ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ತರಗತಿ ಆಸಕ್ತಿಕರವಾಗಿರಲಿ

Last Updated 14 ಜನವರಿ 2021, 19:31 IST
ಅಕ್ಷರ ಗಾತ್ರ

ಮಿತ್ರರೊಬ್ಬರು ಹೀಗೆ ಹೇಳುತ್ತಿದ್ದರು ‘ಮೊದಲು ಮೊಬೈಲ್ ಫೋನ್‌ಗಳನ್ನು ಶಾಲೆಗೆ ತರಲು ನಿರ್ಬಂಧವಿತ್ತು ಆದರೆ ಈಗ ಅನಿವಾರ್ಯವಾಗಿ ಶಾಲೆಗಳೇ ಮೊಬೈಲ್ ಫೋನ್‌ಗಳ ಒಳಗೆ ಬರುವಂತಾಗಿದೆ’. ಈ ಮಾತು ಅದೆಷ್ಟು ಸತ್ಯ! ಮಕ್ಕಳು ಮೊಬೈಲ್, ಗಣಕಯಂತ್ರಗಳನ್ನು ಅಧಿಕವಾಗಿ ಉಪಯೋಗಿಸುವುದರಿಂದ, ಮೊಬೈಲ್ ಹಾಗೂ ಗಣಕಯಂತ್ರದ ಪರದೆಗಳನ್ನು ಸತತವಾಗಿ ನೋಡುವುದರಿಂದ ಹಾಗೂ ಅಂತರ್ಜಾಲವನ್ನು ಯಾವಾಗಲೂ ಉಪಯೋಗಿಸುವುದರಿಂದ ಆಗುವ ದುಷ್ಪರಿಣಾಮಗಳ ಅರಿವು ಇದ್ದರೂ, ಈಗ ಅನಿವಾರ್ಯವಾಗಿ ಮಕ್ಕಳನ್ನು ಆನ್‌ಲೈನ್ ತರಗತಿಗಳಲ್ಲಿ ಹೆಚ್ಚು ಹೊತ್ತು ತೊಡಗಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಅನಿವಾರ್ಯ ಸನ್ನಿವೇಶದಲ್ಲಿ ಪಾಠ ಮಾಡುವ ಮತ್ತು ಕಲಿಯುವ ರೀತಿನೀತಿಗಳೇ ಬದಲಾಗುತ್ತಿವೆ. ತಂತ್ರಾಂಶಗಳನ್ನು ಬಳಸಿ ಕಲಿಕೆಯ ವಿಧಾನಗಳನ್ನು ಮತ್ತಷ್ಟು ಉತ್ತಮಗೊಳಿಸಲು, ಆಸಕ್ತಿದಾಯಕವಾಗಿ ಮಾಡಲು ಬಹುಶಃ ಪ್ರತಿಯೊಬ್ಬ ಶಿಕ್ಷಕರೂ ಹಾಗೂ ಪೋಷಕರೂ ಪ್ರಯತ್ನಿಸುತ್ತಿದ್ದಾರೆ.

ಬಹಳಷ್ಟು ಶಿಕ್ಷಕರು ಈಗಾಗಲೇ ಆನ್‌ಲೈನ್‌ನಲ್ಲಿ ತರಗತಿಗಳನ್ನು ಮಾಡುವಲ್ಲಿ ಸಾಕಷ್ಟು ಪರಿಣತಿಯನ್ನು ಹೊಂದಿದ್ದಾರೆ ಹಾಗೂ ಆನ್‌ಲೈನ್ ಶಿಕ್ಷಣವನ್ನು ಮತ್ತಷ್ಟು ಉತ್ತಮಗೊಳಿಸಲು ಸತತವಾಗಿ ಪ್ರಯತ್ತಿಸುತ್ತಲೇ ಇದ್ದಾರೆ.

ಆನ್‌ಲೈನ್ ತರಗತಿಗಳನ್ನು ನಡೆಸುವ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೋ ಇಲ್ಲವೋ ತಿಳಿಯುವುದು ಕಷ್ಟ (ಕೆಲವು ವಿದ್ಯಾರ್ಥಿಗಳು ತಮ್ಮ ವಿಡಿಯೊ ಕಾಣಿಸದಂತೆ ಮಾಡಿರಬಹುದು). ತರಗತಿಯ ನಂತರ ಅವರಿಗೆ ಹೋಮ್ ವರ್ಕ್ ಕೊಟ್ಟಾಗ ಅವರು ಅದನ್ನು ಸರಿಯಾಗಿ ಮಾಡಿದ್ದಾರೋ ಇಲ್ಲವೋ ತಿಳಿಯುವುದೂ ಕೆಲವು ಬಾರಿ ಕಷ್ಟವಾಗಬಹುದು. ತರಗತಿಯ ನಂತರವೂ ಅವರು ಮೊಬೈಲ್ ಅನ್ನು ಉಪಯೋಗಿಸುತ್ತಿದ್ದಾಗ, ಅವರು ಏನು ಮಾಡುತ್ತಿದ್ದಾರೆ ಎಂಬುದು ಕೂಡ ಕೆಲವು ಪೋಷಕರಿಗೆ ತಿಳಿಯದಿರಬಹುದು. ಈ ರೀತಿಯ ಹಲವು ಸಮಸ್ಯೆಗಳಿವೆ.

ಈ ಲೇಖನದಲ್ಲಿ ಆನ್‌ಲೈನ್ ತರಗತಿಗಳನ್ನು ಹೆಚ್ಚು ಆಸಕ್ತಿಕರವಾಗಿ ಮಾಡಲು, ಮಕ್ಕಳು ಆ ತರಗತಿಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಲು, ಕಲಿಕೆಯನ್ನು ಮತ್ತಷ್ಟು ಉತ್ತಮಗೊಳಿಸಲು ಕೆಲವು ಆ್ಯಪ್‌ಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.

ಮೊದಲನೆಯದಾಗಿ, ಆನ್‌ಲೈನ್ ತರಗತಿಗಳಲ್ಲಿ ಹಲವಾರು ಶಿಕ್ಷಕರು, ಪಿಪಿಟಿ ಉಪಯೋಗಿಸುತ್ತಾರೆ. ಪಿಪಿಟಿ ಜೊತೆಯಲ್ಲಿ ಕೆಲವು ತಂತ್ರಾಶಗಳನ್ನೂ, ಹಲವಾರು ಆಸಕ್ತಿಕರ ವಿಡಿಯೊಗಳನ್ನೂ, ಸಣ್ಣ ಸಣ್ಣ ಪ್ರಯೋಗಗಳನ್ನೂ ಮಾಡಿ ತೋರಿಸಬಹುದು.
ಈ ರೀತಿಯ ವಿಷಯಾವಾರು ವಿಡಿಯೊಗಳು, ಸಣ್ಣ ಸಣ್ಣ ಪ್ರಯೋಗಗಳೂ, ಕೆಲವು ಸರಳ ಚಟುವಟಿಕೆಗಳೂ ಹಲವಾರು ವೆಬ್‌ಸೈಟ್‌ಗಳಲ್ಲೂ, ಯೂಟ್ಯೂಬ್ ಚಾನೆಲ್‌ಗಳಲ್ಲೂ ಸಿಗುತ್ತವೆ. ಇವುಗಳಲ್ಲಿ ಒಂದು ಯೂಟ್ಯೂಬ್ ಚಾನಲ್ ಅನ್ನು ಇಲ್ಲಿ ಕೊಡಲಾಗಿದೆ. (https://www.youtube.com/channel/UCkO90DlhT8ZpHeRMYufWoTg)

ಗಣಿತ ವಿಷಯವನ್ನು ಆನ್‌ಲೈನ್‌ನಲ್ಲಿ ಬೋಧಿಸುವಾಗ, ನಿಮ್ಮ ಗಣಕಯಂತ್ರದ ಪರದೆಯನ್ನು ಶೇರ್ ಮಾಡಿ ಮತ್ತು ಜಿಯೋಜಿಬ್ರಾದಂತಹ ತಂತ್ರಾಂಶಗಳನ್ನು ಉಪಯೋಗಿಸಿ. ಈ ತಂತ್ರಾಶದ ಸಹಾಯದಿಂದ ಆನ್‌ಲೈನ್‌ನಲ್ಲೇ ರೇಖಾಗಣಿತದ ಹಲವಾರು ಸಮಸ್ಯೆಗಳನ್ನು ಬಿಡಿಸಿ ತೋರಿಸಬಹುದು ಹಾಗೂ ವಿದ್ಯಾರ್ಥಿಗಳಲ್ಲೂ ಸ್ವಕಲಿಕೆಯ ಆಸಕ್ತಿಯನ್ನು ಹೆಚ್ಚಿಸಬಹುದು.

ಫೋಟೊ ಮ್ಯಾಥ್‌ನಂತಹ ಆ್ಯಪ್‌ಗಳು ವಿದ್ಯಾರ್ಥಿಗಳ ಆಸಕ್ತಿಯನ್ನು ಸಹಜವಾಗಿಯೇ ಹೆಚ್ಚಿಸುತ್ತವೆ. ಆ್ಯಪ್ ಅನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಹಾಗೂ ಯಾವುದೇ ಗಣಿತದ ಸಮಸ್ಯೆಯನ್ನು ಬಿಡಿಸಲು ಮೊಬೈಲ್‌ನ ಕ್ಯಾಮೆರಾದ ಸಹಾಯದಿಂದ ಆ ಗಣಿತದ ಸಮಸ್ಯೆಯನ್ನು ಸ್ಕ್ಯಾನ್ ಮಾಡಿದರೆ, ಉತ್ತರ ಹಾಗೂ ಸಮಸ್ಯೆಯನ್ನು ಬಿಡಿಸುವ ವಿಧಾನಗಳು ಮೊಬೈಲ್ ಪರದೆಯಲ್ಲಿ ಮೂಡುತ್ತವೆ.

ಹೀಗೆಯೇ ಆನ್‌ ಲೈನ್ ಗಣಿತದ ಪಾಠಗಳನ್ನು ಆಸಕ್ತಿಕರವಾಗಿ ಮಾಡಲು ಹಲವಾರು ಆ್ಯಪ್‌ಗಳು ಲಭ್ಯವಿವೆ.

ಉದಾಹರಣೆಗೆ, ವಿಜ್ಞಾನದ ವಿಷಯವನ್ನು ಬೋಧಿಸುವಾಗ ಓಲ್ಯಾಬ್ಸ್ (http://www.olabs.edu.in) ಅನ್ನು ಉಪಯೋಗಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಬಹುದು. ಇಲ್ಲಿ ವಿದ್ಯಾರ್ಥಿಗಳು ವಿಜ್ಞಾನದ ಪ್ರಯೋಗಗಳನ್ನು ಆನ್‌ಲೈನ್‌ನಲ್ಲೇ ಮಾಡಿ ತಿಳಿಯಬಹುದು.

ವಿದ್ಯಾರ್ಥಿಗಳು ಸ್ಕೈ ಮ್ಯಾಪ್‌ ಆ್ಯಪ್ ಅನ್ನು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡರೆ, ಈ ಸಮಯದ ಸಹಜ ಆಕಾಶವನ್ನು ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದು ಹಾಗೂ ಆ ಕ್ಷಣದಲ್ಲಿನ ಆಕಾಶಕಾಯಗಳ ಸ್ಥಿತಿ-ಗತಿಗಳನ್ನು ವೀಕ್ಷಿಸಿ ಅರಿಯಬಹುದು.

ಈಗ ಬಹಳಷ್ಟು ಜನ ಆಗ್‌ಮೆಂಟೆಡ್ ರಿಯಾಲಿಟಿ (ಎಆರ್‌) ಯ ಬಗ್ಗೆ ಮಾತನಾಡುತ್ತಿದ್ದಾರೆ. ಇದನ್ನೂ ಆನ್‌ಲೈನ್ ತರಗತಿಗಳಲ್ಲಿ ಬಳಸಿ ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸಬಹುದು. ಇದಕ್ಕಾಗಿ ಮೊಬೈಲ್‌ನಲ್ಲಿ ARLOOPA , FECTAR ಗಳಂತಹ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಈ ರೀತಿಯ ಬಹಳಷ್ಟು ತಂತ್ರಾಂಶಗಳೂ, ವಿಧಾನಗಳೂ ಲಭ್ಯವಿವೆ. ಅವುಗಳನ್ನು ತರಗತಿಗಳಲ್ಲಿ ಸರಿಯಾದ ರೀತಿಯಲ್ಲಿ ಉಪಯೋಗಿಸಿ, ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಬಹುದು.

(ಲೇಖಕ: ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್ ಪ್ರೈ.ಲಿ., ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT