ಗುರುವಾರ , ನವೆಂಬರ್ 26, 2020
22 °C
ಕನ್ನಡ: ನೋಡಿ ಕಲಿ, ಬರೆದು ನಲಿ

PV Web Exclusive: ವಿಶಿಷ್ಟ ಶಿಕ್ಷಣ ಕಾಯಕದಲ್ಲಿ ಪ್ರಣತಿ ವೇದಿಕೆ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

‘ಮಕ್ಕಳಿಗೆ ಪಠ್ಯಪುಸ್ತಕದ ಶಿಕ್ಷಣದ ದೊರೆತರಷ್ಟೇ ಸಾಲದು, ಪಠ್ಯೇತರ ರೂಪದಲ್ಲಿ ಭಾಷಾ ಕಲಿಕೆ ಸರಳ ಮತ್ತು ಸುಲಭವಾಗಿ ಜ್ಞಾನ ವೃದ್ಧಿಸಬಲ್ಲ ಶಿಕ್ಷಣವೂ ಬೇಕು. ಇದು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತದೆ ಅಲ್ಲದೇ ಹೊಸ ದೃಷ್ಟಿಕೋನ ಹೊಂದಲು ಅನುಕೂಲ ಆಗುತ್ತದೆ’.

ಶಿಕ್ಷಣದ ವಿಷಯ ಪ್ರಸ್ತಾಪವಾದಾಗಲೆಲ್ಲ, ಹೀಗೊಂದು ಅಭಿಪ್ರಾಯ ಶಿಕ್ಷಣ ತಜ್ಞರಿಂದ ವ್ಯಕ್ತವಾಗುತ್ತದೆ. ಒಂದೇ ತರಹದ ಓದು–ಬರಹಕ್ಕಿಂತ ವಿಭಿನ್ನ ಕಲಿಕೆಗೆ ಆದ್ಯತೆ ದೊರೆಯಬೇಕು ಎಂಬ ಆಶಯ ಅವರದ್ದು. ಇಂಥದ್ದೇ ಆಲೋಚನೆಯ ತಳಹದಿಯ ಮೇಲೆ ಚಿಕ್ಕಬಳ್ಳಾಪುರದ ಪ್ರಣತಿ ವೇದಿಕೆಯು  8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ವೇದಿಕೆ ಸದಸ್ಯರು ರಾಜ್ಯ ಮತ್ತು ದೇಶದ ವಿವಿಧೆಡೆ ವಾಸವಿದ್ದಾರೆ.

ಶಾಲಾ ಶಿಕ್ಷಣವನ್ನು ಕೇಂದ್ರೀಕರಿಸಿರುವ ಪ್ರಣತಿ ವೇದಿಕೆಯು ವಿದ್ಯಾರ್ಥಿಗಳ ಕಲಿಕೆ ಹಿತದೃಷ್ಟಿಯಿಂದ ಪ್ರತಿ ವರ್ಷ ವಿಶಿಷ್ಟ ಮಾದರಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪುಸ್ತಕಗಳನ್ನು ಹೊರ ತರುತ್ತದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅವುಗಳನ್ನು ಉಚಿತವಾಗಿ ವಿತರಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತದೆ. ಪ್ರತಿಕ್ರಿಯೆಗಳನ್ನು ಸಂಗ್ರಹಿಸುತ್ತದೆ.

‘ಬಾಳಿನಲ್ಲಿ ಬೆಳಕು ಪ್ರಮುಖ ಪಾತ್ರ ಬೀರುತ್ತದೆ. ಬೆಳಕು ಎಲ್ಲೆಡೆ ಪಸರಿಸಬೇಕು ಎಂಬ ಉನ್ನತ ಧ್ಯೇಯ ಮತ್ತು ಸಮಾಜದಿಂದ ಪಡೆದಿದ್ದನ್ನು ಪ್ರತಿಯಾಗಿ ಸಮಾಜಕ್ಕೆ ಹಿಂದಿರುಗಿಸಬೇಕು ಎಂಬ ಉದ್ದೇಶದಿಂದ ನಾವೆಲ್ಲ ಸಮಾನ ಮನಸ್ಕರು ಸೇರಿ ಪ್ರಣತಿ ವೇದಿಕೆಯನ್ನು 8 ವರ್ಷದ ಹಿಂದೆ ಅಸ್ತಿತ್ವಕ್ಕೆ ತಂದೆವು’ ಎಂದು ವೇದಿಕೆಯ ಸದಸ್ಯರು ಹೇಳುತ್ತಾರೆ.


‘ಕನ್ನಡದಾಟ–2’ ಪುಸ್ತಕದ ಮುಖಪುಟ

ಆರ್ಥಿಕ ಸ್ವಾವಲಂಬಿಯಾದ ಪ್ರಣತಿ ವೇದಿಕೆಗೆ ಸದಸ್ಯರು ತಮ್ಮ ದುಡಿಮೆಯಿಂದಲೇ ಇಂತಿಷ್ಟು ಹಣ ಮೀಸಲಿಡುತ್ತಾರೆ. ಶಾಲಾ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂಬ ಏಕೈಕ ಉದ್ದೇಶದಿಂದ ವಿವಿಧ ಚಟುವಟಿಕೆಗಳಿಗೆ ಹಣವನ್ನು ಸದ್ಬಳಕೆ ಮಾಡುತ್ತಾರೆ. ಈ ಕಾಯಕವು ಸಾರ್ಥಕ ಭಾವ ಮೂಡಿಸುತ್ತದೆ ಎಂಬ ಅಭಿಪ್ರಾಯ ಅವರದ್ದು.

‘ವೇದಿಕೆ ಆರಂಭಿಸಿದ ಮೂರು ವರ್ಷ ಆಯಾ ಶಾಲೆಗಳ ಮಕ್ಕಳಿಗೆ 4 ಸಾವಿರ ನೋಟ್‌ ಪುಸ್ತಕಗಳನ್ನು ಉಚಿತವಾಗಿ ನೀಡಿದೆವು. ‘ಖುಷಿಯಿಂದ ಕಲಿ’ ಎಂಬ ಪುಸ್ತಕವನ್ನೂ ಸಹ ವಿತರಿಸಿದೆವು. 1 ರಿಂದ 4 ಮತ್ತು 5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಪುಸ್ತಕಗಳನ್ನು ಮುದ್ರಿಸಿದೆವು. ಆಟದ ಮೂಲಕವೂ ಶಿಕ್ಷಣ ಪಡೆಯಬಹುದು ಎಂಬ ವಿಷಯವನ್ನು ತಿಳಿಪಡಿಸಿದೆವು’ ಎಂದು ಪ್ರಣತಿ ವೇದಿಕೆಯ ಸಂಚಾಲಕಿ ನಿಲೀನಾ ಥಾಮಸ್ ಹೇಳುತ್ತಾರೆ.

ಕನ್ನಡ ಭಾಷೆಯನ್ನು ಆಸಕ್ತಿದಾಯಕವಾಗಿ ಮಕ್ಕಳಿಗೆ ಕಲಿಸಿಕೊಡಲು ಭಾಷಾ ಆಟಗಳ ಪುಸ್ತಕಗಳನ್ನು (ಕನ್ನಡದಾಟ–1, ಕನ್ನಡದಾಟ–2) ಪ್ರಣತಿ ವೇದಿಕೆಯು ಹೊರತಂದಿದೆ. ಇಂಗ್ಲಿಷ್‌ ಭಾಷೆ ಕಲಿಕೆ ಕುರಿತ ಎರಡು ಪುಸ್ತಕಗಳು ಶೀಘ್ರವೇ ಲಭ್ಯವಾಗಲಿದೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳ ಕಲಿಕೆ ಮತ್ತು ಬೌದ್ಧಿಕ ಮಟ್ಟ ಅನುಸಾರ ಆಟಗಳನ್ನು ಪುಸ್ತಕದಲ್ಲಿ ಪರಿಚಯಿಸಲಾಗಿದೆ.

ಒಂದೇ ಪದವನ್ನು ಯಾವುದೆಲ್ಲ ರೀತಿ ಪ್ರಯೋಗಿಸಬಹುದು, ಚುಕ್ಕಿಗಳ ಜೋಡಿಸುವಿಕೆಯಿಂದ ಯಾವ ಪ್ರಾಣಿ ಮೂಡುತ್ತದೆ, ಉದ್ದನೇ ವಾಕ್ಯಗಳನ್ನು ಸಣ್ಣಗೊಳಿಸುವುದು ಹೇಗೆ, ಅಕ್ಷರ ಪಲ್ಲಟಗೊಳಿಸಿ ಹೊಸ ಪದ ಹುಡುಕಿ, ಪ್ರಾಸಪದಗಳನ್ನು ಪತ್ತೆ ಮಾಡಿ, ಸಮನಾರ್ಥಕ ಪದಗಳನ್ನು ಗುರುತಿಸಿ ಹೀಗೆ ವೈವಿಧ್ಯಮಯ ಆಟಗಳು ಪುಸ್ತಕದಲ್ಲಿವೆ.

ಕನ್ನಡದ ಎರಡು ಪುಸ್ತಕಗಳು ಮತ್ತು ಇಂಗ್ಲಿಷ್‌ನ ಎರಡು ಪುಸ್ತಕಗಳನ್ನು ದಾನಿಗಳು ಮತ್ತು ಶಿಕ್ಷಕರ ನೆರವಿನಿಂದ ಆಯಾ ಶಾಲೆಗಳಿಗೆ ತಲುಪಿಸಲಾಗುತ್ತದೆ. ಕೆಲ ಕಡೆ ಪ್ರಣತಿ ವೇದಿಕೆ ಸದಸ್ಯರೇ ಸ್ವಯಂ ಪ್ರೇರಣೆಯಿಂದ ಶಾಲೆಗಳಿಗೆ ತೆರಳುತ್ತಾರೆ.

‘ಕೊರೊನಾ ದಟ್ಟವಾಗಿ ವ್ಯಾಪಿಸುತ್ತಿರುವ ಕಾರಣ ಶಾಲೆಗಳು ಬಂದ್‌ ಆಗಿವೆ. ಆನ್‌ಲೈನ್ ಅಲ್ಲದೇ ಬೇರೆ ಬೇರೆ ಸ್ವರೂಪದಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಶಿಕ್ಷಕರು ಮತ್ತು ಮಕ್ಕಳ ಬಳಿ ಇಂತಹ ಪುಸ್ತಕಗಳಿದ್ದಲ್ಲಿ, ಕಲಿಕೆಯೂ ಸುಲಭವಾಗಲಿದೆ. ಶಾಲೆ ಆರಂಭಗೊಳ್ಳುತ್ತಿದ್ದಂತೆಯೇ ಪುಸ್ತಕಗಳನ್ನು ವಿತರಿಸುತ್ತೇವೆ. ಶಿಕ್ಷಣಾಸಕ್ತರು ಮತ್ತು ಪೋಷಕರು ನೇರವಾಗಿ ನಮ್ಮಿಂದಲೇ ಪುಸ್ತಕಗಳನ್ನು ಪಡೆಯಬಹುದು. ಮನೆಯಲ್ಲೇ ಮಕ್ಕಳಿಗೆ ಆಸಕ್ತಿಕರ ವಿಷಯಗಳನ್ನು ತಿಳಿಪಡಿಸಬಹುದು’ ಎಂದು ವೇದಿಕೆಯ ಸದಸ್ಯೆ ಅಶ್ವಿನಿ ಹೇಳುತ್ತಾರೆ.


ಪುಸ್ತಕದ ಒಳಪುಟಗಳಲ್ಲಿ ಡಾ. ಲೀಲಾ ಅಪ್ಪಾಜಿಯವರು ಕ್ಲಿಕ್ಕಿಸಿದ ಪಕ್ಷಿಗಳ ಚಿತ್ರಗಳು

ಬೆಂಗಳೂರಿನ ಬದುಕು ಸಾಮಾಜಿಕ–ಸಾಂಸ್ಕೃತಿಕ–ಶೈಕ್ಷಣಿಕ ಟ್ರಸ್ಟ್‌ ಪುಸ್ತಕಗಳನ್ನು ಮುದ್ರಿಸಿದೆ. ಒಂದೊಂದು ಪುಸ್ತಕದ ದರವು ₹ 25. ನಾಲ್ಕೂ ಪುಸ್ತಕಗಳು ತಲಾ 64 ಪುಟಗಳನ್ನು ಹೊಂದಿದೆ. ಪುಸ್ತಕ ಮಾರಾಟದಿಂದ ಬರುವ ಹಣ ಪ್ರಣತಿ ವೇದಿಕೆಗೆ ಹೋಗುತ್ತದೆ. ಆ ಹಣ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲು ಬಳಕೆಯಾಗುತ್ತದೆ.

ಈ ಪುಸ್ತಕಗಳನ್ನು ಹೊರತರುವಲ್ಲಿ ಡಾ. ಜಿ.ಸುಧಾ, ಎಂ.ಎಸ್‌.ವಿಜಯಲಕ್ಷ್ಮಿ, ಡಾ. ಲೀಲಾ ಅಪ್ಪಾಜಿ, ವಿ.ಉಷಾ, ರಂಗಮ್ಮ ಹೊದೇಕಲ್, ನಳಿನಾಕ್ಷಿ, ಎಸ್‌.ಎನ್.ಸ್ವಾಮಿ ಅಲ್ಲದೇ ಕೊಳ್ಳೇಗಾಲದ ಮುಕ್ತ ಸಾಹಿತ್ಯ ವೇದಿಕೆ ಸದಸ್ಯೆಯರು ಶ್ರಮಿಸಿದ್ದಾರೆ.

ಮಂಡ್ಯದ ಹಿರಿಯ ಛಾಯಾಗ್ರಾಹಕಿ ಡಾ. ಲೀಲಾ ಅಪ್ಪಾಜಿಯವರು ಹೊರಪುಟಗಳನ್ನು ವಿನ್ಯಾಸಗೊಳಿಸಿದ್ದಾರೆ. ಅವರೇ ಪಕ್ಷಿಗಳ ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ ಮತ್ತು ಮಹನೀಯರ ಚಿತ್ರಗಳನ್ನು ಸಂಯೋಜಿಸಿ, ಸಿದ್ಧಪಡಿಸಿದ್ದಾರೆ.

ಪುಸ್ತಕಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಪ್ರಣತಿ ವೇದಿಕೆ, ಚಿಕ್ಕಬಳ್ಳಾಪುರ–9739664569

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು