ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಗೆ ಇರಲಿ ಇಂದೇ ತಯಾರಿ

Last Updated 8 ಜನವರಿ 2019, 19:30 IST
ಅಕ್ಷರ ಗಾತ್ರ

ಅಪ್ಪ, ಅಮ್ಮ ಇಬ್ಬರೂ ಉದ್ಯೋಗಿಗಳಾಗಿದುದರಿಂದ ಆರು ತಿಂಗಳ ಮಗುವಿದ್ದಾಗಿನಿಂದಲೂ ಅಜ್ಜಿಯ ಮುದ್ದಿನ ಆರೈಕೆಯಲ್ಲಿ ಬೆಳೆದ ಅಕ್ಷತಾಗೆ ತಾನೂ ಅಜ್ಜಿಯಂತೆಯೇ ಶಿಕ್ಷಕಿಯಾಗ್ಬೇಕು, ಅಜ್ಜಿ ಹೇಳುವ ಅವಳ ಅನುಭವದ ಕತೆಗಳ ಪಾತ್ರ ನಾನೂ ಆಗ್ಬೇಕು, ಓದಲು, ಬರೆಯಲು ಬರದೇ ಕಲಿಯಲು ಕಷ್ಟಪಡುವ ಮಕ್ಕಳಿಗೆ ಶಿಕ್ಷಿಸದೇ ಸುಲಭವಾಗಿ ಕಥೆಗಳ ಮೂಲಕ ಕಲಿಸಬೇಕು, ಅವರ ಕಣ್ಣಿನ ಖುಷಿಯ ಬೆಳಕಲ್ಲಿ ಸಾರ್ಥಕತೆ ಪಡೆಯಬೇಕು ಅನ್ನುವ ಕನಸು.

ಕಣ್ಣಿಗೊಂದು ಕನ್ನಡಕ ಹಾಕಿಕೊಂಡು, ಕಿವಿಯಲ್ಲಿ ಸ್ಟೆತಾಸ್ಕೋಪ್ ಸಿಕ್ಕಿಸಿಕೊಂಡು ನಗು ನಗುತ್ತಲೇ ರೋಗಿಗಳನ್ನು ಪರೀಕ್ಷಿಸಿ ಔಷಧ ಕೊಡುವ, ಮಕ್ಕಳಿಗೆ ಚಾಕೋಲೇಟ್ ಕೊಟ್ಟು ಮುಖದಲ್ಲಿ ನಗು ತರಿಸುವ ಡಾಕ್ಟರ್ ಮಾಮನನ್ನು ಬಾಲ್ಯದಿಂದಲೂ ನೋಡಿ ಬೆಳೆದ ಆಕಾಶ್‌ಗೆ ತಾನೂ ಅವರಂತೆಯೇ ಮಕ್ಕಳ ಪ್ರೀತಿಯ ಡಾಕ್ಟರ್ ಮಾಮ ಆಗಿ ಯಾರಿಗೂ ಇಂಜೆಕ್ಷನ್ ಕೊಡದೇ ಮಾತ್ರೆಯಲ್ಲೇ ರೋಗ ಗುಣಪಡಿಸಬೇಕೆಂಬ ಉತ್ಕಟ ಬಯಕೆ.

ಒಂದೊಂದು ಬಾಲ್‌ಗೂ ಫೋರು, ಸಿಕ್ಸೂ ಸಿಡಿಸುತ್ತಾ ಕ್ರಿಕೆಟ್ ಪ್ರೇಮಿಗಳ ಮನೆ ಮಾತಾಗಿರುವ, ದಿನವೂ ಪೇಪರಿನ ಕೊನೇ ಪುಟದಲ್ಲಿ ಒಂದೊಂದು ಪೋಸ್‌ನಲ್ಲಿ ಕಾಣಿಸಿಕೊಳ್ಳುವ ಆ ಕ್ರಿಕೆಟರ್‌ನ ಬೆರಗುಗಣ್ಣಲ್ಲಿ ನೋಡುತ್ತ ಆತನ ಸ್ಥಾನದಲ್ಲಿ ತನ್ನನ್ನು ಕಲ್ಪಿಸಿಕೊಂಡು ಖುಷಿಪಡುವುದೇ ಸಾಗರ್‌ಗೆ ಪ್ರೀತಿಯ ಸಂಗತಿ. ಆತ ಅಮ್ಮನೊಂದಿಗೆ ಯಾವಾಗಲೂ ತಾನೂ ಆತನ ಥರ ಕ್ರಿಕೆಟರ್ ಆಗುತ್ತೇನೆ. ಎಲ್ಲರ ಮನೆಯ ಟಿ.ವಿ.ಯಲ್ಲಿ ಬರುತ್ತೇನೆ ಎಂದು ಹೇಳುವುದಿತ್ತು.

ಹೀಗೆ ಪ್ರತಿಯೊಬ್ಬರೂ ಕೂಡ ಬಾಲ್ಯದಿಂದಲೂ ತಮ್ಮ ವೃತ್ತಿ ಹಾಗೂ ಮುಂದಿನ ಜೀವನದ ಬಗ್ಗೆ ಅನೇಕ ಕನಸುಗಳ ಸರಮಾಲೆಯನ್ನು ಹೆಣೆಯುತ್ತಲೇ ಬಂದಿರುತ್ತಾರೆ. ಮಾತಿನಿಂದಲೋ ನಡತೆಯಿಂದಲೋ ತನ್ನನ್ನು ಆಕರ್ಷಿಸಿದ್ದ ಒಬ್ಬ ವ್ಯಕ್ತಿಯನ್ನೇ ರೋಲ್ ಮಾಡೆಲ್ ಎಂದು ತಿಳಿದುಕೊಂಡು ಅವರಂತೆಯೇ, ಅವರ ಸ್ಥಾನದಲ್ಲೇ ತನ್ನನ್ನು ತಾನು ಕಲ್ಪಿಸಿಕೊಳ್ಳುತ್ತಾ ಅವರದೇ ಆದ ಕನಸಿನ ಕೋಟೆಯನ್ನು ಕಟ್ಟುತ್ತಾ ಹೋಗುತ್ತಾರೆ.ಪ್ರಪಂಚದ ಕಷ್ಟ, ಸುಖಗಳನ್ನು ಅರಿಯದ ಆಗತಾನೇ ಹೊರ ಜಗತ್ತಿನ, ಹೊಸ ಹೊಸ ವ್ಯಕ್ತಿಗಳ ಸಂಪರ್ಕಕ್ಕೆ ಬರುತ್ತಿರುವ ಮುಗ್ಧ ಮನಸ್ಸಿನ ಮಕ್ಕಳು.

ಬದಲಾಗುವ ಕನಸುಗಳು

ಹರೆಯಕ್ಕೆ ಬರುತ್ತಿದ್ದಂತೆ, ಸ್ವಂತ ಆಲೋಚನಾ ಶಕ್ತಿ ಬೆಳೆಯುತ್ತದೆ. ಇದರೊಂದಿಗೆ ತನ್ನ ಆಸಕ್ತಿ, ಸಾಮರ್ಥ್ಯಗಳ ಅರಿವು ಮೂಡುತ್ತಾ ಬರುತ್ತದೆ. ವೃತ್ತಿಜೀವನದ ಬಗೆಗಿನ ನಿಜವಾದ ಕನಸು ಬೆಳೆಯುವುದು ಇಲ್ಲಿ. ಈ ಸಂದರ್ಭದಲ್ಲೇ ತನಗೆ ಹೊಂದುವ ವೃತ್ತಿಯನ್ನು ಗುರುತಿಸಿ ಅದಕ್ಕೆ ಸರಿಯಾದ ದಾರಿಯಲ್ಲಿ ನಡೆಯಬೇಕಾಗುತ್ತದೆ.

ಕಲಿಯುವಾಗೊಂದಿಷ್ಟು ಸ್ಫೂರ್ತಿ ಇರಲಿ

ಮೇಲೆ ನೀಡಿದ ನಿದರ್ಶನಗಳಂತೆ ನಾವು ನಮ್ಮ ದೈನಂದಿನ ಜೀವನದಲ್ಲಿ ಅನೇಕ ವೃತ್ತಿಗಳನ್ನು, ಬೇರೆ ಬೇರೆ ಸ್ಥಾನಗಳಲ್ಲಿರುವವನ್ನು ನೋಡುತ್ತಿರುತ್ತೇವೆ; ಅವರ ಸಂಪರ್ಕಕ್ಕೆ ಬಂದಿರುತ್ತೇವೆ. ಹಾಗೆಯೇ ನಮ್ಮದೇ ಆದ ವೃತ್ತಿ ಬದುಕಿಗೊಂದು ಸ್ಫೂರ್ತಿ ಪಡೆದಿರುತ್ತೇವೆ, ಅದನ್ನೇ ಧ್ಯಾನಿಸಿರುತ್ತೇವೆ. ನಮ್ಮ ಕುಟುಂಬ ಸದಸ್ಯರು, ದಿನಪತ್ರಿಕೆ, ಟಿ.ವಿ.ಗಳಲ್ಲಿ ಬರುವ ಹುರುಪು ನೀಡುವ ಬಡಹುಡುಗ ವೈದ್ಯನಾದ ಕಥೆ, ರೈತನ ಮಗಳು ಈಗ ವಿಜ್ಞಾನಿ ಎಂಬ ವರದಿ, ಬಡವನ ಮಗ ಕೆಚ್ಚೆದೆಯ ಗಡಿಕಾಯುವ ಸೈನಿಕನಾದ ಜೀವನಕಥೆ ಮುಂತಾದ ಸಾಹಸಗಾಥೆಗಳನ್ನು ಕೇಳುತ್ತಾ, ಸಾಧಕರ ಸಾಧನೆಯ ಹಾದಿಗಳ ಬಗ್ಗೆ ಓದುತ್ತಾ ಅದನ್ನೇ ಧೇನಿಸಿರುತ್ತೇವೆ. ಅವರನ್ನೇ ಮಾದರಿಯಾಗಿಟ್ಟುಕೊಂಡು ನಮ್ಮದೇ ಆದ ಕನಸಿನ ಪುಟ್ಟ ಗೂಡೊಂದನ್ನು ಕಟ್ಟಿಕೊಂಡಿರುತ್ತೇವೆ.

ಸ್ಫೂರ್ತಿಯ ಸಾಕಾರಕ್ಕೆ ಸಲಹೆ ಬೇಕು

ಕನಸಿನ ಮನೆ ಕಟ್ಟುವುದು ಸುಲಭ. ಆದರೆ ಅದನ್ನು ನನಸಾಗಿಸಿಕೊಂಡು ಅದರಲ್ಲೇ ವಾಸ ಮಾಡಲು ಪ್ರಯತ್ನ ಬೇಕು. ಇತರರಿಂದಲೋ ಅಥವಾ ಸ್ವ–ಇಚ್ಛೆಯಿಂದಲೋ ಕನಸಿನ ವೃತ್ತಿಯ ಬಗ್ಗೆ ಸ್ಫೂರ್ತಿ ಹೊಂದಿರುತ್ತೇವೆ. ಹಾಗೆಯೇ ಆ ಕನಸನ್ನು ಸಾಕಾರಗೊಳಿಸಲು, ಸಾಧನೆಯ ಹಾದಿ ಸುಗಮಗೊಳಿಸಲು ಪ್ರಾಜ್ಞರ ಸಲಹೆ, ಸೂಚನೆಗಳನ್ನು ಪಡೆದು ಪಾಲಿಸುವುದು ಮುಖ್ಯ. ಮೊದಲನೆಯದಾಗಿ ನಮ್ಮ ಕನಸನ್ನು ಆಪ್ತರ ಬಳಿ, ತಿಳಿದವರ ಬಳಿ ಹೇಳುವುದು ಸೂಕ್ತ. ಪೋಷಕರು, ಶಿಕ್ಷಕರು, ಶಿಕ್ಷಣತಜ್ಞರು ಅಥವಾ ಆ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ಯಾರನ್ನಾದರೂ ಸಂಪರ್ಕಿಸಿ ಯಾವ ಕೋರ್ಸ್ ಆಯ್ಕೆ ಮಾಡಿದರೆ, ಯಾವ ವೃತ್ತಿ ಮಾಡಬಹುದು, ಎಲ್ಲಿ ಕೆಲಸ ಮಾಡಬಹುದು ಎಂಬುದನ್ನು ಮೊದಲು ಅರಿತಿರಬೇಕಾಗುತ್ತದೆ. ನಮ್ಮ ಇಷ್ಟದ ವೃತ್ತಿಯನ್ನು ತಲುಪಲು ದಾರಿ ಸಿಕ್ಕಿದ ನಂತರ ಓದಿನ ಜೊತೆ ಜೊತೆಗೇ ಆ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಆ ಕ್ಷೇತ್ರದಲ್ಲಿ ಈಗಾಗಲೇ ಅನುಭವವಿರುವವರೊಡನೆ ಸಂಪರ್ಕದಲ್ಲಿದ್ದು ಅವರ ಅನುಭವಗಳನ್ನು ಕೇಳಿ ತಿಳಿದುಕೊಳ್ಳುವುದು. ಪಠ್ಯಪುಸ್ತಕಗಳ ಓದಿನ ಜೊತೆಗೆ ಹೆಚ್ಚಿನ ಜ್ಞಾನ ನೀಡುವ ಇತರ ಚಟುವಟಿಕೆಗಳ ಕುರಿತು ಗಮನ ಹರಿಸಿ ಅದಕ್ಕನುಗುಣವಾಗಿ ನಮ್ಮನ್ನು ಅದರಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ.

ನಮ್ಮ ಗುರಿಯೆಡೆಗೆ ತಲುಪಲು ಛಲ ಹಾಗೂ ಕಠಿಣ ಪರಿಶ್ರಮವೊಂದಿದ್ದರೆ ನಾವು ಯೋಚಿಸಿದ್ದನ್ನು ಸಾಧಿಸಲು ಸುಲಭ ಸಾಧ್ಯ. ಯಶಸ್ಸಿನ ಮೆಟ್ಟಿಲನ್ನು ಹಂತ ಹಂತವಾಗಿ ಹತ್ತಲು, ಪ್ರೌಢಶಾಲಾ ಸಮಯದಲ್ಲೇ ನಮ್ಮ ಆಸಕ್ತಿಯ ಕ್ಷೇತ್ರವನ್ನು ಗಮನಿಸಿ ಪ್ರಾಯೋಗಿಕವಾಗಿ ಅರ್ಥೈಸಿಕೊಂಡು ಅದರೆಡೆಗೆ ಪಣತೊಟ್ಟರೆ, ಸೂಕ್ತವಾದ ಕೋರ್ಸ್ ಆರಿಸಿಕೊಂಡು ಮುನ್ನಡೆದು ಕಾರ್ಯಸಿದ್ಧಿ ಪಡೆಯಲು ಖಂಡಿತ ಸಾಧ್ಯವಿದೆ. ಹಾಗಾದರೆ ಇನ್ನು ತಡವೇಕೆ? ಇಂದೇ ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿ; ಅದಕ್ಕೆ ತಕ್ಕ ಕೋರ್ಸ್ ಆಯ್ಕೆ ಮಾಡಿ ಗುರಿಯೆಡೆ, ಗಮನವಿಡಿ.

(ಲೇಖಕಿ: ಎಂ.ಎಸ್.ಡಬ್ಲ್ಯೂವಿದ್ಯಾರ್ಥಿನಿ, ರೋಶಿನಿ ನಿಲಯ ಕಾಲೇಜು, ಮಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT