ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರ್ಮಸಿ ಕೋರ್ಸ್‌: ಉದ್ಯೋಗಕ್ಕೆ ರಹದಾರಿ

Last Updated 26 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ನಾನು 12ನೇ ತರಗತಿಯಲ್ಲಿ ಓದುತ್ತಿದ್ದೇನೆ. ನಂತರ ಫಾರ್ಮಸಿ ಕೋರ್ಸ್‌ ಮಾಡಬಯಸಿದ್ದೇನೆ. ಈ ಕೋರ್ಸ್‌ ಕುರಿತು ಮಾಹಿತಿ ಬೇಕಿತ್ತು. ಉದ್ಯೋಗದ ರೇಟಿಂಗ್‌ ಹೇಗಿದೆ? ಮುಂದೆ ಉದ್ಯೋಗಾವಕಾಶಗಳು ಹೇಗಿವೆ?
–ರಮೇಶ್‌ ಶೇಟ್‌, ಊರು ಬೇಡ

ರಮೇಶ್ ಅವರೆ, ನಿಮಗೆ ಫಾರ್ಮಸಿ ವಿಷಯದಲ್ಲಿ ದೃಢವಾದ ಆಸಕ್ತಿ ಇದ್ದರೆ ಅದರಲ್ಲೇ ಮುಂದುವರೆಯಿರಿ. ಈ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಇರುತ್ತವೆ. ಫಾರ್ಮಸಿಗಳು, ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಬಹಳ ಅವಕಾಶಗಳಿರುತ್ತವೆ. ಈ ಎಲ್ಲಾ ತರಹದ ಕಂಪನಿಗಳಲ್ಲಿ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿಯೂ ಅವಕಾಶಗಳಿರುತ್ತವೆ.

ಮತ್ತೊಂದು ಅವಕಾಶ ಎಂದರೆ ಫಾರ್ಮಸಿ ಕೋರ್ಸ್ ಮುಗಿದ ನಂತರ, ನೀವು ಫಾರ್ಮಸಿ ಕೌನ್ಸಿಲ್‌ನಲ್ಲಿ ನೊಂದಾಯಿಸಿಕೊಂಡರೆ, ನಿಮ್ಮದೇ ಆದ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಮಳಿಗೆಯನ್ನು ಪ್ರಾರಂಭಿಸಬಹುದು.

ಪಿ.ಯು.ಸಿ ಆದಮೇಲೆ ನೀವು ಎರಡು ವರ್ಷದ ಡಿಪ್ಲೊಮ ಇನ್ ಫಾರ್ಮಸಿ ಕೋರ್ಸನ್ನು ಮಾಡಬಹುದು. ಇದಕ್ಕೆ ಕಡ್ಡಾಯವಾಗಿ 10+2 ಅರ್ಹತೆ ಪಡೆದಿರಬೇಕು. ಈ ಅರ್ಹತೆ ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಬಯಾಲಜಿ ವಿಷಯದಲ್ಲಿ ಪಡೆದಿರಬೇಕು.

ಪಿ.ಯು.ಸಿ ನಂತರ ಬ್ಯಾಚುಲರ್ ಆಫ್ ಫಾರ್ಮಸಿ (ಬಿ.ಫಾರ್ಮಾ) ಪದವಿಯನ್ನು ಪಡೆಯಬಹುದು. ನಿಮ್ಮ ಪಿ.ಯು.ಸಿ ಯಲ್ಲಿ ಕಡ್ಡಾಯವಾಗಿ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ವಿಷಯಗಳನ್ನು ತೆಗೆದುಕೊಂಡಿರಬೇಕು.

ಸಿ.ಇ.ಟಿ. ಪರೀಕ್ಷೆಯ ಮೂಲಕ ನೀವು ಸರಕಾರಿ ಕಾಲೇಜುಗಳಲ್ಲಿ ಬಿ.ಫಾರ್ಮಾ ಕೋರ್ಸ್‌ಗಳಿಗೆ ಸೇರಬಹುದು. ಇದಕ್ಕೆ ಬೇಕಾದ ವಿವರಗಳು ಸಿ.ಇ.ಟಿ ವೆಬ್‌ಸೈಟಿನಲ್ಲಿ ದೊರಕುತ್ತವೆ.

ಖಾಸಗಿ ಕೆಲಸಕ್ಕೆ ಪ್ರಯತ್ನಿಸಿದೆ. ಆದರೆ ಅಂಗವಿಕಲೆ ಎಂದು ನಿರಾಕರಿಸುತ್ತಾರೆ. ಇದರಿಂದ ಕೆಲಸ ಸಿಗದೆ ನೊಂದಿದ್ದೆನೆ. ನಾನು ಸರ್ಕಾರಿ ಕೆಲಸವನ್ನು ಪಡೆಯುವುದು ಹೇಗೆ? ದಯಮಾಡಿ ತಿಳಿಸಿ. ಕಂಪ್ಯೂಟರ್ ಕೋರ್ಸ್‌ ಅನ್ನು ಮಾಡಿದ್ದೇನೆ.
–ಹೆಸರು, ಊರು ಬೇಡ

ನಿಮಗೆ ಸಲಹೆ ಕೊಡುವ ಮೊದಲು ನಮಗೆ ನಿಮ್ಮ ಮೂಲ ವಿದ್ಯಾಭ್ಯಾಸ ಮತ್ತು ಕೆಲಸ ಮಾಡಿರುವ ಅನುಭವದ ಬಗ್ಗೆ ವಿವರಗಳನ್ನು ತಿಳಿಸಿ. ನೀವು ಸರ್ಕಾರಿ ಉದ್ಯೋಗಾವಕಾಶಗಳ ವೆಬ್‌ಸೈಟಿನಲ್ಲಿ ಮತ್ತು ನಿಮ್ಮ ಹತ್ತಿರ ಇರುವ ಎಂಪ್ಲಾಯ್‌ಮೆಂಟ್‌ ಎಕ್ಷಚೇಂಜ್‌ನಲ್ಲಿ ನಿಮಗೆ ಸೂಕ್ತವೆನಿಸುವ ಉದ್ಯೋಗಗಳ ಮಾಹಿತಿ ಪಡೆಯಬಹುದು. ಹೆಚ್ಚು ವಿವರಗಳಿಗೆ ನೀವು ಕರ್ನಾಟಕ ಸರ್ಕಾರದ ಆಂಗವಿಕಲರ ಮತ್ತು ಹಿರಿಯ ನಾಗರಿಕರ ನಿರ್ದೇಶನಾಲಯವನ್ನು ಸಂಪರ್ಕಿಸಬಹುದು ಹಲವಾರು ಸ್ವಯಂಸೇವಾ ಸಂಸ್ಥೆಗಳು ಆಂಗವಿಕಲರ ಸಹಾಯಕ್ಕೆ ಇವೆ. ಅವುಗಳನ್ನು ಸಂಪರ್ಕಿಸಿ ಸಹಾಯ ಪಡೆಯಿರಿ

ನನಗೆ 35 ವರ್ಷ, ನಾನು ಬಿಎಸ್‌ಸಿ (ಪಿಸಿಎಂ) 2006 ಅಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಗಿಸಿದೆ. ಪ್ರಸ್ತುತ ಐದು ವರ್ಷಗಳಿಂದ ಎನ್ವಿರಾನ್‌ಮೆಂಟಲ್‌ ಹೆಲ್ತ್‌ ಆ್ಯಡ್‌ ಸೇಫ್ಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಕೆಲಸ ಮಾಡುತ್ತಿರುವುದು ಈ ಕೆಳಗಿನ ವಿಭಾಗಗಳನ್ನು ಒಳಗೊಂಡಿರುತ್ತದೆ. ವಾಟರ್‌ ಟ್ರೀಟ್‌ಮೆಂಟ್‌ ಪ್ಲ್ಯಾಂಟ್‌, ಎಫ್ಲುಯೆಂಟ್‌ ಟ್ರೀಟ್‌ಮೆಂಟ್‌ ಪ್ಲ್ಯಾಂಟ್‌, ಮಲ್ಟಿಪಲ್‌ ಎಫೆಕ್ಟ್‌ ಎವಾಪರೇಶನ್‌, ಸೀವೇಜ್‌ ಟ್ರೀಟ್‌ಮೆಂಟ್‌ ಪ್ಲ್ಯಾಂಟ್‌ ಈ ಮೇಲಿನ ಎಲ್ಲಾ ವಿಭಾಗಗಳಿಗೆ ಸಂಬಂಧಪಟ್ಟಂತೆ ನಾನು ಕರಸ್ಪಾಂಡೆನ್ಸ್‌ನಲ್ಲಿ ಎಂಎಸ್ಸಿ ಮಾಡಬೇಕಾಗಿದೆ. ದಯವಿ‌ಟ್ಟು ಯಾವ ಕೋರ್ಸ್‌ ಮಾಡಬೇಕು ಮತ್ತು ಯಾವ ವಿಶ್ವವಿದ್ಯಾನಿಲಯದಲ್ಲಿ ಮಾಡಬೇಕು ತಿಳಿಸಿ. ಜೊತೆಗೆ ಅಪ್‌ಗ್ರೇಡೇಡ್‌ ವಿಷಯಗಳು ಇರುವ ಈ ಮೇಲಿನ ವಿಭಾಗಗಳ ಬಗ್ಗೆ ಮಾಹಿತಿ ಒದಗಿಸುವ ಕೋರ್ಸ್‌ ಬಗ್ಗೆ ತಿಳಿಸಿ. ಆದಷ್ಟು ಕಡಿಮೆ ಶುಲ್ಕ ಇದ್ದರೆ ಒಳ್ಳೆಯದು.
–ಅಶೋಕ್‌ ಎಚ್‌.ಎಸ್‌., ಬೆಂಗಳೂರು

ಅಶೋಕ್ ಅವರೆ, ನಿಮಗೆ ಸೂಕ್ತವಾದ ಕೋರ್ಸ್ ಅಂದರೆ ಎಂಎಸ್ಸಿ ಎನ್ವಿರಾನ್‌ಮೆಂಟಲ್‌ ಸೈನ್ಸ್ ಮತ್ತು ವಾಟರ್ ಮ್ಯಾನೇಜ್‌ಮೆಂಟ್‌. ಎಂಎಸ್ಸಿ ಎನ್ವಿರಾನ್‌ಮೆಂಟಲ್‌ ಪದವಿಯು ನಿಮಗೆ ಅನುಕೂಲವಾಗುತ್ತದೆ. ಐಐಟಿ ರೂರ್ಕೀ ಅಥವಾ ಭುವನೇಶ್ವರದಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್‌ ಆಫ್ ವಾಟರ್ ಮ್ಯಾನೇಜ್‌ಮೆಂಟ್‌ ಕಾಲೇಜುಗಳಲ್ಲಿ ಒಂದು ವರ್ಷದ ಅಧ್ಯಯನವನ್ನು ಮಾಡಬಹುದು.

ಅದಲ್ಲದೆ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಸ್ಯಾನಿಟೇಷನ್ ಎಂಜಿನಿಯರಿಂಗ್ ಮತ್ತು ವೇಸ್ಟ್ ಮ್ಯಾನೇಜ್‌ಮೆಂಟ್‌ ವಿಷಯಗಳಲ್ಲಿ ಎಂಟೆಕ್ ಕೋರ್ಸ್ ಕೂಡ ಲಭ್ಯವಿದೆ.ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್‌ ಆಫ್ ಹೈಜೀನ್ ಅಂಡ್ ಪಬ್ಲಿಕ್ ಹೆಲ್ತ್ ಸಂಸ್ಥೆಯು ಪಶ್ಚಿಮ ಬಂಗಾಳದ ಸಿಂಗೂರ್‌ನಲ್ಲಿ ಇದೆ. ಇಲ್ಲಿ ಮಾಸ್ಟರ್ ಆಫ್ ಎಂಜಿನಿಯರಿಂಗ್ - ಪಬ್ಲಿಕ್ ಹೆಲ್ತ್ ವಿಷಯದಲ್ಲಿ ಅಧ್ಯಯನ ಮಾಡಬಹುದು. ಹೆಚ್ಚಿನ ವಿವರಗಳಿಗೆ ಅವರ ವೆಬ್‌ಸೈಟ್ ಗೆ ಭೇಟಿ ನೀಡಿ.

ನಾನು ಈಗ ಪಿಯುಸಿ ಪರೀಕ್ಷೆ ಬರೆದಿದ್ದೇನೆ. ಆದರೆ ಪಿಯುಸಿ ನಂತರ ನಾನು ಯಾವ ಡಿಗ್ರಿ ಓದಬೇಕು? ಏಕೆಂದರೆ ನಾನು ಕನ್ನಡ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇನೆ. ನಾನು ಮುಂದೆ ಐ.ಎ.ಎಸ್ ಓದಬೇಕು ಎಂದು ಬಯಸಿದ್ದೇನೆ. ಈಗ ನಾನು ಪಿಯುಸಿನಲ್ಲಿ ಆರ್ಟ್ಸ್ ತೆಗೆದುಕೊಂಡಿದ್ದೇನೆ. ಮುಂದಿನ ಉಪಾಯ ತಿಳಿಸಿ.
–ಯೋಗಯ್ಯ ಹಿರೇಮಠ, ಊರು ಬೇಡ

ಪಿ.ಯು.ಸಿ. ಆದ ನಂತರದಲ್ಲಿ ನೀವು ಆರ್ಟ್ಸ್ ವಿಭಾಗದಲ್ಲಿಯೇ ಡಿಗ್ರಿಯನ್ನು ಪಡೆಯಬಹುದು. ಬಿ.ಎ. ಪದವಿಯನ್ನು ಪೊಲಿಟಿಕಲ್ ಸೈನ್ಸ್ ಅಥವಾ ನಿಮಗೆ ಆಸಕ್ತಿ ಇರುವ ಇತರ ವಿಷಯಗಳಲ್ಲಿಯೂ ಮುಂದುವರಿಸಬಹುದು. ನೀವು ಡಿಗ್ರಿ ಮುಂದುವರೆಸುವಾಗಲೇ ಯು.ಪಿ.ಎಸ್‌.ಸಿ. ಪರೀಕ್ಷೆಗಳಿಗೆ ತಯಾರಿ ನಡೆಸಬಹುದು. ಆದರೆ ನೀವು ಪದವೀಧರರಾದ ಮೇಲೆಯೇ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು.

ಐ. ಎ.ಎಸ್‌. ಪರೀಕ್ಷೆಯ ಪ್ರಶ್ನೆಪತ್ರಿಕೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇರುತ್ತದೆ. ಕನ್ನಡದಲ್ಲಿ ಪದವೀಧರರಾಗುವ ಜತೆಯಲ್ಲಿ ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳನ್ನು ಅಭ್ಯಾಸ ಮಾಡಿದರೆ ಒಳ್ಳೆಯದು.

ಇದಲ್ಲದೆ ಕನ್ನಡ ಭಾಷೆಯಲ್ಲಿಯೇ ನಡೆಯುವ ಕೆ.ಎ.ಎಸ್‌. (ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಸರ್ವಿಸಸ್) ಪರೀಕ್ಷೆಗಳಿಗೂ ಭಾಗಿಯಾಗಬಹುದು.

ನಾನು ದ್ವಿತೀಯ ಪಿಯುಸಿಯಲ್ಲಿ ಪಿಸಿಎಂಬಿ ತೆಗೆದುಕೊಂಡಿದ್ದೇನೆ. ಮುಂದೆ ಓದಲು ಯಾವ ಅವಕಾಶಗಳು ಇವೆ?
–ಉದಯ್‌ಕುಮಾರ್‌, ಊರು ಬೇಡ

ಉದಯ ಕುಮಾರ್ ಅವರೆ ಪಿ.ಸಿ.ಎಂ.ಬಿ ವಿಷಯಗಳಲ್ಲಿ ಪಿ.ಯು.ಸಿ ಪಾಸಾದ ನಂತರ ನಿಮಗೆ ಅನೇಕ ಕೋರ್ಸ್ ಗಳಿಗೆ ಅವಕಾಶಗಳಿವೆ . ನಿಮ್ಮ ಆಸಕ್ತಿಗೆ, ಬಯಕೆಗೆ, ಯೋಗ್ಯತೆಗೆ ಹೊಂದುವ ಮುಂದಿನ ವಿದ್ಯಾಭ್ಯಾಸಕ್ಕೆ ಸೂಕ್ತ ವೃತ್ತಿಪರ ಸಲಹೆಗಾರರನ್ನು ನಿಮ್ಮ ಊರಿನಲ್ಲಿಯೇ ಸಂಪರ್ಕಿಸಿಧ ನಂತರ ನಿರ್ಧಾರಕ್ಕೆ ಬನ್ನಿ.

ನಾನು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ 2017ರಲ್ಲಿ ಬಿ.ಇ. ಮಾಡಿದ್ದೇನೆ. ನನಗೆ ಯಾವುದೇ ಕಂಪನಿಯಲ್ಲಿ ಕೆಲಸ ಮಾಡಲು ಇಷ್ಟ ಇಲ್ಲ. ಶಿಕ್ಷಕ ವೃತ್ತಿಯಲ್ಲಿ ಆಸಕ್ತಿ ಇದ್ದು, ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಕಲಿಸುತ್ತಿದ್ದೇನೆ. ನನಗೆ ಸದ್ಯ ಮಾಸಿಕ 5000 ರೂಪಾಯಿ ವೇತನವಿದೆ. ಇದು ನನ್ನ ಜೀವನಕ್ಕೆ ಸಾಕಾಗುತ್ತಿಲ್ಲ. ಏನು ಮಾಡಲಿ? ಸಲಹೆ ನೀಡಿ.
–ಹೆಸರು, ಊರು ಬೇಡ

ಸ್ನೇಹಿತರೆ, ಮೊದಲು ನಿಮಗೆ ಶಿಕ್ಷಕರಾಗಿ ಕೆಲಸ ಮಾಡಲು ಆಸಕ್ತಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಆಸಕ್ತಿ ಇದ್ದಲ್ಲಿ ನೀವು ಎಂ.ಟೆಕ್ ಡಿಗ್ರಿಯನ್ನು ಉತ್ತಮ ಶಿಕ್ಷಣ ಸಂಸ್ಥೆಯಿಂದ ಪಡೆಯಬೇಕು. ಇದಲ್ಲದೆ ಯು.ಜಿ.ಸಿ.ಎನ್.ಇ.ಟಿ ಪರೀಕ್ಷೆಗಳನ್ನು ಮುಗಿಸಿದರೆ ಒಬ್ಬ ಶಿಕ್ಷಕ ಆಗಲು ಯೋಗ್ಯತೆಯನ್ನು ಪಡೆಯತ್ತೀರಿ.

ಮೇಲ್ಕಂಡ ಎರಡು ಕೆಲಸವನ್ನು ನೀವು ಮಾಡಿದ ಮೇಲೆ ಒಂದು ಉತ್ತಮವಾದ ಕಾಲೇಜಿನಲ್ಲಿ ಒಳ್ಳೆಯ ಸಂಬಳ ಸಿಗುತ್ತದೆ.

ನಿಮಗೆ ಸಿಗುವ ಸಂಬಳ ನಿಮ್ಮ ಸಾಮರ್ಥ್ಯ ಮತ್ತು ವಿದ್ಯಾರ್ಹತೆ ಮೇಲೆ ಅವಲಂಬಿಸಿರುತ್ತದೆ.

ನಾನು ಪ್ರಸ್ತುತ ಸರ್ಕಾರಿ ಉದ್ಯೋಗದಲ್ಲಿದ್ದೇನೆ. ಆದರೆ ನನಗೆ ಇತಿಹಾಸ ಪ್ರಾಧ್ಯಾಪಕಳಾಗಬೇಕು ಎನ್ನುವ ಆಸೆ. ನಾನು ಈಗ ಪ್ರಥಮ ವರ್ಷದ ಬಿ.ಎ. ಪದವಿಯನ್ನು ದೂರಶಿಕ್ಷಣದಿಂದ ಪಡೆಯುತ್ತಿದ್ದೇನೆ. ಎಂ.ಎ ಪದವಿಯನ್ನು ಸಹ ದೂರಶಿಕ್ಷಣದಿಂದ ಪಡೆದು ಪ್ರಾಧ್ಯಾಪಕಳಾಗಬಹುದೇ? ದಯವಿಟ್ಟು ಮಾರ್ಗದರ್ಶನ ನೀಡಿ.
ನಿರ್ಮಲಾ ಶ್ರೀರಾಮಪ್ಪ, ಊರು ಬೇಡ

ನಿರ್ಮಲಾ ರವರೆ, ನಿಮಗೆ ಚರಿತ್ರೆ ವಿಷಯದಲ್ಲಿ ಪ್ರಾಧ್ಯಾಪಕಳಾಗಬೇಕೆಂಬ ಆಸಕ್ತಿ ಇರುವುದು ಬಹಳ ಸಂತೋಷದ ವಿಷಯ. ಪ್ರಾಧ್ಯಾಪಕಿಯಾಗಬೇಕಾದರೆ ನೀವು ಮೊದಲು ಸರ್ಕಾರಿ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳಲ್ಲಿ ಎಂ.ಎ ಪದವಿಯನ್ನು ಪಡೆಯಬೇಕು. ಹಾಗಾಗಿ ದಯವಿಟ್ಟು ಆ ಸಂಸ್ಥೆಗಳ ತಪಾಸಣೆ ಮಾಡಿ ವಿವರಗಳನ್ನು ಪಡೆದುಕೊಳ್ಳಿ. ಕೇವಲ ಬಿ.ಎ ಅಥವಾ ಎಂ.ಎ ಪದವಿಯನ್ನು ಪಡೆದರೆ ಶಾಲೆಗಳಲ್ಲಿ ನೀವು ಪ್ರಾಧ್ಯಾಪಕರಾಗಬಹುದು.

ಕಾಲೇಜುಗಳಲ್ಲಿ ಪ್ರಾಧ್ಯಾಪಕರಗಳು ಬಿ.ಎಡ್ ಪೂರ್ಣಗೊಳಿಸಿ ನಂತರದಲ್ಲಿ ಯು.ಜಿ.ಸಿ, ಎನ್‌.ಇ.ಟಿ ಪರೀಕ್ಷೆಯಲ್ಲಿ ಭಾಗವಹಿಸಿ ತೇರ್ಗಡೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT