‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆ: ತಯಾರಿ ಹೀಗಿರಲಿ

7

‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆ: ತಯಾರಿ ಹೀಗಿರಲಿ

Published:
Updated:
Prajavani

‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆ ಆರಂಭವಾಗುವುದಕ್ಕೆ ಕೆಲವು ದಿನಗಳು ಬಾಕಿ ಇವೆ. ವಿದ್ಯಾರ್ಥಿಗಳಲ್ಲಿದಿನೇ ದಿನೇ ಕುತೂಹಲ ಹೆಚ್ಚಾಗುತ್ತಿದೆ. ರಾಜ್ಯದಾದ್ಯಂತ ಈಗಾಗಲೇ ನೂರಾರು ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿದ್ದಾರೆ. ದಿನದಿಂದ ದಿನಕ್ಕೆ ತಂಡಗಳ ಸಂಖ್ಯೆ ಏರುತ್ತಿದ್ದು, ಈ ಬಾರಿ ಪೈಪೋಟಿ ಇನ್ನಷ್ಟೂ ತೀವ್ರವಾಗಿರಲಿದೆ.

‘ಪ್ರಜಾವಾಣಿ’ ರಸಪ್ರಶ್ನೆಯಲ್ಲಿ ತಮ್ಮ ಶಾಲಾ ವಿದ್ಯಾರ್ಥಿಗಳ ಬುದ್ಧಿಶಕ್ತಿಯನ್ನು ಓರೆಗೆ ಹಚ್ಚಲು ಸಿದ್ಧವಾಗಿರುವ ಶಾಲೆಗಳು ಇದಕ್ಕಾಗಿಯೇ, ಶಾಲಾ ಮಟ್ಟದಲ್ಲಿ ವಿವಿಧ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.

ಮೈಸೂರು, ಹಾಸನ, ಮಂಗಳೂರು, ಧಾರವಾಡ, ವಿಜಯಪುರ, ಕಲಬುರ್ಗಿ, ರಾಯಚೂರು, ದಾವಣಗೆರೆ, ತುಮಕೂರು, ಬೆಂಗಳೂರಿನಲ್ಲಿ (ಒಟ್ಟು 10 ನಗರಗಳಲ್ಲಿ) ಕ್ವಿಜ್‌ ಆಯೋಜಿಸಲಾಗಿದೆ. 1000ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಈ ಬಾರಿಯ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಕ್ವಿಜ್‌ ಎಲ್ಲೆಲ್ಲಿ?: ಇದೇ 8ರಂದು ಮೈಸೂರು, 9ರಂದು ಹಾಸನ, 10ರಂದು ಮಂಗಳೂರು, 11ರಂದು ದಾವಣಗೆರೆ, 16ರಂದು ಧಾರವಾಡ, 17ರಂದು ವಿಜಯಪುರ, 18ರಂದು ಕಲಬುರ್ಗಿ, 19ಕ್ಕೆ ರಾಯಚೂರು, 22ರಂದು ತುಮಕೂರಿನಲ್ಲಿ ನಡೆಯುತ್ತವೆ. ವಲಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡಗಳು ಜನವರಿ 24ರಂದು ಬೆಂಗಳೂರಿನಲ್ಲಿ ನಡೆಯುವ ಅಂತಿಮ ಹಂತದ ಫೈನಲ್ ಸ್ಪರ್ಧೆಗೆ ಅಯ್ಕೆಯಾಗುತ್ತಾರೆ.    

ಆಯ್ಕೆಯಾದ ತಂಡಗಳಿಗೆ ಆಕರ್ಷಕ ಬಹುಮಾನಗಳು ದೊರೆಯಲಿವೆ. ನೋಂದಣಿಗೆ ಯಾವುದೇ ಶುಲ್ಕವಿಲ್ಲ. ವಲಯ ಮಟ್ಟದಲ್ಲಿ ನಡೆಯುವ ಕ್ವಿಜ್‌ಗೆ ಇನ್ನೂ ಸಮಯಾವಕಾಶ ಇದ್ದು, ಆಯಾ ವಲಯ ವ್ಯಾಪ್ತಿಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಮೂಲಕ ನೋಂದಾಯಿಸಿಕೊಳ್ಳಬಹುದು. 

ಇದು ‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಶಿಪ್‌ನ ಐದನೇ ಆವೃತ್ತಿಯಾಗಿದ್ದು, ‘ದೀಕ್ಷಾ’ ಶಿಕ್ಷಣ ಸಂಸ್ಥೆ ಪ್ರಸ್ತುತಪಡಿಸುತ್ತಿದೆ. ಕ್ವಿಜ್‌ ಮಾಸ್ಟರ್‌ ಮೇಘವಿ ಮಂಜುನಾಥ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 

ಈ ಹಿಂದೆ ಕೇಳಲಾಗಿದ್ದ ಪ್ರಶ್ನೆಗಳು ಮತ್ತು ಹೆಚ್ಚಿನ ಮಾಹಿತಿಗೆ www.prajavani.netಗೆ ಭೇಟಿ ನೀಡಿ.

ವೆಬ್‌ಸೈಟ್‌ನಲ್ಲಿವೆ ಮಾದರಿ ಪ್ರಶ್ನೆಗಳು

ರಸಪ್ರಶ್ನೆ ಸ್ಪರ್ಧೆಯಲ್ಲಿ ಎಂತಹ ಪ್ರಶ್ನೆಗಳನ್ನು ಕೇಳುತ್ತಾರೆ? ತಯಾರಿ ಹೇಗಿರಬೇಕು? – ಎಂಬುದು ಹಲವು ವಿದ್ಯಾರ್ಥಿಗಳ ಯೋಚನೆ.

ಕ್ವಿಜ್‌ನಲ್ಲಿ ಭಾಗವಹಿಸುವ ಮಕ್ಕಳ ಅನುಕೂಲಕ್ಕಾಗಿ ಪ್ರಜಾವಾಣಿ ತನ್ನ ವೆಬ್‌ಸೈಟ್‌ನಲ್ಲೂ ಆನ್‌ಲೈನ್‌ ರಸಪ್ರಶ್ನೆಯನ್ನು ಆಯೋಜಿಸಿದೆ. ವೆಬ್‌ಸೈಟ್‌ನಲ್ಲಿ ನಿಮ್ಮ ಹೆಸರು, ವಯಸ್ಸು, ತರಗತಿ, ಶಾಲೆ, ಸ್ಥಳ ನಮೂದಿಸಬೇಕು. ನಂತರ ಹತ್ತು ನಿಮಿಷಗಳಲ್ಲಿ 10 ಪ್ರಶ್ನೆಗಳಿಗೆ ಉತ್ತರ ನೀಡಬೇಕು. 

ಎಲ್ಲ ಪ್ರಶ್ನೆಗಳಿಗೂ ಬಹು ಆಯ್ಕೆಯ ಉತ್ತರಗಳಿರುತ್ತವೆ. ದೃಶ್ಯಸಂಬಂಧಿ ಪ್ರಶ್ನೆಗಳಿವೆ. ಈ ಪ್ರಶ್ನೆಗಳನ್ನು ಓದಿ, ಚಿತ್ರ ನೋಡಿದ ನಂತರ ನಿಮ್ಮ ಉತ್ತರವನ್ನು ಆಯ್ಕೆ ಮಾಡಬಹುದು. ಸರಿ–ತಪ್ಪು ಉತ್ತರಗಳನ್ನು ಅಲ್ಲಿಯೇ ಮೌಲ್ಯಮಾಪನ ಮಾಡಲಾಗುತ್ತದೆ. ಅಂತಿಮವಾಗಿ ನೀವು ನೀಡಿದ ಉತ್ತರಗಳು, ಅಲ್ಲಿರುವ ಸರಿ ಉತ್ತರಗಳ ಜತೆಗೆ ತಾಳೆ ಹಾಕಿ ನೋಡಬಹುದು. ಅಂಕಗಳನ್ನು ಪರದೆಯ ಮೇಲೆ ಪ್ರದರ್ಶಿಸಿದ ಮೇಲೆ, ಸರಿ ಉತ್ತರ ಮತ್ತು ತಪ್ಪು ಉತ್ತರಗಳನ್ನು ಒಟ್ಟೊಟ್ಟಿಗೆ ನೀಡಲಾಗುತ್ತದೆ. 

ಈ ಪ್ರಶ್ನೆಗಳು ‘ಪ್ರಜಾವಾಣಿ ರಸಪ್ರಶ್ನೆ’ ಸ್ಪರ್ಧೆಯಲ್ಲಿ ಕೇಳಬಹುದಾದ ಮಾದರಿ ಪ್ರಶ್ನೆಗಳನ್ನು ಸೂಚಿಸುತ್ತವೆ. ಒಮ್ಮೆ ಯತ್ನಿಸಿ ನೋಡಿ. www.prajavani.net

**

ಹಿಂದಿನ ಆವೃತ್ತಿಯಲ್ಲಿ ಕೆಲವು ಪ್ರಶ್ನೆಗಳಿಗೆ ಮಕ್ಕಳ ಉತ್ತರಗಳು ಹೀಗಿದ್ದವು

ಮೈಸೂರಿನಲ್ಲಿ ಪ್ರಾಥಮಿಕ ಸುತ್ತಿನ ಲಿಖಿತ ಹಂತದಲ್ಲಿ ಕೆಲವು ವಿದ್ಯಾರ್ಥಿಗಳು ನೀಡಿದ ಉತ್ತರಗಳು ಹಾಸ್ಯ ಉಕ್ಕಿಸಿದವು. ‘@ದಿವ್ಯಾ ಸ್ಪಂದನ’ ಎಂಬ ಟಿಟರ್‌ ಖಾತೆ ಹೊಂದಿರುವ ಕಾಂಗ್ರೆಸ್‌ ನಾಯಕಿ ಯಾರು ಎಂಬ ಪ್ರಶ್ನೆಗೆ ಪ್ರೇಮಕುಮಾರಿ, ಸೋನಿಯಾ ಗಾಂಧಿ, ಗೀತಾ ಮಹಾದೇವ ಪ್ರಸಾದ್‌, ಶಶಿಕಲಾ, ಸುಬ್ಬಕ್ಕ ಎಂಬೆಲ್ಲಾ ಉತ್ತರಗಳನ್ನು ಬರೆದಿದ್ದರು. ಕೆಲವರು ಮಾತ್ರ ರಮ್ಯಾ ಎಂಬ ಸರಿ ಉತ್ತರ ನಮೂದಿಸಿದ್ದರು.

ಕಿರಿಕ್‌ ಪಾರ್ಟಿ ಸಿನಿಮಾದ ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ...’, ರಾಜಕುಮಾರ ಸಿನಿಮಾದ ‘ಗೊಂಬೆ ಹೇಳುತೈತೆ...’ ಎಂಬ ಗೀತೆಗಳ ಗಾಯಕ ಯಾರು ಎಂಬ ಪ್ರಶ್ನೆಗೆ ಹೆಚ್ಚಿನವರು ವಿಜಯ್‌ ಪ್ರಕಾಶ್‌ ಎಂದು ಸರಿ ಉತ್ತರ ಬರೆದಿದ್ದರು.

ಇನ್ನು ಹಾಸನದಲ್ಲಿ ಕ್ವಿಜ್‌ನ ಮೊದಲ ಸುತ್ತಿನಲ್ಲಿ ಕೇಳಿದ ಪ್ರಶ್ನೆಗಳು ಹೀಗಿದ್ದವು. ಹ್ಯಾಕರ್‌ ವೇ ಕ್ಯಾಲಿಫೋರ್ನಿಯಾದಲ್ಲಿ ಯಾವ ಅಂತರ್ಜಾಲ ಸಂಸ್ಥೆಯ ಮುಖ್ಯ ಕಚೇರಿ ಇದೆ ಎಂಬ ಪ್ರಶ್ನೆಗೆ ಗೂಗಲ್‌ ಎಂದು ನಮೂದಿಸಿದ್ದರು. ಭಾರತದಲ್ಲಿ 1940ರ ದಶಕದಲ್ಲಿ ಕುತ್ತಿಗೆ ಮುಚ್ಚುವ ಕೋಟ್‌ ಹೆಸರುವಾಸಿಯಾಗಿತ್ತು. ಇದನ್ನು ಬಹಳ ಕಾಲ ಧರಿಸುತ್ತಿದ್ದ ರಾಜಕಾರಣಿಯ ಹೆಸರೇನು ಎಂಬ ಪ್ರಶ್ನೆಗೆ ರಾಹುಲ್‌ ಗಾಂಧಿ, ರಾಮನಾಥ ಕೋವಿಂದ್‌, ನರೇಂದ್ರ ಮೋದಿ ಎಂಬೆಲ್ಲಾ ಉತ್ತರ ಬರೆದಿದ್ದರು.

ಮಲೆನಾಡು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಚಿತ್ರೀಕರಿಸಿದ ಚಿತ್ರ ಯಾವುದು ಹಾಗೂ ಮಹಾಮಸ್ತಕಾಭಿಷೇಕ ಮುಂದಿನ ಬಾರಿ ಯಾವಾಗ ನಡೆಯಲಿದೆ ಎಂಬ ಪ್ರಶ್ನೆಗೆ ಬಹುತೇಕ ವಿದ್ಯಾರ್ಥಿಗಳು ಕಿರಿಕ್‌ ಪಾರ್ಟಿ ಮತ್ತು 2018 ಎಂದು ಸರಿಯಾಗಿ ಉತ್ತರಿಸಿದ್ದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !