ಬುಧವಾರ, ನವೆಂಬರ್ 20, 2019
27 °C

ಕಲಿಕೆಯ ಜೊತೆ ಕೌಶಲಕ್ಕೂ ಆದ್ಯತೆ

Published:
Updated:
Prajavani

ಜಾಗತೀಕರಣ, ಉದಾರೀಕರಣದಂತಹ ಬೆಳವಣಿಗೆಗಳಿಂದ ಗ್ರಾಹಕರ ಆದ್ಯತೆಗಳು ಬದಲಾಗುತ್ತಿವೆ. ಉತ್ಪಾದನಾ ಕ್ರಮಗಳಲ್ಲಿ ನೂತನ ವಿಧಾನಗಳನ್ನು, ಸ್ವಯಂಚಾಲಿತ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ರೊಬೋಟಿಕ್ ತಂತ್ರಜ್ಞಾನದ ಸಹಾಯದಿಂದ ಮಾನವನ ಹಸ್ತಕ್ಷೇಪವಿಲ್ಲದ ಆಟೊಮೇಷನ್ ಹೆಚ್ಚಾಗುತ್ತಿದೆ; ಆದ್ದರಿಂದ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿನ ಕೆಲಸಗಳು ಕುಂಠಿತವಾಗುತ್ತಿವೆ.

ಇನ್ನೂ ಗಂಭೀರವಾದ ಬಿಕ್ಕಟ್ಟೇನೆಂದರೆ, ಕಳೆದ ಎರಡು ದಶಕಗಳಲ್ಲಿ ಉದ್ಯೋಗಕ್ಕೆ ಪದವಿಗಳಷ್ಟೇ ಸಾಕಾಗುವುದಿಲ್ಲ ಎಂಬ ಅಂಶ ಆಗಾಗ ನಡೆಯುತ್ತಿರುವ ಎಲ್ಲ ಸಮೀಕ್ಷೆಗಳಲ್ಲಿ ಕಂಡುಬಂದಿದೆ. ಏಕೆಂದರೆ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲಗಳ ಬಗ್ಗೆ ಪ್ರಾಮುಖ್ಯತೆ ಇದೆ. ಆದರೆ ಉದ್ಯೋಗಕ್ಕೆ ಅಗತ್ಯವಾದ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ. ಈ ಬಗ್ಗೆ ಸರ್ಕಾರ, ಕೈಗಾರಿಕೆ ಮತ್ತು ಶಿಕ್ಷಣ ತಜ್ಞರ ನಡುವೆ ಸಾಕಷ್ಟು ಪರಿಶೀಲನೆ, ಚರ್ಚೆಗಳಾಗಿ ನೂತನ ಯೋಜನೆಗಳು ಅನುಷ್ಠಾನಗೊಂಡು ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆಯಾದರೂ, ವಾಸ್ತವದಲ್ಲಿ ಕೌಶಲಗಳ ಕೊರತೆ ಮುಂದುವರಿದಿದೆ. ಆದ್ದರಿಂದಲೇ, ಎಂಜಿನಿಯರಿಂಗ್ ಮತ್ತು ಎಂ.ಬಿ.ಎ. ಪದವೀಧರರೂ ಸೇರಿದಂತೆ ಕ್ಯಾಂಪಸ್ ನೇರ ನೇಮಕಾತಿಗಳಲ್ಲಿ ಕೌಶಲವಿರುವ ಅಭ್ಯರ್ಥಿಗಳಿಗಷ್ಟೇ ಉದ್ಯೋಗಗಳು ಸಿಗುತ್ತಿವೆ.

ಆಟೊಮೇಷನ್‌ ಸವಾಲು
ಅನೇಕ ಕ್ಷೇತ್ರಗಳಲ್ಲಿ ಜಾಸ್ತಿಯಾದ ಆಟೊಮೇಷನ್ ಪರಿಣಾಮವಾಗಿ ನಿನ್ನೆಯವರೆಗೂ ಇದ್ದ ಕೆಲಸಗಳು ಇಂದು ಮಾಯವಾಗುತ್ತಿವೆ; ಮುಂದಿನ ದಿನಗಳ ಕೆಲಸಗಳಿಗೆ ಅಗತ್ಯವಿರುವ ಕೌಶಲಭರಿತ ಮಾನವ ಸಂಪನ್ಮೂಲ ಇಂದು ತಯಾರಾಗುತ್ತಿಲ್ಲ. ಹಾಗಾಗಿ, ಕೆಲಸಕ್ಕಾಗಿ ಹೆಣಗಾಡುತ್ತಿರುವ ಉದ್ಯೋಗಾರ್ಥಿಗಳು ಒಂದೆಡೆಯಾದರೆ, ಕೌಶಲಭರಿತ ಅಭ್ಯರ್ಥಿಗಳೇ ಸಿಗುತ್ತಿಲ್ಲವೆಂಬ ಆತಂಕಭರಿತ ಉದ್ಯೋಗದಾತರು ಇನ್ನೊಂದು ಕಡೆ. ಪರಿಣಾಮವಾಗಿ ನಿರುದ್ಯೋಗದ ಸಮಸ್ಯೆ ಉಲ್ಬಣಗೊಂಡು ಗ್ರಾಹಕರ ಕೊಳ್ಳುವ ಸಾಮರ್ಥ್ಯ ಕ್ರಮೇಣ ಕಮ್ಮಿಯಾಗುತ್ತಿದೆ.

ಇದೊಂದು ಕ್ಲಿಷ್ಟವಾದ ಮತ್ತು ಗುರುತರವಾದ ಸಮಸ್ಯೆಯಾಗಿ, ದೇಶದ ಪ್ರಗತಿಗೆ ಮಾರಕವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಇಡೀ ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆಯ ಅಗತ್ಯಗಳನ್ನು ಮನಗಂಡ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿಯನ್ನು ತಜ್ಞರು ಮತ್ತು ಸಾರ್ವಜನಿಕರೊಡನೆ ಚರ್ಚೆಗಾಗಿ ಹೊರತಂದಿದೆ. ಇದು ಅನುಷ್ಠಾನಗೊಂಡರೂ ಇದರ ಸಂಪೂರ್ಣ ಲಾಭ ಮುಂದಿನ ಪೀಳಿಗೆಯವರಿಗಷ್ಟೇ!

ಆದ್ದರಿಂದ, ಇಂದು ಶಾಲಾ– ಕಾಲೇಜುಗಳಲ್ಲಿರುವ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಉದ್ಯೋಗದ ಅನ್ವೇಷಣೆಯಲ್ಲಿ ತೊಡಗುವ ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಜೊತೆಗೆ ತಮ್ಮ ಮುಂದಿನ ವೃತ್ತಿಯನ್ನು ನಿರ್ಧರಿಸಿ, ಅದಕ್ಕೆ ಅಗತ್ಯವಿರುವ ಕೌಶಲಗಳನ್ನು ಈಗಲೇ ಮೈಗೂಡಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಬೇಕು. ಆಗಲೇ ಭವಿಷ್ಯದ ಕನಸುಗಳು ಸಾಕಾರವಾಗಬಲ್ಲದು.

ಪ್ರಮುಖ ಉದ್ಯೋಗಶೀಲ ಕೌಶಲಗಳು
ಪರಿಪೂರ್ಣ ಅಭ್ಯರ್ಥಿಗಳಲ್ಲಿ ಶೈಕ್ಷಣಿಕ ಮತ್ತು ತಾಂತ್ರಿಕ ಗುಣಗಳೊಡನೆ ಪ್ರಾಥಮಿಕ ಕೌಶಲಗಳಿರಲೇಬೇಕು. ನಿಮ್ಮ ಆಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ, ಅಗತ್ಯ ಕೌಶಲಗಳನ್ನು ಪಡೆದು ಸ್ವಯಂ ಉದ್ಯೋಗವನ್ನೂ ಮಾಡಿ, ಆರ್ಥಿಕವಾಗಿ ಸ್ವಾವಲಂಬಿಗಳಾ
ಗಲೂಬಹುದು. ಆದ್ದರಿಂದ, ಈ ಕೆಳಗೆ ತಿಳಿಸಿರುವ ಮಾಹಿತಿಯ ಅನುಸಾರ ನೀವು ಅರಸುವ ಉದ್ಯೋಗಕ್ಕೆ ಬೇಕಾಗುವ ಕೌಶಲಗಳನ್ನು ಗುರುತಿಸಿ:

ವೃತ್ತಿಪರ ಕೌಶಲಗಳು (ವೃತ್ತಿಗೆ ಅನುಗುಣವಾಗಿ)
ಸೇವಾ ಮನೋಭಾವ
* ಜ್ಞಾಪಕ ಶಕ್ತಿ
* ಗಣಿತದಲ್ಲಿ ಪರಿಣತಿ
* ಸಂಖ್ಯಾಶಾಸ್ತ್ರ ಪರಿಣತಿ
* ಕ್ರಮಾವಳಿ
* ವಿಶ್ಲೇಷಣಾತ್ಮಕ ಕೌಶಲ
* ದತ್ತಾಂಶ ನಿರ್ವಹಣೆ
* ಯೋಜನೆಯ ನಿರ್ವಹಣೆ
* ತಾಂತ್ರಿಕ ಸಹಾಯ
* ಕಲೆಗಾರಿಕೆ
* ಆರ್ಥಿಕ ನಿರ್ವಹಣೆ
* ಆರ್ಟಿಫಿಷಿಯಲ್ ಇಂಟೆಲಿಜೆನ್ಸ್
* ಆಟೊಮೇಷನ್ ತಂತ್ರಜ್ಞಾನ
* ಅನ್ವಯ ತಂತ್ರಾಂಶ
* ವ್ಯಾಪಾರೋದ್ಯಮ ಕೌಶಲ
* ಕಾನೂನು ಪರಿಣತಿ
* ಸಂಶೋಧನೆ ಮತ್ತು ಅಭಿವೃದ್ಧಿ ಕೌಶಲಗಳು
* ಬಹು ಸಂಸ್ಕೃತಿಯ ಕೌಶಲಗಳು
* ಬೋಧನೆ/ ತರಬೇತಿ ನೀಡುವ ಕೌಶಲಗಳು
* ನಾಯಕತ್ವದ ಸಾಮರ್ಥ್ಯ

ಈ ಕೌಶಲಗಳ ಮಹತ್ವವನ್ನು ಅರಿತ ಮೇಲೆ ಅವುಗಳನ್ನು ಮೈಗೂಡಿಸಿಕೊಳ್ಳುವುದು ಹೇಗೆಂಬ ಪ್ರಶ್ನೆ ಸಹಜ. ಈ ನಿಟ್ಟಿನಲ್ಲಿ ಹಲವಾರು ಸಂಪನ್ಮೂಲಗಳು, ಅವಕಾಶಗಳು ಮತ್ತು ಸೌಕರ್ಯಗಳನ್ನು ಗಮನಿಸಿ. ಸಾಮಾನ್ಯ ಮತ್ತು ವೃತ್ತಿಪರ ಕೌಶಲಗಳ ತರಬೇತಿ ನೀಡಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯ ಅಡಿಯಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಜೊತೆಗೆ ಪ್ರಮಾಣಪತ್ರವನ್ನು ನೀಡಿ ನೇಮಕಾತಿಯ ಸಹಾಯವನ್ನೂ ಮಾಡಲಾಗುತ್ತದೆ.

ಈಗಾಗಲೇ ಈ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಯುವಕ/ ಯುವತಿಯರು ಲಾಭವನ್ನು ಪಡೆದಿದ್ದಾರೆ. ಇವುಗಳಲ್ಲದೆ ಖಾಸಗಿ ಸಂಸ್ಥೆಗಳು, ಕಲಿಕೆ ಜೊತೆ ಗಳಿಕೆಯ ಅವಕಾಶಗಳು, ವಿದ್ಯಾರ್ಥಿವೇತನಗಳ ಸಾಧ್ಯತೆಗಳನ್ನು ಗುರುತಿಸಿ, ನಿಮಗೆ ಸೂಕ್ತವಾದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಿ.

ಈ ಕೌಶಲಗಳಿಂದ ಕೆಲಸದ ಗುಣಮಟ್ಟದಲ್ಲಿ ಸುಧಾರಣೆಯಾಗಿ ನೀವೊಬ್ಬ ಆದರ್ಶಪ್ರಾಯ ಉದ್ಯೋಗಿಯಾಗುವುದರಲ್ಲಿ ಸಂಶಯವಿಲ್ಲ.
(ಲೇಖಕರು ಮ್ಯಾನೇಜ್‌ಮೆಂಟ್ ಮತ್ತು ಶಿಕ್ಷಣ ತಜ್ಞರು)

**

ಕೌಶಲ ಹೆಚ್ಚಿಸಿಕೊಳ್ಳುವುದು ಹೇಗೆ?
* ಕೌಶಲ ತರಬೇತಿ ಕೇಂದ್ರಗಳು (Skill Development Centres- www.pmkvyofficial.org ಇತ್ಯಾದಿ)
* ರಾಜ್ಯ ಉದ್ಯೋಗ, ತರಬೇತಿ ಮತ್ತು ಕೌಶಲ ಆಯೋಗ (http://koushalya.karnataka.gov.in/Pages/home.aspxhttps://mhrd.gov.in/karnataka
* ನ್ಯಾಷನಲ್ ಕೌನ್ಸಿಲ್ ಆಫ್ ವೊಕೇಶನಲ್ ಟ್ರೈನಿಂಗ್ (http://164.100.160.33/content/institute/nvti-noida.php)
* ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ (https://www.ncvtmis.gov.in/Pages/ITI/Search.aspx )
* ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನಾ (http://www.kvpy.iisc.ernet.in/main/index.htm)
* ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (http://www.kvic.org.in/kvicres/index.php)
* ಕೇಂದ್ರೀಯ ಪ್ಲಾಸ್ಟಿಕ್, ಎಲೆಕ್ಟ್ರೋಕೆಮಿಕಲ್, ಚರ್ಮ ಸಂಶೋಧನಾ ಸಂಸ್ಥೆಗಳು (CIPET; CECRI, CLRI)
* ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (http://dwcd.kar.nic.in:8080/kannada/HomePage.jsp)
https://nsdcindia.org
https://eskillindia.org/Course/courses
* ವ್ಯಕ್ತಿತ್ವ ತರಬೇತಿ ಕೇಂದ್ರಗಳು Personality Development Centres
www.nsd.gov.in

* ಮಾರ್ಗದರ್ಶಕರೊಡಗಿನ ಒಡನಾಟ
* ಯಶಸ್ಸಿನ ಕಥೆಗಳು, ಪುಸ್ತಕಗಳು, ವಿಡಿಯೊಗಳು
* ಇ-ಲರ್ನಿಂಗ್/ಆನ್‌ಲೈನ್ ತರಗತಿಗಳು

ಪ್ರತಿಕ್ರಿಯಿಸಿ (+)