ಕಲಿಕಾ ಫಲಿತಾಂಶದಿಂದ ಮಾರ್ಗದರ್ಶನ

ಶುಕ್ರವಾರ, ಏಪ್ರಿಲ್ 19, 2019
22 °C

ಕಲಿಕಾ ಫಲಿತಾಂಶದಿಂದ ಮಾರ್ಗದರ್ಶನ

Published:
Updated:
Prajavani

ನೆಲ್ಸನ್ ಮಂಡೇಲಾರವರು ಹೇಳುವಂತೆ ಜಗತ್ತನ್ನು ಪರಿವರ್ತಿಸಲು ಬಳಸಬಹುದಾದ ಬಹುದೊಡ್ಡ ಶಕ್ತಿಯುತ ಸಾಧನವೆಂದರೆ ಶಿಕ್ಷಣ. ನಿಜ, ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳು ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕತೆಯನ್ನು ಸಾಧಿಸಲು ಅಮೂಲಾಗ್ರ ಬದಲಾವಣೆಗೆ ತೊಡಗಿವೆ.

ವಿಶೇಷವೆಂದರೆ, ಈ ಎಲ್ಲಾ ಬದಲಾವಣೆಗಳು ಮಕ್ಕಳ ಕಲಿಕೆ ಮತ್ತು ಕಲಿಕೆಯ ಫಲಿತಾಂಶಗಳ ಮೇಲೆ ಕೇಂದ್ರೀಕೃತವಾಗಿವೆ. ಒಟ್ಟಾರೆ ಕಲಿಕೆ ಮತ್ತು ಗುಣಾತ್ಮಕ ಶಿಕ್ಷಣ ಈ ಎಲ್ಲಾ ಚರ್ಚೆಗಳ ಕೇಂದ್ರಬಿಂದು ಹಾಗೂ ಜೀವಾಳ. ಈ ಚರ್ಚೆಗಳ ಮತ್ತೊಂದು ಆಯಾಮವೆಂದರೆ, ಗುಣಾತ್ಮಕ ಶಿಕ್ಷಣವನ್ನು ಮಾನವ ಹಕ್ಕುಗಳ ಮೂಲಭೂತ ನೆಲೆಯಲ್ಲಿ ಗುರುತಿಸಿ ಚರ್ಚಿಸುತ್ತಿರುವುದು. ನಮ್ಮ ಚರ್ಚೆಗಳು ಕಲ್ಯಾಣ ಆಧಾರಿತ ಅಭಿವೃದ್ಧಿ ಮಾದರಿಯಿಂದ ಹಕ್ಕು ಆಧಾರಿತ ಅಭಿವೃದ್ಧಿ ಮಾದರಿಯ ಚೌಕಟ್ಟಿನಲ್ಲಿ ನಡೆಯುತ್ತಿವೆ.

ಭಾರತದಲ್ಲಿ ಕೂಡ ಎಲ್ಲಾ ಮಕ್ಕಳಿಗೆ ಶಿಕ್ಷಣ ಸಿಗಲೇಬೇಕೆಂಬ ಉದ್ದೇಶದಿಂದ 2002ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಶಿಕ್ಷಣವನ್ನು ಒಂದು ಮೂಲಭೂತ ಹಕ್ಕನ್ನಾಗಿಸಿದ್ದೇವೆ. ಈ ಹಕ್ಕನ್ನು ಸಾಕಾರಗೊಳಿಸಲು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ನ್ನು ರೂಪಿಸಿ ಜಾರಿಗೊಳಿಸಿದ್ದೇವೆ.

ಆದರೆ ದಶಕವೇ ಕಳೆಯುತ್ತಾ ಬಂದರೂ, ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ, ನಿರೀಕ್ಷಿತ ಫಲಿತಾಂಶವನ್ನು ಮುಟ್ಟುವಲ್ಲಿ ಪೂರ್ಣ ಯಶಸ್ಸು ಕಂಡುಕೊಳ್ಳಲು ಸಾಧ್ಯವಾಗದಿರುವುದು ಸವಾಲಿನ ವಿಷಯವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭಾರತ ತನ್ನನ್ನು ತಾನು ಆರೋಗ್ಯಕರ ಸ್ಪರ್ಧೆಗೆ ತೆರೆದುಕೊಳ್ಳಬೇಕಾದರೆ ಶಿಕ್ಷಣದ ಗುಣಾತ್ಮಕತೆಗೆ ರಾಜಿಯಿಲ್ಲದ ಆದ್ಯತೆಯನ್ನು ನೀಡಬೇಕಿದೆ.

ಸವಾಲುಗಳು

ಶಿಕ್ಷಣದಲ್ಲಿ ಗುಣಾತ್ಮಕತೆಯನ್ನು ಕಂಡುಕೊಳ್ಳುವ ಭಾಗವಾಗಿ ಭಾರತ ಹತ್ತು-ಹಲವು ಸವಾಲುಗಳನ್ನು ಎದುರಿಸಬೇಕಿದೆ. ಶಿಕ್ಷಣದ ಗುಣಮಟ್ಟದ ವ್ಯಾಖ್ಯಾನ ಮತ್ತು ಪ್ರಕ್ರಿಯೆಗಳನ್ನು ಮಾರುಕಟ್ಟೆ ಆಧಾರಿತ ಪರಿಮಿತಿಗಳನ್ನು ಆಧರಿಸಿ ತೀರ್ಮಾನಿಸಲು ಸಾಧ್ಯವಿಲ್ಲ. ಕಾರಣ, ಶಿಕ್ಷಣ ಒಂದು ಜೀವಂತ ಚಲನಶೀಲ ಪ್ರಕ್ರಿಯೆ. ಕಲಿಕಾ ಪ್ರಕ್ರಿಯೆಯು ಪರಿಣಾಮಕಾರಿ ಸಂವಹನ, ಕೊಡು-ಕೊಳ್ಳುವಿಕೆ, ಅನುಭವ-ವಿಚಾರ ಹಂಚಿಕೆ ಮೂಲಕ ಜ್ಞಾನ ಕಟ್ಟಿಕೊಳ್ಳುವ, ಗೌರವಯುತವಾಗಿ ಬದುಕಲು ಅಗತ್ಯವಾದ ಜೀವನ ಕೌಶಲಗಳನ್ನು ಕೊಡಮಾಡುವ ನಿರಂತರ ಪ್ರಕ್ರಿಯೆ. ಸಾಮಾಜೀಕರಣ ಮತ್ತು ಸಾಮಾಜಿಕ ಪರಿವರ್ತನೆಯ ಅದ್ಭುತ ಸಾಧನ.

ಗುಣಾತ್ಮಕತೆಯ ಆಯಾಮವನ್ನು ನಾವು ಮಕ್ಕಳ ಕಲಿಕೆಗೆ ಒದಗಿಸಬಹುದಾದ ಅನುಭವಗಳು, ಜ್ಞಾನ ಕೌಶಲಗಳು ಮತ್ತು ಕಲಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಅಗತ್ಯವಾದ ಮೂಲಭೂತ ಸೌಕರ್ಯಗಳ ದೃಷ್ಟಿಯಿಂದಲೂ ಪರೀಕ್ಷಿಸಬೇಕಿದೆ. ಈ ಎಲ್ಲಾ ತಾಕಲಾಟಗಳ ನಡುವೆಯೂ, ಒಂದು ನಿರ್ದಿಷ್ಟ ವಯಸ್ಸಿನ ಮತ್ತು ತರಗತಿಯ ಮಗು ಆಯಾ ಹಂತಕ್ಕೆ ಸರಿಸಮನಾದ ಕನಿಷ್ಠ ಗುಣಮಟ್ಟದ ಜ್ಞಾನವನ್ನು ಕಟ್ಟಿಕೊಳ್ಳಬೇಕೆಂಬುದು ಎಲ್ಲರ ಅಭಿಪ್ರಾಯ. ಶಿಕ್ಷಣದ ಗುಣಮಟ್ಟವನ್ನು ವ್ಯಕ್ತಿಗತ ನೆಲೆಯಲ್ಲಿ ನೋಡಲು ಸಾಧ್ಯವಿಲ್ಲ. ಎಲ್ಲಾ ಮಕ್ಕಳಿಗೂ ಸಮಾನ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅವಶ್ಯವಾದ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಡುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲು.

ಪಾಲಕರ ದೃಷ್ಟಿಯಲ್ಲಿ..

ಗುಣಾತ್ಮಕ ಶಿಕ್ಷಣವನ್ನು ಸ್ಥಳಿಯ ಮಟ್ಟದಲ್ಲಿ ಪಾಲಕರು ಯಾವ ಅರ್ಥದಲ್ಲಿ ನೋಡುತ್ತಾರೆ ಎಂಬುದನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕಿದೆ. ಅಂದರೆ ಪಠ್ಯದ ವಿವಿಧ ವಿಷಯಗಳಲ್ಲಿ ಮಕ್ಕಳ ಶೈಕ್ಷಣಿಕ ಸಾಮರ್ಥ್ಯವನ್ನು ಅಳೆಯುವ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮಕ್ಕಳು ಗಳಿಸುವ ಸಾಮರ್ಥ್ಯಗಳ ಸುಧಾರಣೆ. ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆ ಮತ್ತು ಪರೀಕ್ಷೆಯಲ್ಲಿ ಗಳಿಸುವ ಸಾಮರ್ಥ್ಯಗಳನ್ನು ಕಡೆಗಣಿಸಿ ಗುಣಾತ್ಮಕತೆಯನ್ನು ಅಳೆಯಲು ಸಾಧ್ಯವಿಲ್ಲ. ಈ ಕಾರಣದಿಂದಲೇ ಫೆಬ್ರವರಿ 2017ರಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಕೇಂದ್ರ ಸರ್ಕಾರದ ನಿಯಮಗಳಿಗೆ ತಿದ್ದುಪಡಿ ತರಲಾಯಿತು. ಇದರ ಅನ್ವಯ ತರಗತಿವಾರು-ವಿಷಯವಾರು ಕಲಿಕಾ ಫಲಿತಾಂಶಗಳನ್ನು ಸಿದ್ಧಪಡಿಸಬೇಕು. ಇದನ್ನು ಸಾಧಿಸಲು ಮತ್ತು ಸಾಧಿಸಿದ ಬಗ್ಗೆ ತಿಳಿದುಕೊಳ್ಳಲು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಲು ಅಗತ್ಯ ಮಾರ್ಗಸೂಚಿಗಳನ್ನು ರೂಪಿಸಬೇಕಾಗಿದೆ.

ಕಲಿಕಾ ಫಲಿತಾಂಶ ಸಿದ್ಧ

ಈ ತಿದ್ದುಪಡಿ ಅನ್ವಯ ಕರ್ನಾಟಕದಲ್ಲಿ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯವು ಮೂರು ಆಯಾಮಗಳಿಂದ ಕಲಿಕಾ ಫಲಿತಾಂಶಗಳನ್ನು ತರಗತಿವಾರು-ವಿಷಯವಾರು ತಯಾರಿಸಿದೆ. ರಾಜ್ಯ ಪಠ್ಯಕ್ರಮಕ್ಕನುಗುಣವಾಗಿ ಕಲಿಕಾ ಫಲಿತಾಂಶಗಳನ್ನು ಪಾಲಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪರಿಚಯಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದೆ. ಈ ರೀತಿಯಲ್ಲಿ ತರಗತಿವಾರು, ವಿಷಯವಾರು ಕಲಿಕಾ ಫಲಿತಾಂಶಗಳನ್ನು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನಲ್ಲಿ ಎನ್‌ಸಿಇಆರ್‌ಟಿ ಸಹಾಯ ಮತ್ತು ಮಾರ್ಗದರ್ಶನದಲ್ಲಿ ರೂಪಿಸಿರುವುದರಿಂದ ಮಕ್ಕಳ ಗುಣಾತ್ಮಕ ಕಲಿಕೆಯನ್ನು ಹಲವು ಆಯಾಮಗಳಿಂದ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯ; ಇದರ ಸ್ಪಷ್ಟ ಚಿತ್ರಣವಿರುವುದರಿಂದ ಮಗುವಿನ ಶೈಕ್ಷಣಿಕ ಸಾಧನೆಯನ್ನು ನಿರಂತರವಾಗಿ ಅನುಪಾಲನೆ ಮಾಡಲೂ ಸಾಧ್ಯವಾಗುತ್ತದೆ. ಅಂದರೆ ನಿರ್ದಿಷ್ಟ ವಿಷಯ ಮತ್ತು ತರಗತಿಯಲ್ಲಿ ಮಗುವಿನ ಶೈಕ್ಷಣಿಕ ಗುಣಮಟ್ಟ ಎಲ್ಲಿದೆ, ಮಗು ಎಷ್ಟು ಕಲಿತಿದೆ, ನಿರೀಕ್ಷಿತ ಕಲಿಕಾ ಫಲಿತಾಂಶಗಳನ್ನು ಮಗು ಸಾಧಿಸಲು ಸಾಧ್ಯವಾಗದಿದ್ದರೆ ಕಾರಣಗಳೇನು, ಮಗು ಸಾಧಿಸುವಂತೆ ಮಾಡಲು ಯಾವ ರೀತಿಯ ಮಾರ್ಗದರ್ಶನ ಬೇಕಾಗುತ್ತದೆ, ಮಗುವಿನ ಕಲಿಕೆಯಲ್ಲಿ ಪಾಲಕರ ಪಾತ್ರವೇನು ಇತ್ಯಾದಿಗಳನ್ನು ಅರಿತು ಕಲಿಕಾ ಪ್ರಕ್ರಿಯೆ ಮತ್ತು ಕಲಿಕಾ ಅನುಭವಗಳನ್ನು ಕಟ್ಟಿಕೊಡಲು ಸಾಧ್ಯವಾಗುತ್ತದೆ.

(ಲೇಖಕರು ಸೀನಿಯರ್ ಫೆಲೋ ಮತ್ತು ಶಿಕ್ಷಣ ಕಾರ್ಯಕ್ರಮದ ಮುಖ್ಯಸ್ಥರು, ಮಗು ಮತ್ತು ಕಾನೂನು ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ)

ಪಠ್ಯದಲ್ಲಿ ಸಾಮಾಜಿಕ,  ಆರ್ಥಿಕ ವಸ್ತುಸ್ಥಿತಿ

ಜ್ಞಾನ ಕಟ್ಟಿಕೊಡುವ ಪ್ರಕ್ರಿಯೆಯನ್ನು ಕೇವಲ ಪಠ್ಯಪುಸ್ತಕದ ಚೌಕಟ್ಟಿನಲ್ಲಿ ನೋಡುವುದು ಮತ್ತು ಜ್ಞಾನ ಸಂಪಾದನೆಯ ಮಟ್ಟವನ್ನು ಕೇವಲ ಅಂಕಗಳಿಕೆಯಲ್ಲಿ ಅಳೆಯುವುದು ಸರಿಯಲ್ಲ. ಮಾಹಿತಿಯನ್ನೇ ಜ್ಞಾನವೆಂದು ಪ್ರತಿಬಿಂಬಿಸುವ ಮೂಲಕ ಇಡೀ ಕಲಿಕಾ ಪ್ರಕ್ರಿಯೆಯನ್ನು ಕೇವಲ ಕಂಠಪಾಠ, ಸ್ಮರಣೆ , ಪುನರಾವರ್ತನೆ ಮತ್ತು ಗೃಹಪಾಠಕ್ಕೆ ಸೀಮಿತಗೊಳಿಸಿದ್ದೇವೆ. ಅದನ್ನು ಬಿಟ್ಟು ನಾವು ಶಿಕ್ಷಣದ ಪಠ್ಯಕ್ರಮ -ಪಠ್ಯವಸ್ತುವಿಗೆ ಆಯ್ಕೆ ಮಾಡಿಕೊಳ್ಳಬೇಕಾದ ವಸ್ತು ವಿಷಯ ಅಂದಿನ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವಸ್ತುಸ್ಥಿತಿ ಮತ್ತು ಮೌಲ್ಯಗಳನ್ನು ಒಳಗೊಳ್ಳಬೇಕಾಗುತ್ತದೆ. ಈ ಕ್ರಮಗಳು ನಮ್ಮನ್ನು ನಾವು ಜಾಗತಿಕ ಪೈಪೋಟಿಗೆ ಅಣಿಗೊಳ್ಳಲು ದೊಡ್ಡ ಪ್ರಮಾಣದಲ್ಲಿ ಸಹಾಯವಾಗುತ್ತವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !