ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣದಲ್ಲಿಪ್ರಾಜೆಕ್ಟ್‌ ವರ್ಕ್‌ ಹೇಗಿರಬೇಕು?

Last Updated 16 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಸಂಶೋಧನೆ ಎನ್ನುವುದು ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾದ ಪ್ರಕ್ರಿಯೆಯಷ್ಟೇ ಅಲ್ಲ, ಇದೊಂದು ಸಾಧನೆಯ ಮೈಲಿಗಲ್ಲು ಕೂಡ. ಆದರೆ ಸಂಶೋಧನೆಗೆ ಸಂಕಲ್ಪ ಮಾಡಿದರಷ್ಟೆ ಸಾಲದು, ಅದಕ್ಕೆ ಬೇಕಾದ ಸಮಗ್ರ ಸಿದ್ಧತೆ ಮಾಡಿಕೊಳ್ಳುವುದು ಅವಶ್ಯಕ.

ಸಂಶೋಧನೆ ಒಂದು ರೀತಿಯಾದರೆ, ಕಿರು ಸಂಶೋಧನೆ ಅಥವಾ ಪ್ರಾಜೆಕ್ಟ್‌ ವರ್ಕ್‌ ಇನ್ನೊಂದು ರೀತಿ. ಪ್ರಾಜೆಕ್ಟ್‌ ವರ್ಕ್‌ ಎಂಬುದು ವಿದ್ಯಾರ್ಥಿಗಳಿಗೆ ತರಗತಿಯ ಆಚೆಯೂ ಯೋಚಿಸುವ, 21ನೇ ಶತಮಾನದಲ್ಲಿ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಕೌಶಲ, ನಡವಳಿಕೆ, ಆತ್ಮವಿಶ್ವಾಸವನ್ನು ತುಂಬುವಂತಹ ಟೂಲ್‌ ಎನ್ನಬಹುದು. ಇದು ವಿದ್ಯಾರ್ಥಿಗೆ ಪ್ರಶ್ನಿಸುವ, ವಿಶ್ಲೇಷಿಸುವ ಮೌಲ್ಯಮಾಪನ ಮಾಡುವ, ಹೊಸ ಮಾರ್ಗಗಳನ್ನು ಅನ್ವೇಷಿಸುವ ಸಾಮರ್ಥ್ಯವನ್ನು ತುಂಬುತ್ತದೆ. ಇದು ವಿದ್ಯಾರ್ಥಿಯ ಯೋಚನಾಶಕ್ತಿಯನ್ನು ಮೇಲಿನ ಸ್ತರಕ್ಕೆ ಒಯ್ಯಬಲ್ಲದು; ಜ್ಞಾನದ ವಿಸ್ತಾರದ ಜೊತೆಗೆ ಹೆಚ್ಚುವರಿ ಕೌಶಲಗಳಾದ ಸೃಜನಶೀಲತೆ, ಸಮಸ್ಯೆಯನ್ನು ಪರಿಹರಿಸುವ ಚಾಣಾಕ್ಷತೆ ಹಾಗೂ ಸಂಶೋಧನಾತ್ಮಕ ದೃಷ್ಟಿಯನ್ನು ಹೆಚ್ಚಿಸುತ್ತದೆ.

ವಿದ್ಯಾರ್ಥಿ ಪ್ರಾಜೆಕ್ಟ್‌ ವರ್ಕ್‌ ಶುರು ಮಾಡುತ್ತಿದ್ದಂತೆ ನಿರ್ಧಾರಗಳನ್ನು ಕೈಗೊಳ್ಳುವ, ಸಂವಹನ ನಡೆಸುವ ಚಾಕಚಕ್ಯತೆಯನ್ನೂ ಬೆಳೆಸಿಕೊಳ್ಳುತ್ತಾನೆ.

ನಿರಂತರ ಕಲಿಕೆಗೆ ಅಡಿಪಾಯ

ಪ್ರಾಜೆಕ್ಟ್‌ಗೆ ಅಗತ್ಯವಿರುವ ದಾಖಲೆಗಳನ್ನು ಕ್ರೋಢೀಕರಿಸುವುದು, ಅದನ್ನು ವಿಶ್ಲೇಷಿಸುವುದು, ಇತರರ ಜೊತೆ ಚರ್ಚಿಸಿ ಅಂತಿಮ ನಿಲುವನ್ನು ತಳೆಯುವುದು, ಕೊನೆಗೊಂದು ತೀರ್ಮಾನವನ್ನು ಪ್ರಸ್ತುತಪಡಿಸುವುದು... ಇವೆಲ್ಲವನ್ನೂ ಈ ಹಂತದಲ್ಲಿ ನೀವು ಕಲಿಯಬಹುದು. ಮಾಹಿತಿಯನ್ನು ನಿಮಗೆ ಬೇಕಾದಂತೆ ವಿಮರ್ಶಿಸುವ ಬುದ್ಧಿವಂತಿಕೆಯೂ ಅತ್ಯಂತ ಅವಶ್ಯಕ.

ಅಂತಿಮ ರೂಪಕ್ಕೆ ಮೊದಲೇ ಯೋಜನೆ

ಒಂದು ಪ್ರಾಜೆಕ್ಟ್‌ ಅನ್ನು ನೀವು ವಿನ್ಯಾಸಗೊಳಿಸಿದಾಗ, ಅದರ ಅಂತಿಮ ರೂಪ ಹೇಗಿರುತ್ತದೆ ಎಂಬುದನ್ನು ಆರಂಭದಲ್ಲೇ ನಿಮ್ಮ ಮನಸ್ಸಿನಲ್ಲಿ ಮೂಡಿಸಿಕೊಂಡಿರಬೇಕು. ನಂತರ ಪ್ರತಿಯೊಂದು ಹಂತವನ್ನು ಪ್ರಚುರಪಡಿಸುತ್ತ ಹೋಗಬೇಕು.

ಉನ್ನತ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಳಿಸಲು ಕಿರು ಸಂಶೋಧನೆ ಕೈಗೊಳ್ಳುವುದನ್ನು ಹಲವು ಕಡೆ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಈ ಬಗ್ಗೆ ಮೊದಲೇ ಆತಂಕಗೊಳ್ಳುವುದು ಸಹಜ. ಆದರೆ ಸರಿಯಾಗಿ ಅರ್ಥ ಮಾಡಿಕೊಂಡರೆ ಸಂಶೋಧನೆ ಎಂಬುದು ಕಬ್ಬಿಣದ ಕಡಲೆಯೇನಲ್ಲ.

ಸಂಶೋಧನೆ ಎನ್ನುವುದು ಜ್ಞಾನವನ್ನು ಒರೆಗೆ ಹಚ್ಚುವ ಒಂದು ವಿಧ. ಇದರಲ್ಲಿ ಒಮ್ಮೆ ಆಸಕ್ತಿ ಬೆಳೆಸಿಕೊಂಡರೆ, ಸಂಶೋಧನಾತ್ಮಕ ವಸ್ತುವನ್ನು ಹುಡುಕುವುದು ಸಲೀಸು. ಡಾಕ್ಟರೇಟ್ ಪದವಿಗಾಗಿ ಮಾಡುವ ಸಂಶೋಧನೆ ಪರಿಣಾಮಕಾರಿ ಹಾಗೂ ಹೊಸ ಆಯಾಮಗಳಿಗೆ ಅಡಿಪಾಯ ಹಾಕಿಕೊಡುವ ಮಾರ್ಗಸೂಚಿಯಾದರೆ, ವಿದ್ಯಾರ್ಥಿ ದೆಸೆಯ ಕಿರು ಸಂಶೋಧನೆ ನಿಮ್ಮ ಸಂಶೋಧನಾ ಕೌಶಲ ಹೆಚ್ಚಿಸುವುದರ ಜೊತೆಗೆ ನಿಮ್ಮ ಭವಿಷ್ಯದ ಉದ್ಯೋಗಕ್ಕೆ ಅಡಿಪಾಯ ಹಾಕಬಹುದು.

ವಿಷಯ ಆಯ್ಕೆಗೆ ಮುನ್ನ..

ನಿಮ್ಮ ಭವಿಷ್ಯದ ಉದ್ಯೋಗಕ್ಕೆ ನೆರವಾಗುವಂತಹ ವಿಷಯವಿರಲಿ.

ನೀವು ಓದುತ್ತಿರುವ ವಿಭಾಗಗಳಲ್ಲಿ ಅಭ್ಯಸಿಸುತ್ತಿರುವ ವಿಷಯಗಳಿಗೆ ಸಂಬಂಧಿಸಿದಂತೆ ವಸ್ತುವನ್ನು ಆಯ್ಕೆ ಮಾಡಿಕೊಳ್ಳಿ.ಉದಾ: ಪತ್ರಿಕೋದ್ಯಮ ವಿಭಾಗವಾದರೆ ಪತ್ರಿಕೆ ಅಥವಾ ದೃಶ್ಯ ಮಾಧ್ಯಮ, ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿದ ವಿಷಯವನ್ನು ಆಯ್ದುಕೊಳ್ಳಿ.

ನಿಮಗಿರುವ ಆಸಕ್ತಿಗೆ ಅನುಗುಣವಾಗಿ ವಿಷಯದ ಆಯ್ಕೆ ಇರಲಿ. ಉದಾಹರಣೆಗೆ ಮನರಂಜನೆ, ಕ್ರೀಡೆ, ಟಿವಿ ಕಾರ್ಯಕ್ರಮಗಳು, ಜಾಹೀರಾತು ಇತ್ಯಾದಿ.

ಹಿರಿಯ ಸಂಶೋಧಕರ, ನಿಮ್ಮ ಅಧ್ಯಯನಗಳಲ್ಲಿರುವ ಹೆಸರಾಂತ ವ್ಯಕ್ತಿಗಳ ಕುರಿತು ಸಂಶೋಧಿಸುವುದು ಉತ್ತಮ.

ಕಿರು ಸಂಶೋಧನೆಯ ವ್ಯಾಪ್ತಿಯನ್ನು ಮೊದಲೇ ನಿರ್ಧರಿಸಬೇಕು.

ಇದಾದ ನಂತರ ಸಂಬಂಧಿಸಿದ ವಿಷಯಕ್ಕೆ ಅನುಗುಣವಾಗಿ ಪ್ರಸ್ತಾವನೆ ಸಿದ್ಧಪಡಿಸಿ, ಸಂಶೋಧನೆ ಕೈಗೊಳ್ಳಲು ಬೇಕಾಗಿರುವ ಸಲಕರಣೆಗಳ ಪಟ್ಟಿ ತಯಾರಿಸಿ. ನೀವು ಆಯ್ಕೆ ಮಾಡಿಕೊಂಡಿರುವ ವಿಷಯ ಪ್ರಸ್ತುತ ವಿದ್ಯಮಾನಗಳಿಗೆ ಹೋಲಿಕೆಯಾಗುವಂತಿದ್ದರೆ ಇನ್ನೂ ಉತ್ತಮ. ಪ್ರಸ್ತಾಪಿತ ಅಧ್ಯಯನದ ಕುರಿತಾಗಿ ಮಾಹಿತಿ ಸಂಗ್ರಹಣೆಗೆ ತೆರಳಬೇಕಾಗಿರುವ ಸ್ಥಳಗಳು, ತಗಲುವ ವೆಚ್ಚ ಹಾಗೂ ಸಮಯದ ಕುರಿತು ಅಚ್ಚುಕಟ್ಟಾಗಿ ಪಟ್ಟಿ ಮಾಡಿಟ್ಟುಕೊಳ್ಳಬೇಕು.

ಹೀಗೆ ನಡೆಸುವ ಅಧ್ಯಯನಗಳನ್ನು ಪೀಠಿಕೆಯಿಂದ ಹಿಡಿದು ಅಂತ್ಯದವರೆಗೂ ಇರುವ ಸಂಶೋಧನಾ ವಿನ್ಯಾಸದಂತೆ ರೂಪಿಸಬೇಕು. ಇವುಗಳಲ್ಲಿ ನೀವು ಭೇಟಿ ನೀಡಿದ ಸ್ಥಳ, ಚಿತ್ರ, ವ್ಯಕ್ತಿಗಳು, ಮಾದರಿಗಳು, ಆಕರಗಳು ಸೇರಿದಂತೆ ಎಲ್ಲ ರೀತಿಯಲ್ಲಿ ಸಹಕರಿಸಿದ ನಿಮ್ಮ ಆತ್ಮೀಯರ ಹೆಸರನ್ನು ಉಲ್ಲೇಖಿಸಿದರೆ ಇದೊಂದು ಯಶಸ್ವಿ ಕಿರು ಪ್ರಬಂಧವಾಗುವುದರಲ್ಲಿ ಎರಡು ಮಾತಿಲ್ಲ. ಇಷ್ಟೇ ಅಲ್ಲದೆ, ಮುಂದೊಂದು ದಿನ ನೀವೇ ಖುದ್ದು ಪಿಎಚ್‌.ಡಿ. ಪದವಿಗಾಗಿ ತೆರಳಿದರೆ ಇದೇ ಕಿರು ಪ್ರಬಂಧವನ್ನು ಮಹಾ ಪ್ರಬಂಧವನ್ನಾಗಿ ಆಯ್ಕೆ ಮಾಡಿಕೊಂಡು ಸಂಶೋಧನೆ ನಡೆಸಲು ಸಹಕಾರಿಯಾಗುತ್ತದೆ.

ಸೂಕ್ತ ವಿಷಯ ಆಯ್ದು ಶುದ್ಧ ಸಂಶೋಧನೆ ನಡೆಸಿದರೆ ಮುಂದೆ ಸಂಶೋಧನೆಯಲ್ಲೇ ವಿವಿಧ ಅವಕಾಶಗಳು ದೊರೆಯುವ ಎಲ್ಲ ಸಾಧ್ಯತೆಗಳಿವೆ.

(ಲೇಖಕರು ಸಹಾಯಕ ಪ್ರಾಧ್ಯಾಪಕರು, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT