ಗುರುವಾರ , ಸೆಪ್ಟೆಂಬರ್ 19, 2019
22 °C

ಓದಿನ ಜೊತೆಗೆವ್ಯಕ್ತಿತ್ವ ವಿಕಸನ

Published:
Updated:

ಉದ್ಯೋಗಕ್ಕೆ ಕೇವಲ ಯಾವುದೋ ಕೋರ್ಸ್‌ ಮಾಡಿದರೆ ಸಾಲದು; ಜೊತೆಗೆ ಸಾಫ್ಟ್‌ ಕೌಶಲಗಳ ಅಗತ್ಯವೂ ಇದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ವ್ಯಕ್ತಿತ್ವ ವಿಕಸನದತ್ತ ಗಮನ ನೀಡಿದರೆ, ನಾಯಕತ್ವ ಸೇರಿದಂತೆ ಹಲವಾರು ವಿಷಯಗಳಲ್ಲಿ ಪರಿಣತಿ ಸಾಧಿಸಬಹುದು.

****

ಔದ್ಯೋಗಿಕ ಕ್ಷೇತ್ರದಲ್ಲಿ ಪೈಪೋಟಿ ಎಷ್ಟಿದೆಯೆಂದರೆ ಪ್ರತಿ ಕ್ಷಣವೂ ವಿದ್ಯಾರ್ಥಿಗಳಲ್ಲಿ ಆತಂಕ ಹುಟ್ಟುಹಾಕುವಷ್ಟಿದೆ. ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ಯಾವ ಕೋರ್ಸ್‌ ಮಾಡಬೇಕು, ಯಾವ ಕೌಶಲಗಳಲ್ಲಿ ಪರಿಣತಿ ಹೊಂದಬೇಕು, ಓದಿದ ವಿಭಾಗದಲ್ಲಿ ಎಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದು, ಅವುಗಳನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವಂತಹ ಪರಿಸ್ಥಿತಿ ಇದೆ. ಹಾಗಂತ ವಿದ್ಯಾರ್ಥಿಗಳು ಅಥವಾ ಈಗಷ್ಟೇ ಓದು ಮುಗಿಸಿ ಉದ್ಯೋಗದ ಬೇಟೆಗೆ ತೊಡಗಿರುವವರು ಭಯ ಬೀಳುವುದು ಬೇಡ. ಅವಕಾಶಗಳು ಅಂಗೈಯಲ್ಲೇ ಇವೆ. ಅವುಗಳನ್ನು ಹಿಡಿದಿಟ್ಟುಕೊಳ್ಳಲು ಕೊಂಚ ಜಾಣ್ಮೆ ಬೇಕು, ಆಧುನಿಕ ಜಗತ್ತಿನ ಭರಾಟೆಯಲ್ಲಿ ಓಟಕ್ಕೆ ಸಿದ್ಧರಿರಬೇಕು.

ನಿಮ್ಮಲ್ಲಿ ತಂತ್ರಜ್ಞಾನ ಕೌಶಲ ಇದೆ ಎಂದುಕೊಳ್ಳೋಣ. ಆದರೆ ಒಂದು ಕಂಪನಿಯ ಮಾಲೀಕರಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುವಾಗ ಇದಿಷ್ಟೇ ಸಾಲದು. ನೀವು ಯಾವ ವಿಷಯದಲ್ಲಿ ಪರಿಣತಿ ಸಾಧಿಸಿದ್ದೀರೋ, ಅದಕ್ಕೇ ಆದ್ಯತೆ ನೀಡುತ್ತಾರೆ ಎನ್ನುವುದು ನಿಜ. ಆದರೆ ನಿಮ್ಮಲ್ಲಿ ಅಡಗಿರುವ ಕೌಶಲಗಳ ಜೊತೆ, ನಿಮ್ಮ ವ್ಯಕ್ತಿತ್ವವನ್ನೂ ಅಲ್ಲಿ ಒರೆಗೆ ಹಚ್ಚುತ್ತಾರೆ. ಸಂದರ್ಶನ ಎದುರಿಸುವಾಗಲೇ ನಿಮ್ಮಲ್ಲಿರುವ ಇತರ ಗುಣಗಳನ್ನು ಅಳೆಯುವ ಕೆಲಸ ನಡೆಯುತ್ತದೆ. ನಿಮ್ಮ ಓದು, ಅದರ ಜೊತೆಗೆ ಗಳಿಸಿರುವ ಪರಿಣತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಪರಿಹರಿಸುವ, ಇತರ ಉದ್ಯೋಗಿಗಳೊಂದಿಗೆ ನಡೆದುಕೊಳ್ಳುವ, ಗ್ರಾಹಕರ ಜೊತೆ ವ್ಯವಹರಿಸುವ ಗುಣಗಳ ಅವಲೋಕನ ನಡೆಯುತ್ತದೆ. ಅದು ನಿಮ್ಮ ಭಾಷೆಯಿರಬಹುದು, ಆಂಗಿಕ ಹಾವಭಾವಗಳಿರಬಹುದು, ವ್ಯವಹರಿಸುವ ಜಾಣ್ಮೆಯಿರಬಹುದು, ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸುವ ಚಾತುರ್ಯವಿರಬಹುದು.. ಎಲ್ಲವನ್ನೂ ಅಳೆದು ತೂಗಿಯೇ ನಿಮ್ಮ ಆಯ್ಕೆ ನಡೆಯುತ್ತದೆ ಎಂಬುದು ನೆನಪಿರಲಿ.

ಇದಕ್ಕೆಲ್ಲ ಮುನ್ನುಡಿ ಬರೆಯುವುದು ವ್ಯಕ್ತಿತ್ವ ವಿಕಸನ. ಓದಿನ ಜೊತೆಜೊತೆಗೆ ಇದಕ್ಕೊಂದಿಷ್ಟು ಸಮಯ ಮೀಸಲಿಟ್ಟು ಒಟ್ಟಾರೆ ವ್ಯಕ್ತಿತ್ವವನ್ನು ಹರಿತಗೊಳಿಸಿಕೊಂಡರೆ ಭವಿಷ್ಯದ ಉದ್ಯೋಗದ ಯಾನಕ್ಕೆ ಭದ್ರ ಬುನಾದಿ ಖಚಿತ.

ಮೊದಲು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳುತ್ತ ಹೋಗಿ. ಆಗ ನಿಮಗೇ ಗೊತ್ತಾಗದಂತೆ ನಿಮ್ಮಲ್ಲಿ ಆತ್ಮವಿಶ್ವಾಸ ಗಟ್ಟಿಯಾಗುತ್ತ ಹೋಗುತ್ತದೆ. ಮೊದಲಿಗೆ ನೀವು ಮಾತನಾಡುವ ಶೈಲಿಯ ಮೇಲೆ ಗಮನ ಕೇಂದ್ರೀಕರಿಸಿ. ನಿಮ್ಮೆದುರಿನ ವ್ಯಕ್ತಿಯ ಜೊತೆ ಮಾತನಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದರೆ ನಿಮ್ಮಲ್ಲಿರುವ ಆತ್ಮವಿಶ್ವಾಸದ ಪ್ರತೀಕ ಎಂಬುದು ಸಾಬೀತಾಗಿಬಿಡುತ್ತದೆ. ಸಂದರ್ಶನದ ಸಮಯದಲ್ಲಿ ಕ್ಲಿಕ್‌ ಆಗುವುದು ಇದೇ ನಡವಳಿಕೆ. ಅದೇ ಎಲ್ಲೋ ನೋಡುತ್ತ, ಕಣ್ಣು ಹೊರಳಿಸುತ್ತ, ನೆಲದ ಕಡೆ ಬಾಗುತ್ತ ಮಾತನಾಡಿದರೆ, ವ್ಯಕ್ತಿಯ ಒಳಗಿರುವ ಅಳುಕು, ಯಾವ ವಿಷಯದಲ್ಲೂ ಇದರ ಖಚಿತತೆ ಒಬ್ಬ ಜಾಣ ಸಂದರ್ಶಕನ ಮನಸ್ಸಿಗೆ ಗೊತ್ತಾಗಿಬಿಡುತ್ತದೆ.

ನಾಯಕತ್ವ ಬೆಳವಣಿಗೆ

ಗುಂಪಿನಲ್ಲಿ ಮಾತನಾಡುವಾಗಲೂ ಅಷ್ಟೇ, ಒಂದು ವಿಷಯದ ಮೇಲೆ ಹಿಡಿತವಿದ್ದು ಮಾತನಾಡುವುದಕ್ಕೂ, ಎಲ್ಲೋ ಕೆಲವು ಅಂಶಗಳನ್ನು ಜಾಳುಜಾಳಾಗಿ ಪೋಣಿಸುತ್ತ ಹೋಗುವುದಕ್ಕೂ ಅಗಾಧ ವ್ಯತ್ಯಾಸವಿದೆ. ನೀವು ಈ ವಿಷಯದಲ್ಲಿ ನಿಮ್ಮನ್ನೇ ಸುಧಾರಿಸಿಕೊಳ್ಳುತ್ತ ಹೋಗಿ, ಆಗ ಇನ್ನಷ್ಟು ಅಧಿಕಾರಯುತವಾಗಿ ಮಾತನಾಡುವ ಆತ್ಮಸ್ಥೈರ್ಯ ಬರುತ್ತದೆ. ನಿಮ್ಮ ಭಾವನೆಗಳ ಹಿಡಿತ ತನ್ನಿಂದ ತಾನೇ ಬಂದು ಬಿಡುತ್ತದೆ. ಇದು ಒಂದು ಗುಂಪಿನಲ್ಲಿ ನಿಮಗೆ ನಿಮ್ಮದೇ ಆದ ಮಹತ್ತರ ಸ್ಥಾನ ಕಲ್ಪಿಸುವುದಂತೂ ನಿಜ. ಇದನ್ನು ಸಂದರ್ಶಕರು ಗಮನಿಸುತ್ತಾರೆ. ಅಂದರೆ ಕಂಪನಿಯಲ್ಲಿ ಇರುವ ಉದ್ಯೋಗಿಗಳನ್ನು ಮುಂದಕ್ಕೆ ಒಯ್ಯುವ, ಏನೇ ಆದರೂ ಹೊಂದಿಕೊಂಡು ಯಾವುದೇ ಸಮಸ್ಯೆಯಾಗದಂತೆ ಸಲೀಸಾಗಿ ಕೆಲಸಗಳನ್ನು ಮಾಡಿಕೊಂಡು ಹೋಗುವ, ಮಾಡಿಸುವ ಚಾಕಚಕ್ಯತೆ ನಿಮಗಿದೆ ಎಂಬುದು ಸಾಬೀತಾಗುವುದಂತೂ ಹೌದು.

ಮಾತಿನ ವೈಖರಿ

ವ್ಯಕ್ತಿತ್ವ ವಿಕಸನದತ್ತ ಗಮನಹರಿಸಿ ಸುಧಾರಿಸಿಕೊಂಡರೆ ನಿಮಗೆ ಹಲವು ಲಾಭಗಳಿವೆ. ಕಚೇರಿಯಲ್ಲಿರಲಿ ಅಥವಾ ಬೇರೆ ಸೆಮಿನಾರ್‌ಗಳು, ಸಭೆಗಳಲ್ಲಿರಲಿ ಸಭಾಕಂಪನ ಎಂಬುದು ಮಾಯವಾಗಿ ಬಿಡುತ್ತದೆ. ನೀವು ಗಳಿಸಿರುವ ತಿಳಿವಳಿಕೆ, ಜ್ಞಾನ ನಿಮ್ಮ ಮಾತಿನ ಮೂಲಕ ಸಲೀಸಾಗಿ ಹರಿದು ಎದುರು ಇದ್ದವರನ್ನು ಸುಲಭವಾಗಿ ಗಮನ ಸೆಳೆಯಬಹುದು. ಸಂಕಷ್ಟದ ಸನ್ನಿವೇಶಗಳನ್ನು ಆರಾಮವಾಗಿ ಎದುರಿಸಿ ಪರಿಹರಿಸುತ್ತೀರಿ. ಒಂದು ಕಂಪನಿಗೆ ಬೇಕಾಗಿರುವುದು ಕೂಡ ಇದೇ. ಹೀಗಾಗಿ ಕಾಲೇಜಿನಲ್ಲೇ ನೀವು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬಹುದು. ವೇದಿಕೆಯ ಮೇಲೆ ಆತ್ಮವಿಶ್ವಾಸದಿಂದ ಮಾತನಾಡಿ ಗೆಲ್ಲಬಹುದು. ಇದು ನಿಮ್ಮನ್ನು ಸಂದರ್ಶನದಲ್ಲಿ ಬೇರೆಯೇ ಸ್ತರದಲ್ಲಿ ನಿಲ್ಲಿಸುತ್ತದೆ. ಇದು ಒಂದು ಪ್ಲಸ್‌ ಪಾಯಿಂಟ್‌ ಅಲ್ಲವೇ?

ನಿಮ್ಮ ವೃತ್ತಿಜೀವನದಲ್ಲಿ ಮೇಲೇರಲು ಇಂತಹ ಲಘು ಕೌಶಲಗಳೇ ನೆರವಿಗೆ ಬರುವುದು. ಉದಾಹರಣೆಗೆ: ಕಚೇರಿಯಲ್ಲಿ ಯಾವುದೋ ಬಿಕ್ಕಟ್ಟಿನ ಸನ್ನಿವೇಶ ಎದುರಾಯಿತು ಎಂದುಕೊಳ್ಳಿ. ಅಲ್ಲಿ ನೀವು ಒಬ್ಬರೇ ನಿಂತು ಎಲ್ಲವನ್ನೂ ಪರಿಹರಿಸಲು ಖಂಡಿತ ಸಾಧ್ಯವಿಲ್ಲ. ಆಗ ಸಂದರ್ಭವನ್ನು ಅವಲೋಕಿಸಿ, ತಕ್ಷಣ ಏನು ಮಾಡಬೇಕು, ಯಾರು ಯಾರು ಈ ಸಮಯದಲ್ಲಿ ಅಗತ್ಯ ಮೊದಲಾದವುಗಳನ್ನು ಚುರುಕಾಗಿ ಆಲೋಚಿಸಿ ನಿರ್ಣಯ ಕೈಗೊಂಡರೆ ನೀವು ಖಂಡಿತ ಯಶಸ್ವಿಯಾಗುತ್ತೀರಿ. ಅಂದರೆ ನೀವು ಗುರಿಯತ್ತ ಮುಖ ಮಾಡಿ, ಪ್ರತಿಯೊಂದು ಘಟನೆಗಳನ್ನೂ ನಿಮ್ಮ ಅನುಕೂಲಕ್ಕೆ ತಿರುಗಿಸಿಕೊಂಡು ಮೆಟ್ಟಿಲೇರಬೇಕು. ಹಿಂದಿನ ಸಮಸ್ಯೆಗಳಿಂದ, ತಪ್ಪುಗಳಿಂದ ಪಾಠ ಕಲಿತು ಸರಿಪಡಿಸಿಕೊಳ್ಳುತ್ತ ಹೋಗಬೇಕು.

ಒತ್ತಡ ನಿರ್ವಹಣೆ

ಒತ್ತಡ ನಿರ್ವಹಣೆ ಅತ್ಯಂತ ಮಹತ್ವದ ವಿಷಯ. ಇದು ತಕ್ಷಣಕ್ಕೆ ಬರುವಂತಹದ್ದಲ್ಲ. ನೀವು ಓದುತ್ತಿದ್ದಾಗಲೇ ಇದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ: ಪರೀಕ್ಷೆ ಇನ್ನೊಂದು ತಿಂಗಳಿದೆ ಎಂದುಕೊಳ್ಳಿ. ನಿತ್ಯ 10– 12 ತಾಸು ಓದಬೇಕಾಗುತ್ತದೆ. ನಾಳೆಯಿಂದ ಆರಂಭಿಸೋಣ ಎಂದರೆ ಅದು ಮುಂದಕ್ಕೆ ಹೋಗುತ್ತಿರುತ್ತದೆ. ಆದರೆ ಇಂದಿನಿಂದಲೇ ಆರಂಭಿಸೋಣ. ನಾಳೆ ಇದು 14 ತಾಸುಗಳಿಗೆ ಲಂಬಿಸಬಹುದು ಎಂದುಕೊಂಡರೆ ನೀವು ಅರ್ಧ ಗೆದ್ದಂತೆಯೇ. ಮರುದಿನ ಅದು ನಿಮ್ಮಲ್ಲಿ ಇನ್ನಷ್ಟು ಉತ್ಸಾಹ, ಆತ್ಮವಿಶ್ವಾಸವನ್ನು ತುಂಬುತ್ತದೆ. ಇದೇ ಹೋರಾಟದ ಮನೋಭಾವ ಉದ್ಯೋಗಕ್ಕೆ ಸೇರಿದ ಮೇಲೂ ನಿಮ್ಮ ನೆರವಿಗೆ ಬರುತ್ತದೆ. ಅಲ್ಲಿ ಪ್ರಾಜೆಕ್ಟ್‌ ಒಂದನ್ನು ನಿಮಗೆ ಕೊಟ್ಟು ವಾರದಲ್ಲೇ ಮುಗಿಸಬೇಕು ಎಂಬ ಷರತ್ತು ವಿಧಿಸಿದರು ಎಂದಿಟ್ಟುಕೊಳ್ಳಿ. ಆಗ ಈ ಗಂಟೆಗಳ ಲೆಕ್ಕಾಚಾರ ನಿಮ್ಮಲ್ಲಿ ಯಾವುದೇ ಒತ್ತಡವನ್ನು ಸೃಷ್ಟಿಸಲಾರದು. ನಿಮ್ಮ ಸಹೋದ್ಯೋಗಿಗಿಂತ ನೀವು ಚೆನ್ನಾಗಿ ನಿಭಾಯಿಸಬಲ್ಲಿರಿ. ನಿಮ್ಮ ಮಹತ್ವಾಕಾಂಕ್ಷೆಯನ್ನು ಪೂರೈಸಿಕೊಳ್ಳಲು ಇಂತಹ ಸವಾಲನ್ನು ಖಂಡಿತ ಎದುರಿಸಬಲ್ಲ ಸಾಮರ್ಥ್ಯ ನಿಮ್ಮಲ್ಲಿ ರೂಪುಗೊಂಡಿರುತ್ತದೆ.

ವ್ಯಕ್ತಿತ್ವ ವಿಕಸನ ಎಂಬುದು ನಿಮ್ಮಲ್ಲಿರುವ ಹಲವು ಒಳ್ಳೆಯ ಗುಣಗಳನ್ನು ಮುಂಚೂಣಿಗೆ ತರುತ್ತದೆ; ಅವಗುಣಗಳನ್ನು ಕಡಿಮೆ ಮಾಡುತ್ತದೆ. ನಿಮ್ಮಲ್ಲಿರುವ ಸಾಮರ್ಥ್ಯವೇನು, ಬಲಹೀನತೆಯೇನು ಎಂಬುದನ್ನು ನೀವೇ ಅರಿತುಕೊಂಡು ಮುಂದೆ ಸಾಗುತ್ತೀರಿ. ನಿಮ್ಮ ಕಾರ್ಯವೈಖರಿಯನ್ನು ಇದರಿಂದ ಸುಧಾರಿಸಿಕೊಳ್ಳಬಹುದು. ಸಿಟ್ಟು, ದ್ವೇಷ, ಸಹೋದ್ಯೋಗಿಗಳ ಜೊತೆ ಅನಾರೋಗ್ಯಕರ ಪೈಪೋಟಿಯನ್ನು ಬಿಟ್ಟು ಎಲ್ಲವನ್ನೂ ಸರಿದೂಗಿಸಿಕೊಂಡು ಸಾಗಬಹುದು.

Post Comments (+)