ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಪರೀಕ್ಷೆ ಥ್ರಿಲ್‌: ಮಕ್ಕಳು ಫುಲ್‌ ಖುಷ್

Last Updated 23 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ವಿಶ್ವದಾದ್ಯಂತ ಭೀತಿ ಮೂಡಿಸಿರುವ ಕೊರೊನಾ ವೈರಾಣು ವಿದ್ಯಾರ್ಥಿಗಳಿಗೆ ಖುಷಿ ತಂದಿದೆ. ನಗರದ ಬಹುತೇಕ ಶಾಲೆಗಳು ರಜೆ ಘೋಷಿಸಿವೆ. ಹೆಚ್ಚಿನ ಖಾಸಗಿ ಶಾಲೆಗಳು ಪರೀಕ್ಷೆ ರದ್ದುಪಡಿಸಿವೆ. ಈ ಅನಿರೀಕ್ಷಿತವಾಗಿ ದೊರೆತ ಡಬಲ್‌ ಧಮಾಕಾದಿಂದ ವಿದ್ಯಾರ್ಥಿಗಳು ಸೈಕಲ್‌, ಬ್ಯಾಟ್‌, ಬಾಲ್‌ ಹಿಡಿದು ಬೀದಿಗೆ ಇಳಿದಿದ್ದಾರೆ.

ಆದರೆ, ನಗರದ ಕೆಲವು ಶಾಲೆಗಳು, ‘ಶಾಲೆಗೆ ರಜೆ ಇದ್ದರೇನಂತೆ, ಆನ್‌ಲೈನಲ್ಲಿ ಪರೀಕ್ಷೆ ಬರೆಯಬಹುದಲ್ಲವಾ’ ಅಂತ ತೀರ್ಮಾನಿಸಿ, ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸುತ್ತಿವೆ. ರಾಜಾಜಿ ನಗರ, ಬಸವೇಶ್ವರ ನಗರ, ಹೆಬ್ಬಾಳ, ಕೆಂಪಾಪುರದ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿಯೇ ಪರೀಕ್ಷೆ ಆರಂಭಿಸಿವೆ.

ಶಾಲೆಯ ಅಧಿಕೃತ ವೆಬ್‌ಸೈಟ್‌, ಆ್ಯಪ್‌ (ಉಲೋ ನೋಟ್ಸ್), ಇ–ಮೇಲ್‌ನಲ್ಲಿ ಪ್ರಶ್ನೆ ಪತ್ರಿಕೆ ಕಳಿಸಿ, ಮನೆಯಲ್ಲಿಯೇ ಕುಳಿತು ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿವೆ. ಮನೆಯಲ್ಲಿ ನಡೆಯುವ ಈ ಪರೀಕ್ಷೆಗಳಿಗೆ ಪೋಷಕರೇ ಕೊಠಡಿ ಮೇಲ್ವಿಚಾರಕರು!

ಪರೀಕ್ಷೆ ಮುಗಿದ ಎರಡು ದಿನಗಳ ನಂತರ‘ಕೀ ಆನ್ಸರ್‌ ಶೀಟ್‌’ (ಉತ್ತರಗಳನ್ನು) ಅಪ್‌ಲೋಡ್‌ ಮಾಡಲಾಗುತ್ತದೆ. ಅದನ್ನು ನೋಡಿಕೊಂಡು ವಿದ್ಯಾರ್ಥಿಗಳೇ ತಮ್ಮ ಉತ್ತರ ಪತ್ರಿಕೆಗಳನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕು.

ಸ್ವಯಂ ಪರೀಕ್ಷೆಗೂ ಮುನ್ನ ಶೀಕ್ಷಕರು ವಿದ್ಯಾರ್ಥಿಗಳಿಗೆ ‘ನೋ ಚೀಟಿಂಗ್‌’ ಎಂದು ಬುದ್ದಿಮಾತು ಹೇಳಿದ್ದಾರೆ. ವಿದ್ಯಾರ್ಥಿಗಳು ತಮಗೆ ಇಷ್ಟವಾದ ಸಮಯದಲ್ಲಿ ಪರೀಕ್ಷೆಯಲು ನಿರ್ಬಂಧ ಇಲ್ಲ. ಪರೀಕ್ಷೆಯ ಸಮಯವನ್ನು ವಿದ್ಯಾರ್ಥಿಗಳು ತಾವೇ ನಿರ್ಧಾರ ಮಾಡಿಕೊಳ್ಳಬೇಕು.

‘ಮೌಲ್ಯಮಾಪನದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಿ. ಇದು ಕೇವಲ ವಾರ್ಷಿಕ ಪರೀಕ್ಷೆ ಅಲ್ಲ, ನಿಮ್ಮ ಪ್ರಾಮಾಣಿಕತೆ ಮತ್ತು ನೈತಿಕತೆಯ ಪರೀಕ್ಷೆಯೂ ಹೌದು’ ಎಂಬ ಕಿವಿಮಾತನ್ನೂ ಹೇಳಿದ್ದಾರೆ.

ಬಸವೇಶ್ವರ ನಗರದ ಶ್ರೀವಾಣಿ ವಿದ್ಯಾಕೇಂದ್ರ ಪ್ರತಿದಿನ ಎರಡು ಪ್ರಶ್ನೆ ಪತ್ರಿಕೆಗಳನ್ನು ಆ್ಯಪ್‌ನಲ್ಲಿ ಕಳಿಸುತ್ತಿದೆ. ಪರೀಕ್ಷೆ ಮೇಲೆ ನಿಗಾ ಇಡುವಂತೆ ಪೋಷಕರಿಗೆ ಸೂಚಿಸಿದ್ದು, ಉತ್ತರ ಪತ್ರಿಕೆ ನೊಡಿ ನಿಮ್ಮ ಮಕ್ಕಳ ಸಾಮರ್ಥ್ಯವನ್ನು ನೀವೆ ಅಳೆಯಿರಿ ಎಂದು ಹೇಳಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಶಾಲೆಗೆ ಬರಕೂಡದು ಎಂದು ತಾಕೀತು ಮಾಡಲಾಗಿದೆ.

ಅದೇ ರೀತಿ, ಕೆಂಪಾಪುರದ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಎರಡು ಪರೀಕ್ಷೆ ಬರೆದು ಮುಗಿಸಿದಿದು, ಕೊರೊನಾ ಭೀತಿಯ ಕಾರಣ ಉಳಿದ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ಬರೆಯುತ್ತಿದ್ದಾರೆ.

ಪರೀಕ್ಷೆ ಇದ್ದರೂ ಅಂಗಳದಲ್ಲಿ ಬಿಂದಾಸ್ ಆಗಿ ಆಟವಾಡುತ್ತಿದ್ದ ವಿದ್ಯಾರ್ಥಿಗಳನ್ನು ಈ ಬಗ್ಗೆ ಪ್ರಶ್ನಿಸಿದಾಗ, ‘ನೂರಕ್ಕೆ ನೂರು ಅಂಕ ಪಡೆದರೆ ಶಿಕ್ಷಕರಿಗೆ ನಮ್ಮ ಬಗ್ಗೆ ಸಂದೇಹ ಬರಬಹುದಲ್ವಾ!’ ಎಂದು ಮರು ಪ್ರಶ್ನಿಸುತ್ತಾರೆ.

ಈ ರೀತಿಯ ಹೊಸ ಐಡಿಯಾದಿಂದ ವಿದ್ಯಾರ್ಥಿಗಳು ಕೂಡ ಥ್ರಿಲ್‌ ಆಗಿದ್ದಾರೆ. ಈಗಾಗಲೇ ಪರೀಕ್ಷೆ ಬರೆದು ಮುಗಿಸಿರುವ ಐಸಿಎಸ್‌ಇ ಪಠ್ಯಕ್ರಮದ ಶಾಲೆಗಳ ವಿದ್ಯಾರ್ಥಿಗಳು ‘ಛೇ... ನಮಗೆ ಇಂತಹ ಚಾನ್ಸ್‌ ಸಿಗಲಿಲ್ಲ’ ಎಂದು ಪರಿತಪಿಸುತ್ತಿದ್ದಾರೆ.ಹೆಬ್ಬಾಳ, ಕೆಂಪಾಪುರ ಮತ್ತು ಯಲಹಂಕದ ಐಸಿಎಸ್‌ಸಿ ಪಠ್ಯಕ್ರಮ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಸ ಅನುಭವಗಳನ್ನು ‘ಮೆಟ್ರೊ’ ಜತೆ ಹಂಚಿಕೊಂಡರು.

ರಜೆ ಘೋಷಣೆಯಾದ ದಿನದಿಂದಲೇ ಸ್ನೇಹಿತರ ಗುಂಪು ಕಟ್ಟಿಕೊಂಡು ರಸ್ತೆಗೆ ಇಳಿದಿರುವ ಈ ವಿದ್ಯಾರ್ಥಿಗಳಿಗೆಪರೀಕ್ಷೆಯ ಆತಂಕ ದೂರವಾಗಿದೆ. ಕ್ರಿಕೆಟ್‌, ಸೈಕ್ಲಿಂಗ್‌, ಈಜು ಎಂದು ಮೋಜು ಮಾಡುತ್ತಿದ್ದಾರೆ.

‘ಕೊರೊನಾದಿಂದಾಗಿ ಮೊದಲ ಬಾರಿಗೆ ಮನೆಯಲ್ಲಿಯೇ ಕುಳಿತು ಪರೀಕ್ಷೆ ಬರೆಯುವ ಚಾನ್ಸ್‌ ದೊರೆತಿದೆ. ನಮ್ಮ ಉತ್ತರ ಪತ್ರಿಕೆಗಳನ್ನು ನಾವೇ ಮೌಲ್ಯಮಾಪನ ಮಾಡಿಕೊಳ್ಳುವುದು ಇನ್ನೊಂದು ಥರಾ ಖುಷಿಯ ವಿಚಾರ. ಶಾಲೆಯಲ್ಲಿ ಪರೀಕ್ಷೆ ಬರೆಯುವ ಅನುಭವವೇ ಬೇರೆ. ಅಲ್ಲಿರುವ ಭಯ, ಆತಂಕ ಮನೆಯಲ್ಲಿ ಪರೀಕ್ಷೆ ಬರೆಯುವಾಗ ಇರಲಿಲ್ಲ. ತುಂಬಾ ಪ್ರಾಮಾಣಿಕವಾಗಿ ಮತ್ತು ಅಷ್ಟೇ ಕೂಲ್‌ ಆಗಿ ಒಂದು ಎರಡು ಪೇಪರ್‌ ಬರೆದಿದ್ದೇನೆ’ ಎನ್ನುತ್ತಾರೆ ಹೆಬ್ಬಾಳ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು.

‘ವಿದ್ಯಾರ್ಥಿಗಳಿಗೆ ಇದು ಕೇವಲ ವಾರ್ಷಿಕ ಪರೀಕ್ಷೆಯಲ್ಲ, ಅವರ ಪ್ರಾಮಾಣಿಕತೆ ಮತ್ತು ನೈತಿಕತೆಯ ಅಗ್ನಿ ಪರೀಕ್ಷೆ ಕೂಡ ಹೌದು. ಚಿಕ್ಕವರಿರುವಾಗಲೇ ಮಕ್ಕಳಿಗೆ ಆನ್‌ಲೈನ್‌ ಪರೀಕ್ಷೆ ಅನುಭವ ದಕ್ಕಿದೆ. ಆದಷ್ಟೂ ಪ್ರಾಮಾಣಿಕತೆಯಿಂದ ಪರೀಕ್ಷೆ ಬರಿಯಿರಿ ಎಂದು ನಾವು ಸಲಹೆ ಮಾಡಿದ್ದೇವೆ’ ಎನ್ನುತ್ತಾರೆ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕಲಬುರ್ಗಿಯ ರಾಣಿ ಚೆನ್ನಮ್ಮ ಜೀವಣಗಿ. ಇವರ ಇಬ್ಬರು ಮಕ್ಕಳು ಬಸವೇಶ್ವರ ನಗರದ ಶ್ರೀವಾಣಿ ವಿದ್ಯಾಕೆಂದ್ರದಲ್ಲಿ ಓದುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT