ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲ ಪ್ರೌಢಾವಸ್ಥೆ; ದೊಡ್ಡವರ ಜವಾಬ್ದಾರಿಗಳು

ಅಕ್ಷರ ಗಾತ್ರ

ಒಂದರಿಂದ ನಾಲ್ಕನೇ ತರಗತಿಯವರೆಗೂ ಶಾಲೆಯ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತುಂಬಾ ಸಕ್ರಿಯವಾಗಿ ಭಾಗಿಯಾಗಿರುತ್ತಿದ್ದಳು ಪ್ರತ್ಯೂಷ. ಆದರೆ ಇತ್ತೀಚೆಗೆ ತರಗತಿಯಲ್ಲಿ ತುಂಬಾ ಮಂಕಾಗಿ ಕೂರುತ್ತಿದ್ದು ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸುತ್ತಿರಲಿಲ್ಲ.

ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪ್ರತ್ಯೂಷಾಳ ಕ್ಲಾಸ್ ಟೀಚರ್ ಅವಳನ್ನು ಸ್ಟಾಪ್ ರೂಂಗೆ ಕರೆಸಿ ವೈಯಕ್ತಿಕವಾಗಿ ಮಾತನಾಡಿಸಿದಾಗ ತಿಳಿದು ಬಂದ ವಿಷಯವೆಂದರೆ ಪ್ರತ್ಯೂಷ ಕಳೆದ ನಾಲ್ಕು ತಿಂಗಳ ಹಿಂದೆ (ರಜೆಯಲ್ಲಿ) ಋತುಮತಿಯಾಗಿದ್ದಳು. ಅವಳ ತಂದೆ–ತಾಯಿ ಋತುಮತಿಯಾದ ಸಂದರ್ಭದಲ್ಲಿ ಕುಟುಂಬದಲ್ಲಿ ಮಾಡಲಾಗುವ ಆಚರಣೆಗಳನ್ನು ವೈಭವವಾಗಿ ಮಾಡಿದ್ದರು.

ಅದಕ್ಕಾಗಿ ಅವರು ಪ್ರತ್ಯೂಷಳ ಶಾಲೆಯ ಅಟೆಂಡರ್‌ನಿಂದ ಹಿಡಿದು ಮುಖ್ಯೋಪಾಧ್ಯಾಯರವರೆಗೂ, ನೆರೆಹೊರೆಯವರಿಗೂ, ಅವಳ ಸ್ನೇಹಿತರೆಲ್ಲರಿಗೂ ಆಮಂತ್ರಣ ನೀಡಿದ್ದರು. ತನ್ನ ಒರಗೆಯವರಲ್ಲಿ ಹಾಗೂ ತರಗತಿಯಲ್ಲಿ ತಾನೇ ಮೊದಲು ಋತುಮತಿಯಾಗಿರುವುದು ಎಂದು ತಿಳಿದ ಪ್ರತ್ಯೂಷ ತುಂಬಾ ಸಂಕೋಚದಿಂದ ಎಲ್ಲರಿಂದ ನಿಧಾನವಾಗಿ ದೂರ ಸರಿದಳು. ಅಲ್ಲದೇ ಪದೇ ಪದೇ ತನ್ನ ತಂದೆ–ತಾಯಿ ಈ ಆಚರಣೆಗಳನ್ನು ಮಾಡಬಾರದಿತ್ತು, ಅವರು ಹಾಗೇ ಮಾಡದಿದ್ದರೆ ತಾನು ಋತುಮತಿಯಾದ ವಿಷಯವು ಯಾರಿಗೂ ತಿಳಿಯುತ್ತಿರಲಿಲ್ಲ, ಎಲ್ಲರೂ ನನ್ನನ್ನು ಒಂದು ತರಹ ನೋಡುತ್ತಿರಲಿಲ್ಲ.

ಇದಕ್ಕೆಲ್ಲ ಕಾರಣ ನನ್ನ ತಂದೆ–ತಾಯಿಯೆಂಬ ದುಃಖ, ಬೇಸರ ಅವಳನ್ನು ಕಾಡುತ್ತಿತ್ತು. ಆದ್ದರಿಂದ ಅವಳು ಸಂಕೋಚದಿಂದ ಮುದುಡಿ ನೈಜತೆಯಿಂದ ದೂರ ಸರಿದಿದ್ದು ಪಾಠ ಪ್ರವಚನಗಳಲ್ಲೂ ಹಿಂದುಳಿದಿದ್ದಳು. ನಂತರ ತರಗತಿಯ ಶಿಕ್ಷಕಿ ಪ್ರತ್ಯೂಷ ಮತ್ತು ಅವಳ ಪೋಷಕರಿಗೆ ಆಪ್ತ ಸಮಾಲೋಚನೆಯನ್ನು ಕೊಡಿಸಿದರು.

ನಮ್ಮ ದೇಹದ ಬೆಳವಣಿಗೆ ಜೈವಿಕ ಗಡಿಯಾರವನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಪ್ರೌಢಾವಸ್ಥೆ ಅಥವಾ ಹದಿಹರೆಯ ಎಂದರೆ ಹತ್ತರಿಂದ ಹದಿನೈದು ವಯಸ್ಸಿನ ಅವಧಿ. ಬಾಲಕ ಬಾಲಕಿಯರು ತಮ್ಮ ಬಾಲ್ಯದ ಪ್ರಪಂಚದಿಂದ ಪ್ರೌಢಾವಸ್ಥೆಗೆ ಹೆಜ್ಜೆ ಇಡುವಾಗಿನ ವಯಸ್ಸು. ಪಿಟ್ಯುಟರಿ ಗ್ರಂಥಿ ಹೆಣ್ಣುಮಕ್ಕಳಲ್ಲಿ ಹನ್ನೊಂದನೆ ವಯಸ್ಸಿನಲ್ಲಿ ಥೈರಾಯಿಡ್ ಮತ್ತು ಜನನಗ್ರಂಥಿಗಳ ಸ್ರಾವವನ್ನು ಪ್ರಚೋದಿಸುತ್ತದೆ.

ಹೆಣ್ಣುಮಕ್ಕಳಲ್ಲಿ ಎಸ್ಟೋಜನ್‌ಗಳು ಸ್ರವಿಸಲಾರಂಭಿಸುತ್ತವೆ. ಇದಾದ ಒಂದೆರಡು ವರ್ಷಗಳಲ್ಲಿ ಋತುಸ್ರಾವ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಹನ್ನೆರಡರಿಂದ ಹದಿನಾಲ್ಕು ವರ್ಷ ವಯಸ್ಸಿನ (15-16 ವರ್ಷಗಳಲ್ಲಿ ವಿಳಂಬವಾಗಿ) ಅಂತರದಲ್ಲಿ ಋತುಮತಿಯಾಗುತ್ತಾರೆ. ಆದರೆ ಕೆಲವು ಮಕ್ಕಳಲ್ಲಿ 8-9 ವರ್ಷದಲ್ಲಿ ದೈಹಿಕ ಬದಲಾವಣೆಗಳು ಶುರುವಾಗಿ 10ನೇ ವಯಸ್ಸಿನಲ್ಲಿಯೇ ಋತುಸ್ರಾವ ಪ್ರಾರಂಭವಾಗುತ್ತದೆ.

ಇದನ್ನೇ ಅಕಾಲ ಪ್ರೌಢಾವಸ್ಥೆ ಎಂದು ಕರೆಯುತ್ತಾರೆ. ಇಂದಿನ ಜೀವನಶೈಲಿ, ಹಾರ್ಮೋನ್‌ಗಳು ಹಾಗೂ ಆ್ಯಂಟಿಬಯೋಟಿಕ್ ಬಳಸಿದ ಮಾಂಸಾಹಾರ, ಆನುವಂಶೀಯತೆ, ನಿರ್ನಾಳಗ್ರಂಥಿಗಳು, ಪೌಷ್ಟಿಕಾಂಶಗಳು, ಆರೋಗ್ಯ – ಇವು ಶೀಘ್ರ ಬೆಳವಣಿಗೆಯನ್ನುಂಟುಮಾಡುವ ಮೂಲಕ ಸಾಮಾನ್ಯ ಪ್ರಾಪ್ತವಯಸ್ಸಿಗಿಂತ ಮುಂಚೆಯೇ ಹರೆಯ ತಲುಪಲು ಕಾರಣಗಳಾಗಿವೆ.

ಅಕಾಲ ಪ್ರೌಢತೆಯನ್ನು ತಲುಪಿದ ಮಕ್ಕಳು ಅನೇಕ ಶಾರೀರಿಕ, ಮಾನಸಿಕ, ಸಂವೇಗಾತ್ಮಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾನಸಿಕವಾಗಿ ಪಕ್ವತೆಯನ್ನು ಹೊಂದದ ಹೆಣ್ಣುಮಗು ಶಾರೀರಿಕ ಪಕ್ವತೆಯನ್ನು ಅತಿಬೇಗ ತಲುಪಿಬಿಟ್ಟಿರುತ್ತದೆ. ಅಕಾಲ ಪ್ರಾಯಸ್ಥರಾಗುವ ಹೆಣ್ಣುಮಕ್ಕಳಲ್ಲಿ ಬಾಲ್ಯಾವಧಿ ಕಡಿಮೆ ಮತ್ತು ತಾರುಣ್ಯಾವಧಿ ದೀರ್ಘವಾಗಿರುತ್ತದೆ. ಅವರು ಹೆಚ್ಚು ಮಾನಸಿಕ ಕ್ಷೋಭೆಗಳಿಗೂ ಒಳಗಾಗುತ್ತಾರೆ.

ಕಾರಣ ಬದಲಾವಣೆಗಳನ್ನು ಒಪ್ಪಿಕೊಳ್ಳಲು ಶಕ್ಯರಾಗಿರುವುದಿಲ್ಲ. ಲೈಂಗಿಕಾಸಕ್ತಿಗಳು ಚಿಕ್ಕ ವಯಸ್ಸಿನಲ್ಲಿಯೇ ಆರಂಭವಾಗುತ್ತವಾದ್ದರಿಂದ ಸಹಜವಾಗಿ ವಿರುದ್ಧ ಲಿಂಗದವರ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಆದ್ದರಿಂದ ಇವರ ಮೇಲೆ ಪೋಷಕರು ನಿರ್ಬಂಧಗಳನ್ನು ಹೇರುತ್ತಾರೆ. ಈ ಮಕ್ಕಳನ್ನು ಟೀಕಿಸಿದಾಗ/ ಮೂದಲಿಸಿದಾಗ ಸಾಮಾಜಿಕ ಜೀವನದಿಂದ ಹಿಂದುಳಿಯುವ ಸಾಧ್ಯತೆಯಿದೆ. ಜೊತೆಗೆ, ಈ ಕೆಳಕಂಡ ಸಮಸ್ಯೆಗಳು ಉಂಟಾಗಬಹುದು:

ಶಾರೀರಿಕ ಬದಲಾವಣೆಯಿಂದಾಗಿ ಹಿಂದಿದ್ದ ಅಹಿತಕರ ವರ್ತನೆಗಳು ಇನ್ನೂ ಹೆಚ್ಚಾಗಿ ಕಾಣಿಸಿಕೊಳ್ಳಬಹುದು.

ಶೀಘ್ರ ಶಾರೀರಿಕ ಬದಲಾವಣೆಗಳಿಂದಾಗಿ ಬಾಲಕಿಯ ಮನಸ್ಸಿನಲ್ಲಿ ಗೊಂದಲ, ಅತೃಪ್ತಿ, ಅಸಮರ್ಪಕತೆ, ಅಭದ್ರತೆ ಭಾವನೆಗಳು ಕಾಣಿಸುತ್ತವೆ.

ಅನಿಯಮಿತ ಅಥವಾ ಅತೃಪ್ತಿಕರ ಆಹಾರಸೇವನೆಯಿಂದಾಗಿ ಅಜೀರ್ಣದ ರೋಗಗಳು ಕಾಣಿಸಿಕೊಳ್ಳಬಹುದು.

ಏಕಾಂಗಿಯಾಗಿರಬೇಕೆಂಬ ಬಯಕೆ, ಸಮಾಜದ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳದೇ ಗೊಂದಲವನ್ನು ಅನುಭವಿಸಿ ನೈಜತೆಯಿಂದ ದೂರ ಸರಿದು ಹಗಲುಗನಸು ಕಾಣುವುದು.

ತಾನು ಹಿಂದೆ ಆಡುತ್ತಿದ್ದ ಆಟಗಳಲ್ಲಿ ಬೇಸರ, ಹೊಸತನದ ಆಕರ್ಷಣೆ.

ಲೈಂಗಿಕಾಸಕ್ತಿ, ವಿರುದ್ಧ ಲಿಂಗದವರ ಬಗ್ಗೆ ಆಕರ್ಷಣೆ ಹೆಚ್ಚುವುದಲ್ಲದೇ ತಮ್ಮ ವಯಸ್ಸಿನವರ ಗೆಳೆತನವನ್ನು ಹೆಚ್ಚು ಇಷ್ಟಪಡುತ್ತಾರೆ.

ದೈಹಿಕ ಬೆಳವಣಿಗೆಯಲ್ಲಿ ಅಸಮನ್ವಯತೆ ಕಂಡು ಬರುತ್ತದೆ.

ಮನೆಯಲ್ಲಿ ಒಂಟಿಯಾಗಿರುವ ಬಾಲಕಿ ಕೆಲವೊಮ್ಮೆ ಖಿನ್ನತೆಗೆ ಒಳಗಾಗುತ್ತಾಳೆ.

ಸಮವಯಸ್ಕರಿಗಿಂತ ದೊಡ್ಡವರಾಗಿ ಕಾಣುವುದರಿಂದ ಸಂಕೋಚ ಪ್ರವೃತಿಯನ್ನು ಹೊಂದುತ್ತಾರೆ.

ಮುಟ್ಟಿನ ಬಗ್ಗೆ ಆತಂಕ ಅಥವಾ ಅಸಹ್ಯಕರ ಭಾವನೆ ಹೊಂದಿರುತ್ತಾರೆ.

ಇಂತಹ ಸೂಕ್ಷ್ಮ ಸಮಯದಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು ಆ ಮಗುವಿನೊಂದಿಗೆ ಮುಕ್ತವಾಗಿ ಮಾತನಾಡಿ, ಅದರ ಸಹಜತೆ ಮತ್ತು ಜವಾಬ್ದಾರಿಗಳನ್ನು ಹಂತ ಹಂತವಾಗಿ ತಿಳಿಸಬೇಕು. ಈ ಕೆಳಕಂಡ ಅಂಶಗಳನ್ನು ಪೋಷಕರು ಹಾಗೂ ಶಿಕ್ಷಕರು ಗಮನದಲ್ಲಿಟ್ಟುಕೊಳ್ಳಬೇಕು.

ನಿಮ್ಮ ಮಗುವಿನ/ವಿದ್ಯಾರ್ಥಿಯ ಮಾನಸಿಕ ಹಾಗೂ ಶಾರೀರಿಕ ಬದಲಾವಣೆಗಳನ್ನು ನಿಭಾಯಿಸಬಲ್ಲ ಸಾಮರ್ಥ್ಯ ಎಷ್ಟೆಂಬುದನ್ನು ತಿಳಿಯಿರಿ.

ಹರೆಯ/ಪ್ರೌಢತೆ ಫಲವಾಗಿ ಆಗುವ ಶಾರೀರಿಕ ಬದಲಾವಣೆಗಳನ್ನು ಸರಳ ವಿವರಣೆಗಳನ್ನು ನೀಡಿ.

ಹರೆಯದಲ್ಲಾಗುವ ಶಾರೀರಿಕ ಬದಲಾವಣೆಗಳು ಎಷ್ಟು ಸಾಮಾನ್ಯವಾದವು ಎಂಬುದನ್ನು ವಿವರಿಸಿ ಒಪ್ಪಿಕೊಳ್ಳಲು ನೆರವಾಗಿ.

ಅಕಾಲ ಪ್ರೌಢಾವಸ್ಥೆ ತಲುಪಿರುವ ಬಾಲಕಿಗೆ ಅವರ ಸ್ನೇಹಿತರೂ ಈ ಹಂತವನ್ನು ದಾಟಲೇಬೇಕು, ತಾನು ಸ್ವಲ್ಪ ಮುಂಚಿತವಾಗಿ ಈ ಹಂತ ತಲುಪಿರುವಳೆಂದು ವಿವರಿಸಿ.

ಶಾರೀರಿಕ ಬದಲಾವಣೆಗಳ ಮುಜುಗರವನ್ನು ಬದಿಗಿಟ್ಟು ಶಾಲಾ ಚಟುವಟಿಕೆಗಳಲ್ಲಿ ಹೇಗೆ ಸಕ್ರಿಯವಾಗಿ ಭಾಗಿಯಾಗಬೇಕೆಂಬುದರ ಬಗ್ಗೆ ಮಾರ್ಗದರ್ಶನ ನೀಡಿ.

ಸೂಕ್ತವಾದ ಉಡುಪುಗಳನ್ನು ತೊಡುವ ಬಗ್ಗೆ ತಿಳಿವಳಿಕೆಯನ್ನು ನೀಡಿ.

ಶೀಘ್ರ ಶಾರೀರಿಕ ಬೆಳವಣಿಗೆ/ಬದಲಾವಣೆಗಳಾಗುವಾಗ ಉಂಟಾಗುವ ದಣಿವು, ನಿಃಶಕ್ತಿ, ದೈಹಿಕ ತೊಂದರೆಗಳು, ಮೊಡವೆ, ರಕ್ತಹೀನತೆ, ಅಜೀರ್ಣ ಇತ್ಯಾದಿ ತೊಂದರೆಗಳು ಸಾಮಾನ್ಯವಾದವು ಎಂಬುದನ್ನು ತಿಳಿಸಿ

ಮುಟ್ಟಿನಲ್ಲಿ ಆಗುವ ಏರುಪೇರುಗಳ ಬಗ್ಗೆ, ಋತುಸ್ರಾವದ ಬಗ್ಗೆ ತಿಳಿಸಿ.

ನೈತಿಕ ಮತ್ತು ಸಾಮಾಜಿಕ ಮೌಲ್ಯಗಳು ವಿಕಾಸವಾಗುವ ಕಾಲಘಟ್ಟವಾದ್ದರಿಂದ ಗುಂಪಿನ ಆಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸಿ.

ಬಾಲಕಿಯ ಮನೋಭಾವ ಅವಳಿಗೆ ದೊರೆಯುವ ಮಾರ್ಗದರ್ಶನ, ವಿಷಯಗಳು ಮತ್ತು ತಿಳಿಸುವ ವ್ಯಕ್ತಿಯ ಮನೋಭಾವಗಳನ್ನು ಅವಲಂಬಿಸಿರುತ್ತವೆ, ಗಮನಿಸಿ.

ಬೇಗ ಋತುಮತಿಯಾಗುವ ಮಕ್ಕಳಿಗೆ ಮಾಡುವ ಕೌಟುಂಬಿಕ ಆಚರಣೆಗಳಿಗಿಂತ ಅವಳು ಹರೆಯಕ್ಕೆ ಹೊಂದಿಕೊಳ್ಳುವಲ್ಲಿ ಸಾಕಾಷ್ಟು ಸಮಯ ವ್ಯಯಿಸಿ. ಬಾಲಕಿಯ ಒಪ್ಪಿಗೆಯಿಲ್ಲದೆ ಯಾವ ಆಚರಣೆಗಳನ್ನು ಮಾಡಬೇಡಿ. ಅವಳಿಗೆ ಅಗತ್ಯ ಪೌಷ್ಟಿಕ ಆಹಾರ, ಆರೈಕೆ ಮತ್ತು ಪೋಷಣೆಯನ್ನು ನೀಡಿರಿ.

ಈ ಅವಧಿಯಲ್ಲಿ ಬಾಲಕಿಯ ವರ್ತನೆಗಳನ್ನು ಹಾಗೂ ಬಾಲಕಿಗೆ ಕೌಟುಂಬಿಕ ವಾತಾವರಣದಲ್ಲಿರುವ ನಿರ್ಬಂಧಗಳ ಬಗ್ಗೆ ಪಾಲಕರನ್ನು ಕರೆಸಿ ಮುಕ್ತವಾಗಿ ಚರ್ಚಿಸಿ.

10 ರಿಂದ 14ನೇ ವಯಸ್ಸಿನಲ್ಲಿ ಮಕ್ಕಳು ವಯಸ್ಕ ಜೀವನಕ್ಕೆ ಅಗತ್ಯವಿರುವ ನೈಪುಣ್ಯವನ್ನು ಸಾಧಿಸುತ್ತಾರೆ. ಉತ್ತಮ ವಯಸ್ಕ ಅವಧಿಗೆ 10ರಿಂದ 14 ವರ್ಷಗಳಲ್ಲಿ ಹಾಗುವ ಬೆಳವಣಿಗೆ/ಬದಲಾವಣೆಗಳೆ ಅಡಿಗಲ್ಲು ಎನ್ನಬಹುದು. ಆದ್ದರಿಂದ ಮಗುವನ್ನು ವಯಸ್ಕ ಅವಧಿಗೆ ಉತ್ತಮ ರೀತಿಯಲ್ಲಿ ಸಜ್ಜುಗೊಳಿಸಲು ಪೋಷಕರು ಮತ್ತು ಶಿಕ್ಷಕರು ನೆರವಾಗಿ.

ಈ ವಿಚಾರವಾಗಿ ನಿಮಗೆ ಯಾವುದೇ ಸಂದೇಹಗಳಿದ್ದರೂ ಪೇಡಿಯಾಟ್ರಿಕ್ ಎಂಡೋಕ್ರೈನಾಲಜಿಸ್ಟ್‌ರನ್ನು ಸಂಪರ್ಕಿಸಲು ಹಿಂಜರಿಯಬೇಡಿ.

ಇಂದು ಅನೇಕ ಕಾಲೇಜುಗಳಲ್ಲಿ ಗೈನಕಾಲಜಿ ಡೇ ಎಂದು ಆಚರಿಸಲಾಗುತ್ತದೆ. ಇದನ್ನು ಪ್ರೌಡಶಾಲೆಗಳಲ್ಲೂ ಆಚರಿಸಿ ಮಹಿಳಾ ವೈದ್ಯರಿಂದ ಮಕ್ಕಳಿಗೆ ಮಾಹಿತಿ ಕೊಡಿಸುವುದು ಒಳ್ಳೆಯದು.

ಮಕ್ಕಳಿಗೆ ಯುಕ್ತ ಲೈಂಗಿಕ ಶಿಕ್ಷಣ, ಜವಾಬ್ದಾರಿಯ ಅರಿವು ಮತ್ತು ಇದರ ಸಾಮಾಜಿಕ ಆಯಾಮಗಳ ಅರಿವನನು ಮೂಡಿಸುವುದು ದೇಶದ ಸಾಮಾಜಿಕ ಆರೋಗ್ಯಕ್ಕೇ ದೊಡ್ಡ ಕೊಡುಗೆ ಕೊಡುವಂತಹದ್ದು ಎಂಬುದನ್ನು ನಾವು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT