ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ 4 ಕ್ಷೇತ್ರಗಳ ಅಭ್ಯರ್ಥಿ ಪ್ರಕಟ

Last Updated 19 ಫೆಬ್ರುವರಿ 2018, 9:13 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಪಕ್ಷವು ಮೊದಲ ಹಂತದಲ್ಲಿ 126 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ.

ಕಡೂರು ಕ್ಷೇತ್ರದಲ್ಲಿ ಶಾಸಕ ವೈಎಸ್‌ವಿ ದತ್ತ, ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕ ಬಿ.ಬಿ.ನಿಂಗಯ್ಯ, ಶೃಂಗೇರಿ ಕ್ಷೇತ್ರದಲ್ಲಿ ವೆಂಕಟೇಶ್‌ ಗೋವಿಂದೇಗೌಡ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಹರೀಶ್‌ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ತರೀಕೆರೆ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನು ಪ್ರಕಟಿಸಿಲ್ಲ. ಕುರುಬ ಸಮುದಾಯದ ಟಿ.ಎಚ್‌.ಶಿವಶಂಕರಪ್ಪ ಇಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

‘ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಇನ್ನೊಂದು ಪಟ್ಟಿ ಬಿಡುಗಡೆಯಾಗಲಿದೆ. ಅದರಲ್ಲಿ ತರೀಕೆರೆ ಕ್ಷೇತ್ರದ ಅಭ್ಯರ್ಥಿಯನ್ನು ಪ್ರಕಟಿಸಲಾಗುತ್ತದೆ’ ಎಂದು ಜೆಡಿಎಸ್‌ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ ಮುಗಳವಳ್ಳಿಯಲ್ಲಿ ಈಚೆಗೆ ಗ್ರಾಮವಾಸ್ತವ್ಯ ಹೂಡಿದ್ದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು, ಜಿಲ್ಲೆಯ ಜೆಡಿಎಸ್‌ ಹಾಲಿ ಶಾಸಕರಿಗೆ ಟಿಕೆಟ್‌ ಖಚಿತ ಎಂದು ಹೇಳಿದ್ದರು. ಅದರಂತೆ ಮೂಡಿಗೆರೆಯಲ್ಲಿ ನಿಂಗಯ್ಯ, ಕಡೂರಿನಲ್ಲಿ ದತ್ತ ಅವರನ್ನೇ ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ.

ಶೃಂಗೇರಿಯಲ್ಲಿ ಈಚೆಗೆ ಅತಿರುದ್ರ ಮಾಹಾಯಾಗ ನೇರವೇರಿಸಿದ ಸಂದರ್ಭದಲ್ಲಿ ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ವೆಂಕಟೇಶ್‌ ಗೋವಿಂದೇಗೌಡ ಅವರನ್ನು ಶೃಂಗೇರಿ ಕ್ಷೇತ್ರದಿಂದ ಕಣಕ್ಕಿಳಿಸುವ ಸೂಚನೆ ನೀಡಿದ್ದರು. ನಿರೀಕ್ಷೆಯಂತೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

ಬಿಜೆಪಿ ತೊರೆದು ಈಚೆಗಷ್ಟೇ ಜೆಡಿಎಸ್‌ ಸೇರಿದ್ದ ಬಿ.ಎಚ್‌.ಹರೀಶ್‌ ಅವರನ್ನು ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್‌.ಎಚ್‌.ದೇವರಾಜ್‌, ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ ಕುಮಾರ್‌ ಆಕಾಂಕ್ಷಿಗಳಾಗಿದ್ದರು. ಹರೀಶ್‌ ಸೇರ್ಪಡೆಯಾದ ನಂತರ ದೇವರಾಜ್‌ ಹಿಂದೆ ಸರಿದಿದ್ದರು.

ಹರೀಶ್‌ ಅವರು ಲಿಂಗಾಯತ ಸಮುದಾಯದವರಾಗಿದ್ದು, ತರಕಾರಿ ಸಗಟು ವ್ಯಾಪಾರಿಯಾಗಿದ್ದಾರೆ. ಎಪಿಎಂಸಿ (ವರ್ತಕರ ಕ್ಷೇತ್ರ) ಸದಸ್ಯರಾಗಿದ್ದಾರೆ. ಪಟ್ಟಿ ಪ್ರಕಟವಾದ ನಂತರ ಪಕ್ಷದಲ್ಲಿ ಮುಖಂಡರು, ಕಾರ್ಯಕರ್ತರಲ್ಲಿ ಸಂಚಲನ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT