ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಯ ಹಾದಿಯಲ್ಲಿ ತೊಂದರೆಗಳು

Last Updated 25 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಸಂಶೋಧನೆಗೆ ತೊಡಗಿಕೊಂಡ ವಿದ್ಯಾರ್ಥಿ, ತನ್ನ ಪಾಡಿಗೆ ತಾನು ಸಂಶೋಧನೆ ನಡೆಸಿ, ಸುರಳೀತವಾಗಿ ಪದವಿ ಪಡೆಯುತ್ತೇನೆ ಎಂದು ಭಾವಿಸಿದರೆ ಅನೇಕ ಸಂದರ್ಭಗಳಲ್ಲಿ ನಿರಾಶೆಯೇ ಗತಿ. ತನ್ನದಲ್ಲದ ಕೆಲಸವನ್ನೂ ತಾನು ಮಾಡಬೇಕಾದ ಪರಿಸ್ಥಿತಿ ಸಂಶೋಧನಾ ವಿದ್ಯಾರ್ಥಿಯದ್ದು. ಅನೇಕ ಅಂಥ ಅನಪೇಕ್ಷಿತ ಕೆಲಸಗಳು ಸಂಶೋಧನಾ ವಿದ್ಯಾರ್ಥಿಯ ಅಮೂಲ್ಯ ಶೈಕ್ಷಣಿಕ ಜೀವನದ ಕ್ಷಣಗಳನ್ನು ಕಬಳಿಸುತ್ತವೆ.

ಪ್ರಾಧ್ಯಾಪಕರು ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಪಾಲಿನ ಕೆಲಸವನ್ನು ವಿದ್ಯಾರ್ಥಿಯ ಹೆಗಲಿಗೆ ಕಟ್ಟುವುದು ಯಾವತ್ತೂ ಖಂಡನಾರ್ಹ. ಇಂಥ ತಪ್ಪುಗಳನ್ನು ಸರಿಪಡಿಸುವ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲ ಎನ್ನುವುದು ವಾಸ್ತವ. ಪ್ರಾಧ್ಯಾಪಕರು ತಮ್ಮ ಪಾಲಿನ ಸ್ನಾತಕೋತ್ತರ ಪದವಿ ತರಗತಿಗಳ ಪ್ರಯೋಗ ತರಗತಿಗಳನ್ನು ನಿಭಾಯಿಸುವ ಹೊಣೆಯನ್ನು ತಮ್ಮ ಸಂಶೋಧನಾ ವಿದ್ಯಾರ್ಥಿಗಳಿಗೆ ವಹಿಸುವ ಪರಿಪಾಠವನ್ನು ಅನೇಕ ಕಡೆ ನೋಡಬಹುದು.

ಸ್ನಾತಕೋತ್ತರ ಪದವಿ ತರಗತಿಗಳ ಪ್ರಯೋಗ ಪರೀಕ್ಷೆಗಳ ಕಾರ್ಯಕ್ಕೆ ಸಂಶೋಧನಾ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ದುಡಿಸಿಕೊಳ್ಳುವುದು ಇನ್ನೊಂದು ಉದಾಹರಣೆ. ಒಂದೆಡೆ ತಿಂಗಳ ಶಿಷ್ಯವೇತನವೂ ಇಲ್ಲದ ವಿದ್ಯಾರ್ಥಿ, ಲಕ್ಷಾಂತರ ರೂಪಾಯಿ ವೇತನ ಪಡೆಯುವ ಪ್ರಾಧ್ಯಾಪಕರ ಕೆಲಸವನ್ನೂ ಮಾಡಬೇಕಾದ ಉದಾಹರಣೆಗಳಿವೆ. ಇಂಥ ಪರಿಪಾಠವನ್ನು ನಿರ್ಮೂಲನೆಗೊಳಿಸಬೇಕು ಎಂದು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಆಡಳಿತಗಳಿಗೆ ಯಾವತ್ತೂ ತೋಚದೆ ಇದ್ದುದು, ಅವು ಎಷ್ಟು ಸಂವೇದನಾಶೀಲರಹಿತ ಎಂಬುದಕ್ಕೆ ಸಾಕ್ಷಿ. ತಾನು ಇಂಥ ಕೆಲಸ ಮಾಡಲಾರೆ ಎಂದು ಖಡಾಖಂಡಿತವಾಗಿ ಹೇಳುವ ವಿದ್ಯಾರ್ಥಿಯನ್ನು ಪ್ರಾಧ್ಯಾಪಕ ವೃಂದ, ವಿಶ್ವವಿದ್ಯಾಲಯಗಳು ಯಾವ ತೆರನಾಗಿ ನೋಡೀತು ಎಂಬುದಕ್ಕೆ ಬೇರೆ ವಿವರಣೆ ಬೇಕಾಗಿಲ್ಲ.

ವಿಶ್ವವಿದ್ಯಾಲಯಗಳ, ಸಂಶೋಧನಾ ಸಂಸ್ಥೆಗಳ ಪ್ರಾಧ್ಯಾಪಕರು ಶೈಕ್ಷಣಿಕ-ಸಂಶೋಧನಾ ಸಂಬಂಧಿ ಕಮ್ಮಟ, ಕಾರ್ಯಾಗಾರ, ಸಮ್ಮೇಳನ ನಡೆಸುವುದು ಸರ್ವೇಸಾಮಾನ್ಯ. ಅಂಥ ಸಮ್ಮೇಳನಗಳ ಅನೇಕ ಜವಾಬ್ದಾರಿ ಸಂಶೋಧನಾ ವಿದ್ಯಾರ್ಥಿಗಳ ಹೆಗಲಿಗೆ. ಬೇಕಿರಲಿ, ಬೇಡದಿರಲಿ, ವಿದ್ಯಾರ್ಥಿಗೆ ಇಂಥ ಅನಪೇಕ್ಷಿತ ಕೆಲಸಗಳ ಹೊರೆ ಇದ್ದದ್ದೇ. ತಮ್ಮ ಸಂಶೋಧನಾ ವಿದ್ಯಾರ್ಥಿ ತಮ್ಮ ‘ಖಾಸಗಿ ಸ್ವತ್ತು’ ಎಂಬಂಥ ನಿಲುವು ತೊರೆಯುವಂಥ ವಾತಾವರಣ ನಿರ್ಮಾಣವಾಗುವವರೆಗೂ ಇಂಥ ಅನಪೇಕ್ಷಿತ ಕೆಲಸಗಳ ಜವಾಬ್ದಾರಿ ವಿದ್ಯಾರ್ಥಿಗಳ ಹೆಗಲಿಗೆ ಬೀಳುತ್ತಲೇ ಇರುತ್ತದೆ.

ಅನೇಕ ಕಡೆ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರು ನೀಡುವ ವೈಯಕ್ತಿಕ ಕೆಲಸಗಳ ಪಟ್ಟಿ ನೋಡಿದರೆ, ಸುಸಂಸ್ಕೃತ ಸಮಾಜ ತಲೆತಗ್ಗಿಸಬೇಕು. ತಮ್ಮ ಮಕ್ಕಳಿಗೆ ಮನೆಪಾಠ ಮಾಡುವಂತೆ ಒತ್ತಾಯಿಸುವುದು, ಮಕ್ಕಳನ್ನು ಶಾಲೆಯಿಂದ ಪ್ರತಿನಿತ್ಯ ಮನೆಗೆ ತಂದು ಬಿಡುವ ಜವಾಬ್ದಾರಿ ವಹಿಸುವುದು, ತಮ್ಮ ಮೋಜಿನ ಪಯಣಕ್ಕೆ ವಿಮಾನದ ಟಿಕೆಟ್ ಖರೀದಿಸಲು ಹೇಳುವುದು, ಪರ ಊರಿಗೆ ಹೋದಾಗ ಮನೆ ಕಾಯಲು ಬಳಸಿಕೊಳ್ಳುವುದು, ವೈಯಕ್ತಿಕ ಆಮಂತ್ರಣ ಪತ್ರಿಕೆ ಹಂಚಲು ಬಳಸಿಕೊಳ್ಳುವುದು, ಕುಟುಂಬದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಯನ್ನು ಕಾರ್ಮಿಕರಂತೆ ದುಡಿಸಿಕೊಳ್ಳುವುದು, ಹಬ್ಬಹರಿದಿನಗಳಲ್ಲಿ ಉಡುಗೊರೆಗಾಗಿ ಒತ್ತಾಯಿಸುವುದು, ತಮ್ಮ ಸಂಬಂಧಿಕರ, ಪರಿಚಯಸ್ಥರ ವೈಯಕ್ತಿಕ ಕೆಲಸಗಳಿಗೆ ದುಡಿಸಿಕೊಳ್ಳುವುದು, ಕುಟುಂಬದ ಸದಸ್ಯರ ಅನಾರೋಗ್ಯದಲ್ಲಿ, ಆಸ್ಪತ್ರೆಯ ವಾಸ-ರೋಗಿಯ ಆರೈಕೆಯ ಜವಾಬ್ದಾರಿ ವಹಿಸುವುದು, ಇತ್ಯಾದಿ ನೋಡುವಾಗ ತೀರ ಶೋಚನೀಯವೆನಿಸುತ್ತದೆ.

ಅನೇಕ ಕಡೆ ಸಂಶೋಧನಾ ವಿದ್ಯಾರ್ಥಿನಿಯರ ಸ್ಥಿತಿ ಇನ್ನೂ ಕಳವಳಕಾರಿ. ವಿದ್ಯಾರ್ಥಿನಿಯರು ಚಂದದ ಉಡುಗೆ ತೊಟ್ಟರೆ, ತಮ್ಮ ಗೆಳೆಯರೊಟ್ಟಿಗೆ ಸಂತೋಷವಾಗಿದ್ದರೆ, ವಿದ್ಯಾರ್ಥಿನಿಯ ಮದುವೆ ನಿಶ್ಚಯವಾದರೆ ಅಥವಾ ಮಗು ಜನಿಸಿದರೆ ಅದನ್ನು ಸಹಿಸದ, ಅಸಹನೆ ತೋರುವ ಮನೋವೃತ್ತಿಯ ಪ್ರಾಧ್ಯಾಪಕರೂ ಇದ್ದಾರೆ ಎಂದರೆ ಆಶ್ಚರ್ಯವಾಗಬಹುದು. ಅಂಥ ಅಸಹನೆಯಿಂದ ಹುಟ್ಟುವ ಎಲ್ಲ ತೆರನ ಕಿರುಕುಳಗಳನ್ನೂ ಅನುಭವಿಸುವ ಪಾಡು ವಿದ್ಯಾರ್ಥಿನಿಯರದ್ದು.

ಸಂಶೋಧನಾ ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಲೈಂಗಿಕ ಶೋಷಣೆಗೆ ಒಳಗಾಗಿರುವ ಅನೇಕ ಉದಾಹರಣೆಗಳು ಈಗಾಗಲೇ ವರದಿಗೊಂಡಿದ್ದಿದೆ. ವರದಿಯಾಗದ ಪ್ರಕರಣಗಳು ಎಷ್ಟು ಎಂಬುದಕ್ಕೆ ಯಾವ ಮಾಹಿತಿಯೂ ಲಭ್ಯವಿಲ್ಲ. ಯಾವುದೇ ವಿದ್ಯಾರ್ಥಿನಿ ತಾನು ಲೈಂಗಿಕ ಶೋಷಣೆಗೆ ಒಳಗಾಗಿದ್ದೇನೆ ಎಂದು ನಿರ್ಭಯವಾಗಿ ಪ್ರಕರಣ ದಾಖಲಿಸಲು ಸಾಧ್ಯವಾಗುವಂಥ ವಾತಾವರಣದ ಕೊರತೆ ಇದ್ದೇ ಇದೆ. ಕೌಟುಂಬಿಕ, ಸಾಮಾಜಿಕ ಅಡೆತಡೆಗಳು, ಮುಂದಿನ ಜೀವನದ ಆಗುಹೋಗುಗಳ ಯೋಚನೆ, ವಿದ್ಯಾರ್ಥಿನಿಯರು ಲೈಂಗಿಕ ಶೋಷಣೆಯ ಪ್ರಕರಣಗಳನ್ನು ಧೈರ್ಯವಾಗಿ ದಾಖಲಿಸಲು ಅಡ್ಡಿಪಡಿಸುತ್ತದೆ. ಸಂತ್ರಸ್ತ ವಿದ್ಯಾರ್ಥಿನಿಯನ್ನೇ ಅಪರಾಧಿ ಎಂಬಂತೆ ನೋಡುವ ಸಾಮಾಜಿಕ ಧೋರಣೆ ಇನ್ನೊಂದು ತೊಡರುಗಾಲು.

ಇಂತೆಲ್ಲ ಶೋಷಣೆಗಳನ್ನು ಮೆಟ್ಟಿ ನಿಲ್ಲುವ, ಪ್ರತಿಭಟಿಸುವ ಸಂಶೋಧನಾ ವಿದ್ಯಾರ್ಥಿ ಉಳಿದ ಸಹಪಾಠಿಗಳೆದುರು ಪ್ರಾಧ್ಯಾಪಕರಿಂದ ಅವಮಾನಿಸಿಕೊಳ್ಳಲು ಸಿದ್ಧರಿರಬೇಕು. ತಮ್ಮ ವೈಯಕ್ತಿಕ ಕೆಲಸ ಸಾಧಿಸಲು, ಅನೇಕ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಎಲ್ಲರೆದುರು ಅನಗತ್ಯ ನಿಂದಿಸಿ, ಅವಮಾನಿಸುವುದುಂಟು. ಇಂಥ ಕೃತ್ಯಗಳಿಂದ ವಿದ್ಯಾರ್ಥಿಯ ನೈತಿಕ ಸ್ಥೈರ್ಯ ಕುಸಿಯುವುದಲ್ಲದೆ, ಆತನನ್ನು ತನಗೆ ಬೇಕಾದಂತೆ ಪಳಗಿಸಲು ಬಂದೀತು ಎಂಬ ಲೆಕ್ಕಾಚಾರವೂ ಇದ್ದೀತು.

ಸಂಶೋಧನಾ ವಿದ್ಯಾರ್ಥಿಗಳಿಗೆ ಅವರ ಅಭಿಪ್ರಾಯವನ್ನು ನಿರ್ಭಿಡೆಯಿಂದ ಎಲ್ಲರೆದುರು ವ್ಯಕ್ತಪಡಿಸಲು ಸ್ವಾತಂತ್ರ್ಯವನ್ನೂ ನೀಡದ ಪ್ರಾಧ್ಯಾಪಕರಿದ್ದಾರೆ. ಸಂವಹನ, ವಿಚಾರ ವಿನಿಮಯಕ್ಕೇ ತಡೆ ಒಡ್ಡುವ ಇಂಥ ಪರಿಪಾಠಗಳು ಸಂಶೋಧನಾ ಕ್ಷೇತ್ರಕ್ಕೆ ಎಂದೆಂದಿಗೂ ತಕ್ಕುದಲ್ಲ.

ಇವೆಲ್ಲ ಸವಾಲುಗಳನ್ನೂ ಮೀರಿ ನಿಂತು, ಸಂಶೋಧನೆ ಮುಂದುವರೆಸುವ ಎಷ್ಟೋ ವಿದ್ಯಾರ್ಥಿಗಳಿಗೆ ಮತ್ತೊಂದು ನಿರಾಶೆ ಕಾದಿರುತ್ತದೆ. ವಿದ್ಯಾರ್ಥಿಯ ಸಂಶೋಧನೆ, ಅಧ್ಯಯನ, ಪ್ರಯೋಗಗಳ ಫಲ ಆತನಿಗೇ ದೊರೆತೀತು ಎನ್ನಲು ಬಾರದು. ಅನೇಕ ಕಡೆ ವಿದ್ಯಾರ್ಥಿಯ ಇಚ್ಛೆಗೆ ವಿರುದ್ಧವಾಗಿ, ಆತನ ಸಂಶೋಧನಾ ಫಲಿತಾಂಶಗಳನ್ನು, ನಾನಾ ಕಾರಣ ನೀಡಿ, ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟಿಸದಂತೆ ತಡೆಯೊಡ್ಡುವ ಪ್ರಾಧ್ಯಾಪಕರೂ ಇದ್ದಾರೆ.

ವಿದ್ಯಾರ್ಥಿಯ ಸಂಶೋಧನಾ ಫಲಿತಾಂಶಗಳನ್ನು, ಆತನ ಗಮನಕ್ಕೆ ಬಾರದಂತೆ ಬಳಸಿಕೊಳ್ಳುವ ಪ್ರವೃತ್ತಿಯೂ ಇದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿ ಪ್ರಸಿದ್ಧಿಯ ಮೆಟ್ಟಲೇರುವ ಧಾವಂತದ ಕೆಲವು ಪ್ರಾಧ್ಯಾಪಕರು, ತಮ್ಮ ವಿದ್ಯಾರ್ಥಿ ಸಂಶೋಧನಾ ನೈತಿಕತೆ ತ್ಯಜಿಸಿದರೂ ಚಿಂತೆಯಿಲ್ಲ ಎನ್ನುವ ನಿಲುವು ತಾಳುವ ಪರಿಪಾಠವನ್ನು ಆಡಳಿತಗಳು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.

ನೂರೆಂಟು ತೊಡರುಗಳನ್ನು ದಾಟಿ ಬಂದ ವಿದ್ಯಾರ್ಥಿ ಉನ್ನತ ಪದವಿ ಪಡೆದು ಸಮಾಜದಲ್ಲಿ ಅಡಿಯಿಟ್ಟರೆ, ನಿರುದ್ಯೋಗ ಸಮಸ್ಯೆ ಕಾದಿರುತ್ತದೆ. ಮೂಲಭೂತ ವಿಜ್ಞಾನಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಪಿಎಚ್. ಡಿ. ನಂತರ ಮೂರು ವರುಷಗಳ ಪೋಸ್ಟ್-ಡಾಕ್ಟೊರಲ್ ಸಂಶೋಧನೆ ಪೂರ್ಣಗೊಳಿಸಿದಲ್ಲಿ ಮಾತ್ರವೇ ಉನ್ನತ ಸಂಶೋಧನಾ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅರ್ಹತೆ ಬರುತ್ತದೆ.

ಪ್ರತಿ ವರ್ಷ ಪದವಿ ಪಡೆಯುವ ವಿದ್ಯಾರ್ಥಿಗಳಿಗೂ, ಲಭ್ಯವಿರುವ ಉದ್ಯೋಗಕ್ಕೂ ಯಾವುದೇ ತಾಳಮೇಳವೂ ಇಲ್ಲದ ಸ್ಥಿತಿ ಇಂದಿನದ್ದು. ತನ್ನ ಶಾಲಾ–ಕಾಲೇಜು ಸಹಪಾಠಿಗಳು ಉದ್ಯೋಗಸ್ಥರು, ಸಂಸಾರಸ್ಥರಾಗಿ ತಮ್ಮ ಮಕ್ಕಳನ್ನು ಶಾಲೆಯ ಹೊಸ್ತಿಲಲ್ಲಿ ನಿಲ್ಲಿಸುವ ವೇಳೆಗೆ, ಸಂಶೋಧನಾ ವಿದ್ಯಾರ್ಥಿ ಪದವಿಯನ್ನು ಪಡೆದು ಉದ್ಯೋಗ ಅರಸಲು ಅರಭಿಸಿರುತ್ತಾನೆ. ಸಂಶೋಧನಾ ವಿದ್ಯಾರ್ಥಿಗೆ ಹೆಣ್ಣು ಕೊಡಲು ಹಿಂಜರಿಯುವವರಿದ್ದಾರೆ. ಇಂಥ ಸ್ಥಿತಿಯು ಅನೇಕ ತೆರನ ಸಾಮಾಜಿಕ, ಕೌಟುಂಬಿಕ ಪರಿಣಾಮಗಳನ್ನು ಮತ್ತು ಮಾನಸಿಕ ಒತ್ತಡಗಳನ್ನು ಉಂಟುಮಾಡುತ್ತದೆ.

ಸಂಶೋಧನಾ ವಿದ್ಯಾರ್ಥಿಯು ಅನುಭವಿಸುವ ಕಷ್ಟಗಳ ಅರಿವು ಶೈಕ್ಷಣಿಕ ಆಡಳಿತಗಳಿಗೆ ಇಲ್ಲವೆಂದಲ್ಲ. ಆದರೆ ಅದನ್ನು ನಿವಾರಿಸುವ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತದೆ. ವಿದ್ಯಾರ್ಥಿಯ ಪಡಿಪಾಟಾಲನ್ನು ತಾಳ್ಮೆಯಿಂದ ಆಲಿಸಿ, ನ್ಯಾಯ ಒದಗಿಸುವ ವ್ಯವಸ್ಥೆ ಬೇಕಿದೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು, ಪ್ರಕರಣವನ್ನು ನಿರ್ಭಯವಾಗಿ ದಾಖಲಿಸುವಂಥ ವಾತಾವರಣವನ್ನು ಸೃಷ್ಟಿಸುವ ಅಗತ್ಯ ಇದ್ದೇ ಇದೆ. ಅನೇಕ ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಜೀವನದಲ್ಲೂ ಎಲ್ಲ ತೆರನ ಕಷ್ಟ-ಕಾರ್ಪಣ್ಯಕ್ಕೆ ಒಳಗಾಗಿದ್ದರೂ, ತಮ್ಮ ವಿದ್ಯಾರ್ಥಿಗಳ ಅಳಲಿಗೆ ಸ್ಪಂದಿಸದಿರುವುದು ದುರ್ದೈವ. ಸಂಶೋಧನಾ ವಿದ್ಯಾರ್ಥಿಯ ಪಯಣ, ಜೀವನ ಸಹ್ಯವೆನಿಸುವಂತೆ ಮಾಡುವುದರಲ್ಲೇ ವಿದ್ವತ್ ವರ್ಗದ ಶ್ರೇಷ್ಠತೆಯೂ ಅಡಗಿದೆ ಎಂಬ ಪ್ರಜ್ಞೆ ನಮಗೆ ಬಂದಾಗ ಮಾತ್ರ ಅನೇಕ ಸಮಸ್ಯೆಗಳು ನಿವಾರಣೆಗೊಂಡಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT