ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಹೊಸ ಶಿಕ್ಷಣ ನೀತಿಯ ಹೂರಣ ಕನ್ನಡದಲ್ಲಿ

ಜನಸಾಮಾನ್ಯರಿಗೆ ಪರಿಚಯಿಸುವ ಪ್ರಯತ್ನದಲ್ಲಿ ಎಂಐಟಿ ಪ್ರಾಧ್ಯಾಪಕ ಕರುಣಾಕರ್ ಕೋಟೆಗಾರ್
Last Updated 21 ಡಿಸೆಂಬರ್ 2020, 12:54 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ಪರಿಚಯಿಸಿದೆ. ಇಂಗ್ಲಿಷ್‌ನಲ್ಲಿರುವ 66 ಪುಟಗಳ ಈ ವರದಿಯನ್ನುಕನ್ನಡಿಗರಿಗೆಅರ್ಥೈಸಿಕೊಳ್ಳುವುದು ತುಸು ಕಠಿಣವೇ. ಇದನ್ನು ಮನಗಂಡ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ಕರುಣಾಕರ್ ಕೋಟೆಗಾರ್ ಅವರು ಕನ್ನಡದಲ್ಲಿ ವಿಡಿಯೊ ತುಣುಕುಗಳನ್ನು ಸಿದ್ಧಪಡಿಸಿ, ನೂತನ ಶಿಕ್ಷಣ ನೀತಿಯನ್ನು ಜನಸಾಮಾನ್ಯರ ನಡುವೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ.

ಮಣಿಪಾಲದ ಎಂಐಟಿ (ಮಣಿಪಾಲ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಕರುಣಾಕರ್ ಅವರು ಒಂದು ತಿಂಗಳ ಅವಧಿಯಲ್ಲಿ ಒಟ್ಟು 315 ನಿಮಿಷಗಳ ಶಿಕ್ಷಣ ನೀತಿಯ ಅಧ್ಯಾಯವಾರು 27 ವಿಡಿಯೊ ತುಣುಕುಗಳನ್ನು ತಯಾರಿಸಿದ್ದಾರೆ. ಈ ವಿಡಿಯೊಗಳನ್ನು ಈಗ ಮಂಗಳೂರು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ (https://mangaloreuniversity.ac.in/nep) ನೋಡಬಹುದು. ಈಚೆಗೆ ನಡೆದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರು ಈ ವಿಡಿಯೊಗಳನ್ನು ಲೋಕಾರ್ಪಣೆಗೊಳಿಸಿದರು.

ವಿಡಿಯೊದಲ್ಲಿ ಏನಿದೆ ?

ಪ್ರಸ್ತಾವನೆಯ ನಂತರ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ಇನ್ನುಳಿದ ಕೇಂದ್ರೀಕೃತ ವಲಯಗಳು, ಕಾರ್ಯರೂಪಕ್ಕೆ ತರುವ ಪ್ರಯತ್ನಗಳು... ಹೀಗೆ ಈ ವಿಡಿಯೊ ನಾಲ್ಕು ಪ್ರಮುಖ ವಿಭಾಗಗಳನ್ನು ಹೊಂದಿದೆ. 2.42 ನಿಮಿಷಗಳಿಂದ 22 ನಿಮಿಷಗಳವರೆಗಿನ ವಿಡಿಯೊಗಳು ಸಹ ಇವೆ. ನೂತನ ಶಿಕ್ಷಣ ನೀತಿಯ ವರದಿಯಲ್ಲಿರುವ ವಿಷಯಗಳ ಪ್ರತಿ ಅಧ್ಯಾಯದಲ್ಲಿರುವ ಸಂಗತಿಗಳನ್ನು ಅವರು ಇಲ್ಲಿ ಕನ್ನಡದಲ್ಲಿ ವಿವರಿಸಿದ್ದಾರೆ.

‘ನೂತನ ಶಿಕ್ಷಣ ನೀತಿಯ ಕರಡು 482 ಪುಟಗಳಷ್ಟಿತ್ತು. ಅದರ ಅಂತಿಮ ವರದಿಯನ್ನು 66 ಪುಟಗಳಲ್ಲಿ ತಿಳಿಸಲಾಗಿದೆ. ಶಿಕ್ಷಣ ನೀತಿಯಲ್ಲಿರುವ ತಲೆಬರಹವನ್ನೇ ಉಳಿಸಿಕೊಂಡು, ಅದರ ಯಥಾವತ್ ಸಂಗತಿಗಳನ್ನು ಕನ್ನಡದಲ್ಲಿ ವಿವರಿಸಿದ್ದೇನೆ. ಅವಕಾಶ ಬಾಗಿಲು ತೆರೆಯುವ ಶಿಕ್ಷಣ ನೀತಿಯನ್ನು ಕರ್ನಾಟಕದ ಜನರಿಗೆ ಮನದಟ್ಟು ಮಾಡುವ ತುಡಿತ ನನ್ನದು’ ಎನ್ನುತ್ತಾರೆ ಪ್ರೊ. ಕರುಣಾಕರ್ ಕೋಟೆಗಾರ್.


ಆಲೋಚನೆ ಹುಟ್ಟಿದ್ದು ಹೇಗೆ ?

‘ಎನ್‌ಇಪಿಯಲ್ಲಿ ಪ್ರತಿ ಪದಕ್ಕೂ ವಿಶಾಲವಾದ ಅರ್ಥವಿದೆ. ಇಂಗ್ಲಿಷ್ ಭಾಷಾತಜ್ಞರಿಗೂ ಇದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಸುಲಭವಲ್ಲ. ಶಿಕ್ಷಣ ಕ್ಷೇತ್ರದಲ್ಲಿರುವವರು, ಬಹಳಷ್ಟು ಪ್ರಾಧ್ಯಾಪಕರಿಗೂ ಹೊಸ ನೀತಿಯ ಬಗ್ಗೆ ಸರಿಯಾದ ಅರಿವಿಲ್ಲ. ನೀತಿರೂಪಕರು ಇದಕ್ಕೊಂದು ಸುಂದರವಾದ ಚೌಕಟ್ಟನ್ನು ನಿರ್ಮಿಸಿದ್ದಾರೆ. ಆಯಾ ರಾಜ್ಯವು ಅಗತ್ಯಕ್ಕೆ ಅನುಗುಣವಾಗಿ ರಚನಾತ್ಮಕವಾಗಿ ಇದನ್ನು ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಎನ್‌ಇಪಿಯ ವಿಶೇಷವೇ ಇದು’ ಎಂದು ಅವರು ವಿಶ್ಲೇಷಿಸಿದರು.

‘ಪದವಿಗಾಗಿ ಶಿಕ್ಷಣ ಎಂಬ ಸಿದ್ಧ ಮಾನಸಿಕತೆಯನ್ನು ತೊಡೆದು ಹಾಕಿ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಶಿಕ್ಷಣ ನೀಡುವುದು ಎನ್‌ಇಪಿಯ ಮುಖ್ಯ ಆಶಯ. ಪ್ರಸ್ತುತ ಅಂಕಿ–ಅಂಶದ ಪ್ರಕಾರ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಶೇ 26ರಷ್ಟಿದೆ. 2035ರ ಒಳಗೆ ಈ ಪ್ರಮಾಣವನ್ನು ಶೇ 50ಕ್ಕೆ ಏರಿಸುವುದು ಶಿಕ್ಷಣ ನೀತಿಯ ಗುರಿ. ಎನ್‌ಇಪಿ ಅನುಷ್ಠಾನಗೊಂಡರೆ, ವಿದ್ಯಾರ್ಥಿ ಆರನೇ ತರಗತಿಯಿಂದಲೇ ತನ್ನ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಮುನ್ನಡೆಯಲು ಸಾಧ್ಯವಿದೆ. ಪಠ್ಯೇತರ, ವೃತ್ತಿಪರ, ಕ್ರೀಡೆ ಹೀಗೆ ಎಲ್ಲವನ್ನೂ ಒಳಗೊಂಡ ಸಮಗ್ರ ಪಠ್ಯಕ್ರಮ ರೂಪಿಸಲು ಅವಕಾಶ ಕಲ್ಪಿಸಲಾಗಿದೆ. ಕೃತಕ ಬುದ್ಧಿಮತ್ತೆ ಬಳಕೆಯ ಉಲ್ಲೇಖವೂ ಇದೆ. ಇದರಿಂದ ವಿದ್ಯಾರ್ಥಿ ಸಂಪೂರ್ಣ ವ್ಯಕ್ತಿತ್ವ ಆಧರಿಸಿ, ಎಲ್ಲ 360 ಡಿಗ್ರಿ ದೃಷ್ಟಿಕೋನದಲ್ಲಿ ಪರಿಶೀಲಿಸಿ, ಅಂಕ ನೀಡು ಕ್ರಮ ಜಾರಿಯಾಗುತ್ತದೆ’ ಎಂದು ಅವರು ಎನ್‌ಇಪಿಯಲ್ಲಿ ಅಡಕವಾಗಿರುವ ಉತ್ತಮ ಸಂಗತಿಗಳನ್ನು ಉಲ್ಲೇಖಿಸಿದರು.

‘ಇಂದಿನ ಶಿಕ್ಷಣ ಕ್ರಮದಲ್ಲಿ ಅನೇಕ ಶಿಕ್ಷಕರು, ಪ್ರಾಧ್ಯಾಪಕರಿಗೆ ಅಧ್ಯಯನದ ಕೊರತೆ ಇರುವುದು ಕಹಿ ಸತ್ಯ. ಆದರೆ, ಎನ್‌ಇಪಿ ಶಿಕ್ಷಕರಿಗೆ ನಿರಂತರ ವೃತ್ತಿಪರ ಅಧ್ಯಯನದ ಬಗ್ಗೆ ಒತ್ತು ನೀಡಿದೆ. ವರ್ಷಕ್ಕೆ ಕನಿಷ್ಠ 50 ತಾಸು ತರಬೇತಿಯ ಅಗತ್ಯವನ್ನು ತಿಳಿಸಿದೆ. ಉಪಯುಕ್ತ ಸಂಗತಿಗಳ ಆಗರವಾಗಿರುವ ಎನ್‌ಇಪಿಯ ಬಗ್ಗೆ ಜನಸಾಮಾನ್ಯರು ತಿಳಿದುಕೊಳ್ಳಬೇಕು. ಶಿಕ್ಷಕರು, ವಿದ್ಯಾರ್ಥಿಗಳು, ಆಡಳಿತ, ಪಾಲಕರು, ಜನಸಾಮಾನ್ಯರು ಎಲ್ಲರ ನಡುವಿನ ಬೆಸುಗೆಯಾಗಿರುವ ಶಿಕ್ಷಣ ಕ್ಷೇತ್ರದ ಕುರಿತು ತಿಳಿವಳಿಕೆ ಮೂಡಬೇಕು. ಹೊಸ ಶಿಕ್ಷಣ ನೀತಿಯನ್ನು ಎಲ್ಲರೂ ಪ್ರೀತಿಸಬೇಕು ಎಂಬುದು ನನ್ನ ಮಹದಾಸೆ’ ಎಂದು ಅವರು ‘ಪ್ರಜಾವಾಣಿ’ ಜತೆ ಮಾತನಾಡುತ್ತ ಅಭಿಪ್ರಾಯ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT