ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಗೆ ಪೋಷಕರೂ ಸಿದ್ಧರಾಗಿ...

Last Updated 21 ಫೆಬ್ರುವರಿ 2019, 10:30 IST
ಅಕ್ಷರ ಗಾತ್ರ

ಪರೀಕ್ಷೆಗೆ ಮಕ್ಕಳನ್ನು ಸಿದ್ಧಗೊಳಿಸುವುದು ಹೇಗೆ? ಪೋಷಕರಿಗೆ ಇದೊಂದು ಯಕ್ಷಪ್ರಶ್ನೆ. ಪರೀಕ್ಷೆ ಸಮೀಪಿಸಿದಾಗ ತಾವು ದಿಗಿಲುಗೊಳ್ಳುವುದಲ್ಲದೇ ಮಕ್ಕಳನ್ನೂ ಭಯ ಪಡಿಸುತ್ತಾರೆ. ಮಕ್ಕಳಿಗೆ ಪರೀಕ್ಷೆ ಕಬ್ಬಿಣದ ಕಡಲೆ ಎನಿಸದೇ ನೀರು ಕುಡಿದಷ್ಟೇ ಸುಲಲಿತವಾಗಿಸುವಲ್ಲಿ ಪೋಷಕರ ಜವಾಬ್ದಾರಿಯೂ ಇದೆ. ಹಾಗಿದ್ದರೆ ಮಕ್ಕಳ ಅಧ್ಯಯನದಲ್ಲಿ ಪೋಷಕರ ಜವಾಬ್ದಾರಿ ಎಷ್ಟು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ ಶಿಕ್ಷಣತಜ್ಞ ವಾಸುದೇವ ಶರ್ಮಾ.

***

ಪರೀಕ್ಷಾ ಸಿದ್ಧತೆಯನ್ನು ನಮ್ಮಲ್ಲಿ ಭಯಾನಕ ಸ್ವರೂಪದಲ್ಲಿ ಪರಿಭಾವಿಸಲಾಗುತ್ತದೆ. ಮನೆಯವರು ಗಾಬರಿಯಾಗುವ ಜೊತೆಗೆ ಮಕ್ಕಳಿಗೂ ಭಯ ಹುಟ್ಟಿಸುತ್ತಾರೆ. ಶಿಕ್ಷಣ ಮಕ್ಕಳ ಆಸಕ್ತಿಯಾಗಬೇಕೇ ಹೊರತು, ಅದೊಂದು ಗುಮ್ಮ ಎಂಬ ಭಾವನೆ ಅವರಲ್ಲಿ ಮೂಡಬಾರದು. ಪರೀಕ್ಷಾ ಸಮಯದಲ್ಲಿ ಮಾತ್ರವೇ ತಡಬಡಿಸಿ ತಯಾರಿ ಮಾಡುವುದಲ್ಲ. ಓದಿನ ಬಗ್ಗೆ ಮಕ್ಕಳಲ್ಲಿ ಪ್ರೀತಿ, ಆಸಕ್ತಿ ಮೂಡಿಸುವ ಮೂಲಕ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಮಕ್ಕಳನ್ನು ಸನ್ನದ್ಧಗೊಳಿಸಬೇಕು.

ವಾಸುದೇವ ಶರ್ಮಾ
ವಾಸುದೇವ ಶರ್ಮಾ

ಬಹುಮುಖ್ಯವಾಗಿ ಮಕ್ಕಳಿಗೆ ಶಿಕ್ಷಣದ ಮಹತ್ವದ ಕುರಿತು ಅರಿವು ಬೆಳೆಸಬೇಕು. ಪದೇ ಪದೇ ಓದು, ಓದು ಎನ್ನುತ್ತಿದ್ದರೆ ಅವರಲ್ಲಿ ಓದಿನ ಬಗ್ಗೆ ನಿರಾಸಕ್ತಿ, ಜಿಗುಪ್ಸೆ ಮೂಡಬಹುದು. ಕಲಿಕೆಯಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸಲು ವಿಭಿನ್ನ, ವೈವಿಧ್ಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಶಿಕ್ಷಣವೇ ಒತ್ತಡ ಎನ್ನುವಂತಹ ಮನಃಸ್ಥಿತಿಯನ್ನು ಅವರಲ್ಲಿ ಬೆಳೆಸಬಾರದು.

ಮಕ್ಕಳು ಪರೀಕ್ಷಾ ಸಮಯದಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಬೇಕು. ಅವರ ಓದಿನ ಬಗ್ಗೆ ವಿಚಾರಿಸಿಕೊಳ್ಳಬೇಕು. ಅವರನ್ನು ಬೇರೆ ಮಕ್ಕಳೊಂದಿಗೆ ಹೋಲಿಸಲೇಬಾರದು. ವಿಶ್ವೇಶ್ವರಯ್ಯ, ಅಬ್ದುಲ್‌ ಕಲಾಂ ಅವರಂತಹ ಸಾಧಕರ ಹೆಸರುಗಳನ್ನು ಹೇಳಿ ಹುರಿದುಂಬಿಸಬೇಕು. ಅವರಂತೆ ನೀನು ಆಗು ಎನ್ನುವುದಕ್ಕಿಂತ ಅವರೆಲ್ಲ ಸಾಧಿಸಿದ್ದಾರೆ ನಿನ್ನಿಂದಲೂ ಸಾಧನೆ ಸಾಧ್ಯವಿದೆ ಎಂಬಂತಹ ಮಾತುಗಳನ್ನು ಆಡಬೇಕು.

ಮಕ್ಕಳು ಏನು ಓದುತ್ತಿದ್ದಾರೆ, ಅವರಿಗೆ ಓದುವಾಗ ಯಾವೆಲ್ಲ ಸಮಸ್ಯೆಗಳಾಗುತ್ತಿವೆ ಎಂಬುದನ್ನು ಗಮನಿಸಬೇಕು. ಪರೀಕ್ಷೆ ಸಮೀಪಿಸುತ್ತಿರುವಾಗ ಉರು ಹೊಡೆಯುವ ಮಕ್ಕಳಿಗೆ ಪಠ್ಯವನ್ನು ಅರ್ಥ ಮಾಡಿಸಿ, ಓದಲು ನೆರವಾಗಬೇಕು. ಮಕ್ಕಳು ಎಷ್ಟರ ಮಟ್ಟಿಗೆ ಕಲಿತಿದ್ದಾರೆ ಎಂಬುದನ್ನು ಅವಲೋಕಿಸಬೇಕು. ಅವರಿಗೆ ಪ್ರಶ್ನೆಗಳಿಗೆ ಉತ್ತರ ಗೊತ್ತಿರದಾಗ ಹಂಗಿಸದೆ, ಉತ್ತರ ಕಂಡುಕೊಳ್ಳಲು ಸಹಾಯ ಮಾಡಬೇಕು.

ಓದುವ ಸಮಯದಲ್ಲಿ ಅವರಿಗೆ ಬೈಯುವುದು, ಹೊಡೆಯುವುದನ್ನು ಮಾಡಲೇಬೇಡಿ. ನಿನ್ನ ಕೈಯಲ್ಲಿ ಇದು ಸಾಧ್ಯವಿಲ್ಲ. ನೀನು ಈ ಬಾರಿ ಪಾಸ್‌ ಆದ ಹಾಗೆಯೇ... ಹೀಗೆಲ್ಲ ಹೀಯಾಳಿಸುವ ಪೋಷಕರು ಇದ್ದಾರೆ. ಇಂತಹ ಮಾತುಗಳು ಮಕ್ಕಳ ಆತ್ಮವಿಶ್ವಾಸವನ್ನೇ ಕುಗ್ಗಿಸಬಹುದು. ಮಕ್ಕಳಲ್ಲಿ ಭರವಸೆ ಮೂಡಿಸುವ ಮಾತುಗನ್ನಾಡುವುದು ತುಂಬಾ ಮುಖ್ಯ.

ಅಂಗಳದಲ್ಲಿ ಕುಳಿತು ಅಕ್ಕಪಕ್ಕದವರ ಜತೆ ಹರಟೆ ಹೊಡೆಯುವ ಸ್ವಭಾವ ಹಲವರಲ್ಲಿ ಇರುತ್ತದೆ. ಇದು ಮಕ್ಕಳ ಮೇಲೆ ಗಾಢ ಪರಿಣಾಮ ಬೀರುತ್ತದೆ. ಮಕ್ಕಳ ಮುಂದೆ ಅನಗತ್ಯ ಹರಟೆಗಳಿಗೆ ಕಡಿವಾಣ ಇರಲಿ. ಓದಿ ಯಾರು ದೊಡ್ಡವರಾಗಿದ್ದರೆ ಎಂಬ ಮಾತುಗಳನ್ನು ಅವರ ಮುಂದೆ ಆಡದಿರಿ. ಶಿಕ್ಷಣ ಉದ್ಯೋಗಕ್ಕೋಸ್ಕರ ಅಲ್ಲ. ಅದು ಜ್ಞಾನರ್ಜನೆ. ಇದು ಜೀವನದ ಹಲವು ಮಗ್ಗಲುಗಳಲ್ಲಿ ನೆರವಿಗೆ ಬರುವಂತಹದು. ಹಾಗಾಗಿ ಅದರ ಪ್ರಾಮುಖ್ಯ ಕುರಿತು ಮಕ್ಕಳಿಗೆ ತಿಳಿಹೇಳಿ.

ಓದುವ ವಾತಾವರಣ ಹೀಗಿರಲಿ...
*ಮಕ್ಕಳಿಗೆ ಓದಲು ನಿರ್ದಿಷ್ಟವಾದ ಸ್ಥಳವಿರಬೇಕು. ಅಲ್ಲಿ ಶಬ್ದ ಕಡಿಮೆ ಇರಬೇಕು.
*ಓದುವ ಕೋಣೆಯಲ್ಲಿ ಬೆಳಕಿರಬೇಕು.
*ಮಕ್ಕಳಿರುವ ಮನೆಯಲ್ಲಿ ಟಿವಿ, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ.
*ಮನೆಯವರು ವಿವಿಧ ಪುಸ್ತಕಗಳನ್ನು ಓದುವುದರಿಂದ ಮಕ್ಕಳಿಗೂ ಓದಲು ಆಸಕ್ತಿ ಬರುತ್ತದೆ.
*ಮಕ್ಕಳನ್ನು ಬೇರೆಯವರೊಂದಿಗೆ ಹೋಲಿಸಬಾರದು.
*ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ ಭರಿತ ಆಹಾರ ನೀಡಬೇಕು.

ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿ

ಶೈಕ್ಷಣಿಕ ಮತ್ತು ಪಠ್ಯೇತರ ಪುಸ್ತಕಗಳ ಓದಿನ ನಡುವೆ ನಮ್ಮಲ್ಲಿ ವಿಭಜನೆಯ ಪರದೆ ಇರುತ್ತದೆ. ಪಠ್ಯ ಪುಸ್ತಕಗಳನ್ನು ಓದಲು ಮಾತ್ರವೇ ಅತಿಯಾದ ಪ್ರಾಮುಖ್ಯ ನೀಡುತ್ತಿರುವುದರಿಂದ ಮಕ್ಕಳಲ್ಲಿ ಅಂಕಗಳಿಸಲು ಉತ್ತೀರ್ಣರಾಗಲು ಮಾತ್ರವೇ ಓದುತ್ತಿದ್ದೇವೆ ಎಂಬ ಭಾವನೆ ಬರುತ್ತದೆ. ಇದರಿಂದ ಅವರು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ.

ಸುಲಲಿತವಾಗಿ ಮಕ್ಕಳಿಗೆ ಓದಲು ಬಂದರೆ ತಾವು ಏನು ಓದುತ್ತಿದ್ದೇವೆ ಎಂಬುದು ಅವರಿಗೆ ಅರ್ಥವಾಗುತ್ತದೆ. ಎಷ್ಟೋ ಮನೆಯಲ್ಲಿ ಪಠ್ಯ ಪುಸ್ತಕದ ಹೊರತಾಗಿ ಮಕ್ಕಳಿಗೆ ಬೇರೆ ಪುಸ್ತಕಗಳನ್ನು ಓದಲು ಪ್ರೋತ್ಸಾಹ ನೀಡುವುದಿಲ್ಲ. ಓದುವುದರಿಂದ ಭಾಷೆ ಬೆಳೆಯುತ್ತದೆ. ಪದಸಂಪತ್ತು ಹೆಚ್ಚಾದಾಗ ಓದಿದ್ದು ಅರ್ಥವಾಗುತ್ತದೆ. ಕಥೆ ಪುಸ್ತಕಗಳು ಮಕ್ಕಳಲ್ಲಿ ಏಕತಾನತೆ ದೂರವಾಗಿಸುತ್ತದೆ. ಮಾನಸಿಕ ಮತ್ತು ಬೌದ್ಧಿಕವಾಗಿ ಮಕ್ಕಳು ಸಮರ್ಥರಾಗುವಂತೆ ಮಾಡುವ ಜೊತೆಗೆ ಒತ್ತಡದಿಂದ ಹಗುರಗೊಳಿಸುವ ಹೊಸ ದಾರಿಯನ್ನು ತೋರುತ್ತದೆ.

ಇತ್ತೀಚೆಗೆ ನಾನು ಹೈಸ್ಕೂಲಿನ ಕೆಲವು ಮಕ್ಕಳನ್ನು ಭೇಟಿಯಾದೆ. ಅವರೆಲ್ಲ ಕನ್ನಡ ಮಾಧ್ಯಮದವರೇ. ಆದರೆ ದಿನಪತ್ರಿಕೆಯನ್ನು ತಪ್ಪಿಲ್ಲದೇ ಓದಲು ಅವರಿಗೆ ಬರುತ್ತಿರಲಿಲ್ಲ. ಮಕ್ಕಳಲ್ಲಿ ದಿನಪತ್ರಿಕೆ, ಕಾಮಿಕ್ಸ್‌, ಕಥೆಪುಸ್ತಕಗಳನ್ನು ಓದುವ ಹವ್ಯಾಸ ಇರದಿರುವುದೇ ಈ ಕೊರತೆಗೆ ಕಾರಣ. ಮಕ್ಕಳು ಪಠ್ಯದ ಓದಿಗಷ್ಟೇ ಸೀಮಿತವಾಗದಿರಲಿ. 8 , 9ನೇ ತರಗತಿಯಲ್ಲಿದ್ದಾಗ ಆ ಪಠ್ಯಗಳು ಕಷ್ಟ ಎನಿಸುತ್ತವೆ. ಅದೇ ನಾವು ಪದವಿ ಹಂತಕ್ಕೆ ಬಂದಾಗ ಮತ್ತದೇ ಹೈಸ್ಕೂಲ್‌ ಪುಸ್ತಕಗಳನ್ನು ಹಿಡಿದಾಗ ಅಯ್ಯೋ ಇದು ಇಷ್ಟೇನಾ ಅನಿಸುತ್ತದೆ. ಇದಕ್ಕೆ ನಮ್ಮ ಭಾಷಾ ಸಂಪತ್ತಿನ ಬೆಳವಣಿಗೆಯೇ ಕಾರಣ. ಓದು ಪ್ರಪಂಚವನ್ನು ಪರಿಚಯಿಸುತ್ತದೆ. ಹೊರ ಪ್ರಪಂಚಕ್ಕೆ ತೆರೆದುಕೊಂಡಾಗ ಪದಗಳು, ವಾಕ್ಯಗಳು, ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಆಗ ಪಠ್ಯ ಪುಸ್ತಕಗಳು ಸರಳ ಎನಿಸತೊಡಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT