿಸುವುದೂ ಕೆಲಸದ ಭಾಗವಾಗಿದೆ. ಅಷ್ಟು ಮಾತ್ರ ಅಲ್ಲದೆ ಅವರ ಮಕ್ಕಳ ಸಹಪಾಠಿಗಳ ಫೋನ್‌ಗೆ ಉತ್ತರಿಸುವುದು ಕಿರಿಕಿರಿಯನ್ನೂ ಮಾಡುತ್ತಿದೆ.

ಆನ್‌ಲೈನ್‌ನ ಏಕಮುಖ ಸಂಹವನವನ್ನು ತುಂಡರಿಸಬೇಕು, ಸಂವಾದದಂತೆ ಪರಿವರ್ತಿಸಬೇಕು ಎಂದು ಶಿಕ್ಷಕರು ಏನಾದರೂ ಮಕ್ಕಳಿಗೆ ಪ್ರಶ್ನೆ ಕೇಳಿದರೋ ಎಲ್ಲರೂ ಮಾತನಾಡಿ ಗುಂಪು ಸಂವಹನ ಸಂತೆಯಂತೆ ಆಗುತ್ತದೆ. ಆಧುನಿಕ ತಂತ್ರಜ್ಞಾನ ಸದ್ಬಳಕೆ ಆಗಬೇಕು.ಹೊಸ ತಾಂತ್ರಿಕ ಸಾಧ್ಯತೆ ಶಿಕ್ಷಣದ ಭಾಗ ಆಗಬೇಕು. ಆದರೆ ಆ ವಿಷಯದಲ್ಲಿ ಶಿಕ್ಷಕರಿಗಿಂತ ಮಕ್ಕಳೇ ಹೆಚ್ಚು ಪ್ರಗತಿ ಸಾಧಿಸಿರುತ್ತಾರೆ. ಶಿಕ್ಷಕರಿಗೆ ಆ ನಿಟ್ಟಿನ ತರಬೇತಿ ಇರುವುದಿಲ್ಲ. ಇದನ್ನೇ ಮಕ್ಕಳು ಅಪಹಾಸ್ಯದ ರೂಪಕದಂತೆ ಮಾಡಿಕೊಳ್ಳುತ್ತಿದ್ದಾರೆ.

ಆನ್‌ಲೈನ್ ಇಲ್ಲದ ಸರ್ಕಾರಿ ಶಾಲಾ ಮಕ್ಕಳಿಗೆ ‘ವಿದ್ಯಾಗಮ’ದಲ್ಲಿ ಶಿಕ್ಷಕರೆ ಅವರ ಬಳಿಗೆ ಹೋಗುತ್ತಾರೆ. ಹಳ್ಳಿಯ ಸಮುದಾಯ ಭವನ, ದೇವಸ್ಥಾನದ ಆವರಣದಲ್ಲಿ ನಾಲ್ಕಾರು ಮಕ್ಕಳಿಗೆ ಪಾಠ ಮಾಡುತ್ತಾರೆ. ಕಂಪ್ಯೂಟರ್‌– ಮೊಬೈಲ್‌ ಸೌಲಭ್ಯ ಇಲ್ಲದ ಹಳ್ಳಿ ಮತ್ತು ಬಡ ಮಕ್ಕಳಿಗೆ ಇದರಿಂದ ಅನುಕೂಲವಾಗುತ್ತಿದೆ. ಇಂತಹ ಆಫ್‌ಲೈನ್‌ ಇರಬಹುದು ತಾಂತ್ರಿಕ ಸಾಧನದ ಮೂಲಕ ಸಾಧಿಸಿದ ಆನ್‌ಲೈನ್‌ ಇರಬಹುದು ಇವು ಸಮುದಾಯವನ್ನು ಒಳಗೊಳ್ಳುವ ಮೂಲಕ ಶಿಕ್ಷಕರ ಮೌಲ್ಯಮಾಪನಕ್ಕೂ ಕಾರಣವಾಗುತ್ತಿದೆ. ಜೊತೆಗೆ ಸಮುದಾಯದೊಳಗೆಶಿಕ್ಷಣದ ಹುಳುಕು ಹರಳುಗಟ್ಟಿರುವುದು ಗೋಚರಿಸುವಂತೆ ಮಾಡಿದೆ. ಕೆಲ ಪಾಲಕರಿಗೆ ಇದು ಅಸಹನೀಯ ವೇದನೆಯನ್ನೂ ಉಂಟುಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT