ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ ಸಭೆ: ಪಾಲಕರಿಗೆ ಕಿವಿಮಾತು

Last Updated 21 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

‘ನಿಮ್ಮಪ್ಪನನ್ನು ಕರೆದುಕೊಂಡು ಬಾ’. ಮರುದಿನ ಆ ಹುಡುಗ ತಂದೆಯನ್ನು ಕರೆದುಕೊಂಡು ಶಾಲೆಗೆ ಹೋದ. ಶಿಕ್ಷಕರು ‘ನಿಮ್ಮ ಮಗ ಸರಿಯಾಗಿ ಓದುತ್ತಿಲ್ಲ. ಬಹಳ ತುಂಟತನ ಮಾಡುತ್ತಾನೆ’ ಎಂದರು. ತಂದೆ ಮಗನ ಕಪಾಳಕ್ಕೆ ರಪ್‍ ಎಂದು ಕೊಟ್ಟು ‘ಇದನ್ನು ನೀವೇ ಮಾಡಿದ್ದರೆ ನನ್ನನ್ನು ಕರೆಸುವ ಪ್ರಮೇಯವೇ ಇರುತ್ತಿರಲಿಲ್ಲ’ ಎಂದು ಹೊರಟುಹೋದರು!

ಇದು ಸುಮಾರು ಎಪ್ಪತ್ತು ವರ್ಷದ ಹಿಂದಿನ ಮಾತು!
ಇಂದಿನ ಹೊಸಕಾಲದ ಶಾಲೆಗಳಲ್ಲಿ ಪೋಷಕ-ಶಿಕ್ಷಕ ಸಭೆ ಎಂಬುದು ತನ್ನ ಮೂಲ ಉದ್ದೇಶಗಳನ್ನು ಬಿಟ್ಟು ಪ್ರತಿಷ್ಠೆಯ ಪ್ರದರ್ಶನದ ಅಖಾಡವಾಗುವತ್ತ ಸಾಗುತ್ತಿರುವುದು ಆತಂಕಕಾರಿ ಸಂಗತಿ. ಸರಿಯಾಗಿ ಬಳಸಿಕೊಂಡರೆ ಪೋಷಕ–ಶಿಕ್ಷಕ ಸಭೆ ನಿಜವಾಗಿ ಮಗುವಿನ ಭವಿಷ್ಯವನ್ನು ಸುವರ್ಣಾಕ್ಷರಗಳಲ್ಲಿ ಬರೆಯುತ್ತದೆ. ಅದರಲ್ಲಿ ನಮ್ಮ ಎಂದರೆ, ಪೋಷಕರ ಪಾತ್ರ ಹೇಗಿರಬೇಕೆಂದು ವರ್ಷದ ಮಧ್ಯಭಾಗವಾದ ಈ ಸಂದರ್ಭದಲ್ಲಿ ನೋಡೋಣ.

ಏಳನೇ ತರಗತಿ ಓದುತ್ತಿರುವ ಶ್ರಾವಂತಿಯನ್ನು ಮಾತನಾಡಿಸುತ್ತಾ ನಿನಗೆ ನಿಮ್ಮ ಶಾಲೆಯ ಯಾವ ಕಾರ್ಯಕ್ರಮ ಇಷ್ಟವಾಗುವುದಿಲ್ಲ ಎಂದು ಕೇಳಿದಾಗ ಅವಳಿಂದ ಬಂದ ಉತ್ತರ ಪೋಷಕರ ಸಭೆ ಎಂಬುದು. ಕಾರಣವೇನೆಂದು ಕೇಳಿದಾಗ ತಿಳಿದು ಬಂದದ್ದು ನಮ್ಮ ತಾಯಿ ಪ್ರತಿ ಬಾರಿ ಪೋಷಕರ ಸಭೆಗೆ ಹೋಗಿಬಂದಾಗಲೂ ನಾಲ್ಕೈದು ದಿನ ನನ್ನ ಬಳಿ ಮಾತನಾಡುವುದಿಲ್ಲ, ಕೆಲವೊಮ್ಮೆ ಶಿಕ್ಷಿಸುತ್ತಾರೆ. ಏಕೆಂದರೆ ನಮ್ಮ ಶಿಕ್ಷಕರು ನಾನು ಎಲ್ಲಾ ವಿಷಯದಲ್ಲೂ ಹಿಂದುಳಿದಿದ್ದೇನೆ. ಮುಂದಿನ ಬಾರಿ ಬೇರೆಡೆ ಸೇರಿಸಿ ಎಂದು ಪೋಷಕರ ಸಭೆಯಲ್ಲಿ ಹೇಳಿರುತ್ತಾರೆ. ಆದ್ದರಿಂದ ನನ್ನ ತಾಯಿ ನನ್ನನ್ನು ಹೊಡೆಯುತ್ತಾರೆ. ನಾನು ಸ್ಪೋರ್ಟ್ಸ್‌ನಲ್ಲಿ ತುಂಬಾ ಮುಂದಿದ್ದೇನೆ. ಶಾಲೆಯಲ್ಲಿ ಎಲ್ಲರೂ ನನ್ನನ್ನು ಚಾಂಪಿಯನ್ ಎಂದೇ ಕರೆಯುತ್ತಾರೆ. ಆದರೆ ಶಿಕ್ಷಕರು ಈ ವಿಷಯವನ್ನು ನನ್ನ ತಾಯಿಗೆ ಹೇಳಿ ನನ್ನನ್ನೇಕೆ ಹೊಗಳುವುದಿಲ್ಲ ಎಂದು ದುಃಖಿಸಿದ್ದಳು. ಮಕ್ಕಳ ಇತರ ಸಾಧನೆಗಳನ್ನು ಕಡೆಗಣಿಸಿ ಕೇವಲ ಶೈಕ್ಷಣಿಕ ಸಾಧನೆಗಳನ್ನು ಗಣನೆಗೆ ತೆಗೆದುಕೊಳ್ಳುವ ಪೋಷಕರು ಮತ್ತು ಶಿಕ್ಷಕರ ಧೋರಣೆಗಳು ಈ ತೆರನಾದ ದುಃಖಕ್ಕೆ ಕಾರಣ. ಅಲ್ಲದೇ ಪೋಷಕರ ಸಭೆಗಳು ಮಕ್ಕಳ ಬಗ್ಗೆ ದೋಷಾರೋಪಣೆ ಮಾಡುವ ವೇದಿಕೆಯಾಗುತ್ತಿವೆ.

ಹಿಂದೆಲ್ಲಾ ಪೋಷಕರ ಸಭೆಗಳು ವರ್ಷಕ್ಕೆ ಎರಡು ಮೂರು ಮಾತ್ರ ನಡೆಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಎಲ್ಲ ಶಾಲೆಗಳಲ್ಲೂ ತಿಂಗಳಿಗೊಮ್ಮೆ ಪೋಷಕರ ಸಭೆಯನ್ನು ನಡೆಸುವ ಪರಿಪಾಠ ಶುರುವಾಗಿದೆ. ಆದರೆ ಪೋಷಕರ ಸಭೆಯ ನಡಾವಳಿ ಮತ್ತು ಅದರಲ್ಲಿ ಭಾಗವಹಿಸುವಿಕೆ ಯಾಂತ್ರಿಕವಾಗುತ್ತಿದೆ. ಪೋಷಕರ ಸಭೆಗೆ ಪಾಲಕರು ಹಾಜರಾಗದಿದ್ದಲ್ಲಿ ದಂಡ ವಿಧಿಸುವರು ಅಥವಾ ಮಕ್ಕಳನ್ನು ಶಿಕ್ಷಿಸುವರೆಂಬ ಭಯದಿಂದಲೂ ಅನಿವಾರ್ಯವಾಗಿ ಪೋಷಕರ ಸಭಗೆ ಹಾಜರಾಗುವ ಪೋಷಕರನ್ನು ಕಾಣಬಹುದು.

ಮಕ್ಕಳ ಸರ್ವತೋಮುಖ ವಿಕಾಸದಲ್ಲಿ ಶಾಲೆ ಮತ್ತು ಶಿಕ್ಷಕರಷ್ಟೇ ಪಾತ್ರ ಕುಟುಂಬ ಹಾಗೂ ಪಾಲಕರದ್ದು ಎಂಬುದನ್ನು ಮರೆಯಬಾರದು.ಮಗು ಅತಿಹೆಚ್ಚಿನ ಸಮಯವನ್ನು ಪಾಲಕರೊಂದಿಗೆ ಕಳೆಯುವುದರಿಂದ ಮಗುವಿನ ಬಗ್ಗೆ ಹೆಚ್ಚಿನ ವಿಷಯಗಳನ್ನು ಅವರಿಂದ ಶಿಕ್ಷಕರು ತಿಳಿಯಲು ಅಂತೆಯೇ, ಶೈಕ್ಷಣಿಕ ವಿಷಯಗಳು ಮತ್ತು ತಮ್ಮ ಮಗುವಿನ ತರಗತಿಯಲ್ಲಿನ ವರ್ತನೆಯನ್ನು ತಿಳಿಯಲು ಪೋಷಕರಿಗೆ ಇದೊಂದು ಸದಾವಕಾಶ. ಇದು ಶಿಕ್ಷಿಸಲು ವಿಷಯ ತಿಳಿದುಕೊಳ್ಳುವ ಸಂದರ್ಭವಲ್ಲ ಎಂಬುದನ್ನು ಶಿಕ್ಷಕರು ಹಾಗೂ ಪೋಷಕರು ಮನಗಾಣಬೇಕು.

ಪೋಷಕರು ಶಿಕ್ಷಕರಿಗಿಂತ ಹೆಚ್ಚಿನ ವಿದ್ಯಾವಂತರು ಆರ್ಥಿಕವಾಗಿ ಸಧೃಡರು ಆಗಿರಬಹುದು. ಆದರೆ ಪೋಷಕರ ಸಭೆಯಲ್ಲಿ ಅವರು ತಮ್ಮ ಪಾಂಡಿತ್ಯಪ್ರದರ್ಶನವನ್ನು ಮಾಡದೇ, ಶಿಕ್ಷಕರಿಗೆ ಸಲಹೆ–ಸೂಚನೆಗಳನ್ನು ನೀಡುವ ಬದಲಾಗಿ ಮಕ್ಕಳ ಶೈಕ್ಷಣಿಕತೆಗೆ ಸಂಬಂಧಿಸಿದ ಅವರ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕು. ಶಿಕ್ಷಕರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು. ಪೋಷಕರ ಸಭೆಯಲ್ಲಿ ಸಮಯಾಭಾವವಿದ್ದಲ್ಲಿ ಮುಖ್ಯವಾದ ವಿಷಯವನ್ನು ಮಾತ್ರ ಚರ್ಚಿಸುವುದು ಒಳಿತು. ಪ್ರತಿಬಾರಿ ಪೋಷಕರ ಸಭೆಯಲ್ಲಿನ ಪೋಷಕರ ಭಾಗವಹಿಸುವಿಕೆ ಮಗುವಿನ ಶೈಕ್ಷಣಿಕತೆಯ ಬಗ್ಗೆ ಅವರು ಹೊಂದಿರುವ ಆಸಕ್ತಿಯನ್ನು ಸೂಚಿಸುತ್ತದೆ. ಮಗುವಿನ ನಡವಳಿಕೆಗಳ ಬಗ್ಗೆ ಶಿಕ್ಷಕರು ಮಾತನಾಡುವಾಗ ಜಾಗರೂಕತೆಯಿಂದ ಗಮನಿಸಿ. ಮಗುವಿನ ಓದು–ಬರಹಗಳ ಬಗ್ಗೆ ಸಹಕಾರ ನೀಡುವಲ್ಲಿ ಪೋಷಕರ ಸಭೆ ಮಹತ್ವದ ಪರಿಣಾಮವನ್ನು ಬೀರುವುದು.

ಪೋಷಕರ ಸಭೆಯಲ್ಲಿ ಪೋಷಕರ ಭಾಗವಹಿಸುವಿಕೆ ಹೀಗಿರಲಿ: ನಿಮ್ಮ ಮಗುವಿನ ಆಸಕ್ತಿ ಮತ್ತು ಅಗತ್ಯಗಳನ್ನು ಶಿಕ್ಷಕರೊಂದಿಗೆ ಹಂಚಿಕೊಳ್ಳಿ. ನಿಮ್ಮ ಮಗುವಿನ ಗ್ರಹಿಸುವಿಕೆ ಮತ್ತು ತರಗತಿಯಲ್ಲಿನ ವರ್ತನೆಯನ್ನು ತಿಳಿಯಿರಿ. ಮೌಲ್ಯಗಳ ಬೆಳವಣಿಗೆಗಾಗಿ ಶಾಲೆ ಅಥವಾ ತರಗತಿಯಲ್ಲಿ ಹಮ್ಮಿಕೊಳ್ಳಲಾದ ಚಟುವಟಿಕೆಗಳ ಬಗ್ಗೆ ತಿಳಿಯಿರಿ.ಪಠ್ಯೇತರ ಚಟುವಟಿಕೆಗಳಲ್ಲಿ ಮಗುವಿನ ಭಾಗವಹಿಸುವಿಕೆ ಹಾಗು ಸಮವಯಸ್ಕರೊಂದಿಗೆ ನಿಮ್ಮ ಮಗುವಿನ ಒಡನಾಟವನ್ನು ತಿಳಿಯಿರಿ. ಮಗುವಿಗೆ ಶಾಲೆಯಿಂದ ನೀಡುವ ಮನೆಗೆಲಸ ಮಾಡಿಸುವಲ್ಲಿ ಮಗುವಿಗೆ ಅಥವಾ ನಿಮಗೆ ಎದುರಾದ ಸಂದೇಹ ಮತ್ತು ಸಮಸ್ಯೆಗಳಿದ್ದಲ್ಲಿ ಕೇಳಿ ಪರಿಹರಿಸಿಕೊಳ್ಳಿ. ಯಾವ ವಿಷಯದ ಕಲಿಕೆಗೆ ಸಂಬಂಧಿಸಿದಂತೆ ಮಗುವಿಗೆ ಹೆಚ್ಚಿನ ತರಬೇತಿ ಮತ್ತು ಸಹಕಾರದ ಅಗತ್ಯವಿದೆ ಎಂಬುದನ್ನು ತಿಳಿಯಿರಿ.

ನಿಮ್ಮ ಮಗು ಉತ್ತಮ ಕಲಿಕಾರ್ಥಿಯಾಗಲು ನೆರವಾಗುವ ಶಾಲಾಂಶಗಳ ಬಗ್ಗೆ ತಿಳಿಯಿರಿ. ಪಠ್ಯಕ್ರಮದ ಬಗ್ಗೆ ಗೊಂದಲವಿದ್ದಲ್ಲಿ ಪರಿಹರಿಸಿಕೊಳ್ಳಿ.
ಮಕ್ಕಳನ್ನು ಶಿಕ್ಷಿಸುವುದು ಹಾಗೂ ಶಿಕ್ಷೆಯ ಹೆದರಿಕೆ ಹುಟ್ಟಿಸುವುದು – ಎರಡೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ ಮಕ್ಕಳಲ್ಲಿ ಶಿಸ್ತನ್ನು ರೂಢಿಸಲು ಶಾಲೆಯಲ್ಲಿ ಕೈಗೊಂಡಿರುವ ತಂತ್ರಗಳು ಹಾಗೂ ಅದಕ್ಕಾಗಿ ನೀವು ನೀಡಬೇಕಾದ ಸಹಕಾರದ ಬಗ್ಗೆ ತಿಳಿಯಿರಿ.
ನಿಮ್ಮ ಮಗು ನಿಮಗೆ ಯಾವುದಾದರೂ ವಿಷಯವನ್ನು ತಮ್ಮ ಶಿಕ್ಷಕರೊಂದಿಗೆ ಚರ್ಚಿಸಲು ತಿಳಿಸಿದ್ದರೆ ಅದರ ಬಗ್ಗೆ ಚರ್ಚಿಸಿ. ಮನೆಗೆಲಸ ಹಾಗೂ ಮೌಲ್ಯಮಾಪನದ ಬಗ್ಗೆ ಅಸಮಾಧಾನಗಳಿದ್ದಲ್ಲಿ ಚರ್ಚಿಸಿ.

ಮಕ್ಕಳ ಪರೀಕ್ಷಾ ಸಿದ್ಧತಾ ಕ್ರಮಗಳ ಬಗ್ಗೆ ಚರ್ಚಿಸಿ. ಮಗುವಿನ ಸಾಮರ್ಥ್ಯ ಮತ್ತು ಸವಾಲುಗಳನ್ನು ಶಿಕ್ಷಕರು ಯಾವ ರೀತಿಯಾಗಿ ಪರಿಗಣಿಸಿರುವರೆಂಬುದನ್ನು ತಿಳಿಯಿರಿ. ನಿಮ್ಮ ಮಗುವಿನ ಶೈಕ್ಷಣಿಕ ಪ್ರಗತಿಗೆ ಇನ್ನೂ ಹೆಚ್ಚಿನ ಸಹಾಯವನ್ನು ನೀವು ಯಾವ ರೀತಿ ಮಾಡಬಹುದೆಂಬುದನ್ನು ಕೇಳಿ ತಿಳಿಯಿರಿ.

ಮುಖ್ಯವಾಗಿ ಇತರೆ ಪೋಷಕರು ತಮ್ಮ ಮಗುವಿನ ಬಗ್ಗೆ ಚರ್ಚಿಸುವ ವಿಷಯವನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ಇದರಿಂದ ನಿಮ್ಮ ಮಗುವಿನ ಶೈಕ್ಷಣಿಕ ಸಂದೇಹಗಳಿಗೆ ನಿಮಗೆ ಉತ್ತರ ದೊರೆಯುತ್ತದೆ. ಅಸಂಬದ್ಧ ಪ್ರಶ್ನೆಗಳನ್ನು/ಸಮಸ್ಯೆಗಳನ್ನು ಪ್ರಸ್ತುತ ಪಡಿಸಬೇಡಿ. ಉದಾ: ನಮ್ಮ ಮಗು ಯಾವಾಗಲೂ ಟಿ.ವಿ. ನೋಡುತ್ತಿರುತ್ತಾನೆ, ಮೊಬೈಲ್‌ನಲ್ಲಿ ಗೇಮ್ ಆಡುತ್ತಾನೆ ಏನು ಮಾಡಬೇಕು? ಇತ್ಯಾದಿ (ಇದನ್ನು ಸಂಪೂರ್ಣ ನಿಭಾಯಿಸಬೇಕಾದದ್ದು ಪಾಲಕರ ಹೊಣೆ).

ಶಾಲೆಯಲ್ಲಿ ಮಕ್ಕಳ ಆಪ್ತ ಸಮಾಲೋಚಕರ ಲಭ್ಯತೆಯಿದ್ದಲ್ಲಿ ಪ್ರತಿ ಪೋಷಕರ ಸಭೆಯಲ್ಲಿ ಅವರ ಉಪಸ್ಥಿತಿಯನ್ನು ಶಾಲೆಯಿಂದ ನಿರೀಕ್ಷಿಸಿ. ಅವರೊಂದಿಗಿನ ಭೇಟಿಗಳನ್ನು ನಿಗದಿಪಡಿಸಿಕೊಳ್ಳಿ.

ಪೋಷಕರ ಸಭೆಯಲ್ಲಿ ಶಿಕ್ಷಕರ ಹೇಳಿಕೆಗಳಿಗೆ ಕೋಪ, ಉದಾಸೀನ ವ್ಯಕ್ತಪಡಿಸಬೇಡಿ. ಕೆಲವೊಮ್ಮೆ ಶಿಕ್ಷಕರ ಕಡೆಯಿಂದ ತಪ್ಪು ನಡೆದಿದ್ದರಬಹುದಾದರೂ ಹಾಗೂ ಬೋಧನಾ ವಿಧಾನಗಳಲ್ಲಿ ದೋಷ ಕಂಡುಬಂದಿದ್ದಲ್ಲಿ ವೈಯಕ್ತಿಕವಾಗಿ ಶಾಲಾ ಮುಖ್ಯಸ್ಥರನ್ನು ಸಂಪರ್ಕಿಸಿ, ಚರ್ಚಿಸಿ. ಶಿಕ್ಷಕರು ನಿಮ್ಮ ಮಗುವಿನ ಯಾವುದೇ ಸಮಸ್ಯೆಯನ್ನು ಮುಂದಿಟ್ಟಾಗ ಅದನ್ನು ಅವಮಾನವೆಂದು ಭಾವಿಸಿ ನಕರಾತ್ಮಕ ದೃಷ್ಟಿಯಿಂದ ನೋಡಬೇಡಿ. ನಿಮ್ಮ ಮಗುವಿನ ಒಳಿತಿಗಾಗಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ. ಶಿಕ್ಷಕರು ಎಂದಿನಿಂದ ಸಮಸ್ಯೆಯನ್ನು ಗಮನಿಸುತ್ತಿರುವರು? ಕಲಿಕೆಯ ಇತರ ವಿಷಯಗಳಲ್ಲಿಯೂ ಇದೇ ತೆರನಾದ ಸಮಸ್ಯೆಗಳಿವೆಯೆ? ಸಮಸ್ಯೆ ಪರಿಹಾರಕ್ಕೆ ಶಾಲೆಯಲ್ಲಿ ಕೈಗೊಂಡಿರುವ ತಂತ್ರಗಳೇನು? ಈ ವಿವರಗಳನ್ನು ತಿಳಿದು ಅದಕ್ಕೆ ತಕ್ಕ ರೀತಿಯಲ್ಲಿ ಸ್ಪಂದಿಸಿ.
ಪ್ರತಿ ಪೋಷಕರ ಸಭೆಯ ನಂತರ ಮಗುವಿನೊಂದಿಗಿನ ನಿಮ್ಮ ನಡವಳಿಕೆ ಸಹಜವಾಗಿರಲಿ ಅಥವಾ ಹೆಚ್ಚು ಸಕರಾತ್ಮಕವಾಗಿರಲಿ ಹಾಗೂ ಹೆಚ್ಚಿನ ಅವಧಾನವನ್ನು ನಿಡುವಂತಾಗಲಿ. ಜಾಣ್ಮೆಯಿಂದ ಸಭೆಯ ಫಲವನ್ನು ಮಗುವಿಗೆ ವರ್ಗಾಯಿಸಬೇಕೇ ಹೊರತಾಗಿ ಶಿಕ್ಷಿಸಲೇ ಬಾರದು.

ವಿಶೇಷ ಸೂಚನೆ: ನಿಮ್ಮ ಮಗು ವಿಶೇಷ ಸಾಮರ್ಥ್ಯವುಳ್ಳ ಮಗುವಾಗಿದ್ದು ಈ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ್ದಲ್ಲಿ ಯಾವುದೇ ಕಾರಣಕ್ಕೂ ಪೋಷಕರ ಸಭೆಯಲ್ಲಿ ಚರ್ಚಿಸದೇ ವೈಯುಕ್ತಿಕವಾಗಿ ಶಿಕ್ಷಕರನ್ನು ಸಂಪರ್ಕಿಸಿ, ಚರ್ಚಿಸಿ. ಒಟ್ಟಾರೆ, ನಿಮ್ಮ ಮಗುವಿನ ಭವಿಷ್ಯದ ದೃಷ್ಟಿಯಿಂದ ಈ ಸಭೆಗಳನ್ನು ಪರಿಗಣಿಸಿರಿ. ಪ್ರತಿ ಸಭೆಯ ಫಲಿತಾಂಶಗಳು, ನೀವು ತೆಗೆದುಕೊಂಡ ಕ್ರಮ ಹಾಗೂ ಇವುಗಳಿಂದ ಮಗುವಿಗಾದ ಪ್ರಯೋಜನ ಎಲ್ಲವನ್ನೂ ದಾಖಲಿಸಿ ಶಿಕ್ಷಕರು/ಆಪ್ತಸಲಹೆಗಾರರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬನ್ನಿ. ಇದು ದೇಶದ ಸುಂದರ ಭವಿಷ್ಯದ ನಿರ್ಮಾಣದ ಹೆಜ್ಜೆಗಳಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT