ಶುಕ್ರವಾರ, ಫೆಬ್ರವರಿ 28, 2020
19 °C

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ವಿಎಫ್‌ಎಕ್ಸ್ ಅಧ್ಯಯನ ಅವಕಾಶಗಳಿವೆಯೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

* ನನ್ನದು ಈ ವರ್ಷ ಹತ್ತನೇ ತರಗತಿ ಮುಗಿದಿದ್ದು, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗಕ್ಕೆ ದಾಖಲಾಗಿದ್ದೇನೆ. ಹತ್ತನೇ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಕಲಿತಿದ್ದು, ಈಗ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದೇನೆ. ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಅಕೌಂಟೆನ್ಸಿ, ಕಂಪ್ಯೂಟರ್ ಸೈನ್ಸ್ ಆಯ್ದುಕೊಂಡಿದ್ದು, ಯಾವ ರೀತಿಯಲ್ಲಿ ಓದಿದರೆ ಉತ್ತಮ ಸಾಧನೆ ಮಾಡಬಹುದು?

ಸುಮುಖ, ಹೊನ್ನಾವರ

ಸುಮುಖ, ಹತ್ತನೇ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಓದಿ, ಪಿಯುಸಿಯಲ್ಲಿ ಒಮ್ಮೆಲೇ ಇಂಗ್ಲಿಷ್ ಮಾಧ್ಯಮದಲ್ಲಿ ಓದುವಾಗ ಪ್ರಾರಂಭದಲ್ಲಿ ಕಷ್ಟವಾಗುತ್ತದೆ. ಆದರೆ ಸ್ವಲ್ಪ ಪರಿಶ್ರಮ ಮತ್ತು ಸಮಯ ಕೊಟ್ಟು ತಯಾರಿ ಮಾಡಿದರೆ ಸರಿ ಹೋಗುತ್ತದೆ. ಹೆಚ್ಚಾಗಿ ನಮ್ಮ ದೇಶದಲ್ಲಿ ಇಂಗ್ಲಿಷ್ ಭಾಷೆಯನ್ನು ‘ಸ್ಟೇಟಸ್’ ಮತ್ತು ಬುದ್ಧಿವಂತಿಕೆಯ ಪ್ರತಿರೂಪವಾಗಿ ನೋಡುವುದರಿಂದ ಇಂಗ್ಲಿಷ್ ಕಲಿಕೆಯು ಕಷ್ಟವಾಗಿ ಪರಿಣಮಿಸಿದೆ. ಆದರೆ ಮೊದಲಿಗೆ ನಾವು ಇಂಗ್ಲಿಷ್ ಭಾಷೆಯನ್ನು ಒಂದು ಭಾಷೆಯನ್ನಾಗಿ ಮಾತ್ರ ಸ್ವೀಕರಿಸಬೇಕು. ಆಗ ಇಂಗ್ಲಿಷ್ ಕಲಿಕೆಯು ಕೂಡ ಪ್ರಪಂಚದ ಬೇರೆ ಭಾಷೆ ಕಲಿತಂತೆ ಸುಲಭವಾಗುತ್ತದೆ. ಇಂಗ್ಲಿಷ್ ಅನ್ನು ಹೆಚ್ಚು ಕೇಳುವುದರಿಂದ, ನೋಡುವುದರಿಂದ, ಓದುವುದರಿಂದ ಮತ್ತು ಅಂಜಿಕೆ ಇಲ್ಲದೆ ಬಳಸುವುದರಿಂದ ಬೇಗ ಕಲಿಯಬಹುದು. ನಿಮ್ಮ ಭಾಷೆ ಬಲವಾಗುತ್ತ ಹೋದಂತೆ ವಿಷಯದ ಮೇಲೆ ಹಿಡಿತ ಕೂಡ ಬಲವಾಗುತ್ತದೆ.

ಇನ್ನು ಓದುವ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷೆಯ ದೃಷ್ಟಿಗಿಂತ ಹೆಚ್ಚಾಗಿ ಆ ವಿಷಯವನ್ನು ಅರ್ಥ ಮಾಡಿಕೊಳ್ಳುವ ಮತ್ತು ನೀವು ಓದುವ ವಿಷಯಗಳ ಮೂಲಭೂತ ಪರಿಕಲ್ಪನೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಆ ವಿಷಯಗಳ ಕುರಿತು ಜ್ಞಾನ ಪಡೆದುಕೊಳ್ಳುವುದು ಮುಖ್ಯ ಗುರಿ ಆದಾಗ ಅದು ಪರೀಕ್ಷೆಯಲ್ಲೂ ಅಂಕವನ್ನು ತರುತ್ತದೆ. ಅದರ ಹೊರತಾಗಿ ಪರೀಕ್ಷೆಯ ಸಮಯದಲ್ಲಿ ಆ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡರಾಯಿತು. ಯಾವ ವಿಷಯದಲ್ಲಿ ಹೆಚ್ಚು ಗಮನ ಬೇಕು, ಯಾವ ವಿಷಯದಲ್ಲಿ ಯಾವ ನಿರ್ದಿಷ್ಟ ಪರಿಕಲ್ಪನೆ ಕಷ್ಟವಾಗುತ್ತಿದೆ ಎಂದು ತಿಳಿದು ಸೂಕ್ತ ತಯಾರಿ ನಡೆಸಿ. ಮೊದಲಿಗೆ ನಿಮಗೆ ಹೇಗೆ ಓದಿದರೆ ಅರ್ಥ ಆಗುತ್ತದೆ ಎಂದು ತಿಳಿದುಕೊಳ್ಳಿ ಮತ್ತು ಆ ಪ್ರಕಾರ ಓದಿಕೊಳ್ಳಿ. ಆಯಾ ದಿನದ ಪಾಠವನ್ನು ಆಯಾ ದಿನ ಓದಿಕೊಳ್ಳುತ್ತ, ತರಗತಿಯ ಪಾಠದ ಜೊತೆಗೆ ಅಂತರ್ಜಾಲ ಮತ್ತು ಗ್ರಂಥಾಲಯದ ಸಹಾಯ ಪಡೆದು ಜ್ಞಾನವನ್ನು ಹೆಚ್ಚಿಸಿಕೊಳ್ಳಿ.

ಓದುವುದರ ಜೊತೆಗೆ ಇತರ ಕೌಶಲಗಳನ್ನು ಗಳಿಸಿಕೊಂಡಾಗ ನಿಮ್ಮ ಸಾಧನೆಯ ಹಾದಿ ಸುಗಮವಾಗುತ್ತದೆ. ಆಯಾ ವಿಷಯದಲ್ಲಿ ಈಗ ಆಗುತ್ತಿರುವ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಿ. ವಿಷಯಗಳ ಅಳವಡಿಕೆ ಬಗ್ಗೆ ತಿಳಿದುಕೊಳ್ಳಿ. ಮುಂದೆ ನೀವು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುತ್ತೀರಿ ಎಂದು ತಿಳಿದು ಅದಕ್ಕೆ ಬೇಕಾದ ಕೌಶಲವನ್ನು ಗಳಿಸಿಕೊಳ್ಳುವುದಕ್ಕೆ ತಯಾರಿ ನಡೆಸಿ. ಅದರ ಜೊತೆಗೆ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆ ಮತ್ತು ಆಟೋಟಗಳಲ್ಲಿ ಭಾಗವಹಿಸಿ ನಿಮ್ಮ ಸಂವಹನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ಕಾಲೇಜಿನ ಜೀವನವು ಪಠ್ಯಕ್ರಮಗಳ ಕಲಿಕೆ, ಹೊರಗಿನ ಜ್ಞಾನ, ಓದು, ಆಟೋಟ, ಸಾಂಸ್ಕೃತಿಕ ಚಟುವಟಿಕೆ, ಎಲ್ಲವೂ ಹದವಾಗಿ ಬೆರೆತಾಗ ಹಿತವಾಗಿರುತ್ತದೆ. ಶುಭಾಶಯ.

***

* ನಾನು ಐಟಿಐ ಮಾಡುತ್ತಿದ್ದೇನೆ. ನನಗೆ ಅನಿಮೇಶನ್‌ ಮತ್ತು ವಿಎಫ್‌ಎಕ್ಸ್‌ನಲ್ಲಿ ಆಸಕ್ತಿ ಇದೆ. ಅದರಲ್ಲಿ ಯಾವ ರೀತಿಯ ಉದ್ಯೋಗಗಳಿವೆ ಎಂಬುದನ್ನು ತಿಳಿಸಿಕೂಡಿ.

ಹೆಸರು, ಊರು ಬೇಡ

ಬಹಳ ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶವೇನೆಂದರೆ ಅನಿಮೇಶನ್ ಮತ್ತು ವಿಎಫ್‌ಎಕ್ಸ್ ಕ್ಷೇತ್ರವನ್ನು ಕೇವಲ ಕೆಲಸದ ಕ್ಷೇತ್ರವಾಗಿ ನೋಡದೆ ಒಂದು ಕಲಾಕ್ಷೇತ್ರವಾಗಿ ನೋಡಬೇಕಾಗುತ್ತದೆ. ಈ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡಲು ನಮಗೆ ಕಲಾಕ್ಷೇತ್ರದ ಬಗ್ಗೆ ಆಸಕ್ತಿ ಮತ್ತು ಕೌಶಲ ಇರಬೇಕು. ಈಗಾಗಲೇ ಅಂತಹ ಕೌಶಲಗಳಿಲ್ಲದಿದ್ದರೆ, ನಿಮಗೆ ಈ ಕ್ಷೇತ್ರದಲ್ಲಿ ಆಸಕ್ತಿ ಇರುವುದು ಹೌದಾದರೆ ಪ್ರಯತ್ನಪಟ್ಟು ಬೇಕಾಗಿರುವ ಕೌಶಲಗಳನ್ನು ಗಳಿಸಿಕೊಳ್ಳಬೇಕು. ಗಮನಿಸುವ ಕೌಶಲ, ಸೃಜನಶೀಲತೆ, ಡ್ರಾಯಿಂಗ್ ಅಥವಾ ಸ್ಕೆಚ್ ಮಾಡುವ ಕೌಶಲ, ತಾಳ್ಮೆ, ಸೂಕ್ಷ್ಮ ವಿವರಗಳನ್ನು ಗಮನಿಸುವ ಕೌಶಲ, ಕಂಪ್ಯೂಟರ್ ಕೌಶಲ ಇತ್ಯಾದಿಗಳನ್ನು ಬೆಳೆಸಿಕೊಂಡರೆ ಉತ್ತಮ ಅನಿಮೇಟರ್ ಹಾಗೂ ವಿಎಫ್‌ಎಕ್ಸ್ ತಂತ್ರಜ್ಞನಾಗಿ ಕೆಲಸ ಮಾಡಬಹುದು.

ಇನ್ನು ಅನಿಮೇಶನ್ ಮತ್ತು ವಿಎಫ್‌ಎಕ್ಸ್ ಕ್ಷೇತ್ರಗಳನ್ನು ಜೊತೆಯಾಗಿ ಹೇಳಿದರೂ ಕೂಡ ಇವೆರಡೂ ಹತ್ತಿರವಿರುವ ಭಿನ್ನವಾದ ಕ್ಷೇತ್ರಗಳು. ಈ ಕ್ಷೇತ್ರವು ಬಹಳ ವಿಶಾಲವಾದ ಕ್ಷೇತ್ರವಾಗಿದ್ದು ಅದರಲ್ಲೂ ಮಾಡೆಲಿಂಗ್, ವಿಶುವಲ್‌ ಎಫೆಕ್ಟ್‌, 3ಡಿ ಅನಿಮೇಶನ್, ಇಲ್ಲಸ್ಟ್ರೇಶನ್, ಗ್ರಾಫಿಕ್ಸ್, ಸೌಂಡ್ಸ್ ಇತ್ಯಾದಿ ಅನೇಕ ವಿಭಾಗಗಳಿದ್ದು ನಿಮ್ಮ ಆಸಕ್ತಿಯ ವಿಭಾಗ ಯಾವುದು ಎಂದು ತಿಳಿದುಕೊಳ್ಳಿ. ಅಲ್ಪಾವಧಿಯ ಸರ್ಟಿಫಿಕೇಶನ್ ಕೋರ್ಸ್‌ಗಳಿಂದ ಹಿಡಿದು, ಡಿಪ್ಲೊಮಾ ಕೋರ್ಸ್‌ ಹಾಗೂ ಪದವಿ ಹಂತದ ತನಕವೂ ಶಿಕ್ಷಣ ಕೋರ್ಸ್‌ಗಳು ಈ ಕ್ಷೇತ್ರದಲ್ಲಿ ಲಭ್ಯವಿವೆ.

ಕ್ಯಾರೆಕ್ಟರ್ ಡಿಸೈನರ್, ಗೇಮ್ ಡೆವಲಪರ್, ಸ್ಟೋರಿ ಬೋರ್ಡ್ ಆರ್ಟಿಸ್ಟ್, ಅನಿಮೇಟರ್, ಎಡಿಟರ್ ಆಗಿ ಜಾಹೀರಾತು ಕ್ಷೇತ್ರದಲ್ಲಿ, ಮಾಧ್ಯಮದಲ್ಲಿ, ಕಾರ್ಟೂನ್‌, ಸಿನಿಮಾ ಮತ್ತು ಟಿ.ವಿ ಕ್ಷೇತ್ರ, ವಿಡಿಯೋಗೇಮ್ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. ಇದಲ್ಲದೆ ಈಗ ಹೊಸತಾಗಿ ಬೆಳವಣಿಗೆ ಆಗುತ್ತಿರುವ ಇ-ಲರ್ನಿಂಗ್ ಕ್ಷೇತ್ರದಲ್ಲಿ ಶಿಕ್ಷಣ ಸಂಬಂಧಿತ ವಿಡಿಯೊ ತಯಾರಿ ಮಾಡುವ ಕ್ಷೇತ್ರದಲ್ಲಿಯೂ ಕೂಡ ಇಂತಹ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗಾವಕಾಶಗಳಿವೆ. ವಿಎಫ್‌ಎಕ್ಸ್ ಕೋರ್ಸ್ ಮಾಡಿದಲ್ಲಿ ವಿಶುವಲ್‌ ಎಫೆಕ್ಟ್‌ ಕ್ಷೇತ್ರದಲ್ಲಿ ಲೇಔಟ್ ಆರ್ಟಿಸ್ಟ್, ಕಂಪೋಸಿಟಿಂಗ್ ಆರ್ಟಿಸ್ಟ್, ಲೈಟಿಂಗ್ ಆರ್ಟಿಸ್ಟ್ ಇತ್ಯಾದಿ ಕೆಲಸ ಮಾಡಬಹುದು.

ಮೊದಲೇ ಹೇಳಿದಂತೆ ಇದು ಕೇವಲ ಉದ್ಯೋಗ ಕ್ಷೇತ್ರವಲ್ಲದೆ ಕಲಾ ಕ್ಷೇತ್ರವೂ ಆಗಿರುವುದರಿಂದ ಇಲ್ಲಿ ಉತ್ತಮ ಸ್ಪರ್ಧೆ ಕೂಡ ಇರುತ್ತದೆ. ಯಾರು ಹೆಚ್ಚು ಸೃಜನಶೀಲತೆ ಮತ್ತು ಬದ್ಧತೆಯಿಂದ ಕೆಲಸ ಮಾಡುತ್ತಾರೆಯೋ ಅವರಿಗೆ ಉತ್ತಮ ಭವಿಷ್ಯ ಇರುತ್ತದೆ. ಹಾಲಿವುಡ್ ಅಥವಾ ವಿದೇಶದ ಅನೇಕ ಪ್ರಸಿದ್ಧ ಸಿನಿಮಾಗಳಲ್ಲಿ ಭಾರತೀಯ ಅನಿಮೇಟರ್ಸ್ ಮತ್ತು ವಿಎಫ್‌ಎಕ್ಸ್ ತಂತ್ರಜ್ಞರು ಕೆಲಸ ಮಾಡಿದ್ದಾರೆ. ನೀವು ಉತ್ತಮ ಕೆಲಸಗಾರರಾಗಿದಲ್ಲಿ ಈ ಸಂಸ್ಥೆಗಳ ಜೊತೆಗೆ ಅಥವಾ ಫ್ರೀಲಾನ್ಸರ್ ಆಗಿಯೂ ದೇಶ ವಿದೇಶಗಳ ಪ್ರತಿಷ್ಠಿತ ಸಿನಮಾ ಪ್ರಾಜೆಕ್ಟ್‌ಗಳಿಗೆ ಕೆಲಸ ಮಾಡಬಹುದು. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು