ಭಾನುವಾರ, ನವೆಂಬರ್ 17, 2019
28 °C

ಯುಟ್ಯೂಬ್‌ನಲ್ಲಿ ಗಣಿತ, ವಿಜ್ಞಾನ ಪಾಠ: ಇದು ಬಾಂಬೆ ಐಐಟಿ ವಿದ್ಯಾರ್ಥಿಗಳ ಕೊಡುಗೆ

Published:
Updated:

ಇಂದಿಗೂ ದೇಶದ ಹಲವು ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲಿ ಬೋಧಕ ಸಿಬ್ಬಂದಿ ಕೊರತೆ ಕಾಡುತ್ತಲೇ ಇದೆ. ಬಡತನ ಅಥವಾ ದೂರ ಎಂಬ ಕಾರಣಕ್ಕೆ ಹಲವು ಮಕ್ಕಳು ಸರ್ಕಾರಿ ಶಾಲೆಗಳನ್ನೇ ನೆಚ್ಚಿಕೊಳ್ಳಬೇಕು. ಆದರೆ ಅನುಭವಿ ಮತ್ತು ತಜ್ಞ ಬೋಧಕ ಸಿಬ್ಬಂದಿ ಇಲ್ಲದ ಶಾಲೆಗಳಲ್ಲಿ ಓದುವ ಮಕ್ಕಳ ಭವಿಷ್ಯ ಪ್ರಶ್ನಾರ್ಥಕವಾಗುತ್ತಿದೆ. ಈ ಗಂಭೀರ ಸಮಸ್ಯೆಯನ್ನು ಪರಿಗಣಿಸಿ ಬಾಂಬೆ ಐಐಟಿ ವಿದ್ಯಾರ್ಥಿಗಳು ಶಾಲಾ ಮಕ್ಕಳಿಗಾಗಿ ವಿಶೇಷ ಯೂಟ್ಯೂಬ್ ಚಾನೆಲ್ ಆರಂಭಿಸಿ ಅಕ್ಷರಜ್ಞಾನ ನೀಡುತ್ತಿದ್ದಾರೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಹಲವು ಕಾಲೇಜುಗಳಲ್ಲಿದೆ. ಬಾಂಬೆ ಐಐಟಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿರುವ ಅತಿದೊಡ್ಡ ಸಂಘವಿದು. ಈ ಸಂಘದ ಕೆಲವು ವಿದ್ಯಾರ್ಥಿಗಳು ಸೇರಿ ‘ಒಪನ್‌ ಲರ್ನಿಂಗ್ ಇನಿಷಿಯೇಟಿವ್‌’ ಎಂಬ ಯೂಟ್ಯೂಬ್‌  ಚಾನೆಲ್‌ ಆರಂಭಿಸಿದ್ದಾರೆ. 6ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗಾಗಿ ಗಣಿತ ಮತ್ತು ವಿಜ್ಞಾನ ಪಾಠಗಳನ್ನು ವಿವರಿಸುವ ವಿಡಿಯೊಗಳನ್ನು ಈ ಚಾನೆಲ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ.

ಕನ್ನಡವೂ ಸೇರಿದಂತೆ, ತೆಲುಗು, ತಮಿಳು, ಒಡಿಯಾ, ಬಂಗಾಳಿ, ಮರಾಠಿ, ಮಲಯಾಳ, ಹಿಂದಿ ಮತ್ತುಇಂಗ್ಲಿಷ್‌ ಭಾಷೆಗಳಲ್ಲಿ ವಿಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ಪ್ರಸ್ತುತ ಲಕ್ಷಕ್ಕೂ ಅಧಿಕ ಮಂದಿ ಒಎಲ್‌ಐಗೆ ಚಂದಾದಾರರಾಗಿದ್ದಾರೆ.

ಸುಲಭವಾಗಿ ವಿವರಣೆ

ಬೀಜಗಣಿತ ಮತ್ತು ರಸಾಯನ ವಿಜ್ಞಾನದ ಪಾಠಗಳು ಎಲ್ಲರಿಗೂ ಸುಲಭವಾಗಿ ಅರ್ಥವಾಗುವುದಿಲ್ಲ. ಹಲವು ಶಾಲಾ ಮಕ್ಕಳು ಈ ಎರಡು ವಿಷಯಗಳಲ್ಲಿ ಹಿಂದಿರುವುದೇ ಇದಕ್ಕೆ ನಿರ್ಶನ. ಇದನ್ನು ಗಮನದಲ್ಲಿಟ್ಟುಕೊಂಡು, ಗ್ರಾಫಿಕ್‌ ತಂತ್ರಜ್ಞಾನದ ನೆರವಿನೊಂದಿಗೆ ಚಿತ್ರಗಳ ಸಮೇತ ವಿವರಿಸುತ್ತಾ ಲೆಕ್ಕಗಳನ್ನೇ ಆಟಗಳಾಗಿ ತೋರಿಸುತ್ತಾ ಕಲಿಸಲಾಗುತ್ತಿದೆ.

ಹಾಗೆಯೇ ವಿಜ್ಞಾನದ ಪಾಠಗಳನ್ನು ಗ್ರಾಫಿಕ್‌ ಕಾರ್ಡ್‌ಗಳ ಮೂಲಕ ವಿವರಿಸಲಾಗುತ್ತಿದೆ. ಸಿದ್ಧಾಂತಗಳು ಮತ್ತು ಪ್ರಯೋಗಗಳ ಬಗ್ಗೆ ವಿವರಿಸುವಾಗಿ ವಿಜ್ಞಾನಿಯ ಫೋಟೊಗಳು, ಪ್ರಯೋಗ ಮಾಡುವ ರೀತಿ, ಸಿದ್ದಾಂತಗಳನ್ನು ಅರ್ಥಮಾಡಿಕೊಳ್ಳುವ ರೀತಿಯನ್ನೂ ತಿಳಿಸಿಕೊಡುತ್ತಿದ್ದಾರೆ.

ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಬೋಧಿಸುವ ಯೂಟ್ಯೂಬ್‌ ಚಾನೆಲ್‌ಗಳು ಹಲವು ಇವೆ. ಆದರೆ ಬಹುತೇಕ ಚಾನೆಲ್‌ಗಳು ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಿಗೆ ಮಾತ್ರ ಸೀಮಿತವಾಗಿವೆ. ಪ್ರಾದೇಶಿಕ ಭಾಷೆಗಳಲ್ಲೂ ಬೋಧಿಸುವ ಚಾನೆಲ್‌ಗಳು ಕಡಿಮೆ. ಹೀಗಾಗಿ ಮಕ್ಕಳಿಗೆ ಹೆಚ್ಚು ಅರ್ಥವಾಗುವ ಅವರ ಭಾಷೆಗಳಲ್ಲೇ ಕಲಿಸಿದರೆ ಬೇಗ ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಭಾವನೆಯಿಂದ ಒಂಬತ್ತು ಭಾಷೆಗಳಲ್ಲಿ ವಿಡಿಯೊಗಳನ್ನು ಅಪ್‌ಲೋಡ್‌ ಮಾಡುತ್ತಿದ್ದೇವೆ ಎಂದು ಒಎಲ್ಐ ನಿರ್ವಾಹಕರು ಹೇಳುತ್ತಾರೆ.

2015ರಲ್ಲಿ ಐಐಟಿ–ಬಿ  ವಿದ್ಯಾರ್ಥಿಗಳು, ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುವ ‘ವಿದ್ಯಾ’ ಎಂಬ ಸ್ವಯಂ ಸೇವಾ ಸಂಸ್ಥೆಯೊಂದರ ಜತೆ ಕೆಲಸ ಮಾಡಿದರು. ಇಂಗ್ಲಿಷ್‌ ಜ್ಞಾನವಿಲ್ಲದ ಬಡ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ಪಾಠಗಳನ್ನು ಇಂಗ್ಲಿಷ್‌ನಲ್ಲಿ ಬೋಧಿಸುವುದು ಕಷ್ಟ ಎಂದು ಅರಿತು, ಪ್ರಾದೇಶಿಕ ಭಾಷೆಗಳಲ್ಲಿ ಪಾಠಗಳನ್ನು ಬೋಧಿಸಿದರು. ಇದರಿಂದ ಫಲಿತಾಂಶದಲ್ಲಿ ಸುಧಾರಣೆ ಆಗಿ, ಈ ಪ್ರಯೋಗ ಯಶಸ್ವಿಯೂ ಆಯಿತು.

2015ರಲ್ಲಿ ಬಾಂಬೆ ಐಐಟಿಯಲ್ಲಿ ಓದುತ್ತಿದ್ದ ಯಶ್‌ ಸಿಂಘ್ವಿ ಓಎಲ್‌ಐ ಆರಂಭಿಸಿದರು. ಇವರು ಪದವಿ ಗಳಿಸಿದ ನಂತರವೂ ಇತರೆ ವಿದ್ಯಾರ್ಥಿಗಳು ಆ ಕೆಲಸವನ್ನು ಮುಂದುವರಿಸಿದರು. ಪ್ರಸ್ತುತ ಆಯಾ ರಾಜ್ಯಗಳ ಪಠ್ಯಾಂಶಗಳನ್ನು ಆಧರಿಸಿ ವಿಡಿಯೊಗಳನ್ನು ಮಾಡಿ ಅಪ್‌ಲೋಡ್ ಮಾಡಲಾಗುತ್ತಿದೆ. ಮೊದಲ ವರ್ಷದ ವಿದ್ಯಾರ್ಥಿಗಳು ವಿಡಿಯೊಗಳನ್ನು ಮಾಡಿದರೆ, ಎರಡು ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳು ಎಡಿಟ್‌ ಮಾಡಿ ಗ್ರಾಫಿಕ್ ಸ್ಪರ್ಶ್ ನೀಡುತ್ತಿದ್ದಾರೆ. ಕೊನೆಗೆ ಆಯಾ ವಿಭಾಗಗಳ ಪ್ರಾಧ್ಯಪಕರು ಪರಿಶೀಲಿಸಿ ಅಪ್‌ಲೋಡ್ ಮಾಡಲು ಸೂಚಿಸುತ್ತಾರೆ.

ಹೆಚ್ಚಿನ ಮಾಹಿತಿಗೆ ನೋಡಿ: https://bit.ly/2rbpySa

ಪ್ರತಿಕ್ರಿಯಿಸಿ (+)