ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯು ಪರೀಕ್ಷೆ: ಸಿದ್ಧತೆಗೆ ಮಾರ್ಗದರ್ಶಿ ಸೂತ್ರಗಳು

Last Updated 15 ಜನವರಿ 2020, 10:14 IST
ಅಕ್ಷರ ಗಾತ್ರ

ದ್ವಿತೀಯ ಪದವಿ ಪೂರ್ವ ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ. ಭವಿಷ್ಯದ ಉದ್ಯೋಗಕ್ಕೆ ದಿಕ್ಸೂಚಿಯಾದ ಶೈಕ್ಷಣಿಕ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ನಿರ್ಣಾಯಕ ಪರೀಕ್ಷೆ ಎಂದೇ ಇದು ಬಿಂಬಿತವಾಗಿದೆ. ವಿಜ್ಞಾನದ ವಿದ್ಯಾರ್ಥಿಗಳು ಎಂಜಿನಿಯರಿಂಗ್‌, ವೈದ್ಯಕೀಯ, ವಾಸ್ತುಶಿಲ್ಪ, ಕೃಷಿ ಪದವಿ ಅಥವಾ ಬಿ.ಎಸ್‌ಸಿ. ಮೇಲೆ ಕಣ್ಣಿಟ್ಟರೆ, ಕಲೆ ಹಾಗೂ ವಾಣಿಜ್ಯ ವಿದ್ಯಾರ್ಥಿಗಳಿಗೂ ಕೂಡ ಮುಂದೆ ಪದವಿ, ಸ್ನಾತಕೋತ್ತರಕ್ಕೆ ಇದೊಂದು ಅಡಿಗಲ್ಲು. ಏಕೆಂದರೆ ಉತ್ತಮ ಕಾಲೇಜು, ಅಲ್ಲಿ ಅವರು ಬಯಸಿದಂತಹ ಕಾಂಬಿನೇಶನ್‌ ಸಿಗಬೇಕಾಗುತ್ತದೆ.

ಇವೆಲ್ಲ ಸುಲಭಕ್ಕೆ ದಕ್ಕುವಂತಹದ್ದಲ್ಲ. ಒಳ್ಳೆಯ ಅಂಕ ಗಳಿಕೆಗೆ ವಿದ್ಯಾರ್ಥಿಗಳು ಹೆಚ್ಚು ಯತ್ನ ಹಾಕಲೇಬೇಕು. ಯಶಸ್ಸು ಗಳಿಸಿದ ಬಹುತೇಕ ವಿದ್ಯಾರ್ಥಿಗಳು ಪರಿಣಾಮಕಾರಿ ಅಧ್ಯಯನದ ಅಭ್ಯಾಸಗಳನ್ನು ಬೆಳೆಸಿಕೊಂಡು, ಅವುಗಳನ್ನು ಅಳವಡಿಸಿಕೊಂಡಿರುತ್ತಾರೆ ಎಂಬುದನ್ನು ಅವರ ಅನುಭವಗಳಿಂದ ತಿಳಿದುಕೊಳ್ಳಬಹುದು. ಹಾಗಾದರೆ ಪರೀಕ್ಷೆಯಲ್ಲಿ ಕೇವಲ ಯಶಸ್ಸು ಮಾತ್ರವಲ್ಲ, ಹೆಚ್ಚು ಯಶಸ್ಸು ಗಳಿಸಲು ಯಾವ ಅಭ್ಯಾಸಗಳನ್ನು ಅಥವಾ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು?

ಮೊದಲು ‘ನನ್ನಿಂದ ಇದು ಸಾಧ್ಯವಿಲ್ಲ’ ಎಂಬ ನಕಾರಾತ್ಮಕ ಧೋರಣೆಯನ್ನು ಹತ್ತಿರ ಸುಳಿಯಲು ಬಿಡಬೇಡಿ. ಅಂತಹ ಮಾತುಗಳನ್ನಾಡಿ ನಿಮ್ಮ ಆತ್ಮವಿಶ್ವಾಸ ಕುಗ್ಗಿಸುವವರನ್ನು ಸಮೀಪಕ್ಕೆ ಬಿಟ್ಟುಕೊಳ್ಳಬೇಡಿ. ನಿಮ್ಮ ಅಂಕ ಗಳಿಕೆ ಹೆಚ್ಚಿಸಿಕೊಳ್ಳಲು ಅಥವಾ ಗ್ರೇಡ್‌ ಏರಿಸಿಕೊಳ್ಳಲು, ಜ್ಞಾನದ ಮಟ್ಟವನ್ನು ಜಾಸ್ತಿ ಮಾಡಿಕೊಳ್ಳಲು, ಕಲಿಕಾ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಲು, ಹೆಚ್ಚು ಹೆಚ್ಚು ಮಾಹಿತಿಯನ್ನು ಮೆದುಳಿನಲ್ಲಿ ಶೇಖರಿಸಿಕೊಳ್ಳಲು ಇನ್ನೂ ಸಮಯವಿದೆ. ಆದರೆ ಅದಕ್ಕಿರುವ ಮಾರ್ಗದ ಬಗ್ಗೆ ಕೊಂಚ ಅರಿತುಕೊಳ್ಳೋಣ.

ಒಂದೇ ಸಲ ಎಲ್ಲವನ್ನೂ ಓದಿ ಮುಗಿಸಬೇಕು ಎಂಬ ಯತ್ನಕ್ಕೆ ಮೊದಲು ತಿಲಾಂಜಲಿ ನೀಡಿ.

ತಡರಾತ್ರಿಯವರೆಗೆ ಓದಿ ಎಲ್ಲಾ ಸಿಲೆಬಸ್‌ ಮುಗಿಸಿಬಿಡುವೆ ಎಂದು ಕೂತರೆ ನಿದ್ರೆ ಬರದಂತೆ ತಡೆಯುವುದೇ ನಿಮ್ಮ ಕೆಲಸವಾಗಿಬಿಡುತ್ತದೆ. ನಿಮ್ಮ ಹೆಚ್ಚಿನ ಶಕ್ತಿ, ಸಾಮರ್ಥ್ಯ ಕಣ್ಣ್ರೆಪ್ಪೆ ಕೂಡದಂತೆ ತಡೆಯಲು ವ್ಯಯವಾಗಿಬಿಡುತ್ತದೆ. ಹೀಗಾಗಿ ಕೊಂಚ ಬದಲಾವಣೆ ಮಾಡಿಕೊಳ್ಳಿ. ದೀರ್ಘ ಸಮಯ ಓದಿಗೆ ಮೀಸಲಿಡುವುದರ ಬದಲು ಸಣ್ಣ ಸಣ್ಣ ಅವಧಿಗೆ ಬ್ರೇಕ್‌ ಮಾಡಿ. ನಿಯಮಿತ ಅಂದರೆ ಪರೀಕ್ಷೆಯ ದಿನ ಮುಂಜಾನೆ ಕೂಡ ಓದುವೆ ಎಂಬ ದೃಢ ನಿರ್ಧಾರದೊಂದಿಗೆ ಓದಲು ಶುರು ಮಾಡಿ. ಒಂದು ತಾಸು ಭಾಷೆಗೆ ಮೀಸಲಿಟ್ಟರೆ, 10– 15 ನಿಮಿಷ ವಿರಾಮ ಕೊಟ್ಟು ಅರ್ಥಶಾಸ್ತ್ರವೋ, ಗಣಿತವೋ ನಿಮ್ಮ ಮುಂದಿನ ಓದಾಗಿರಲಿ. ರಾತ್ರಿ ನಿದ್ರೆ ಬರುವವರೆಗೆ ಓದಿ. ಇದರಿಂದ ಆರಾಮವಾಗಿ ನಿದ್ರಿಸಿ ಮರುದಿನ ತಾಜಾ, ಆಹ್ಲಾದಕರ ಮನಸ್ಸಿನೊಂದಿಗೆ ಮತ್ತೆ ಓದಲು ಕೂರಬಹುದು.

ಸಮಯ ನಿಗದಿ

ಯಶಸ್ವಿ ವಿದ್ಯಾರ್ಥಿಗಳು ವಾರವಿಡೀ ನಿಯಮಿತ ಅವಧಿಯನ್ನು ಓದಿಗೆ ಮೀಸಲಿಡುತ್ತಾರೆ. ಅದೇ ಟೈಂ ಟೇಬಲ್‌ಗೆ ಅಂಟಿಕೊಳ್ಳುತ್ತಾರೆ. ಆದರೆ ಒಂದು ಇಡೀ ದಿನ ಓದುವುದು, ಇನ್ನೊಂದು ದಿನ ಸುಮ್ಮನೆ ಕಾಲ ಕಳೆಯುವುದು ವಿದ್ಯಾರ್ಥಿಗಳ, ಪರೀಕ್ಷೆಯ ದೃಷ್ಟಿಯಿಂದ ಒಳಿತಲ್ಲ. ನೀವು ಅಧ್ಯಯನದಲ್ಲಿ ಮುಳುಗಿದರೂ ಕೂಡ ವಾರದಲ್ಲಿ ಕೆಲವು ಸಮಯ ನೀವೆಷ್ಟು ಓದಿದ್ದೀರಿ ಎಂದು ಆತ್ಮಾವಲೋಕನಕ್ಕೆ ಮೀಸಲಿಡಿ. ಓದಿದ್ದನ್ನು ಮನನ ಮಾಡಿ; ವಿಶ್ಲೇಷಣೆ ಮಾಡಿ. ಇದು ಈ ಪರೀಕ್ಷೆಗೆ ಮಾತ್ರವಲ್ಲ, ನಿಮ್ಮ ಶೈಕ್ಷಣಿಕ ಜೀವನದುದ್ದಕ್ಕೂ ಉಪಯೋಗಕ್ಕೆ ಬರುತ್ತದೆ.

ಈ ನಿಯಮಿತ ಓದಿನಿಂದ ನೀವು ಮಾನಸಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ಹೆಚ್ಚು ಸಂತೃಪ್ತಿ ಪಡೆಯುತ್ತೀರಿ. ಜೊತೆಗೆ ಪರೀಕ್ಷೆಗೆ ನಿಮ್ಮನ್ನು ಮಾನಸಿಕವಾಗಿ ಸಿದ್ಧರನ್ನಾಗಿ ಮಾಡುತ್ತದೆ. ನಿರಂತರ ಓದಿನಿಂದ ಅಂದರೆ ಪ್ರತಿ ದಿನ ಅದೇ ಸಮಯವನ್ನು ಅಭ್ಯಾಸಕ್ಕೆ ಬಳಸುವುದರಿಂದ ನಿಮ್ಮಲ್ಲಿ ಸಕಾರಾತ್ಮಕ ಧೋರಣೆ ಬೆಳೆಯುತ್ತದೆ.

ಯಾವುದೇ ನಿರ್ದಿಷ್ಟ ಗುರಿಯಿಲ್ಲದೇ ಓದುವುದೂ ನಿರರ್ಥಕ. ನೀವು ನಿಗದಿಪಡಿಸಿಕೊಂಡ ಸಮಯದಲ್ಲಿ ಏನನ್ನು ಓದಬೇಕು ಎಂಬುದನ್ನು ಗುರುತು ಹಾಕಿಕೊಳ್ಳಿ. ಉದಾಹರಣೆಗೆ 15 ನಿಮಿಷ ಕಾಲ ರಸಾಯನಶಾಸ್ತ್ರದ ಫಾರ್ಮುಲಾ ಬಾಯಿಪಾಠ ಮಾಡಲು ಬಳಸಬಹುದು. ‘ಏನು? ಬಾಯಿಪಾಠ ಮಾಡುವುದೇ?’ ಎಂದು ಅಚ್ಚರಿ ಪಡಬೇಕಾಗಿಲ್ಲ. ಉದ್ದುದ್ದ ಪಾಠವನ್ನು ಉರು ಹೊಡೆಯುವ ಅವಶ್ಯಕತೆ ಇಲ್ಲ. ಸರಳ ಸೂತ್ರಗಳನ್ನು ಕೆಲವು ಬಾರಿ ಓದಿದರೂ ಮರೆತು ಹೋಗುವ ಸಂಭವವಿರುತ್ತದೆ. ಇದಕ್ಕೆ ಬಾಯಿಪಾಠವೇ ಮದ್ದು. ಭಾಷಾ ವಿಷಯವಾದರೆ ವ್ಯಾಕರಣಕ್ಕೆ ಮೀಸಲಿಡಬಹುದು.

ಎಲ್ಲರೂ ಹೇಳುವುದು ‘ಮೊದಲು ಕಠಿಣ ವಿಷಯದಿಂದ ಶುರು ಮಾಡಿ’ ಎಂದು. ಹೌದು, ಕಠಿಣ ವಿಷಯಕ್ಕೆ ಹೆಚ್ಚು ಪ್ರಯತ್ನ ಹಾಗೂ ಮಾನಸಿಕ ಶಕ್ತಿ ಬೇಕು. ಹೀಗಾಗಿ ಮೊದಲು ಅದನ್ನೇ ಶುರು ಮಾಡಿ. ಕಷ್ಟಕರವಾದ ವಿಷಯವನ್ನು ಓದಿ ಮನನ ಮಾಡಿಕೊಂಡ ನಂತರ ಉಳಿದ ಓದನ್ನು ಪೂರೈಸುವುದು ಸುಲಭ. ಜೊತೆಗೆ ಇದು ನಿಮ್ಮ ಮನಸ್ಸಿನಲ್ಲಿ ಒಂದು ಬಗೆಯ ನಿರಾಳ ಭಾವವನ್ನು ಮೂಡಿಸುತ್ತದೆ.

ಟಿಪ್ಪಣಿ ಅವಲೋಕನ

ಕಾಲೇಜಿನ ತರಗತಿಗಳು ಶುರುವಾದಾಗಿನಿಂದಲೂ ನೀವು ಟಿಪ್ಪಣಿ ಮಾಡಿಕೊಂಡಿರಬಹುದು. ತರಗತಿಯಲ್ಲಿ, ಗ್ರಂಥಾಲಯದಲ್ಲಿ ಕುಳಿತು ನಿಮಗೆ ಮುಖ್ಯವಾದದ್ದು ಎನಿಸುವ ಅಂಶಗಳನ್ನು ಟಿಪ್ಪಣಿ ಮಾಡಿಕೊಂಡಿರುತ್ತೀರಿ. ಪರೀಕ್ಷೆಗೆ ಓದುವಾಗ ಇವು ನೆರವಿಗೆ ಬರುತ್ತವೆ. ಪುಸ್ತಕಗಳ ಜೊತೆಗೇ ಇವುಗಳ ಮೇಲೆ ಕಣ್ಣು ಹಾಯಿಸಿ. ಟಿಪ್ಪಣಿ ಮುಖ್ಯವಾದ ಅಂಶಗಳನ್ನು ಹೊಂದಿರುವುದರಿಂದ ಅದು ಖಂಡಿತ ನಿಮ್ಮ ನೆನಪಿನಲ್ಲಿ ಉಳಿಯುತ್ತದೆ.

ಗುಂಪು ಅಧ್ಯಯನ

ಇದು ಕಡ್ಡಾಯವಾಗಿ ಪಾಲಿಸಬೇಕಾದ ಸಲಹೆಯೇನಲ್ಲ. ಆದರೆ ಕೆಲವೊಮ್ಮೆ ಯಾವುದೋ ಒಂದು ವಿಷಯ, ಉದಾಹರಣೆಗೆ ಭೌತಶಾಸ್ತ್ರದ ವೇವ್‌ ಆಪ್ಟಿಕ್ಸ್‌ ಬಗ್ಗೆ ಗೊತ್ತಾಗದಿದ್ದರೆ, ತಕ್ಷಣಕ್ಕೆ ನಿಮ್ಮ ಶಿಕ್ಷಕರು ಲಭ್ಯವಿಲ್ಲದಿದ್ದರೆ ನಿಮ್ಮ ಸ್ನೇಹಿತ/ ಸ್ನೇಹಿತೆ ನೆರವಿಗೆ ಬರಬಹುದು. ಇಲ್ಲ, ನೀವೇ ಆತನಿಗೆ /ಆಕೆಗೆ ಹೇಳಿಕೊಡಬಹುದು. ಇತರರಿಗೆ ಹೇಳಿಕೊಡುವುದರಿಂದ ಅದು ನಿಮಗೇ ಲಾಭ. ಏಕೆಂದರೆ ಅದು ನೆನಪಿನಲ್ಲಿ ಉಳಿಯುವುದು ಹೆಚ್ಚು ಎನ್ನುತ್ತಾರೆ ತಜ್ಞರು. ಆದರೆ ಅವರೂ ಚೆನ್ನಾಗಿ ಓದುವವರಾದರೆ ಅಡ್ಡಿಯಿಲ್ಲ. ಇಲ್ಲದಿದ್ದರೆ ನಿಮಗೇ ಸಮಸ್ಯೆ ಒಡ್ಡಬಹುದು. ಹೀಗಾಗಿ ಆಯ್ಕೆ ಮಾಡುವಾಗ ಹುಷಾರಾಗಿರಿ.

ನೀವು ನಿತ್ಯ ಓದಿದ್ದು ಎಷ್ಟು ನೆನಪಿನಲ್ಲಿದೆ ಎಂಬುದನ್ನು ವಿಶ್ಲೇಷಣೆ ಮಾಡಲು ನಿಗದಿತ ಸಮಯ ಇಟ್ಟುಕೊಳ್ಳಿ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಟ್ಟುಕೊಂಡು, ಅಥವಾ ಒಂದು ವಿಷಯದ ಮೇಲೆ ನೀವೇ ಸಂಭವನೀಯ ಪ್ರಶ್ನೆಗಳನ್ನು ಬರೆದು ಅದಕ್ಕೆ ಉತ್ತರ ನೀಡಬಹುದು. ಇದಕ್ಕಾಗಿ ವಾರದ ಕೊನೆಗೆ ಒಂದೆರಡು ತಾಸು ಮೀಸಲಿಡಿ.

ಸಾಮಾನ್ಯವಾಗಿ ಓದಬೇಕಾದರೆ ಕಠಿಣ ವಿಷಯ ಅಥವಾ ಯಾವುದೋ ಒಂದು ಗಣಿತದ ಸಮಸ್ಯೆ ಬಿಡಿಸುವುದಕ್ಕೆ ಗೊತ್ತಾಗುತ್ತಿಲ್ಲ ಎಂದರೆ ಅದರಲ್ಲಿ ಆಸಕ್ತಿ ಕಳೆದುಕೊಂಡು ಮುಂದಕ್ಕೆ ಹಾಕಬೇಡಿ. ನಾಳೆಗೆ ಮುಂದೂಡಿದರೆ, ಅದು ನಾಡಿದ್ದೂ ಮುಂದೂಡಿಕೆಯಾಗಬಹುದು. ಕೊನೆಗೆ ಪರೀಕ್ಷೆ ಸಮೀಪಿಸಿದಾಗ ಅದಕ್ಕೆ ಹೆಚ್ಚು ಸಮಯ ಹಾಕಲು ಆಗದೆ ಶಾಶ್ವತವಾಗಿ ಕೈಬಿಡುವ ಸಂದರ್ಭ ಬರುತ್ತದೆ. ಪರೀಕ್ಷೆಯಲ್ಲಿ ಅದೇ ಪ್ರಶ್ನೆ ಎದುರಾದರೆ ಅಂಕ ಕಳೆದುಕೊಳ್ಳಬೇಕಾಗುತ್ತದೆ. ಕೆಲವು ಬಾರಿ ತಪ್ಪುಗಳು ಸಂಭವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT