ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಬಿಎಲ್‌: ಎಂಜಿನಿಯರಿಂಗ್‌ನಲ್ಲಿ ಕ್ರಿಯಾಶೀಲ ಕಲಿಕೆ

Last Updated 19 ನವೆಂಬರ್ 2019, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನದ ಬೆಳವಣಿಗೆಯ ಅತ್ಯಂತ ಸಮರ್ಥ ಹಾಗೂ ಕ್ರಿಯಾತ್ಮಕ ಸ್ವರೂಪ ಸಮಾಜದ ಮೇಲೆ ವ್ಯಾಪಕ ಪ್ರಭಾವವನ್ನು ಬೀರುತ್ತಿದೆ. ಈ ಹಿಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಹೋಲಿಸಿದರೆ, 21ನೇ ಶತಮಾನದ ವಿದ್ಯಾರ್ಥಿಗಳು ವಿಭಿನ್ನವಾದ ಹಾಗೂ ವಿಶಿಷ್ಟವಾದ ಗುಣ ಲಕ್ಷಣಗಳನ್ನು ಹೊಂದಿದ್ದಾರೆ ಎನ್ನಬಹುದು. ಇದೇ ರೀತಿ ಎಂಜಿನಿಯರಿಂಗ್‌ ವೃತ್ತಿಯಲ್ಲಿ, ಅದನ್ನು ನಿರ್ವಹಿಸುವ ರೀತಿಯಲ್ಲಿ ಕೂಡ ದೊಡ್ಡ ಬದಲಾವಣೆಗಳಾಗುತ್ತಿದ್ದು, ಉದ್ಯಮಗಳ ನಿರೀಕ್ಷೆಗಳಲ್ಲಿ ಸಹ ಬದಲಾವಣೆಗಳಾಗಿವೆ. ಶೈಕ್ಷಣಿಕ ಕ್ಷೇತ್ರ ಕೂಡ ಈ ಬದಲಾವಣೆಗಳ ಮೇಲೆ ನಿಗಾ ಇಟ್ಟಿದ್ದು, ಅದಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡಿದೆ. ಹಲವಾರು ಬೋಧನಾತ್ಮಕ ಅಭ್ಯಾಸಗಳು–ಕ್ರಿಯಾಶೀಲ ಕಲಿಕೆ, ಪ್ರಯೋಗಾತ್ಮಕ ಕಲಿಕೆ, ಸೇವಾ ಕಲಿಕೆ ಹಾಗೂ ಸಮಸ್ಯೆ ಆಧಾರಿತ ಕಲಿಕೆ (ಪಿಬಿಎಲ್‌– Problem Based Learning) ಶಿಕ್ಷಣದ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿವೆ. ಇವುಗಳಲ್ಲಿ ಸಮಸ್ಯೆ ಆಧಾರಿತ ಕಲಿಕೆ ಅಥವಾ ಪಿಬಿಎಲ್‌ ವಿಶೇಷವಾಗಿ ಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಕ್ರಿಯಾಶೀಲ ಬೋಧನೆ– ಕಲಿಕೆಯಾಗಿ ಹೆಚ್ಚು ಮೆಚ್ಚುಗೆ ಪಡೆದಿದೆ.

ಸಂಶೋಧನ ಮನೋಭಾವ

ಪಿಬಿಎಲ್‌ ಒಂದು ರೀತಿಯ ಸೂಚನೆಗಳನ್ನು ಒಳಗೊಂಡ ಬೋಧನಾ ಮಾರ್ಗ ಎನ್ನಬಹುದು. ಇಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಪರಿಹರಿಸುತ್ತ ಕಲಿಕೆಯಲ್ಲಿ ತೊಡಗುತ್ತಾರೆ. ಜೊತೆಜೊತೆಗೆ ತಮ್ಮ ಕಾರ್ಯಕ್ಷೇತ್ರದ ಬಗ್ಗೆ ತಿಳಿವಳಿಕೆ ಹಾಗೂ ಸಂಶೋಧನ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ. ಪಿಬಿಎಲ್‌ನಲ್ಲಿ ಸರಿಯಾದ ಸ್ವರೂಪದಲ್ಲಿರದ ಒಂದು ಸಮಸ್ಯೆ ಎದುರಾದರೆ ಅದು ವ್ಯವಸ್ಥಿತ ಸಮಸ್ಯೆಯಾಗಿ ಕಣ್ಮುಂದೆ ನಿಲ್ಲುತ್ತದೆ. ಆಗ ವಿದ್ಯಾರ್ಥಿಗಳು ಸಮಸ್ಯೆಯನ್ನು ಪರಿಹರಿಸುವಲ್ಲಿ ಕ್ರಿಯಾಶೀಲ ಪಾತ್ರ ವಹಿಸುತ್ತಾರೆ. ಸಾಂಪ್ರದಾಯಕ ಕಲಿಕಾ ಪದ್ಧತಿಗೂ ಪಿಬಿಎಲ್‌ಗೂ ಇರುವ ಮುಖ್ಯವಾದ ವ್ಯತ್ಯಾಸವೆಂದರೆ ಸಾಂಪ್ರದಾಯಕ ಪದ್ಧತಿಯಲ್ಲಿ ಒಂದು ಆಯಾಮದ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅಂದರೆ ಶಿಕ್ಷಕರು ಹೇಗೆ ಒಂದು ವಿಷಯದ ಬಗ್ಗೆ ತಿಳಿವಳಿಕೆ ಪಡೆಯುವುದು ಹಾಗೂ ಹೇಗೆ ಅದನ್ನು ಮಾಡುವುದು ಎಂಬುದರ ಬಗ್ಗೆ ಸೂಚನೆ ಕೊಡುತ್ತಾರೆ. ಆದರೆ ಪಿಬಿಎಲ್‌ನಲ್ಲಿ ಮೊದಲು ಸಮಸ್ಯೆಯನ್ನು ನೀಡುತ್ತಾರೆ. ನಂತರ ವಿದ್ಯಾರ್ಥಿಗಳ ತಂಡವು ಆ ಸಮಸ್ಯೆಗೆ ಸಂಭವನೀಯ ಉತ್ತರವನ್ನು ಕಂಡುಕೊಳ್ಳಲು ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಪಿಬಿಎಲ್‌ ಅಳವಡಿಕೆಯಲ್ಲಿ ಶಿಕ್ಷಕರು ಒಂದು ಸರಿಯಾದ ರೂಪದಲ್ಲಿರದ, ಸಂಭವನೀಯ ಉತ್ತರಗಳನ್ನು ಹೊರತುಪಡಿಸಿ ಉತ್ತರವೊಂದನ್ನು ನಿರೂಪಿಸಬಹುದಾದ ಸಮಸ್ಯೆ ಅಥವಾ ಕೇಸ್‌ ಸ್ಟಡಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಾರೆ.

ಪಿಬಿಎಲ್‌ನಲ್ಲಿ ಶಿಕ್ಷಕರು ಅರಿವಿನ ತರಬೇತುದಾರರ ಪಾತ್ರ ನಿರ್ವಹಿಸುತ್ತಾರೆಯೇ ಹೊರತು ಜ್ಞಾನವನ್ನು ಹರಡುವ ಸಾಧನವಾಗಿ ಅಲ್ಲ. ಇಲ್ಲಿ ಶಿಕ್ಷಕರು ಸಹಾಯಕರಂತೆ, ಸಹಪಾಠಿಯಂತೆ ಹಾಗೂ ನಿರ್ಣಾಯಕರಂತೆ ಕೆಲಸ ಮಾಡುತ್ತಾರೆ. ಇನ್ನೊಂದು ಕಡೆ ವಿದ್ಯಾರ್ಥಿಗಳು ಸಮಸ್ಯೆಗೆ ಸಂಬಂಧಿಸಿದ ವಿಷಯಗಳನ್ನು ಹುಡುಕುತ್ತ ಹೋಗುತ್ತಾರೆ; ಗೊತ್ತಿರುವಂತಹ ಮತ್ತು ಗೊತ್ತಿಲ್ಲದಂತಹ ಅಂಶಗಳನ್ನು ನಿರೂಪಿಸುತ್ತಾರೆ; ಸಮಸ್ಯೆಗೆ ಸಂಬಂಧಿಸಿದ ಸೂತ್ರವನ್ನು ರಚಿಸುತ್ತಾರೆ; ತಮ್ಮೊಳಗೇ ತರ್ಕಿಸುತ್ತಾರೆ ಹಾಗೂ ಆ ತಿಳುವಳಿಕೆಯನ್ನು ಬಳಸಿ ಸಂಭಾವ್ಯ ಪರಿಹಾರ ಅಥವಾ ಉತ್ತರಗಳನ್ನು ಪಟ್ಟಿ ಮಾಡುತ್ತಾರೆ; ವಿಶ್ಲೇಷಣೆ ಮಾಡಿ ಅಂತಿಮ ವರದಿ ನೀಡುತ್ತಾರೆ.

ಪಿಬಿಎಲ್‌ ಇಡೀ ಕೋರ್ಸ್‌ನ ಮೂಲ ಸ್ತಂಭವಾಗಿರಬಹುದು ಅಥವಾ ಕೆಲವು ಆಯ್ಕೆ ಮಾಡಲಾದ ಮಾದರಿಗಳಿಗಷ್ಟನ್ನೇ ಅಳವಡಿಸಬಹುದು. ಸಮಸ್ಯೆಯನ್ನು ಸಂಬಂಧಪಟ್ಟ ಡೇಟಾ, ನಿರೀಕ್ಷಿತ ಉತ್ತರಗಳ ಸಾಧ್ಯತೆ, ಖಚಿತತೆ ಆಧಾರದ ಮೇಲೆ ಪರಿಹರಿಸುವಾಗ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಇಡೀ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಕಲಿಕಾ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸರಿಯಾಗಿ ಹೆಣೆಯಲಾದ ಸಮಸ್ಯೆಯ ಜೊತೆ ಪಿಬಿಎಲ್‌ನಲ್ಲಿ ಸರಿಯಾದ ವಿಶ್ಲೇಷಣೆ ಹಾಗೂ ಮೌಲ್ಯಮಾಪನವಿರಬೇಕು.

ಕಲಿಕಾ ಕೌಶಲ

ಪಿಬಿಎಲ್‌ ಹಲವು ಪ್ರಯೋಜನಗಳಿಂದ ಕೂಡಿರುವುದರಿಂದ ಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಪರಿಣಾಮಕಾರಿ ಟೂಲ್‌ ಆಗಿ ಹೊರಹೊಮ್ಮಿದೆ. ಅದು ಕ್ರಿಯಾಶೀಲ ಕಲಿಕೆ, ಸುಧಾರಿತ ಅರ್ಥೈಸುವಿಕೆ, ಉತ್ತಮ ಜ್ಞಾಪಕಶಕ್ತಿ ಹಾಗೂ ಜೀವನಪರ್ಯಂತ ಕಲಿಕಾ ಕೌಶಲಗಳನ್ನು ಪರಸ್ಪರ ಬೆಸೆದಿದೆ ಎನ್ನಬಹುದು. ಇದು ವಿದ್ಯಾರ್ಥಿಗಳಲ್ಲಿರುವ ಅರಿವನ್ನು ಕ್ರಿಯಾಶೀಲಗೊಳಿಸಲು ನೆರವಾಗುತ್ತದೆ ಹಾಗೂ ಈಗಾಗಲೇ ಇರುವ ಕಲ್ಪನಾಶಕ್ತಿಯನ್ನು ಬೆಳೆಸುತ್ತದೆ. ಆದರೂ ಪಿಬಿಎಲ್‌ಗೆ ಕೆಲವು ಇತಿಮಿತಿಗಳಿದ್ದು, ಸಿಬ್ಬಂದಿ ಕೇಂದ್ರೀಕೃತವಾಗಿದೆ. ಅಂದರೆ ಇಡೀ ಪ್ರಕ್ರಿಯೆಯಲ್ಲಿ ಅವರು ಪ್ರಮುಖ ಭಾಗವಾಗಿದ್ದು, ಸಹಾಯ ಮಾಡುತ್ತಾರೆ. ಪಿಬಿಎಲ್‌ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಿಬ್ಬಂದಿಗೆ ಅಧಿಕೃತ ತರಬೇತಿಯ ಅವಶ್ಯಕತೆಯಿದೆ.

ಆದಾಗ್ಯೂ ಪಿಬಿಎಲ್‌ ಎನ್ನುವುದು ವಿದ್ಯಾರ್ಥಿ ಸಮುದಾಯವನ್ನು ಉತ್ತೇಜಿಸಿ, ಸವಾಲಿನ ಕಲಿಕಾ ವ್ಯವಸ್ಥೆಯನ್ನು ಹುಟ್ಟುಹಾಕಿದೆ ಎನ್ನಬಹುದು. ಎಂಜಿನಿಯರಿಂಗ್‌ ಶಿಕ್ಷಣದ ಅವಧಿಯಲ್ಲಿ ತಿಳಿಸಲು ಕಷ್ಟಕರವಾದ ಕೆಲವು ನಿಜವಾದ ಸಮಸ್ಯೆಗಳ ಬಗ್ಗೆ ವಿಮರ್ಶಾತ್ಮಕ ಚಿಂತನೆ ಹಾಗೂ ವಿಶ್ಲೇಷಣೆಗೆ ಹಚ್ಚಲು ಪಿಬಿಎಲ್‌ ಅವಕಾಶ ನೀಡಿದೆ. ವಿದ್ಯಾರ್ಥಿಗಳಲ್ಲಿ ವೃತ್ತಿಪರತೆ ಹೆಚ್ಚಿಸಿ, ಔದ್ಯೋಗಿಕವಾಗಿ ಸಿದ್ಧಪಡಿಸಲು ಇದೊಂದು ಉತ್ತಮ ಸಾಧನ ಎನ್ನಬಹುದು. ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್‌ ತಂತ್ರಜ್ಞಾನದಲ್ಲಾಗಿರುವ ಬೆಳವಣಿಗೆ ಹಾಗೂ ಕಲಿಕೆಗೆ– ಬೋಧನೆಗೆ ಆನ್‌ಲೈನ್‌ ಬಳಕೆಯ ಜೊತೆಗೆ ಪಿಬಿಎಲ್‌ ಒಂದು ಅತ್ಯುತ್ತಮ ಸ್ಥಿತ್ಯಂತರ ಎನ್ನಬಹುದು.

ಪಿಬಿಎಲ್‌ನ ಮಹತ್ವ

ಕಲಿಕೆಗೆ ನಾಂದಿ ಹಾಡುವುದು ಸಮಸ್ಯೆ

ಸಮಸ್ಯೆಗಳು ಸಂಕೀರ್ಣವಾದ, ನೈಜ ಪರಿಸ್ಥಿತಿಗೆ ಸಂಬಂಧಿಸಿರುತ್ತವೆ.

ಸಮಸ್ಯೆ ಓಪನ್‌ ಎಂಡೆಡ್‌. ಸಮಸ್ಯೆ ಪರಿಹರಿಸಲು ಎಲ್ಲಾ ರೀತಿಯ ಮಾಹಿತಿ ಒದಗಿಸುವುದಿಲ್ಲ.

ವಿದ್ಯಾರ್ಥಿಗಳು ತಂಡದಲ್ಲಿ ಕಾರ್ಯನಿರ್ವಹಿಸಬೇಕು. ಸೂಕ್ತ ಸಂಪನ್ಮೂಲ ಗುರುತಿಸಿ, ಬಳಸಬೇಕು.

ಕಲಿಕೆ ಕ್ರಿಯಾಶೀಲವಾಗಿ, ಸಮಗ್ರವಾಗಿ ಹಾಗೂ ಬಲವರ್ಧನೆಯಾಗುತ್ತ ಹೋಗುತ್ತದೆ.

**

ಹುಬ್ಬಳ್ಳಿಯ ಎಂಜಿನಿಯರಿಂಗ್‌ ಎಜುಕೇಶನ್‌ ರೀಸರ್ಚ್‌ ಸೆಂಟರ್‌, ಕೆಎಲ್‌ಇ ಟೆಕ್ನಾಲಜಿಕಲ್‌ ವಿಶ್ವವಿದ್ಯಾಲಯದಲ್ಲಿ ನ. 22 ಮತ್ತು 23ರಂದು ಪ್ರಾಬ್ಲಂ ಬೇಸ್ಡ್‌ ಲರ್ನಿಂಗ್‌ ಕುರಿತು ಪ್ರಾದೇಶಿಕ ಸಂಶೋಧನ ವಿಚಾರ ಸಂಕಿರಣ ನಡೆಯಲಿದೆ. ಯುನೆಸ್ಕೊ ಆಶ್ರಯದಲ್ಲಿ ಆಲ್‌ಬೋರ್ಗ್‌ ಸೆಂಟರ್‌ ಫಾರ್‌ ಪಿಬಿಎಲ್‌ ಇನ್‌ ಎಂಜಿನಿಯರಿಂಗ್‌ ಸೈನ್ಸ್‌ ಆ್ಯಂಡ್‌ ಸಸ್ಟೇನೆಬಿಲಿಟಿ ಸಹಯೋಗದಲ್ಲಿ ಇದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT